ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತ ಮೂಲದ ಫೋಟೋ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿಯವರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿದ್ದರು ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆಫ್ಘನ್ ವಿಶೇಷ ಪಡೆಗಳ ಕಾರ್ಯಾಚರಣೆಯನ್ನು ವರದಿ ಮಾಡುವ ಸಲುವಾಗಿ ತೆರಳಿದ್ದ ಇವರನ್ನು ಕಂದಹಾರ್ ನಗರದ ಸ್ಪಿನ್ ಬೋಲ್ಡಕ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರು ಗುಂಡಿಟ್ಟು ಕೊಂದಿದ್ದಾರೆ ಎಂದು ಹೇಳಲಾಗಿತ್ತು. ಹೀಗೆಂದು ಆರೋಪ ಕೇಳಿ ಬಂದ ಕೂಡಲೇ ಭಾರತದ ಫೋಟೋ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿ ಹತ್ಯೆ ಬಗ್ಗೆ ನಮಗೇ ಮಾಹಿತಿಯೇ ಇಲ್ಲ ಎಂದು ತಾಲಿಬಾನ್ ಪ್ರತಿಕ್ರಿಯೆ ನೀಡಿದೆ.
ದ್ಯಾನಿಶ್ ಸಿದ್ಧಿಕಿಯವರ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬಿಯುಲ್ಲಾ ಮುಜಾಹಿದ್, ಸಿದ್ದಿಕಿ ಸಾವಿನ ಬಗ್ಗೆ ನಮಗೆ ಮಾಹಿತಿ ಇಲ್ಲ. ಯಾವುದೇ ಪತ್ರಕರ್ತ ವಾರ್ ಜೋನ್ಗೆ ಪ್ರವೇಶಿಸುವ ಮುನ್ನ ನಮಗೆ ಮಾಹಿತಿ ನೀಡಬೇಕು. ಆಗ ಪತ್ರಕರ್ತರ ರಕ್ಷಣೆಗೆ ಬೇಕಾದ ಅಗತ್ಯ ಕಮ್ರಗಳನ್ನು ಒದಗಿಸುತ್ತೇವೆ. ಫೈರಿಂಗ್ ವೇಳೆ ಸಿದ್ದಿಕಿ ಸಾವನ್ನಪ್ಪಿರುವ ಬಗ್ಗೆ ನಮಗೆ ಗೊತ್ತಿಲ್ಲ. ಇದಕ್ಕೆ ನಾವು ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.
ಮೃತ ಪತ್ರಕರ್ತ ಡ್ಯಾನಿಶಿ ಸಿದ್ದಿಕಿ ರಾಯಿಟರ್ಸ್ ಇಂಡಿಯಾದ ಮುಖ್ಯ ಛಾಯಾಗ್ರಾಹಕರು. ಇತ್ತೀಚೆಗೆ ಕರ್ತವ್ಯನಿಮಿತ್ತ ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಗೆ ತೆರಳಿದಾಗ ಅಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವಿವರಿಸುವ ವರದಿ ಚಿತ್ರಿಸಿದ್ದರು ಸಿದ್ದಿಕಿ.
2018ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಕುರಿತಾದ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದ ಸಿದ್ದಿಕಿಯವರಿಗೆ ಪತ್ರಿಕೋದ್ಯಮದ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಬಂದಿತ್ತು. ಇಂತಹ ಖ್ಯಾತ ಪತ್ರಕರ್ತ ಕೆಲವು ದಿನಗಳಿಂದ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿನ ತೀವ್ರ ಉದ್ವಿಗ್ನ ಸ್ಥಿತಿ ನಡುವೆ ವರದಿಗಾರಿಕೆ ಮಾಡುತ್ತಿದ್ದರು.
ಇನ್ನು, ಕೆಲವು ಕಾರ್ಯನಿಯೋಜನೆಗಳಿಗಾಗಿ ಸಿದ್ದಿಕಿ ಅಫ್ಘಾನಿಸ್ತಾನ ಪಡೆಗಳ ಜತೆಗೆ ತೆರಳಿದ್ದರು. ತಾಲಿಬಾನ್ ಉಗ್ರರ ಜತೆಗಿನ ಕಾದಾಟದ ಸಂದರ್ಭದಲ್ಲಿ ಆಫ್ಘನ್ ಪಡೆಯೊಂದಿಗೆ ಇದ್ದ ಸಿದ್ದಿಕಿ ಹತ್ಯೆಯಾಗಿದ್ದಾರೆ.