ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಆದರೆ, ಪ್ರತಿಭಟನೆ ಮಾಡಬಹುದು. ಪ್ರತಿಭಟನೆ ಅವರ ಹಕ್ಕು. ಸಂಘಟನೆಗಳಿಗೆ ಕರ್ನಾಟಕ ಬಂದ್ ಬೇಡ ಎಂದು ಮನವಿ ಮಾಡಿದ್ದೇವೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್ಗೆ ಬೆಂಬಲ ಕೊಡುತ್ತಿದ್ದಾವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಬಾರದು. ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ತವಾದ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮಂಗಳವಾರ ಒಂದು ದಿನದ ಬೆಂಗಳೂರು ಬಂದ್ನಿಂದ ಅಂದಾಜು 1,000 ರಿಂದ 2000 ಕೋಟಿ ರೂ. ನಷ್ಟವಾಗಿದೆ. ಇವತ್ತು ರಜೆ ಇದೆ. ನಾಳೆಯು ಬಂದ್ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಿದ್ದಾರಾ ಅಥವಾ ಬೇರೆಯವರು ಅವರ ಮೇಲೆ ಒತ್ತಡ ಹೇರುತ್ತಿದ್ದಾರಾ ಗೊತ್ತಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.