• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಭ್ಯತೆ ಸೌಜನ್ಯ ಸಂಯಮ ಕಲಿಸುವ ಪಾಠಶಾಲೆ ಬೇಕಿದೆ

ನಾ ದಿವಾಕರ by ನಾ ದಿವಾಕರ
November 21, 2024
in Top Story, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ
0
ಸಭ್ಯತೆ ಸೌಜನ್ಯ ಸಂಯಮ ಕಲಿಸುವ ಪಾಠಶಾಲೆ ಬೇಕಿದೆ
Share on WhatsAppShare on FacebookShare on Telegram

ADVERTISEMENT

—–ನಾ ದಿವಾಕರ—–

ಸೂಕ್ಷ್ಮ ಸಂವೇದನೆಯಿಲ್ಲದ ನಾಯಕರು-ಮಾಧ್ಯಮಗಳು  ಸಮಾಜಕ್ಕೆ ನೀಡುವ ಸಂದೇಶವೇನು ?

=====

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ವಿವಿಧ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ನಡೆದ ಹೋರಾಟಗಳಲ್ಲಿ ತೊಡಗಿದ್ದ ಮತ್ತು ಈ ಹೋರಾಟಗಳ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಒಂದು ಸಮಾನ ಎಳೆಯನ್ನು ಕಾಣಬಹುದಾದರೆ ಅದು ಸಾರ್ವಜನಿಕ ಜೀವನದಲ್ಲಿ ಅವರು ಅಳವಡಿಸಿಕೊಂಡ ಸಭ್ಯತೆ, ಸೌಜನ್ಯ, ಸಂಯಮ ಮತ್ತು ಸಾಮಾಜಿಕ ಸೂಕ್ಷ್ಮ-ಸಂವೇದನೆ. ಭಾರತದ ನೆಲ ಸಂಸ್ಕೃತಿಯಲ್ಲೇ ಸಾರ್ವಜನಿಕ ವಲಯದಲ್ಲಿ ಆಡುವ ಮಾತುಗಳಿಗೆ ಒಂದು ಸಂಯಮ-ಸೌಜನ್ಯದ ಸ್ಪರ್ಶ, ಸಂವೇದನೆಯ ಆಯಾಮ ಇರುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. “ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ” ಎಂಬ ಪಾರಂಪರಿಕ ಗಾದೆ ಮಾತು ಇಂದಿಗೂ ಸಹ ನಮ್ಮ ನಡುವೆ ಧ್ವನಿಸುತ್ತಲೇ ಇದೆ. ಈ ಗಾದೆ ಮಾತು ಹುಟ್ಟಿದಾಗ ನೇರ ಜನಸಂಪರ್ಕದ ಸಾಧನಗಳು ಬಹುಮಟ್ಟಿಗೆ ಇರಲೇ ಇಲ್ಲ. ಆದರೂ ತಾನು ಬಾಳುವ ಪರಿಸರದಲ್ಲಿ ವ್ಯಕ್ತಿ ಸಭ್ಯ ಮಾತುಗಳನ್ನಾಡಬೇಕು ಎಂಬ ಪ್ರಜ್ಞೆ ಅಂದಿನ ಸಮಾಜದಲ್ಲಿತ್ತು.

ಈಗ ಭಾರತ ಸಾಂಸ್ಕೃತಿಕವಾಗಿ-ಬೌದ್ಧಿಕವಾಗಿ ವಿಶ್ವದ ಅಗ್ರಮಾನ್ಯ ದೇಶವಾಗಿ ಬೆಳೆದಿದೆ. ಆಧುನಿಕ ನಾಗರಿಕತೆಗೆ ಅಗತ್ಯವಾದ ಎಲ್ಲ ಆಯಾಮಗಳನ್ನೂ ತನ್ನೊಳಗೆ ಆವಾಹಿಸಿಕೊಂಡಿರುವ ಭಾರತೀಯ ಸಮಾಜ ಇತರ ದೇಶಗಳಿಗೆ ಮಾದರಿಯಾಗುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಔನ್ನತ್ಯದ ನಡುವೆಯೇ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಜನಸಂಪರ್ಕದ ಸೇತುವೆಗಳನ್ನು ಕಿರಿದಾಗಿಸುವುದರಲ್ಲಿ ಯಶಸ್ವಿಯಾಗಿದೆ. ಸಂವಹನ ಸಾಧನಗಳು ಜಗತ್ತಿನ ಅಷ್ಟಮೂಲೆಗಳನ್ನೂ ಒಟ್ಟಿಗೆ ಸಂಪರ್ಕಿಸಲು ಸಾಧ್ಯವಾಗುವಂತಹ ಪರಿಕರಗಳನ್ನು ಒದಗಿಸಿವೆ. ಈ ವಾತಾವರಣದಲ್ಲಿ ಒಬ್ಬ ವ್ಯಕ್ತಿಯ ಮಾತುಗಳು ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರನ್ನು ತಲುಪುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಅಥವಾ ಆಂತರಿಕ ಸಮಾಜದಲ್ಲೂ ಸಹ ವ್ಯಕ್ತಿ ಆಡುವ ಪ್ರತಿಯೊಂದು ಮಾತು ಸಹ ಶ್ರವಣಯೋಗ್ಯವಷ್ಟೇ ಅಲ್ಲ ಮನಸ್ಸಿಗೆ ಮುದ ನೀಡುವಂತೆಯೂ ಇರಬೇಕಾಗುತ್ತದೆ.

ಮಾಧ್ಯಮಗಳ ಸಂಯಮದ ಕೊರತೆ

ಇಲ್ಲಿ ನಮಗೆ ಸಭ್ಯತೆ, ಸೌಜನ್ಯ ಮತ್ತು ಸಂಯಮದ ಮಾತುಗಳು ಮುಖ್ಯವಾಗುತ್ತವೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಈ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವಂತಹ ಶೈಕ್ಷಣಿಕ-ಬೌದ್ಧಿಕ ವಾತಾವರಣ ಸೃಷ್ಟಿಸುವುದು ಸಮಾಜದ ಪ್ರಥಮ ಆದ್ಯತೆಯಾಗಬೇಕಾಗುತ್ತದೆ. ಸಾಹಿತ್ಯಕವಾಗಿ ಇದನ್ನು ಆಗುಮಾಡುವಂತಹ ವಿಪುಲವಾದ ಅಕ್ಷರ ಭಂಡಾರವೇ ನಮ್ಮ ನಡುವೆ ಇದೆ. ಇದನ್ನು ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಇರುವ ಬೋಧಕ ವೃಂದ ಇಂದಿಗೂ ಈ ಅಲಿಖಿತ ಸಂಹಿತೆಗಳನ್ನು ಒಂದು ಹಂತದವರೆಗೆ ಪಾಲಿಸುತ್ತಾ ಬಂದಿದೆ. ಆದರೆ ಶಾಲಾ ಆವರಣಗಳಿಂದ ಹೊರಗೆ, ವಿಶಾಲ ಸಮಾಜದ ಸಂವಾದ-ಸಂಕಥನ-ಚರ್ಚೆಗಳಲ್ಲಿ ಈ ಔನ್ನತ್ಯವನ್ನು ಕಾಪಾಡುವ ಜವಾಬ್ದಾರಿ ಯಾರದು ? ಇಲ್ಲಿ ನಮ್ಮ ರಾಜಕೀಯ ನಾಯಕರ ಮತ್ತು ಸಂವಹನ ಮಾಧ್ಯಮಗಳ ಪಾತ್ರ ಮುಖ್ಯವಾಗುತ್ತದೆ. ಸಂವಹನ ಕ್ರಾಂತಿಯ ಪರಿಣಾಮ ಇಂದು ಸಾರ್ವಜನಿಕವಾಗಿ ವ್ಯಕ್ತವಾಗುವ ಮಾತುಗಳು ಯಾವುದೇ ಅಡೆತಡೆಗಳಿಲ್ಲದೆ ಕ್ಷಣಮಾತ್ರದಲ್ಲಿ ಸಮಾಜವನ್ನು ತಲುಪುವಂತಾಗಿದೆ.

ಇಂತಹ ವಾತಾವರಣದಲ್ಲಿ ಸುದ್ದಿ ಪ್ರಸರಣ ಮಾಡುವ ವಿದ್ಯುನ್ಮಾನ ಮಾಧ್ಯಮಗಳು ಬಳಸುವ ಮತ್ತು ನಿತ್ಯ ಜನಸಂಪರ್ಕದಲ್ಲಿರುವ ರಾಜಕೀಯ ನಾಯಕರು ಆಡುವ ಮಾತುಗಳಲ್ಲಿ ಸೌಜನ್ಯ, ಸಂಯಮ ಮತ್ತು ಸಭ್ಯತೆ ಇರಬೇಕಾದ್ದು ಅತ್ಯವಶ್ಯ. ದುರಾದೃಷ್ಟವಶಾತ್‌ ಈ ಎರಡೂ ಸಂವಹನ ಮಾಧ್ಯಮಗಳಲ್ಲಿ ಇಂದು ಮರೆಯಾಗಿರುವುದೇ ಈ ಲಕ್ಷಣಗಳು. ಸುದ್ದಿಮನೆಗಳು ಬಳಸುವ ಯುದ್ಧಕೇಂದ್ರಿತ ಪದಗಳು ಮತ್ತು ಸುದ್ದಿಗಳ ಸುತ್ತ ಬೆಸೆಯುವ ಕಲ್ಪಿತ ಪದಪುಂಜಗಳು ನೋಡುಗರ ಮನಸ್ಸನ್ನು ಪ್ರಕ್ಷುಬ್ಧಗೊಳಿಸುವಷ್ಟು ಮಟ್ಟಿಗೆ ಕಠೋರವಾಗಿರುತ್ತವೆ. ಸಾರ್ವಜನಿಕ ಸುದ್ದಿಗಳಿಗೂ, ಕ್ರೈಂ ನ್ಯೂಸ್‌ನಲ್ಲಿ ಪ್ರಸಾರವಾಗುವ ವಾರ್ತೆಗಳಿಗೂ ವ್ಯತ್ಯಾಸವೇ ಇಲ್ಲದಂತೆ ಬಳಸಲ್ಪಡುವ ಪರಿಭಾಷೆ, ಪ್ರಶಾಂತ ವಾತಾವರಣವನ್ನೂ ಕಲುಷಿತಗೊಳಿಸುವಂತಿರುತ್ತದೆ. ಇತ್ತೀಚಿನ ಉದಾಹರಣೆಯಾಗಿ ಚಿತ್ರನಟ ದರ್ಶನ್‌ ಸುತ್ತ ಸತತವಾಗಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ವೀಕ್ಷಿಸಿದರೂ ಸಾಕು.

ರಾಜಕೀಯ ವಲಯದಲ್ಲಿ ಈ ವಿಕೃತಿಯ ಪರಾಕಾಷ್ಠೆಯನ್ನು ಕಾಣುತ್ತಿದ್ದೇವೆ. ಭಾರತದ ಸಮಕಾಲೀನ ಇತಿಹಾಸವನ್ನು ಗಮನಿಸಿದರೂ ಸಾಕು, ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲೂ ರಾಜಕೀಯ ಚರ್ಚೆಗಳು ಸಂಭಾವಿತವಾಗಿರುತ್ತಿದ್ದುದನ್ನು ಗುರುತಿಸಬಹುದು. ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಎಂದೂ ಏಕಾಭಿಪ್ರಾಯದ ದೇಶ ಆಗಿರಲಿಲ್ಲ. ತತ್ವ ಸಿದ್ಧಾಂತ ಮತ್ತು ಹೋರಾಟದ ಮಾರ್ಗಗಳಲ್ಲಿದ್ದ ವೈವಿಧ್ಯತೆಯೇ ಅಂದಿನ ರಾಜಕೀಯ ಚರ್ಚೆಗಳಲ್ಲೂ ಇರುತ್ತಿದ್ದವು. ಗಾಂಧಿ-ಅಂಬೇಡ್ಕರ್‌ ಆದಿಯಾಗಿ ಬಹುಪಾಲು ನೇತಾರರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಸೈದ್ಧಾಂತಿಕ ಅಂತರ ಇತ್ತು. ರಾಜಕೀಯ ವೈರುಧ್ಯಗಳಿದ್ದವು. ಆದರೆ 20ನೆಯ ಶತಮಾನದ ಆರಂಭದಿಂದ 1970ರವರೆಗೂ ನಡೆದ ಸಾರ್ವಜನಿಕ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲಿಯೂ ಸಹ ದ್ವೇಷ, ಅಸೂಯೆ ಅಥವಾ ಅವಹೇಳನಕಾರಿ ಪರಿಭಾಷೆಯನ್ನು ಕಾಣಲಾಗುವುದಿಲ್ಲ.

ರಾಜಕೀಯ ಪರಿಭಾಷೆಯ ಔನ್ನತ್ಯ

ಗಾಂಧಿ Vs ಅಂಬೇಡ್ಕರ್‌, ನೆಹರೂ Vs ಜಿನ್ನಾ, ಪಟೇಲ್‌ Vs ಜಿನ್ನಾ ಹೀಗೆ ಸಾರ್ವಜನಿಕ ಚರ್ಚೆಗಳನ್ನು ಭೇದಿಸುತ್ತಾ ಹೋದಂತೆ ಅಲ್ಲಿ ನಮಗೆ ಕಾಣುವುದು ಸಂಯಮ ಮತ್ತು ಸೌಜನ್ಯಯುತ ಭಾಷೆಯ ಒಂದು ಆರೋಗ್ಯಕರ ಸಂವಾದ. 1937ರಲ್ಲಿ ದೇಶದ ವಿಭಜನೆಯ ಸುತ್ತ ಚರ್ಚೆಗಳು ಆರಂಭವಾದ ನಂತರ ಅತಿ ಹೆಚ್ಚು ಟೀಕೆಗೊಳಗಾದ ವ್ಯಕ್ತಿ ಎಂದರೆ ಪಾಕಿಸ್ತಾನದ ಪ್ರವರ್ತಕ ಮೊಹಮ್ಮದ್‌ ಅಲಿ ಜಿನ್ನಾ. ತಮ್ಮ Pakistan or the Partition of India ಕೃತಿಯಲ್ಲಿ ಈ ವಿಚಾರವನ್ನೇ ಸಮಗ್ರವಾಗಿ ವಿಶ್ಲೇಷಿಸುವ ಡಾ. ಬಿ. ಆರ್.‌ ಅಂಬೇಡ್ಕರ್‌ ಜಿನ್ನಾ ಅವರ ಬಗ್ಗೆ ಪ್ರಚಲಿತವಾಗಿದ್ದ ಸಾರ್ವಜನಿಕ ಅಭಿಪ್ರಾಯಗಳನ್ನು ಕುರಿತು ಒಂದು ಕಡೆ ಹೀಗೆ ಹೇಳುತ್ತಾರೆ : “ ಸೈದ್ದಾಂತಿಕವಾಗಿ ಮನ್ವಂತರಕ್ಕೊಳಗಾಗಿದ್ದ ಜಿನ್ನಾ ಅವರನ್ನು ಅವರ ಪರಮಶತ್ರುಗಳೂ ಸಹ ಬ್ರಿಟೀಷರ ಕೈಗೊಂಬೆ ಎಂದು ಭಾವಿಸಲು ಸಾಧ್ಯವಿಲ್ಲ,,,,,ಅದೇ ವೇಳೆ, ಯಾವುದೇ ಪ್ರಲೋಭನೆಗೊಳಗಾಗದ ರಾಜಕೀಯ ನಾಯಕರು ಭಾರತದಲ್ಲಿ ಇರುವುದೇ ಆದರೆ, ಆ ಗುಣವಿಶೇಷಣವನ್ನು ಅವರಿಗೆ ಸಮರ್ಥನೀಯವಾಗಿ ಅನ್ವಯಿಸಬಹುದು,,,,,, ” (ಪುಟ 383-384 Pakistan or the Partition of India ). ಇದು ವಿರೋಧಿಯನ್ನು ಗೌರವದಿಂದ ಕಾಣುವ ಒಂದು ಅತ್ಯುನ್ನತ ನಿದರ್ಶನ.

ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಲೋಹಿಯಾ Vs ನೆಹರೂ, ಅಂಬೇಡ್ಕರ್‌ Vs ನೆಹರೂ ಇವರ ನಡುವೆ ನಡೆಯುತ್ತಿದ್ದ ಚರ್ಚೆಗಳು, ಓಮ್‌ ಪ್ರಕಾಶ್‌ ತ್ಯಾಗಿ, ಅಟಲ್‌ ಬಿಹಾರಿ ವಾಜಪೇಯಿ, ಆಚಾರ್ಯ ಕೃಪಲಾನಿ ಮುಂತಾದ ನಾಯಕರು ಸಂಸದೀಯ ಚರ್ಚೆಗಳಲ್ಲಿ ಮಂಡಿಸುತ್ತಿದ್ದ ವಿಚಾರಗಳು ಸರ್ಕಾರದ ಕಾರ್ಯವೈಖರಿಯವನ್ನು ಖಂಡತುಂಡವಾಗಿ ಟೀಕಿಸುವಂತಿದ್ದರೂ, ಸಾರ್ವಜನಿಕವಾಗಿ ಅಥವಾ ಸಂಸತ್ತಿನ ಒಳಗೆ ಈ ನಾಯಕರು ಬಳಸುತ್ತಿದ್ದ ಭಾಷೆ-ಪರಿಭಾಷೆ ಎಂದೂ ಸಹ ಸಂಯಮದ ಗೆರೆ ದಾಟುತ್ತಿರಲಿಲ್ಲ. ಈ ನಿದರ್ಶನಗಳೇ  ಅಂದಿನ ಭಾರತದ ರಾಜಕೀಯ ಪರಿಭಾಷೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ತನ್ನ ರಾಜಕೀಯ ವಿರೋಧಿಯನ್ನು ಶತ್ರು ಎಂದು ಭಾವಿಸದೆ, ವಸ್ತುನಿಷ್ಠವಾಗಿ ಅವರ ತಾತ್ವಿಕತೆಯನ್ನು ನಿಷ್ಕರ್ಷೆಗೊಳಪಡಿಸುವ ಮೂಲಕ, ಅಧಿಕಾರ ರಾಜಕಾರಣಕ್ಕೂ ವ್ಯಕ್ತಿಗತ ಸಾರ್ವಜನಿಕ ಬದುಕಿಗೂ ನಡುವೆ ಇರುವ ಅಂತರವನ್ನು ಮನಗಂಡು , ಸೈದ್ಧಾಂತಿಕವಾಗಿ ಭಿನ್ನ ವಿಚಾರಧಾರೆಯನ್ನು ಜನತೆಯ ಮುಂದಿಡುವ ಈ ಪರಂಪರೆ ಏನಾಯಿತು ?

LokayuktaRaid: ಮೋಹನ್ ರನ್ನ ಬ್ಯಾಂಕ್ ಗೆ ಕರೆದೊಯ್ದ ಅಧಿಕಾರಿಗಳು..! #karanataka #lokayuktha #itraid

ವರ್ತಮಾನದ ಅವಲಕ್ಷಣಗಳು

ಇಂದಿನ ರಾಜಕೀಯ ನಾಯಕರ ಸುಳ್ಳು ತಟವಟಗಳು, ಚರಿತ್ರೆಯ ತಪ್ಪು ವ್ಯಾಖ್ಯಾನಗಳು, ಸಂಸ್ಕೃತಿಯ ಅಪವಾಖ್ಯಾನಗಳು, ಪರಸ್ಪರ ದೋಷಾರೋಪಣೆಗಳು ಹಾಗೂ ವೈಯ್ಯುಕ್ತಿಕ ನೆಲೆಯಲ್ಲಿ ತನ್ನೆದುರಿನ ವ್ಯಕ್ತಿಯ ಭೌತಿಕ ಅಸ್ತಿತ್ವವನ್ನೇ ಹೀಯಾಳಿಸುವಂತಹ ಮಾತುಗಳು ಸಾರ್ವಜನಿಕ ಸಂಕಥನದ ಅವಿಚ್ಛಿನ್ನ ಭಾಗವಾಗಿದ್ದಾದರೂ ಹೇಗೆ ? ವಾಟ್ಸಾಪ್‌ ವಿಶ್ವವಿದ್ಯಾಲಯದ ಹೊರಗಿನ ಯಾವುದೇ ಚರಿತ್ರೆಯ ವಿದ್ಯಾರ್ಥಿಗೆ ಈ ಪ್ರಶ್ನೆ ಕಾಡಲೇಬೇಕು. ರಾಜಕೀಯ ವಿರೋಧವನ್ನು ಸಹಿಸಿಕೊಳ್ಳುವ ವ್ಯವಧಾನವನ್ನೇ ಕಳೆದುಕೊಂಡಿರುವ ರಾಜಕೀಯ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಬಳಸುವ ಭಾಷೆಯೂ ಸಹ ಸಂಭಾವಿತ ಸಮಾಜವನ್ನು ಲಜ್ಜೆಗೀಡುಮಾಡುವಂತಿರುತ್ತದೆ. ತಮ್ಮ ವೈಯುಕ್ತಿಕ ವರ್ಚಸ್ಸನ್ನೂ ಲೆಕ್ಕಿಸದೆ, ಎದುರಿಗಿರುವ ವಿರೋಧಿಯ ವ್ಯಕ್ತಿಗತ ಘನತೆಯನ್ನೂ ಲೆಕ್ಕಿಸದೆ ರಾಜಕೀಯ ನಾಯಕರು ಆಡುವ ಮಾತುಗಳು ಸಮಾಜದ ಮೇಲೆ, ವಿಶೇಷವಾಗಿ ಯುವ ಸಂಕುಲದ ಮೇಲೆ ಎಂತಹ ಋಣಾತ್ಮಕ ಪರಿಣಾಮ ಬೀರಬಹುದು ಎಂಬ ಕನಿಷ್ಠ ಪರಿವೆಯಾದರೂ ಇರಬೇಕಲ್ಲವೇ ?

ಆದರೆ ಇದನ್ನು ಕಾಣಲಾಗುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರ ರಾಜಕಾರಣ ಸೃಷ್ಟಿರುವ ಒಂದು ಸುರಕ್ಷಿತ ತಾಣ, ಅದರಿಂದ ಕಟ್ಟಿಕೊಳ್ಳಬಹುದಾದ ಸುಭದ್ರ ತಳಪಾಯದ ಭವಿಷ್ಯ ಮತ್ತು ಅದು ಪ್ರಚೋದಿಸುವ ಶ್ರೇಷ್ಠತೆಯ ಅಹಮಿಕೆ. ಅಧಿಕಾರ ಎನ್ನುವುದು ಸಹಜವಾಗಿಯೇ ಮನುಷ್ಯನ ಅಹಮಿಕೆಯನ್ನು ಹೆಚ್ಚಿಸುವ, ಪ್ರಜಾಪ್ರಭುತ್ವದಲ್ಲೂ ಕಾಣಬಹುದಾದ,  ಒಂಧು ಸಾಧನ. ಜನರ ಕೈಗೇ ಅಧಿಕಾರ ಕೊಡುತ್ತೇವೆ ಎಂಬ ಸಾಂವಿಧಾನಿಕ ವಚನ ಪ್ರಮಾಣಗಳ ಹೊರತಾಗಿಯೂ ಸ್ವತಂತ್ರ ಭಾರತದ ಅಧಿಕಾರ ರಾಜಕಾರಣವು ಈ ಅಹಮಿಕೆಗೆ ತಾತ್ವಿಕ ಹೊದಿಕೆಯನ್ನೂ ಹೊದಿಸಿದೆ, ಚಾರಿತ್ರಿಕ ಚಾದರವನ್ನೂ ಕಲ್ಪಿಸಿದೆ, ಸಾಂಸ್ಕೃತಿಕ ಪರಂಪರೆಯನ್ನೂ ಆರೋಪಿಸಿದೆ. ಈ ಬೆಳವಣಿಗೆಗೂ ಮೇಲೆ ಉಲ್ಲೇಖಿಸಿದ ಅಂಬೇಡ್ಕರ್‌ ಅವರ ಕೃತಿಯಲ್ಲೇ ಉತ್ತರ ಇದೆ. ಅಂಬೇಡ್ಕರ್‌ ಉಲ್ಲೇಖಿಸುವ ಖ್ಯಾತ ತತ್ವಶಾಸ್ತ್ರಜ್ಞ ರೂಸೋ ಅವರ ಈ ಮಾತುಗಳು ಗಮನಾರ್ಹ : “ವ್ಯಕ್ತಿಯೊಬ್ಬ ಎಷ್ಟೇ ಬಲಶಾಲಿಯಾದರೂ ಸಹ  ಸದಾ ಕಾಲವೂ ಯಜಮಾನಿಕೆಯನ್ನು ಸಾಧಿಸಲಾಗುವುದಿಲ್ಲ, ತನ್ನ ಆ ಶಕ್ತಿಯನ್ನು ವ್ಯಕ್ತಿಗತ ಹಕ್ಕಾಗಿ  ವಿಧೇಯತೆಯನ್ನು ಕರ್ತವ್ಯವನ್ನಾಗಿ ಪರಿವರ್ತಿಸಿದಾಗ ಮಾತ್ರ ಇದು ಸಾಧ್ಯ” . ಈ  ಮಾತುಗಳನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ವರ್ತಮಾನ ಭಾರತದ ರಾಜಕೀಯ ಪರಿಭಾಷೆಗೂ ಕಾರಣಗಳನ್ನು ಒದಗಿಸುತ್ತಾರೆ. ( ಪುಟ 438 ಅದೇ ಪುಸ್ತಕ)

DK Shivakumar: ಚನ್ನಪಟ್ಟಣ ಸಮೀಕ್ಷೆ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದ ಡಿಕೆಶಿ.! #nikhilkumaraswamy #cpyogeshwar

ಇಂದಿನ ರಾಜಕೀಯ ನಾಯಕರು ಆಡುವ ತಲೆ ಕತ್ತರಿಸುತ್ತೇವೆ, ಹುಡುಕಿ ಕೊಲ್ಲುತ್ತೇವೆ ಎಂಬ ದ್ವೇಷದ ಮಾತುಗಳಾಗಲೀ ವರ್ಣಭೇದ ನೀತಿಯನ್ನು ನೆನಪಿಸುವ ʼಕರಿಯʼ ಎಂಬ  ಅವಹೇಳನಕಾರಿ ಮಾತುಗಳಾಗಲೀ ಚುನಾಯಿತ ಜನಪ್ರತಿನಿಧಿಗಳಿಂದ ಯಾವುದೇ ಸಂಕೋಚ-ಮುಜುಗರ-ಪಶ್ಚಾತ್ತಾಪ ಇಲ್ಲದೆ ಬರುತ್ತಿರುವುದನ್ನು ನೋಡಿದಾಗ ನಮಗೆ ಪೂರ್ವಸೂರಿಗಳ ಸಭ್ಯತೆ, ಸೌಜನ್ಯ ಮತ್ತು ಸಂಭಾವಿತ ನಡೆ ಸಹಜವಾಗಿ ನೆನಪಾಗುತ್ತದೆ. “ ನಾವು ಅಧಿಕಾರ ಹೊಂದಿದ್ದೇವೆ ನಮ್ಮನ್ನು ಯಾರೂ ಅಲುಗಾಡಿಸಲಾಗುವುದಿಲ್ಲ ” ಎಂಬ ಅಹಂಭಾವ ಈ ವರ್ತನೆಗೆ ಒಂದು ಕಾರಣವಾದರೆ, ಮತ್ತೊಂದು ಕಾರಣ “ತಮ್ಮ ವಿರೋಧಿಗಳೂ ಹೀಗೆಯೇ ಮಾತನಾಡುತ್ತಾರಲ್ಲವೇ ತಾನು ಆಡಿದರೆ ತಪ್ಪೇನು ” ಎಂಬ ಸಮಜಾಯಿಷಿ. ಈ ಸ್ವ-ಸಮರ್ಥನೆಯ ಹಿಂದಿರುವುದು ಅದೇ ಪ್ರಾಚೀನ ಊಳಿಗಮಾನ್ಯ ಧೋರಣೆ ಮತ್ತು ಯಜಮಾನಿಕೆಯ ದರ್ಪ.

ಭವಿಷ್ಯದ ದೃಷ್ಟಿಯಿಂದ ,,,,,,

ಆದರೆ ಭವಿಷ್ಯದ ಭಾರತವನ್ನು ಒಂದು ಉತ್ತಮ ನಾಗರಿಕತೆಯತ್ತ ಕರೆದೊಯ್ಯಬೇಕಿದೆ ಎನ್ನುವ ವಾಸ್ತವವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಲ್ಲವೇ ? ಆಡುವ ಮಾತುಗಳಲ್ಲೇ ಇಲ್ಲದ ಸೌಜನ್ಯ, ಸಂಯಮ, ಸಭ್ಯತೆ ವ್ಯಕ್ತಿಯ ನಡೆಯಲ್ಲಿ ಹೇಗೆ ಕಾಣಲು ಸಾಧ್ಯ ? ಭಾಷಾ ಸೌಜನ್ಯ ಮತ್ತು ಸಂಯಮದ ಬಗ್ಗೆ ನಮಗೆ 12ನೆಯ ಶತಮಾನದಲ್ಲೇ ಬಸವಣ್ಣನವರು ಒಂದು ನೈತಿಕ ಸೂತ್ರವನ್ನು ಕೊಟ್ಟುಹೋಗಿದ್ದಾರೆ.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮನೆಂತೊಲಿವನಯ್ಯ?

ಈ ವಚನದ ತಾತ್ಪರ್ಯವನ್ನು ಅರಿತ ಯಾವುದೇ ವ್ಯಕ್ತಿಯಾದರೂ ತನ್ನ ಸಂಯಮದ ಗೆರೆ ದಾಟುವುದಿಲ್ಲ. ದುರಂತ ಎಂದರೆ ಬಸವಣ್ಣನ ಕಟ್ಟಾ ಅನುಯಾಯಿಗಳಲ್ಲೂ, ಅಂಬೇಡ್ಕರರನ್ನು, ಗಾಂಧಿಯನ್ನು ಆರಾಧಿಸುವವರಲ್ಲೂ ಇದನ್ನು ಕಾಣಲಾಗುವುದಿಲ್ಲ. ಇದು ವರ್ತಮಾನ ಭಾರತದ ದೊಡ್ಡ ದುರಂತ.

 ಈ ಸದಾಶಯದ ಮಾತುಗಳನ್ನು ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ, ನಮ್ಮ ಸುದ್ದಿಮನೆಗಳ ನಿರೂಪಕರೂ, ಮಾಧ್ಯಮ ಸಮೂಹಗಳೂ ಮತ್ತೆ ಮತ್ತೆ ಆಲಿಸಬೇಕಿದೆ.  ಈ ಸದ್ಗುಣಗಳನ್ನು ರೂಢಿಸಿಕೊಳ್ಳಲು ನಮಗೆ ಪಶ್ಚಿಮದ ವಿದ್ವಾಂಸರೇನೂ ಅಗತ್ಯವಿಲ್ಲ ಅಲ್ಲವೇ ? ನಮ್ಮ ನಡುವೆಯೇ ಇಂತಹ ಮುತ್ಸದ್ಧಿಗಳು ಆಗಿಹೋಗಿದ್ದಾರೆ. ಸಾರ್ವಜನಿಕವಾಗಿ ನಾವು ಬಳಸುವ ಭಾಷೆ ಮತ್ತು ಪರಿಭಾಷೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಿರಬೇಕು ಅಥವಾ ಹದಗೆಟ್ಟ ಸಮಾಜದ ಒಂದು ವರ್ಗವನ್ನು ಸರಿದಾರಿಗೆ ತರುವಂತಿರಬೇಕು. ಈ ಕನಿಷ್ಠ ಪರಿವೆಯೂ ಇಲ್ಲದೆ ವರ್ತಿಸುವ ಜನಪ್ರತಿನಿಧಿಗಳನ್ನು, ಮಾಧ್ಯಮ ಪ್ರತಿನಿಧಿಗಳನ್ನು ಸರಿದಾರಿಗೆ ತರುವುದಾದರೂ ಹೇಗೆ ? ಈ ಕಾರಣಕ್ಕಾಗಿಯಾದರೂ ಪ್ರಾಮಾಣಿಕ-ಸಭ್ಯ-ಸಂಯಮಯುತ-ಸೌಜನ್ಯಪೂರ್ಣ ಭಾಷೆ-ಪರಿಭಾಷೆಯನ್ನು ಕಲಿಸಲು ಒಂದು ಪ್ರಾಥಮಿಕ ಶಾಲೆಯನ್ನು ಸರ್ಕಾರಗಳೇ ಸ್ಥಾಪಿಸಬೇಕಿದೆ. ಭವಿಷ್ಯ ಭಾರತದ ಆರೋಗ್ಯದ ದೃಷ್ಟಿಯಿಂದ ಇದು ವರ್ತಮಾನದ ತುರ್ತು.

-೦-೦-೦-

Tags: after school activitiesafter school routineaustrian school of economicsbatavia high schoolequine behaviour and traininghomeschooling resourcesrestrain horses appropriatelyrestrain the horserestraining horses for treatmentstructured schoolthe best isekai manga you need to seethe home as a school ofto prove that humans and zombies can have offspringwassce 2023 comprehension passage questions and answers
Previous Post

ಉಪಚುನಾವಣೆಯಲ್ಲಿ ಸೋಲು ಗೆಲುವು ದೇವರ ಫಲಾಫಲ:ಡಿಸಿಎಂ ಡಿ. ಕೆ. ಶಿವಕುಮಾರ್

Next Post

ಈಗ ಖುಷಿ.. ನಾಡಿದ್ದು ಮತ್ತಷ್ಟು ಖುಷಿ.. ಮೂಕಾಂಬಿಕೆ ಮೊರೆ ಹೋದ ಡಿಕೆ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಈಗ ಖುಷಿ.. ನಾಡಿದ್ದು ಮತ್ತಷ್ಟು ಖುಷಿ.. ಮೂಕಾಂಬಿಕೆ ಮೊರೆ ಹೋದ ಡಿಕೆ

ಈಗ ಖುಷಿ.. ನಾಡಿದ್ದು ಮತ್ತಷ್ಟು ಖುಷಿ.. ಮೂಕಾಂಬಿಕೆ ಮೊರೆ ಹೋದ ಡಿಕೆ

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada