#ಆತ್ಮನಿರ್ಭರ ಭಾರತದ ಕರಾಳ ಶಾಸನಗಳ ಪರ್ವ ಮತ್ತೊಂದು ಬಲಿ ತೆಗೆದುಕೊಂಡಿದೆ. ಮಾನವ ಹಕ್ಕುಗಳು ಮತ್ತು ಮಾನವರ ಪ್ರಜಾಸತ್ತಾತ್ಮಕ ಹಕ್ಕುಗಳು ಸತತ ದಾಳಿಗೊಳಗಾಗುತ್ತಿರುವುದನ್ನು ಕಂಡೂ ಸಹ ತಮ್ಮದೇ ಹಿತವಲಯದಲ್ಲಿ ವಿರಮಿಸುತ್ತಿರುವ ದೇಶದ ಬಹುಸಂಖ್ಯೆಯ ಜನರ ಮುಂದೆ ಫಾದರ್ ಸ್ಟ್ಯಾನ್ ಸ್ವಾಮಿ ಒಂದು ದುರಂತ ಛಾಯೆಯಾಗಿ ನಿಂತಿದ್ದಾರೆ. ಅವಕಾಶವಂಚಿತ, ಶೋಷಿತ ಆದಿವಾಸಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಡಿದ 83 ವರ್ಷದ ಹಿರಿಯ ಪಾದ್ರಿ, ಸ್ಟ್ಯಾನ್ ಸ್ವಾಮಿ #ಆತ್ಮನಿರ್ಭರ ಭಾರತದ ನ್ಯಾಯ ವ್ಯವಸ್ಥೆಯಿಂದ ಸ್ವತಃ ವಂಚಿತರಾಗಿ ವಿದಾಯ ಹೇಳಿದ್ದಾರೆ. ಕಾಕತಾಳೀಯ ಎಂದರೆ ದೆಹಲಿ ಗಲಭೆಯ ಸಂದರ್ಭದಲ್ಲಿ “ ಗೋಲಿ ಮಾರೋ ಸಾಲೋಂಕೋ ” ಎಂದು ಸಾರ್ವಜನಿಕವಾಗಿ ಘೋಷಿಸಿದ ವ್ಯಕ್ತಿ ಕೇಂದ್ರ ಸಚಿವರಾಗಿದ್ದಾರೆ. ಆದಿವಾಸಿಗಳ ಪರ ಹೋರಾಡಿದ ವೃದ್ಧ ಜೀವ ಕಸ್ಟಡಿಯಲ್ಲೇ ಸಾವನನ್ನಪ್ಪಿದೆ.
ಜಾರ್ಖಂಡ್ ರಾಜ್ಯದ ಜಮ್‍ಷೆಡ್‍ಪುರದಲ್ಲಿ ಆದಿವಾಸಿಗಳ ನಡುವೆಯೇ ಬದುಕಿ ವಿದಾಯ ಹೇಳಿದ ಫಾದರ್ ಸ್ಟ್ಯಾನ್ ಸ್ವಾಮಿ ತಿರುಚಿನಾಪಲ್ಲಿ ಜಿಲ್ಲೆಯ ವಿರಾಗಲೂರ್ ಗ್ರಾಮದಲ್ಲಿ 1937ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರೈಸಿದ ಸ್ಟ್ಯಾನ್‍ಸ್ವಾಮಿ ಉನ್ನತ ವ್ಯಾಸಂಗಕ್ಕಾಗಿ ಫಿಲಿಪೈನ್ಸ್ ಮತ್ತು ಬೆಲ್ಜಿಯಂಗೆ ತೆರಳಿ ಅಲ್ಲಿಂದ ಹಿಂದಿರುಗಿದ ನಂತರ ಜಮ್‍ಷೆಡ್‍ಪುರ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಕಾಯಕದಲ್ಲಿ ತೊಡಗಿದ್ದರು. ಬೆಂಗಳೂರಿನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್‍ಟಿಟ್ಯೂಟ್‍ನಲ್ಲಿ 1970-80ರ ಅವಧಿಯಲ್ಲಿ ಕಾಲ ಸೇವೆ ಸಲ್ಲಿಸಿದ ಫಾದರ್ ಸ್ವಾಮಿ ಈ ಸಂಸ್ಥೆಯನ್ನು ಸಾಮಾಜಿಕ ಕಾರ್ಯಕರ್ತರ ತರಬೇತಿ ಸಂಸ್ಥೆಯಂತೆ ನಿರ್ವಹಿಸುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸುವ ಯುವ ಪೀಳಿಗೆಗೆ ದಾರಿ ದೀಪವಾಗಿದ್ದರು.
ಆದರೆ ಅವರ ಕರ್ಮಭೂಮಿಯಾಗಿದ್ದುದು ಜಾರ್ಖಂಡ್‍ನ ಆದಿವಾಸಿಗಳ ನೆಲೆ. ರಾಂಚಿಯಲ್ಲಿ ಆದಿವಾಸಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಬುಡಕಟ್ಟು ಸಮುದಾಯಗಳ ಸ್ಥಳೀಯ ಸಂಸ್ಕøತಿಯನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದರು. ಅಕ್ರಮ ಗಣಿಗಾರಿಕೆ, ಗಣಿ ಮಾಫಿಯಾಗಳ ವಿರುದ್ಧ ಹೋರಾಡುತ್ತಿದ್ದ ಆದಿವಾಸಿಗಳಿಗೆ ತಮ್ಮ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದರು. ನೇತರ್ಹತ್‍ನಲ್ಲಿ ಫೈರಿಂಗ್ ರೇಂಜ್ ಸ್ಥಾಪಿಸುವ ಸರ್ಕಾರದ ತೀರ್ಮಾನದ ವಿರುದ್ಧ ಪ್ರತಿಭಟಿಸಲು ಆದಿವಾಸಿಗಳನ್ನು ಸಂಘಟಿಸಿದ್ದರು. 1996ರ ಅನುಚ್ಚೇದಿತ ಪ್ರದೇಶಗಳಿಗೆ ಪಂಚಾಯತಿಗಳ ವಿಸ್ತರಣೆ ಕಾಯ್ದೆ (PESA ಕಾಯ್ದೆ) ಅನ್ವಯ ಸುಪ್ರೀಂಕೋರ್ಟ್ ನೀಡಿದ್ದ ಸಮತಾ ತೀರ್ಪನ್ನು ಆಧರಿಸಿ ಸ್ಟ್ಯಾನ್ ಸ್ವಾಮಿ ಭೂಮಿಯ ಒಡೆಯರೇ ಅಲ್ಲಿನ ಖನಿಜಗಳ ಒಡೆಯರೂ ಆಗಬೇಕು ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ರೂಪುಗೊಂಡ ಆದಿವಾಸಿಗಳ ಪಾಥಲ್‍ಗರಿ ಆಂದೋಲನಕ್ಕೆ ಕಾನೂನು ನೆರವು ನೀಡುವ ಮೂಲಕ ಆದಿವಾಸಿಗಳ ಭೂಮಿಯ ಹಕ್ಕುಗಳಿಗಾಗಿ ಹೋರಾಡಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಸ್ಟ್ಯಾನ್ ಸ್ವಾಮಿ ಅವರ ವಿರುದ್ಧ 2018ರಲ್ಲೇ ಎಫ್‍ಐಆರ್ ದಾಖಲಾಗಿದ್ದರೂ ಅದು ನೆನೆಗುದಿಗೆ ಬಿದ್ದಿತ್ತು. ಈ ಎಫ್‍ಐಆರ್ ಅನೂರ್ಜಿತಗೊಳಿಸಲು ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಜಮ್‍ಷೆಡ್‍ಪುರ ಪೊಲೀಸರು 2019ರಲ್ಲಿ ಈ ಎಫ್‍ಐಆರ್ ಗೆ ಮರು ಜೀವ ನೀಡುವ ಮೂಲಕ, ಕೆಲವು ಸ್ಥಳೀಯ ಜನರು ಸಲ್ಲಿಸಿರುವ ದೂರನ್ನು ಆಧರಿಸಿ ಸ್ಟ್ಯಾನ್ ಸ್ವಾಮಿ ವಿರುದ್ಧ ಮೊಕದ್ದಮೆ ಹೂಡಿದ್ದರು.
ಏತನ್ಮಧ್ಯೆ ಮಾವೋವಾದಿಗಳೊಡನೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿದ್ದ 4000 ಜನ ಆದಿವಾಸಿ ಯುವಕರ ಬಿಡುಗಡೆಗಾಗಿ ಸ್ಟ್ಯಾನ್ ಸ್ವಾಮಿ ಜಾರ್ಖಂಡ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಸಂದರ್ಭದಲ್ಲೇ 31-12-2017ರಂದು ಭೀಮಾಕೊರೆಗಾಂವ್ 200ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ಎಲ್ಗರ್ ಪರಿಷತ್ ಸದಸ್ಯರ ವಿರುದ್ಧ ಹೂಡಲಾಗಿದ್ದ ಮಾವೋವಾದಿಗಳೊಡನೆ ಸಂಪರ್ಕ ಹೊಂದಿರುವ ಆರೋಪವನ್ನೇ ಆಧರಿಸಿ, ಸ್ಟ್ಯಾನ್ ಸ್ವಾಮಿ ಸಹ ಅವರಲ್ಲಿ ಒಬ್ಬರಾಗಿದ್ದಾರೆ ಎಂದು ಪುಣೆಯ ಪೊಲೀಸರು ಸಲ್ಲಿಸಿದ್ದರು ಈ ಆರೋಪವನ್ನೇ ಆಧರಿಸಿ ಸ್ಟ್ಯಾನ್ ಸ್ವಾಮಿ ವಿರುದ್ಧ ಯುಎಪಿಎ ಕಾಯ್ದೆಯ ಅನ್ವಯ ಎಫ್‍ಐಆರ್ ದಾಖಲಿಸಲಾಯಿತು.
ಈ ಎಲ್ಲ ಹೋರಾಟಗಳ ಹಿನ್ನೆಲೆಯಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿ ಪ್ರಭುತ್ವದ ದೃಷ್ಟಿಯಲ್ಲಿ ಒಬ್ಬ ಅಪರಾಧಿಯಾಗಿ ಕಂಡುಬಂದಿದ್ದರು. ಹೈಕೋರ್ಟ್‍ನ ವಿಚಾರಣೆಯ ಸಂದರ್ಭದಲ್ಲಿ ಜಾರ್ಖಂಡ್‍ನ ಅಡ್ವೋಕೇಟ್ ಜನರಲ್ ಸ್ಟ್ಯಾನ್ ಸ್ವಾಮಿ ಅವರನ್ನು ‘ ಉಗ್ರ ಪಾತಕಿ ’ ( Dreaded Criminal) ಎಂದು ಉಲ್ಲೇಖಿಸಿದುದು ಇಡೀ ಪ್ರಕರಣದ ಒಳಸುಳಿಗಳನ್ನು ಎತ್ತಿತೋರಿಸುತ್ತದೆ. ಅಕ್ಟೋಬರ್ 8 2020ರಂದು ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಪೊಲೀಸರು ಬಂಧಿಸಿ, ತಲೋಜಾ ಕೇಂದ್ರ ಕಾರಾಗೃಹದಲ್ಲಿರಿಸಿದ್ದರು. ತಮ್ಮ ಬಂಧನದ ವಿರುದ್ಧ ಸ್ಟ್ಯಾನ್ ಸ್ವಾಮಿ ಸಲ್ಲಿಸಿದ ಅರ್ಜಿಗೂ ಮಾನ್ಯತೆ ದೊರೆಯದೆ ಸ್ಟ್ಯಾನ್ ಸ್ವಾಮಿ ಅಕ್ಟೋಬರ್ 23ರಂದು ಮಧ್ಯಂತರ ವೈದ್ಯಕೀಯ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ ಈ ಅರ್ಜಿಯನ್ನೂ ತಿರಸ್ಕರಿಸಲಾಗಿತ್ತು.
ಸ್ವಾಮಿ ಅವರಿಗೆ ಎರಡೂ ಕೈಕಾಲುಗಳಲ್ಲಿ ನಡುಕ ಹೆಚ್ಚಾಗಿತ್ತು. ಎರಡು ಕಿವಿಗಳಲ್ಲಿ ಶ್ರವಣದೋಷ ಇತ್ತು. ಆಗಾಗ್ಗೆ ಬೇಧಿಯಾಗುತ್ತಿತ್ತು. ದೈಹಿಕವಾಗಿ ದೌರ್ಬಲ್ಯ ತೀವ್ರವಾಗಿತ್ತು. ಎಂದು ಜೆಜೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ವರದಿ ಸಲ್ಲಿಸಿದ್ದರು. ಸ್ಟ್ಯಾನ್ ಸ್ವಾಮಿ ಈ ಅನಾರೋಗ್ಯದ ಸ್ಥಿತಿಯಲ್ಲೇ ಸೆರೆಮನೆಯಲ್ಲೂ ಇದ್ದುದು ಗಮನಿಸಬೇಕಾದ ಅಂಶ. ಈ ಹಂತದಲ್ಲೇ ತಮಗೆ ನೀರು ಕುಡಿಯಲು ಸಿಪ್ಪರ್ ಬೇಕೆಂಬ ಸ್ಟ್ಯಾನ್ ಸ್ವಾಮಿ ಅವರ ನವಂಬರ್ 26ರ ಮನವಿಯನ್ನು ಎನ್‍ಐಎ ತಿರಸ್ಕರಿಸಿತ್ತು. ಕೈಯ್ಯಲ್ಲಿ ಲೋಟ ಹಿಡಿಯಲಾಗದೆ ಸ್ವಾಮಿ ಸಿಪ್ಪರ್ ಕೇಳಿದ್ದರು. ಸಿಪ್ಪರ್ ಪಡೆಯಲು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಡಿಸೆಂಬರ್ 4ರಂದು ಹೈಕೋರ್ಟ್ ಆದೇಶದ ಮೇರೆಗೆ ಸ್ವಾಮಿ ಅವರಿಗೆ ಸಿಪ್ಪರ್ ಒದಗಿಸಲಾಗಿತ್ತು. 2021ರ ಮೇ 21ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸ್ಟ್ಯಾನ್ ಸ್ವಾಮಿ ತಮಗೆ ನಡೆಯಲೂ ಆಗುತ್ತಿಲ್ಲ, ಊಟ ಮಾಡಲಾಗುತ್ತಿಲ್ಲ ಎಂದು ಹೇಳಿದ್ದುದರ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಹೈಕೋರ್ಟ್ ಆದೇಶ ನೀಡಿತ್ತು. ಆಸ್ಪತ್ರೆಯಲ್ಲಿರುವಾಗಲೇ , ಮೇ 30ರಂದು ಕೋವಿದ್ ಸೋಂಕಿತರಾಗಿದ್ದ ಫಾದರ್ ಸ್ಟ್ಯಾನ್ ಸ್ವಾಮಿ ಜುಲೈ 5ರಂದು, ತಮ್ಮ ಜಾಮೀನು ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆಗೊಳಪಡುತ್ತಿದ್ದಾಗಲೇ, ಶಾಶ್ವತ ಬಿಡುಗಡೆ ಹೊಂದಿ ಇಹಲೋಕ ತ್ಯಜಿಸಿದ್ದಾರೆ.
ಈ ಸಾವಿನ ಹಿಂದೆ ಆಳುವ ವರ್ಗಗಳ ಅಮಾನುಷ ಪ್ರವೃತ್ತಿ, ನ್ಯಾಯಾಂಗ ವ್ಯವಸ್ಥೆಯ ಲೋಪಗಳು, ಅಧಿಕಾರ ರಾಜಕಾರಣದ ದಬ್ಬಾಳಿಕೆ ಮತ್ತು ನಮ್ಮೆಲ್ಲರ, ಅಂದರೆ ಸಮಾಜದ , ನಿಷ್ಕ್ರಿಯತೆ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಯಾವುದೇ ಅಪರಾಧ ಎಸಗದ ಓರ್ವ ಸಂತನನ್ನು ಚಿತ್ರಹಿಂಸೆಗೊಳಪಡಿಸಿ ಕೊಲ್ಲುವ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇದ್ದರೂ, ನೂರಾರು ಅಮಾಯಕರು ಯಾವುದೇ ಅಪರಾಧ ಎಸಗದೆ ಸೆರೆಮನೆಯಲ್ಲಿ ಕೊಳೆಯುತ್ತಿದ್ದರೂ ನಮ್ಮ ಸುತ್ತಲಿನ ಸಮಾಜ ವಿಚಲಿತವಾಗುತ್ತಿಲ್ಲ ಎನ್ನುವುದೇ ಸೋಜಿಗ. ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕೆಲವೇ ಸಂಘಟನೆಗಳನ್ನು ಹೊರತುಪಡಿಸಿದರೆ, ಯಾವುದೇ ರಾಜಕೀಯ ಪಕ್ಷಗಳೂ ಇದರ ವಿರುದ್ಧ ದನಿ ಎತ್ತುತ್ತಿಲ್ಲ. ಎಲ್ಗರ್ ಪರಿಷತ್ ಪ್ರಕರಣವನ್ನು ತಮ್ಮ ರಾಜ್ಯದ ವ್ಯಾಪ್ತಿಯಲ್ಲೇ ಪರಿಹರಿಸುವ ಸಾಧ್ಯತೆ ಇದ್ದರೂ ಅದನ್ನು ಎನ್‍ಐಎ ಸುಪರ್ದಿಗೆ ವಹಿಸುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಹಲವು ಕಾರ್ಯಕರ್ತರ, ವಿದ್ವಾಂಸರ ಅನಗತ್ಯ ಬಂಧನಕ್ಕೆ ಕಾರಣರಾಗಿದ್ದಾರೆ.
ಫಾಧರ್ ಸ್ಟ್ಯಾನ್ ಸ್ವಾಮಿಯವರ ಕಸ್ಟಡಿ ಸಾವು ನಮ್ಮ ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿದೆ. ಯುಎಪಿಎ ಮುಂತಾದ ಕರಾಳ ಶಾಸನಗಳನ್ನು ರದ್ದುಪಡಿಸುವ ಆಗ್ರಹ ಜನಸಾಮಾನ್ಯರಿಂದ ಮೂಡಬೇಕಿದೆ. ಕಣ್ಣೆದುರಿನಲ್ಲೇ ನಡೆಯುತ್ತಿರುವ ಅನ್ಯಾಯಗಳಿಗೆ ಸಮಾಜದ ಮೌನವೂ ಒಂದು ಕಾರಣ ಅಲ್ಲವೇ ? ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದು ಸ್ಟ್ತಾನ್ ಸ್ವಾಮಿ ನಾಳೆ ಮತ್ತಾರೋ….