ಸಂಪನ್ಮೂಲ ರಕ್ಷಣೆಗಾಗಿ ಸಂಘರ್ಷ
ಸ್ವತಂತ್ರ ಭಾರತದಲ್ಲಿ ದೇಶದ ಸಂಪತ್ತಿನ ವೃದ್ಧಿಗೆ ಹಗಲಿರುಳು ಶ್ರಮಿಸುವ ಶ್ರಮಿಕ ವರ್ಗಗಳು ಮತ್ತು ಈ ವರ್ಗಗಳು ನಂಬಿ ಬದುಕುವ ನೈಸರ್ಗಿಕ ಸಂಪನ್ಮೂಲಗಳು, ಶ್ರಮದ ಹಾದಿಗಳು ಸದಾ ಸಂಘರ್ಷದ ಹಾದಿಯಲ್ಲೇ ರಕ್ಷಣೆಗೊಳಗಾಗುತ್ತಿರುವುದನ್ನು ಗಮನಿಸಬಹುದು. ಸಕಲ ಸಂಪತ್ತಿನ ಸಂರಕ್ಷಕರಾದ ಶ್ರಮಿಕರ ಮೂಲಭೂತ ಹಕ್ಕುಗಳಿಗಾಗಿ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಉಗ್ರ ಹೋರಾಟಗಳೂ ನಡೆದಿವೆ. ಭೂಗರ್ಭದಲ್ಲಿನ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿ ಮಾಡಲು ತುದಿಗಾಲಲ್ಲಿ ನಿಂತಿರುವ ಕಾರ್ಪೋರೇಟ್ ಬಂಡವಾಳಿಗರು ಈ ಶ್ರಮಿಕರು ಸಂಘಟಿತರಾಗುವುದನ್ನೇ ಮಹಾಪರಾಧ ಎನ್ನುವಂತೆ ಬಿಂಬಿಸುತ್ತಿರುವುದನ್ನೂ ನೋಡುತ್ತಲೇ ಇದ್ದೇವೆ. ಮೂರು ದಶಕಗಳ ಹಿಂದೆಯೇ ಛತ್ತಿಸ್‍ಘಡದ ದಹಲ್ಲಿ ರಾಜಾ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಂಘಟಿಸಿ, ಬಂಡವಾಳಶಾಹಿಗಳ ದಬ್ಬಾಳಿಕೆಯಿಂದ ಗಣಿ ಕಾರ್ಮಿಕರ ಮತ್ತು ಆದಿವಾಸಿಗಳ ವಿಮೋಚನೆಗಾಗಿ ಹೋರಾಡಿದ ಶಂಕರ್ ಗುಹಾ ನಿಯೋಗಿ ಮಾಫಿಯಾಗಳ ಗುಂಡೇಟಿಗೆ ಬಲಿಯಾಗಿ 30 ವರ್ಷಗಳೇ ಕಳೆದಿವೆ.
ಈ ಪರಂಪರೆಗೆ ನಾಂದಿ ಹಾಡಿದ್ದೂ ನವ ಉದಾರವಾದ ಭಾರತವನ್ನು ಆವರಿಸಿದ 1980-90ರ ದಶಕದಲ್ಲೇ ಎನ್ನುವುದನ್ನು ಗಮನಿಸಬೇಕಿದೆ. ನೆಲ, ಜಲ, ಅರಣ್ಯ, ಬೆಟ್ಟಗುಡ್ಡ ಮತ್ತು ಪರಿಸರ ಇವುಗಳ ರಕ್ಷಣೆಗಾಗಿ ಹೋರಾಡುವ ಎಲ್ಲ ಗುಂಪುಗಳೂ, ಸಂಘಟನೆಗಳೂ, ವ್ಯಕ್ತಿಗಳೂ ಬಂಡವಾಳಶಾಹಿಗಳ, ಕಾರ್ಪೋರೇಟ್ ಉದ್ಯಮಗಳ ಪ್ರಥಮ ಶತ್ರುಗಳಾಗುತ್ತಾರೆ. ಈ ಔದ್ಯಮಿಕ ಹಿತಾಸಕ್ತಿಗಳನ್ನೇ ಅವಲಂಭಿಸಿ ದೇಶದ ಪ್ರಗತಿ ಸಾಧಿಸಲು ಹೊರಟಿರುವ ಸ್ವತಂತ್ರ ಭಾರತದ ಚುನಾಯಿತ ಸರ್ಕಾರಗಳು ಇಂತಹ ಕೊಲೆಗಳನ್ನೂ ಸದ್ದಿಲ್ಲದಂತೆ ಸಹಿಸಿಕೊಂಡುಬಿಡುತ್ತವೆ. ರಾಜಕೀಯ ಪೀಠಗಳು, ಅಧಿಕಾರಶಾಹಿ ಮತ್ತು ಕಾನೂನು ವ್ಯವಸ್ಥೆಯ ಜಂಟಿ ಕಾರ್ಯಾಚರಣೆಯಲ್ಲಿ ಸಂಪನ್ಮೂಲಗಳಿಗೆ ಹೋರಾಡುವ ಶಕ್ತಿಗಳೆಲ್ಲವೂ ದೇಶದ್ರೋಹಿ ಎನಿಸಿಬಿಡುತ್ತವೆ.
ಹಾಗಾಗಿಯೇ. ಸಾವಿರಾರು ಗ್ರಾಮಗಳನ್ನು ಮುಳುಗಡೆ ಮಾಡುವ ಅಣೆಕಟ್ಟುಗಳ ವಿರುದ್ಧ, ಮುಂದಿನ ಹಲವು ಪೀಳಿಗೆಗಳ ಬದುಕನ್ನು ನರಕಸದೃಶಗೊಳಿಸಬಹುದಾದ ಅಣುವಿದ್ಯುತ್ ಘಟಕಗಳ ವಿರುದ್ಧ, ಉಷ್ಣವಿದ್ಯುತ್ ಸ್ಥಾವರದ ವಿರುದ್ಧ, ಹಾರುಬೂದಿಯ ವಿರುದ್ಧ, ಅರಣ್ಯಗಳನ್ನು ಮರುಭೂಮಿ ಮಾಡುವ ಗಣಿಗಾರಿಕೆಯ ವಿರುದ್ಧ, ಬೆಟ್ಟಗಳನ್ನೇ ಕರಗಿಸುವ ಕಲ್ಲುಗಣಿಗಾರಿಕೆಯ ವಿರುದ್ಧ ಜನಸಮುದಾಯಗಳು ನಡೆಸುವ ಹೋರಾಟಗಳು ನವ ಭಾರತದಲ್ಲಿ ವಿದ್ರೋಹದಂತೆ ಕಾಣುತ್ತವೆ. ತೂತ್ತುಕುಡಿ ಅಣುವಿದ್ಯುತ್ ಘಟಕದ ವಿರುದ್ಧ ನಡೆದ ಹೋರಾಟದಲ್ಲಿ ಹಲವರನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸಲಾಗಿದೆ. ಭವಿಷ್ಯದ ಪೀಳಿಗೆಗೆ ನಮ್ಮ ದೇಶದ ಅಮೂಲ್ಯ ಸಂಪತ್ತು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂಬ ಸದುದ್ದೇಶದಿಂದ ಹೋರಾಡುವವರು “ ಅಭಿವೃದ್ಧಿ ವಿರೋಧಿ ”ಗಳಾಗಿ ಕಾಣುತ್ತಾರೆ. ಕಾರ್ಪೋರೇಟ್ ಲೂಟಿಕೋರರಿಗೆ ಒತ್ತಾಸೆಯಾಗುವ ಪಟ್ಟಭದ್ರ ಔದ್ಯಮಿಕ ಹಿತಾಸಕ್ತಿಗಳು ಶಾಸನ ಸಭೆಗಳನ್ನು ಅಲಂಕರಿಸುತ್ತವೆ. ಸಂಪನ್ಮೂಲ ರಕ್ಷಣೆಗಾಗಿ ಹೋರಾಡುವವರು ವರ್ಷಗಟ್ಟಲೆ ಕಾರಾಗೃಹ ವಾಸಿಗಳಾಗುತ್ತಾರೆ.
ಗಂಗೆ ಎಂದರೆ ಮೈ ಪುಳಕಗೊಂಡು ನಮಿಸುವ ಭಾರತದ ಬಹುಪಾಲು ನಾಗರಿಕರಿಗೆ ಗಂಗಾನದಿ ಮಲಿನಗೊಳ್ಳದಂತೆ ಕಾಪಾಡಲು ಹೋರಾಡಿ ಪ್ರಾಣ ತೆತ್ತ ಮಹನೀಯರ ಪರಿಚಯವೂ ಇಲ್ಲದಿರುವುದು ದುರಂತ. 2018ರ ಅಕ್ಟೋಬರ್ 24ರಿಂದ ಗಂಗಾನದಿಯ ರಕ್ಷಣೆಗಾಗಿ ಆಮರಣಾಂತ ಉಪವಾಸ ಕೈಗೊಂಡಿದ್ದ 27 ವರ್ಷದ ಸ್ವಾಮಿ ಆತ್ಮಬೋಧಾನಂದ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಎಲ್ಲ ಪತ್ರಗಳೂ ಕಸದ ಬುಟ್ಟಿ ಸೇರಿದ್ದವು. 180 ದಿನಗಳ ಉಪವಾಸದ ನಂತರ ಸಂತರು ಕೊನೆಯುಸಿರೆಳೆದಿದ್ದರು. ಅಲಕಾನಂದ, ಧೌಲಿಗಂಗಾ, ಮಂದಾಕಿನಿ ಮತ್ತು ಪಿಂಡಾರ್ ನದಿಗೆ ಅಡ್ಡಲಾಗಿ ಜಲವಿದ್ಯುತ್ ಘಟಕಗಳ ಸ್ಥಾಪನೆಯ ವಿರುದ್ಧ ನಿರಂತರವಾಗಿ ಹೋರಾಡಿದ 86 ವರ್ಷದ ಸ್ವಾಮಿ ಗ್ಯಾನ್ ಸ್ವರೂಪ್ ಸಾನಂದ್ ಅಲಿಯಾಸ್ ಜಿ ಡಿ ಅಗರ್ವಾಲ್ 111 ದಿನಗಳ ಉಪವಾಸದ ನಂತರ 2018ರ ಅಕ್ಟೋಬರ್ ನಲ್ಲಿ ತಮ್ಮ ಯಾತ್ರೆ ಮುಗಿಸಿದ್ದರು.
ಅಗರ್ವಾಲ್ ನಂತರ ಗಂಗಾನದಿಯ ರಕ್ಷಣೆಗಾಗಿ ಹೋರಾಟ ಮುಂದುವರೆಸಿದ 40 ವರ್ಷದ ಕಾರ್ಯಕರ್ತ ಗೋಪಾಲ್ ದಾಸ್ 2018ರ ಜೂನ್ 24ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರತ್ತ ತಿರುಗಿಯೂ ನೋಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2018ರ ಡಿಸೆಂಬರ್ 6ರಂದು ಈ ಹೋರಾಟಗಾರ ಹಠಾತ್ತನೆ ಕಾಣೆಯಾದ ಮೇಲೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಶೋಧಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಗೋಪಾಲ್ ದಾಸ್ ಹತ್ಯೆಯಾಗಿರುವ ಸಾಧ್ಯತೆಗಳೇ ಹೆಚ್ಚು. ಇದಕ್ಕೂ ಮುನ್ನ 2014ರಲ್ಲೇ ಬಾಬಾ ನಾಗನಾಥ್ ಯೋಗೇಶ್ವರ್ ವಾರಣಾಸಿಯಲ್ಲೇ ಮೂರು ತಿಂಗಳ ಉಪವಾಸ ಸತ್ಯಾಗ್ರಹ ಮಾಡಿ ಗಂಗೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದರು. ಮತ್ತೋರ್ವ ಸಂತ ಸ್ವಾಮಿ ನಿಗಮಾನಂದ್ ಡೆಹ್ರಾಡೂನ್‍ನಲ್ಲಿ ತಮ್ಮ ಸತ್ಯಾಗ್ರಹ ಮುಂದುವರೆಸಿದ್ದರು. ಇವರ ಯಾವುದೇ ಬೇಡಿಕೆಗಳನ್ನು ಆಲಿಸುವ ವ್ಯವಧಾನವೂ ಸರ್ಕಾರಕ್ಕೆ ಇರಲಿಲ್ಲ. ನಿಗಮಾನಂದ್ ಸಹ ಸತ್ಯಾಗ್ರಹಿಯಾಗಿಯೇ ನಿರ್ಗಮಿಸಿದ್ದರು. ವಿಶೇಷ ಎಂದರೆ ಗಂಗಾನದಿಯ ಸ್ವಚ್ಚತೆಗಾಗಿ, ‘ ಪವಿತ್ರ ಗಂಗೆ ’ಯ ಮಾಲಿನ್ಯದ ವಿರುದ್ಧ ಹೋರಾಡಿ, ಕೇಳುವವರಿಲ್ಲದೆ ಪ್ರಾಣತೆತ್ತ ಇವರಾರೂ ಮಾವೋವಾದಿಗಳಾಗಿರಲಿಲ್ಲ. ಗಂಗೆಯಲ್ಲಿ ಹೆಣಗಳು ಇಂದಿಗೂ ತೇಲುತ್ತಲೇ ಇವೆ.
ಇಂತಹ ನಿದರ್ಶನಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೇರಳವಾಗಿವೆ. ಭೂಪಾಲ್ ಅನಿಲ ದುರಂತ, ಇತ್ತೀಚಿನ ವಿಶಾಖಪಟ್ಟಣಂ ವಿಷಾನಿಲ ದುರಂತ, ಛತ್ತಿಸ್‍ಘಡದ ಗಣಿಗಳಲ್ಲಿ ಇಂದಿಗೂ ನಡೆಯುತ್ತಲೇ ಇರುವ ಅವಘಡಗಳು, ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ನಡೆದ ಘಟನೆ ಹೀಗೆ ಶ್ರಮಜೀವಿಗಳ ಬದುಕನ್ನು ನಿರ್ನಾಮ ಮಾಡಿದ ಪರಿಸರ ನಾಶಕ ಘಟನೆಗಳು ಸಾಕಷ್ಟು ನಮ್ಮ ಕಣ್ಣಮುಂದಿವೆ. ಇವೆಲ್ಲವೂ “ ಅಭಿವೃದ್ಧಿ ” ಮತ್ತು “ ದೇಶದ ಪ್ರಗತಿ ”ಯ ಹೆಸರಿನಲ್ಲಿ ನಡೆಯುತ್ತಲೇ ಇರುವ ಮಾರಣಹೋಮಗಳು. ಇಂತಹ ವಿನಾಶಕಾರಿ ಉದ್ಯಮಗಳ ವಿರುದ್ಧ ಹೋರಾಡುವವರು ‘ ದೇಶದ್ರೋಹಿಗಳಾಗಿ ’ ಕಾಣುತ್ತಾರೆ. ಕಾನೂನು ಕ್ರಮ ಕೈಗೊಳ್ಳಲು ಸುಲಭವಾಗುವುದೆಂಬ ಕಾರಣಕ್ಕೆ ಈ ಪರಿಸರ ರಕ್ಷಕರನ್ನು ಮತ್ತು ಇವರ ಬೆನ್ನೆಲುಬಾಗಿ ನಿಂತಿರುವ ಜನಸಮುದಾಯಗಳನ್ನು ಮಾವೋವಾದಿಗಳೆಂದು ವರ್ಗೀಕರಿಸಲಾಗುತ್ತದೆ. ಸ್ಟ್ಯಾನ್ ಸ್ವಾಮಿ ಈ ದುರಂತ ಚರಿತ್ರೆಯ ಒಂದು ಸಂಕೇತವಾಗಿ ಕಾಣುತ್ತಾರೆ.
ನವ ಉದಾರವಾದದ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ನಿಸರ್ಗ ಸಂಪತ್ತಿನ ಮೇಲೆ ಕೇವಲ ಮಾರುಕಟ್ಟೆಯ ಒಡೆತನ ಮಾತ್ರವೇ ಇರುತ್ತದೆ. ಕಾರ್ಪೋರೇಟ್ ಔದ್ಯಮಿಕ ಜಗತ್ತಿನ ಆಧಿಪತ್ಯದ ಮೂಲಕವೇ ಭಾರತದ ಪ್ರಗತಿಯನ್ನು ಕಾಣುವ ಆಳುವ ವರ್ಗಗಳ ಹಂಬಲ, ಬಂಡವಾಳಶಾಹಿ ವ್ಯವಸ್ಥೆಯ ಮೂಲಕ ಇಂದು ತಾರ್ಕಿಕ ಅಂತ್ಯ ತಲುಪಿದೆ. ಭಾರತದ ಸಾರ್ವಭೌಮ ಪ್ರಜೆಗಳು ನಿಸರ್ಗ ಸಂಪತ್ತಿನ ಮೇಲಿನ ತಮ್ಮ ಒಡೆತನವನ್ನು ಕಳೆದುಕೊಂಡಿರುವುದೇ ಅಲ್ಲದೆ, ಬಂಡವಾಳಶಾಹಿಗಳ ಆಮಿಷಗಳಿಗೆ ಬಲಿಯಾಗಿ ಬರಿದಾಗುತ್ತಿರುವ ನಿಸರ್ಗದ ಒಡಲಲ್ಲಿ ಬೇಯುತ್ತಿದ್ದಾರೆ. ನಗರೀಕರಣದ ಹಿತವಲಯದಿಂದ ಹೊರಗಿರುವ ಆದಿವಾಸಿ ಸಮುದಾಯಗಳಿಗೆ, ಗ್ರಾಮೀಣ ಜನತೆಗೆ ತಮ್ಮ ಭೂಮಿಯ ಹಕ್ಕು, ಜೀವಿಸುವ ಹಕ್ಕು ಉಳಿಸಿಕೊಳ್ಳಲು ಹೋರಾಡುವುದು ಅನಿವಾರ್ಯವಾಗಿದೆ.
ಈ ಹೋರಾಟಗಳು ನಿಯಂತ್ರಣ ಮೀರಿದಾಗ ‘ ಮಾವೋವಾದಿ ’ಗಳು ಸೃಷ್ಟಿಯಾಗುತ್ತಾರೆ. ಏಕೆಂದರೆ ದೇಶದ ಪ್ರಜ್ಞಾವಂತ , ಸುಶಿಕ್ಷಿತ ಮಧ್ಯಮ ವರ್ಗಗಳ ದೃಷ್ಟಿಯಲ್ಲಿ ಮಾವೋವಾದಿಗಳು ಸದಾ ದಂಡನಾರ್ಹವೇ ಆಗಿರುತ್ತಾರೆ. ಎನ್ಕೌಂಟರ್‍ಗೆ ಬಲಿಯಾಗಬೇಕಾದ ಜೀವಿಗಳೇ ಆಗಿರುತ್ತಾರೆ. ಸಮೂಹ ಸನ್ನಿಗೊಳಗಾಗಿರುವ ಈ ಬೃಹತ್ ಜನಸಂಖ್ಯೆಯ ನಿರ್ಲಿಪ್ತತೆ ಮತ್ತು ನಿಷ್ಕ್ರಿಯತೆಯ ಫಲವನ್ನು ಸ್ಟ್ಯಾನ್ ಸ್ವಾಮಿ ಮುಂತಾದವರ ಸಾವಿನಲ್ಲಿ ನಾವು ಕಾಣಬಹುದಾಗಿದೆ. ಶಂಕರ್ ಗುಹಾ ನಿಯೋಗಿ, ಸಫ್ದಾರ್ ಹಷ್ಮಿ ಮುಂತಾದವರ ಸಾವಿನಿಂದಲೇ ಈ ದೇಶದ ಸಾರ್ವಜನಿಕ ಪ್ರಜ್ಞೆ ಜಾಗೃತಗೊಂಡಿದ್ದರೆ ಬಹುಶಃ ಸ್ಟ್ಯಾನ್ ಸ್ವಾಮಿಯಂಥವರು ಬದುಕುಳಿಯಬಹುದಿತ್ತು. ನಾವು, ಅಂದರೆ, ಈ ದೇಶದ ಸುಶಿಕ್ಷಿತ ಪ್ರಜ್ಞಾವಂತ ಜನತೆ ನಮ್ಮ ಸ್ವಪ್ರಜ್ಞೆಯನ್ನೂ ಕಳೆದುಕೊಂಡಿದ್ದೇವೆ, ಸಾಂವಿಧಾನಿಕ ಪ್ರಜ್ಞೆಯನ್ನೂ ಮರೆತಿದ್ದೇವೆ. ಒಂದು ಇಡೀ ಪೀಳಿಗೆ ನವ ಉದಾರವಾದದ ಸಮೂಹ ಸನ್ನಿಗೊಳಗಾಗಿರುವ ಈ ಸಂದರ್ಭದಲ್ಲಿ ಈ ಪ್ರಜ್ಞೆಯನ್ನು ಬಡಿದೆಬ್ಬಿಸುವುದು ನಮ್ಮ ಆದ್ಯತೆಯಾಗಬೇಕಿದೆ.