
ಕೋಲಾರ: ರಾಜ್ಯ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಕೋಲಾರದಲ್ಲಿ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಮಾತನಾಡಿದ್ದಾರೆ. ಕೋಲಾರದಲ್ಲಿ ನಾಲ್ವರು ಶಾಸಕರಿದ್ದೇವೆ, ಒಬ್ಬರಿಗೆ ಮಂತ್ರಿ ಸ್ಥಾನ ಬೇಕು. ಮಂತ್ರಿ ಸ್ಥಾನ ನನಗೆ ಸಿಕ್ಕರೆ ಖುಷಿ, ನಾಲ್ವರು ಶಾಸಕರಲ್ಲಿ ಬೇರೆಯವರಿಗೆ ಸಿಕ್ಕರೂ ನನಗೆ ಸಂತೋಷ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯುವ ವಿಚಾರದ ಬಗ್ಗೆ ಮಾತನಾಡಿ, ನಮ್ಮ ಈಗಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸ್ಥಾನ ನಿರ್ಧರಿಸೋದು, ಸಿದ್ದರಾಮಯ್ಯ ಬದಲಾವಣೆ ಮಾಡೊ ನಿರ್ಧಾರ ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು. ಬೇರೆಯವರಂತೆ ನಾನು ತಾಳ್ಮೆ ಕಳೆದುಕೊಂಡು ಮಾತನಾಡಲ್ಲ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರಕ್ಕೆ, ಕೆಲವು ಒಕ್ಕಲಿಗ ಶಾಸಕರ ನಿಯೋಗ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಲೂರು ಶಾಸಕ ಕೆ.ವೈ ನಂಜೇಗೌಡ, ನಾವು ದೆಹಲಿಗೆ ಹೋಗ್ತೇವೆಂದು ಕೆಲ ಮಾಧ್ಯಮದಲ್ಲಿ ವರದಿಯಾಗಿದೆ. ನಾನು ದೆಹಲಿಗೆ ಹೋಗ್ತೇನೆ ಎಂದು ಎಲ್ಲೂ ಹೇಳಿಲ್ಲ, ಪಕ್ಷದ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಕೋಲಾರ ಹಾಲು ಒಕ್ಕೂಟ ಕೋಮುಲ್ ಚುನಾವಣೆಗೆ ಹೈಕೋರ್ಟ್ ಅಸ್ತು ಅಂದಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಸಕ ನಂಜೇಗೌಡ, ಕೋಮುಲ್ ಕ್ಷೇತ್ರ ಪುನರ್ ವಿಂಗಡನೆ ತೀರ್ಮಾನ ಸಾಮಾನ್ಯ ಸಭೆಯಲ್ಲಿ ಮಂಡಿಸುವಂತೆ ಕೋರ್ಟ್ ಹೇಳಿದೆ. ಕೋಮುಲ್ ಚುನಾವಣೆ ತಡ ಮಾಡುವ ಉದ್ದೇಶದಿಂದ ಕೆಲವರು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರು. ಕ್ಷೇತ್ರ ಪುನರ್ವಿಂಗಡನೆ ತೀರ್ಮಾನ ವಿರುದ್ದ ದೂರು ಸಲ್ಲಿಕೆ ಮಾಡಿದ್ದವರಿಗೆ ಕೋರ್ಟ್ ದಂಡ ಹಾಕಿದೆ. ಕೋಮುಲ್ ಸಾಮಾನ್ಯ ಸಭೆಯ ನಂತರ ಕೋಮುಲ್ ಒಕ್ಕೂಟಕ್ಕೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.