ಕಳೆದ ಕೆಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತು ಇನ್ನೂ ಗೊಂದಲಗಳು ಮುಗಿದಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಬಿಜೆಪಿ ಶಾಸಕರೊಡನೆ ಚರ್ಚೆ ನಡೆಸಿದ್ದರೂ, ತಾರ್ಕಿಕ ಅಂತ್ಯಕ್ಕೆ ಬರಲು ಅವರಿಂದಲೂ ಸಾಧ್ಯವಾಗಿಲ್ಲ. ಭಿನ್ನಮತೀಯ ಶಾಸಕರ ಅಸಮಾಧಾನವನ್ನು ತಣಿಸಲು ಕೂಡಾ ಅವರು ವಿಫಲವಾಗಿದ್ದಾರೆ.
ಇದುವರೆಗೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ ಒಂದು ಬಣವಿದ್ದರೆ, ಯಡಿಯೂರಪ್ಪ ವಿರುದ್ಧ ಒಂದು ಬಣ ಇರುವುದು ಬಹಿರಂಗಗೊಂಡಿತ್ತು. ಆದರೆ, ಅರುಣ್ ಸಿಂಗ್ ಆಗಮನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಇದೆರಡಕ್ಕೂ ಹೊರತಾಗಿ ಮೂರನೆಯ ಒಂದು ಬಣ ಇರುವುದು ಸ್ಪಷ್ಟವಾಗಿದೆ.

ಜಿಂದಾಲ್ ಕಂಪೆನಿಗೆ ಭೂಮಿ ಕೊಡುವ ವಿಚಾರದಲ್ಲಿ ಪಕ್ಷದೊಳಗೆದ್ದ ಅಸಹನೆಯ ವೇಳೆ ಈ ಮೂರನೆಯ ಬಣ ಇರುವ ಕುರಿತು ಅಸ್ಪಷ್ಟ ಸೂಚನೆ ಲಭಿಸಿತ್ತಾದರೂ, ಅರುಣ್ ಸಿಂಗ್ ಭೇಟಿಯ ಬಳಿಕ ಈ ಬಣದ ಮುಖಂಡರು ಯಾರು ಎನ್ನುವುದು ಇನ್ನೂ ನಿಚ್ಚಳವಾಗಿದೆ. ಸಂಘದ ಹಿನ್ನೆಲೆಯಿಂದಲೇ ಬಂದ ಶಾಸಕರ ಈ ಬಣವು ಯಡಿಯೂರಪ್ಪ ಅಥವಾ ಯಡಿಯೂರಪ್ಪ ವಿರೋಧಿ ಪಾಳೆಯಕ್ಕೆ ನಿಷ್ಟೆಯಾಗಿರದೆ, ಕೇವಲ ಪಕ್ಷಕ್ಕೆ ನಿಷ್ಟವಾಗಿದೆ ಹಾಗೂ ಆರ್‌ಎಸ್‌ಎಸ್ ಜೊತೆಗೆ ನಿಕಟವಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ನಾಯಕತ್ವ ಬದಲಾವಣೆ, ನಾಯಕತ್ವ ಉಳಿಸುವಿಕೆ ಪ್ರಹಸನದಲ್ಲಿ ಉಳಿದೆರಡು ಬಣಗಳು ಹಗ್ಗ ಜಗ್ಗಾಟದಲ್ಲಿ ತೊಡಗಿಕೊಂಡಿದ್ದ ನಡುವೆಯೇ, ಈ ಮೂರನೆಯ ಬಣವು ಜಿಂದಾಲ್ ಕಂಪೆನಿಗೆ ಭೂ ಪರೆಭಾರೆ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದವು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಅಧಿಕಾರದಲ್ಲಿದ್ದ ವೇಳೆ ಬಿಜೆಪಿಯು ಜಿಂದಾಲ್‌ಗೆ ಜಮೀನು ಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ರಚಿಸಿದ ಬೆನ್ನಲ್ಲೇ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿಕೊಟ್ಟಿತ್ತು. ಇದನ್ನು ವಿರೋಧಿಸಿ ಪಕ್ಷಕ್ಕೆ ನಿಷ್ಟವಾಗಿರುವ ಈ ಶಾಸಕರು ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ಬದಲಾದ ನಿಲುವಿನ ಕುರಿತು ಅಚ್ಚರಿ ವ್ಯಕ್ತಪಡಿಸಿತ್ತು.

ಈ ಬಣದ ಮುಂಚೂಣಿ ನಾಯಕರೆನಿಸಿಕೊಂಡಿರುವ ಸರ್ಕಾರದ ಮುಖ್ಯ ಸಚೇತಕ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭೂಮಿ ಮಂಜೂರಾತಿ ಕುರಿತು ಬಹಿರಂಗವಾಗಿಯೇ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು. ಭೂಮಿ ಮಂಜೂರಾತಿ ವಿರುದ್ಧ ಕೇಂದ್ರ ನಾಯಕತ್ವಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, “ಈ ಹಿಂದೆ ನಾವು ವಿರೋಧಿಸಿದ್ದ ವಿಷಯದ ಬಗ್ಗೆ ಪಕ್ಷದ ನಿಲುವು ಹೇಗೆ ಬದಲಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದರು.

ಪಕ್ಷದ ವೇದಿಕೆಯಲ್ಲಿ ಅಥವಾ ಶಾಸಕಾಂಗದಲ್ಲಿ ಇದನ್ನು ಯಾರೂ ಬಗೆಹರಿಸಿಲ್ಲ. ಈ ಭೂಮಿಯನ್ನು ಮಾರಾಟ ಮಾಡಬಾರದೆಂಬ ಪಕ್ಷದ ಮೂಲ ಅಭಿಪ್ರಾಯದೊಂದಿಗೆ ನಾನು ನಿಲ್ಲುತ್ತೇನೆ. ಪಕ್ಷ ಹೇಗೆ ತನ್ನ ನಿಲುವಿನಿಂದ ಬದಲಾಯಿತು ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ, ತನ್ನ ಸೈದ್ಧಾಂತಿಕ ಬದ್ಧತೆಯನ್ನು ಪ್ರಕಟಿಸಿದ್ದರು.
ನಾಯಕತ್ವ ಕುರಿತು ಚಿಂತೆಯಿಲ್ಲ; ಪಕ್ಷದ ವರ್ಚಸ್ಸು ಅಷ್ಟೇ ಮುಖ್ಯ
ಬಿಎಸ್‌ವೈ ಪರ ವಿರೋಧಿ ಬಣಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಗಳಿಂದ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಕುಗ್ಗುತ್ತಿದೆ ಎನ್ನುವುದು ಸಂಘ ನಿಷ್ಠ ಶಾಸಕರ ಆತಂಕ. ಯಡಿಯೂರಪ್ಪ ನಾಯಕರಾಗಿಯೇ ಮುಂದುವರಿಯಲಿ, ಅಥವಾ ನಾಯಕತ್ವ ಬೇರೆಯವರಿಗೆ ಹೋಗಲಿ, ಆದರೆ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುವ ರೀತಿಯಲ್ಲಿ ಉಭಯ ಬಣದ ನಾಯಕರು ವರ್ತಿಸಬಾರದು ಎನ್ನುವುದು ಮೂರನೆಯ ಬಣದ ಕಾಳಜಿ.
ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಪಕ್ಷದ ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳುವ ಇವರು, ಬಿಜೆಪಿಗಿಂತ ಯಡಿಯೂರಪ್ಪ ಮುಖ್ಯ ಅಂತಲೋ, ಯಡಿಯೂರಪ್ಪ ಕುಟುಂಬ ರಾಜಕಾರಣ ನಮಗೆ ಸಮಸ್ಯೆ ಅಂತಲೋ ಎಂದು ಹೇಳಿಕೊಳ್ಳುವವರಲ್ಲ. ಇವರದ್ದೇನಿದ್ದರೂ ಪಕ್ಷ, ಸಂಘ ಅಷ್ಟೇ.
ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಮುಂಚೂಣಿಯಲ್ಲಿರುವ ಈ ಬಣದಲ್ಲಿ ಕರಾವಳಿಯ ಬಹುತೇಕ ಶಾಸಕರಿದ್ದಾರೆ. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಈ ಬಣದದಲ್ಲಿರುವ ಪ್ರಮುಖರು.

ಉಭಯ ಬಣದ ನಾಯಕರ ವಿರುದ್ಧ ವರಿಷ್ಟರಿಗೆ ದೂರು: ಶಿಸ್ತುಕ್ರಮಕ್ಕೆ ಆಗ್ರಹ
ನಾಯಕತ್ವ ಬದಲಾವಣೆ ಜಂಜಾಟಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಭಾವಿಸುತ್ತಿರುವ ತೃತೀಯ ಬಣದ ಶಾಸಕರು ಪಕ್ಷದೊಳಗಿನ ರಾಜಕೀಯ ಹೈಡ್ರಾಮಗಳಿಗೆ ಬೇಸತ್ತು ಹೋಗಿದ್ದಾರೆ. ಮೊದಮೊದಲು ಬಸನಗೌಡ ಪಾಟೀಲ ಯತ್ನಾಳ್ ಮಾತ್ರ ಪಕ್ಷದ ವಿರುದ್ಧ ಹೇಳಿಕೆ ನೀಡಿ ಮುಜುಗರ ತರಿಸುತ್ತಿದ್ದರೆ, ಇದೀಗ ಬಹಿರಂಗ ಕಚ್ಚಾಟದಲ್ಲಿಯೇ ತೊಡಗಿ ಎಂಪಿ ರೇಣುಕಾಚಾರ್ಯ, ಎ ಹೆಚ್ ವಿಶ್ವನಾಥ್, ಅರವಿಂದ್ ಬೆಲ್ಲದ್ ಮೊದಲಾದವರು ಪಕ್ಷಕ್ಕೆ ತಲೆ ತಗ್ಗಿಸುವಂತಹ ಹೇಳಿಕೆಯನ್ನು ನೀಡಿ ಸರ್ಕಾರದ ಮಾನ ಹರಾಜಿಗಿಡುತ್ತಿದ್ದಾರೆ.
ಮುಖ್ಯಮಂತ್ರಿ ಕುಟುಂಬಸ್ಥರು ಸರ್ಕಾರದೊಳಗೆ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಯತ್ನಾಳ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡ ಎಹೆಚ್ ವಿಶ್ವನಾಥ್, ಬಿಎಸ್‌ವೈ ನಾಯಕರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕೂಡಾ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ, ಅರವಿಂದ ಬೆಲ್ಲಡ್ ತನ್ನ ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಶಾಸಕರ ಈ ಬಹಿರಂಗ ಜಗಳಗಳಿಂದ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆಯೆಂದು ಆರೋಪಿಸಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಕೇಂದ್ರ ವರಿಷ್ಟರಿಗೆ ದೂರು ನೀಡಿದ್ದಾರೆ. ಕೇಂದ್ರ ನಾಯಕರ ಎಚ್ಚರಿಕೆಯ ನಡುವೆಯೂ ಉಭಯ ಬಣದ ಶಾಸಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಮುಖ್ಯವಾಗಿ, ಅರವಿಂದ್ ಬೆಲ್ಲದ, ಎ ಹೆಚ್ ವಿಶ್ವನಾಥ್, ಎಂ ಪಿ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ, ಇದುವರೆಗೂ ರಾಜ್ಯ ಭಾಜಪಾದೊಳಗೆ ಎರಡು ಬಣಗಳು ಮಾತತ್ರವಲ್ಲ, ತಟಸ್ಥವಾಗಿರುವ ಮೂರನೆಯ ಬಣವೂ ಇದೆ ಎನ್ನುವುದು ಸಾಬೀತಾಗಿದೆ.