ಬಂಡವಾಳಶಾಹಿ ಅಭಿವೃದ್ಧಿ ಮಾದರಿಗಳು ಸೃಷ್ಟಿಸುವ ಅಸಮಾನತೆಗಳು ಇಲ್ಲಿ ಢಾಳಾಗಿ ಕಾಣುತ್ತವೆ
ಜುಲೈ 30ರಂದು ದೇವರ ನಾಡು ಎಂದೇ ಹೆಸರಾದ ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿರುವ ವಿಹಂಗಮ ಬೆಟ್ಟಗಳು ಕುಸಿಯಲಾರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿನಾಶಕಾರಿಯಾಗಿ ಪರಿಣಮಿಸಿತ್ತು. ಕೆಲವೇ ಗಂಟೆಗಳ ಅವಧಿಯಲ್ಲಿ 576 ಮಿಲಿಮೀಟರ್ ಮಳೆಯಿಂದ ತೊಯ್ದ ಬೆಟ್ಟಗುಡ್ಡಗಳು 2000 ಅಡಿ ಎತ್ತರದಿಂದ ಕುಸಿದ ಪರಿಣಾಮಮ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಮತ್ತು ನೂಲ್‌ಪುಳಾ ಗ್ರಾಮಗಳು ಭೂಪಟದಿಂದಲೇ ಅಳಿಸಿಹೋದವು ಈ ನೈಸರ್ಗಿಕ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ಈಗಾಗಲೇ 300 ದಾಟಿದೆ, ಇನ್ನೂ ಹೆಚ್ಚಾಗುವ ಸಂಭವವಿದೆ. ಬಗೆದಷ್ಟೂ ಶವಗಳು ಪತ್ತೆಯಾಗುತ್ತಿದ್ದು ಕಾಣೆಯಾಗಿರುವವರ ಮಾಹಿತಿ ಇನ್ನೂ ಸ್ಪಷ್ಟವಾಗಿ ಪ್ರಕಟವಾಗಬೇಕಿದೆ. ಅಸ್ಥಿರವಾಗಿರುವ ದುರ್ಬಲ ರಸ್ತೆಗಳು, ಹಾದಿಯನ್ನು ಆಕ್ರಮಿಸಿರುವ ಕುಸಿದ ಬಂಡೆಗಳು ರಕ್ಷಣಾ ಪಡೆಗಳಿಗೆ ಒಂದು ಸವಾಲಾಗಿ ಪರಿಣಮಿಸಿದ್ದು ದುರ್ಬಲ ಭೂಪ್ರದೇಶಗಳು ಇನ್ನೂ ಅಪಾಯಗಳನ್ನೊಡ್ಡುವ ಸಾಧ್ಯತೆಗಳಿವೆ.
ವಯನಾಡು ದುರಂತಕ್ಕೆ ನೈಸರ್ಗಿಕ ವಿಕೋಪ ಒಂದು ಕಾರಣವಾಗಿರುವುದು ದಿಟವಾದರೂ ಇದನ್ನೂ ಮೀರಿದ ವೈಜ್ಞಾನಿಕ ಕಾರಣಗಳು ಮತ್ತು ವಿಜ್ಞಾನವನ್ನು ಕಡೆಗಣಿಸಿದ ಮಾನವನ ಮಾರುಕಟ್ಟೆ ದುಸ್ಸಾಹಸಗಳೂ ಅಷ್ಟೇ ಕಾರಣವಾಗಿವೆ. ಬಂಡವಾಳಶಾಹಿ ಅಭಿವೃದ್ಧಿ ಮಾದರಿಗಳು ನಿರ್ದೇಶಿಸುವ ಪ್ರವಾಸೋದ್ಯಮ ಕೇಂದ್ರಿತ ಮೂಲ ಸೌಕರ್ಯ ನಿರ್ಮಾಣಗಳು ಪ್ರಕೃತಿಯ ಒಡಲನ್ನು ಹೇಗೆ ದುರ್ಬಲಗೊಳಿಸುತ್ತದೆ, ತನ್ಮೂಲಕ ಅಲ್ಲಿನ ಪ್ರಾಕೃತಿಕ ಸಂಪತ್ತನ್ನು ಮಾನವ ಸಮಾಜಕ್ಕೆ ಹೇಗೆ ದುರ್ಲಭಗೊಳಿಸುತ್ತದೆ ಎನ್ನುವುದಕ್ಕೆ ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಸ್ಪಷ್ಟ ನಿದರ್ಶನ ಎನ್ನಬಹುದು. ಕೇದಾರದಿಂದ ಕೇರಳದವರೆಗೆ ಸತತವಾಗಿ ಸಂಭವಿಸುತ್ತಿರುವ ದುರಂತಗಳನ್ನು ವಿಪತ್ತು ಎನ್ನುವುದಕ್ಕಿಂತಲೂ ಬಂಡವಾಳಶಾಹಿಯು ತಂದೊಡ್ಡಿರುವ ಆಪತ್ತು ಎನ್ನುವುದು ಸೂಕ್ತ. ಬರಗಾಲ, ಕ್ಷಾಮ, ಪ್ರವಾಹ, ಭೂಕುಸಿತ ಹೀಗೆ ಯಾವುದೇ ನೈಸರ್ಗಿಕ ವಿಕೋಪವಾದರೂ ಆಳ್ವಿಕೆಯ ನೆಲೆಗಳಲ್ಲಿ ಅದನ್ನು ಎದುರಿಸುವ ಕ್ಷಮತೆ ಮತ್ತು ಬದ್ಧತೆ ಇಲ್ಲದೆ ಹೋದರೆ, ತಳಮಟ್ಟದ ಸಮಾಜದಲ್ಲಿ ನಿಸರ್ಗವನ್ನೇ ನಂಬಿ ಬದುಕುವ ಜನರು ಶಾಶ್ವತವಾಗಿ ಬದುಕು ಕಳೆದುಕೊಳ್ಳುತ್ತಾರೆ. ವಯನಾಡು ಅಂತಹ ಒಂದು ನಿದರ್ಶನವಾಗಿ ನಮ್ಮ ಮುಂದಿದೆ.
ಬ್ರಿಟೀಷ್ ವಸಾಹತುಶಾಹಿಯ ಪಳೆಯುಳಿಕೆ
2019ರಲ್ಲಿ ಭೂಕುಸಿತದಿಂದ ತತ್ತರಿಸಿದ ಪುದುಮಲಾ ಘಟ್ಟ ಶ್ರೇಣಿಯು ಈಗ ದುರಂತಕ್ಕೀಡಾಗಿರುವ ಮುಂಡಕ್ಕೈನಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಪುದುಮಲಾ ದುರಂತದ ನಂತರ ಅಲ್ಲಿಗೆ ಭೇಟಿ ನೀಡಿದ್ದ ವಿಜ್ಞಾನಿ-ಇಕಾಲಜಿ ತಜ್ಞ ಮಾಧವ್ ಗಾಡ್ಗಿಲ್ ತಮ್ಮ ಅನುಭವವನ್ನು ಹೀಗೆ ದಾಖಲಿಸುತ್ತಾರೆ :
“ ಆ ಸಮಯದಲ್ಲಿ ಅಲ್ಲಿ ಸಂಭವಿಸಿದ ದುರಂತವನ್ನು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಾಗಿತ್ತು. ಭಾರಿ ಮಳೆಯ ನಡುವೆ ನಮ್ಮ ವಾಹನವು ಒಂದು ಗಂಟೆಯ ಪಯಣ ಮುಗಿಸಿದ ನಂತರ ನಮಗೆ ವಯನಾಡು ಘಟ್ಟಗಳ ತಿರುವುಗಳು ಎದುರಾದವು. ಈ ಮಾರ್ಗದಲ್ಲಿ ಕಂಡ ಕಿರಿದಾದ ಇಳಿಜಾರುಗಳಲ್ಲಿ ಎತ್ತರದ ಕಟ್ಟಡಗಳು ಕಂಡುಬಂದವು, ಜೊತೆಗೇ ಚಹಾ ತೋಟಗಳಿಗಾಗಿ ಭೂಮಿಯನ್ನು ಸಮತಟ್ಟಾಗಿಸಿರುವುದು ಕಂಡಿತ್ತು. ರಸ್ತೆ ಕಡಿತದಿಂದ ಉಂಟಾದ ಭೂಕುಸಿತದಿಂದ ರಸ್ತೆಗಳು ಮಣ್ಣಿನಿಂದ ಆವೃತವಾಗಿದ್ದವು. ಭೂಕುಸಿತದಿಂದ ಉಂಟಾದ ಮಣ್ಣಿನ ಹರಿವು ಒಂದೂವರೆ ಕಿಲೋಮೀಟರ್ ದೂರದವರೆಗೆ ಕಮರಿಗೆ ಇಳಿದಿತ್ತು, ದಾರಿಯುದ್ದಕ್ಕೂ ಹಲವಾರು ಮಣ್ಣಿನಿಂದ ತುಂಬಿದ ಸಣ್ಣದಾದ ಪ್ರದೇಶಗಳು ಎದುರಾಗಿದ್ದವು. ಹತ್ತಾರು ಅಡಿಯ ಮಣ್ಣುಗುಡ್ಡಗಳು ಆ ವೇಳೆಗಾಗಲೇ ಚಹಾ ತೋಟದ ಕಾರ್ಮಿಕರ 55 ಮನೆಗಳನ್ನು ನೆಲಸಮ ಮಾಡಿದ್ದವು. ಮನುಷ್ಯರು ವಾಸಿಸುವ ಮನೆಗಳಿಗೆ ಈ ನೆಲ ಯಾವುದೇ ರೀತಿಯಲ್ಲೂ ಸೂಕ್ತವಾಗಿರಲಿಲ್ಲ. ಮೇಲಿಂದ ಹರಿದುಬಂದ ಮಣ್ಣಿನ ರಭಸ ಹರಿವು ತನ್ನ ಹಾದಿಯಲ್ಲಿದ್ದ ನೀಲಗಿರಿ ಮರಗಳೆಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ಆದರೆ ಆ ಹಾದಿಯಲ್ಲಿ ಒಂದು ಮರ ಗಟ್ಟಿಯಾಗಿ ನಿಂತಿತ್ತು. ಅದನ್ನು Ficus beddomei , ಅಂದರೆ ದಕ್ಷಿಣ ಭಾರತದ ಅಂಜೂರ ಎಂದು ಗುರುತಿಸಲಾಗುತ್ತದೆ. ಇದು ಮೂಲ ಸಸ್ಯವರ್ಗದ ಲಕ್ಷಣವನ್ನು ತೋರುತ್ತದೆ. ಇಲ್ಲಿ ನಮಗೆ ಸ್ಪಷ್ಟವಾದ ಅಂಶವೆಂದರೆ, ಮೂಲ ನೈಸರ್ಗಿಕ ಸಸ್ಯವರ್ಗಗಳ ಸ್ಥಾನವನ್ನು ಬಾಹ್ಯಪ್ರದೇಶದಿಂದ ತರಲಾದ ನೀಲಗಿರಿ ಮರಗಳು ಆಕ್ರಮಿಸಿದ್ದವು. ಇದು ಇಂದಿನ ದುರಂತದ ಕಾರಣಗಳಲ್ಲೊಂದು ”.
ಚಹಾ ತೋಟಗಾರರು ಮತ್ತು ಕಮರಿಗಳಲ್ಲಿ ವಾಸಿಸಲು ಒತ್ತಾಯಿಸಲ್ಪಟ್ಟ ಕಾರ್ಮಿಕರ ಚರಿತ್ರೆಯನ್ನು ಗಮನಿಸಿದರೆ, ಬ್ರಿಟಿಷರು ಭಾರತದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿದಾಗ ಇಲ್ಲಿನ ಅರಣ್ಯ ಮತ್ತು ಭೂ ನಿರ್ವಹಣೆಯ ಬಗ್ಗೆ ಕೈಗೊಂಡ ಕ್ರಮಗಳು ಸ್ಪಷ್ಟವಾಗುತ್ತವೆ. ಇಲ್ಲಿ ಚಹಾ-ಕಾಫಿ ತೋಟಗಳನ್ನು ಸ್ಥಾಪಿಸಲು ಉತ್ಸುಕವಾಗಿದ್ದ ಬ್ರಿಟೀಷ್ ವಸಾಹತುಶಾಹಿಗೆ ಗ್ರಾಮ ಸಮುದಾಯಗಳು ಎಷ್ಟರ ಮಟ್ಟಿಗೆ ಅರಣ್ಯ ನಿರ್ವಹಣೆಯನ್ನು ಮುಂದುವರೆಸಬೇಕು ಎನ್ನುವುದು ಗಹನವಾದ ಪ್ರಶ್ನೆಯಾಗಿತ್ತು. ಅರಣ್ಯಾಧಿಕಾರಿಗಳಿಗೆ ಎಷ್ಟು ಪ್ರಮಾಣದ ಅರಣ್ಯ ಭೂಮಿಯನ್ನು ಸರ್ಕಾರದ ಆಸ್ತಿಯಾಗಿ ಪಡೆದುಕೊಳ್ಳಬೇಕು ಎಂಬ ಆಲೋಚನೆಗಳೇ ಮುಖ್ಯವಾಗಿತ್ತು. ಇಲ್ಲಿ ಗ್ರಾಮ ಜನತೆ ಸ್ಥಳಾಂತರ ಬೇಸಾಯ ಪದ್ಧತಿಯನ್ನು (Shifting Agriculture) ಅನುಸರಿಸುತ್ತಿದ್ದರು.
ಸ್ಥಳೀಯ ಆರ್ಥಿಕತೆಗೆ ಮುಖ್ಯವಾಗಿದ್ದ ಮರಗಳನ್ನು ಹಾಗೆಯೇ ಬಿಟ್ಟು ಜನರು ಎರಡು ಮೂರು ವರ್ಷಗಳ ಕಾಲ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಅಲ್ಲಿಂದ ಮತ್ತೊಂದು ಪ್ರದೇಶಕ್ಕೆ ರವಾನೆಯಾಗುವ ಮೂಲಕ 15 ರಿಂದ 20 ವರ್ಷಗಳವರೆಗೆ ಭೂಮಿಯನ್ನು ಪಾಳುಬಿಟ್ಟು ಮರಗಳು ಬೆಳೆಯಲು ಅವಕಾಶ ಮಾಡಿಕೊಡುತ್ತಿದ್ದರು. ಈ ಸ್ಥಳಾಂತರ ಕೃಷಿ ಪದ್ಧತಿ ಬ್ರಿಟೀಷರ ಚಹಾ-ಕಾಫಿ ಎಸ್ಟೇಟ್ ಮಾಲಿಕರಿಗೆ ರುಚಿಸಲಿಲ್ಲ. ಏಕೆಂದರೆ ಈ ಪದ್ಧತಿ ನಿಲ್ಲದೆ ಹೋದರೆ ಅವರ ಎಸ್ಟೇಟ್‌ಗಳಿಗೆ ಕಾರ್ಮಿಕರು ಲಭ್ಯವಾಗುತ್ತಿರಲಿಲ್ಲ. ಜೀತದಾಳುಗಳಂತೆ ದುಡಿಯವ ಕಾರ್ಮಿಕರ ಅವಶ್ಯಕತೆ ಈ ಭೂಮಾಲೀಕರಿಗೆ ಇದ್ದುದೂ ಈ ಧೋರಣೆಗೆ ಕಾರಣವಾಗಿತ್ತು. ಬಹುಮುಖ್ಯವಾಗಿ ಬ್ರಿಟೀಷರ ಆರ್ಥಿಕ ಹಿತಾಸಕ್ತಿಗಳು ತಳಮಟ್ಟದ ಜನಸಮುದಾಯಗಳನ್ನು ಸಂಪನ್ಮೂಲ ರಹಿತರನ್ನಾಗಿ ಮಾಡುವುದೇ ಆಗಿತ್ತು. ತನ್ಮೂಲಕ ಅಪಾರ ಪ್ರಮಾಣದ ಅರಣ್ಯ ಪ್ರದೇಶಗಳನ್ನು ಚಹಾ ಮತ್ತು ಕಾಫಿ ತೋಟಗಳಿಗಾಗಿ ಬಳಸಲಾರಂಭಿಸಿದ್ದರು. ಈ ಅರಣ್ಯಗಳಿಂದ ಲಭ್ಯವಾಗುತ್ತಿದ್ದ ಮರ ಬ್ರಿಟೀಷರ ಮಿಲಿಟರಿ ಮತ್ತಿತರ ನಿರ್ಮಾಣ ಚಟುವಟಿಕೆಗಳಿಗೆ ಕಚ್ಚಾವಸ್ತುಗಳಾಗಿದ್ದವು.
2011ರ ಗಾಡ್ಗಿಲ್ ವರದಿಯ ತಾತ್ವಿಕ ನೆಲೆ
ಈ ಚಾರಿತ್ರಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡೇ ಇಕಾಲಜಿ ತಜ್ಞ-ವಿಜ್ಞಾನಿ ಮಾಧವ ಗಾಡ್ಗಿಲ್ ನೇತೃತ್ವದ “ ಪಶ್ಚಿಮ ಘಟ್ಟಗಳ ಇಕಾಲಜಿ ತಜ್ಞರ ಸಮಿತಿಯು” (WGEEP) 2011ರಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಹೇಳಿರುವಂತೆ, ಭಾರತವನ್ನೂ ಒಳಗೊಂಡಂತೆ ಯಾವುದೇ ದೇಶವಾದರೂ ನಾಲ್ಕು ಬಗೆಯ ಬಂಡವಾಳವನ್ನು ಅವಲಂಬಿಸಿರುತ್ತದೆ. ಮೊದಲನೆಯದು ಪ್ರಾಕೃತಿಕ ಬಂಡವಾಳ ಎನ್ನಲಾಗುವ ನೀರು, ಸಸ್ಯ ವರ್ಗ, ಜೀವ ವೈವಿಧ್ಯತೆ, ಕೃಷಿ ಬೇಸಾಯ, ಪಶುಸಂಗೋಪನೆ ಹಾಗೂ ಮೀನುಗಾರಿಕೆ. ಎರಡನೆಯದು ಸಾಮಾಜಿಕ ಬಂಡವಾಳ ಅಂದರೆ ಸಹಕಾರದ ಧೋರಣೆ, ಭದ್ರತೆಯ ಪ್ರಶ್ನೆ. ಮೂರನೆಯದು ಮಾನವ ಬಂಡವಾಳ ಅಂದರೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾರ್ಹತೆ. ನಾಲ್ಕನೆಯದು ಮಾನವ ಉತ್ಪಾದಿಸುವ ಹಣದ ಬಂಡವಾಳ.
ಇದನ್ನು ಗುರುತಿಸಿದ ಗಾಡ್ಗಿಲ್ ಸಮಿತಿಯು, ಭಾರತದ ಆರ್ಥಿಕ ಅಭಿವೃದ್ಧಿ ಮಾದರಿಯಲ್ಲಿ ಈ ಮಾನವ ಉತ್ಪಾದಿಸುವ ಬಂಢವಾಳವನ್ನೇ ಹೆಚ್ಚು ಅವಲಂಬಿಸುವುದರಿಂದ ಇತರ ಮೂರು ಬಂಡವಾಳದ ಮೂಲಗಳನ್ನೂ ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿತ್ತು. ತತ್ಪರಿಣಾಮವಾಗಿ ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾಳಜಿಯ ಅಸಮಾನತೆಗಳು ಹೆಚ್ಚಾಗುತ್ತಲೇ ಇದೆ. ಇದರ ಫಲವಾಗಿ ಸಾಮಾಜಿಕ ಕಲ್ಯಾಣದ ಅವಕಾಶಗಳು ಕ್ಷೀಣಿಸುತ್ತಿರುವುದರಿಂದ ನಮ್ಮ ಔದ್ಯೋಗಿಕ ಉದ್ದಿಮೆಗಳೂ ಸಹ ಅಂತಾರಾಷ್ಟ್ರೀಯ ಪೈಪೋಟಿಯನ್ನು ಎದುರಿಸಲು ಹೆಣಗಾಡುತ್ತಿವೆ. ಈ ಸನ್ನಿವೇಶವನ್ನು ಸರಿದೂಗಿಸುವ ಸಲುವಾಗಿ ಪ್ರಾಕೃತಿಕ ಸಂಪತ್ತಿನ ನಡುವೆ ಮಾನವ ಹಸ್ತಕ್ಷೇಪವೂ ಹೆಚ್ಚಾಗುತ್ತಿದ್ದು, ಗಣಿಗಾರಿಕೆ, ಕಲ್ಲುಗಣಿಗಳು, ಕ್ವಾರಿಗಳು, ರಸ್ತೆ-ಹೆದ್ದಾರಿಗಳು, ಮೇಲ್ಸೇತುವೆ-ಸುರಂಗಗಳು ಮತ್ತು ಇಳಿಜಾರು ಪ್ರದೇಶಗಳಲ್ಲೂ ಮುಗಿಲೆತ್ತರದ ಕಟ್ಟಡಗಳು ತಲೆ ಎತ್ತುತ್ತಿವೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲೂ ಇದೇ ಬೆಳವಣಿಗೆಯನ್ನು ಗಮನಿಸಬಹುದು.
ಈ ಸವಾಲುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಸಿದ್ಧಪಡಿಸಿದ ಗಾಡ್ಗಿಲ್ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕೈಗೊಳ್ಳಬಹುದಾದ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅನ್ವಯಿಸುವಂತಹ ಕೆಲವು ಮಾರ್ಗದರ್ಶಿ ಸೂತ್ರಗಳನ್ನು, ನಿಬಂಧನೆಗಳನ್ನು ಸೂಚಿಸಲಾಗಿದೆ. (ಕೋಷ್ಟಕ ನೋಡಿ) ಪರಿಸರ ಸೂಕ್ಷ್ಮತೆಯನ್ನು ಆಧರಿಸಿ ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಅತಿ ಸೂಕ್ಷ್ಮ , ಮಧ್ಯಮ ಸೂಕ್ಷ್ಮ ಮತ್ತು ಕಡಿಮೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿತ್ತು. ಮಾಧವ ಗಾಡ್ಗಿಲ್ ಅವರು ತಮ್ಮ ವರದಿಯನ್ನೇ ಅಂತಿಮ ಎಂದೇನೂ ಸಲ್ಲಿಸಿರಲಿಲ್ಲ ಆದರೆ ಪರಿಸರ ರಕ್ಷಣೆಯ ದೃಷ್ಟಿಯಿಂದ ಸರ್ಕಾರಗಳು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಾಗ ಪ್ರಜಾಸತ್ತಾತ್ಮಕ ವಿಧಾನ ಅನುಸರಿಸಿ ನಿರ್ಣಯ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಾಡ್ಗಿಲ್ ವರದಿಯನ್ನು ನಿರ್ಲಕ್ಷಿಸಿದ್ದವು.
.
ಮಾಧವ ಗಾಡ್ಗಿಲ್ ವರದಿ (WGEEP) ಮಾಡಿರುವ ಪ್ರಮುಖ ಶಿಫಾರಸುಗಳು ಹೀಗಿವೆ 1. ಯಾವುದೇ ವಿಶೇಷ ಆರ್ಥಿಕ ವಲಯಗಳು (SEZ) ಇರುವಂತಿಲ್ಲ. 2. ಹೊಸ ಗಿರಿಧಾಮಗಳನ್ನು ನಿರ್ಮಿಸುವಂತಿಲ್ಲ. 3. ಕೆಳಹಂತದ ಹರಿವನ್ನು ಸುಧಾರಿಸಲು ಜಲಾಶಯ ಕಾರ್ಯಾಚರಣೆಯನ್ನು ಪುನಾರೂಪಿಸುವುದು. 4. ಗಣಿಗಾರಿಕೆಯ ಪ್ರದೇಶಗಳಲ್ಲಿ ಜಲಮೂಲಗಳನ್ನು ವೃದ್ಧಿಪಡಿಸಲು ಪುನರ್ವಸತಿ ಕಾರ್ಯ ಕೈಗೊಳ್ಳುವುದು. 5. ಸಾವಯು ಕೃಷಿ ಪದ್ಧತಿಗಳನ್ನು ಅಳವಡಿಸಿ, ಮಣ್ಣಿನಲ್ಲಿರುವ ಕಾರ್ಬನ್ ಅಂಶಗಳನ್ನು ತಗ್ಗಿಸುವುದು ಮತ್ತು ಸಾಂಪ್ರದಾಯಿಕ ತಳಿಗಳನ್ನು ಆಯ್ಕೆ ಮಾಡುವುದು. 6. ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿ ಹಣವನ್ನು ಜಾನುವಾರು ನಿರ್ವಹಣೆಗೆ ಮತ್ತು ಬಯೋಗ್ಯಾಸ್ ಇತ್ಯಾದಿ ಜೈವಿಕ ಗೊಬ್ಬರ ತಯಾರಿಕೆಗೆ ವಿನಿಯೋಗಿಸುವುದು. 7. ಮೀನುಗಳನ್ನು ಕೊಲ್ಲಲು ಡೈನಾಮೈಟ್-ಸ್ಫೋಟಕಗಳ ಬಳಕೆಯನ್ನು ನಿಷೇಧಿಸುವುದು 8. ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಜನತೆಯ ಹಕ್ಕುಗಳನ್ನು ರಕ್ಷಿಸುವುದು. 9. ಪರಿಸರ ಸೂಕ್ಷ್ಮ ವಲಯ-1 ರಲ್ಲಿ ಗಣಿಗಾರಿಕೆ ನಿಷೇಧಿಸುವುದು, ಈಗಾಗಲೇ ಇರುವ ಗಣಿಗಾರಿಕೆಯನ್ನು 2016ರ ವೇಳೆಗೆ ಅಂದರೆ 5 ವರ್ಷಗಳಲ್ಲಿ ಸ್ಥಗಿತಗೊ 10. ಪರಿಸರ ಸೂಕ್ಷ್ಮ ವಲಯ-2ರಲ್ಲಿ ಹೊಸ ಗಣಿಗಾರಿಕೆಯನ್ನು ನಿಷೇಧಿಸಿ,, ಹಾಲಿ ಗಣಿಗಾರಿಕೆಯನ್ನು ಕಠಿಣ ನಿರ್ಬಂಧಗಳು ಮತ್ತು Social Audit ಮೂಲಕ ನಿರ್ವಹಿಸುವುದು. 11. ಪರಿಸರ ಸೂಕ್ಷ್ಮ ವಲಯ-3ರಲ್ಲಿ ಕಠಿಣ ನಿರ್ಬಂಧ-ನಿಬಂಧನೆಗಳು ಹಾಗೂ Social Audit ಮೂಲಕ ಗಣಿಗಾರಿಕೆಗೆ ಅವಕಾಶ ನೀಡುವುದು. 12. ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸುವುದು. 13. ಪರಿಸರ ಸೂಕ್ಷ್ಮ ವಲಯ-1ರಲ್ಲಿ ಹೊಸ ರೈಲು ಮಾರ್ಗಗಳು, ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ರದ್ದುಪಡಿಸುವುದು, |
ನಿಸರ್ಗ ಸಂರಕ್ಷಣೆ ಮತ್ತು ಕೆಳಸ್ತರದ ಜನಸಮುದಾಯಗಳ ಸಬಲೀಕರಣದ ಬಗ್ಗೆ ಸದಾ ನಿರ್ಲಕ್ಷ್ಯವನ್ನೇ ತೋರುವ ಸರ್ಕಾರಗಳಿಗೆ ಗಾಡ್ಗಿಲ್ ವರದಿ ಸಹಜವಾಗಿಯೇ ಅಪಥ್ಯವಾಗಿತ್ತು. 2013ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ, ಮಾಧವ್ ಗಾಡ್ಗಿಲ್ ವರದಿಗೆ ಪ್ರತಿಯಾಗಿ ರಚಿಸಲಾದ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಗಾಡ್ಗಿಲ್ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಈಗಾಗಲೇ 13 ವರ್ಷಗಳಷ್ಟು ವಿಳಂಬವಾಗಿದ್ದು ಇದರ ಪರಿಣಾಮವನ್ನು ಕೇರಳ 2018 ರಲ್ಲಿ, 2019 ರಲ್ಲಿ ಮತ್ತು ಈಗ 2024ರಲ್ಲೂ ಅನುಭವಿಸಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2011 ರಿಂದ 2020ರ ನಡುವೆ ಭೂಕುಸಿತ ಪ್ರಕರಣಗಳು ನೂರುಪಟ್ಟು ಹೆಚ್ಚಾಗಿರುವುದನ್ನು ಇಕಾಲಜಿ ತಜ್ಞರು ಗುರುತಿಸುತ್ತಾರೆ. ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಒಂದು ರಾಜ್ಯವಾಗಿ ಕೇರಳ ಎಡಪಂಥೀಯ ಜನ ಚಳುವಳಿಗಳ ಮತ್ತು ಎಡಪಕ್ಷಗಳ ಭದ್ರಕೋಟೆಯೂ ಆಗಿದೆ. ಆದರೆ ಎಡರಂಗ ಸರ್ಕಾರಗಳೂ ಸಹ ಅಲ್ಲಿನ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯ ಬಗ್ಗೆ ಹೆಚ್ಚಿನ ಗಮನಹರಿಸದಿರುವುದು ದುರಂತ
ಆಪ್ತ ಬಂಡವಾಳಶಾಹಿ ಮತ್ತು ಪರಿಸರ
ಭಾರತ ಕಳೆದ ಮೂರೂವರೆ ದಶಕಗಳಿಂದ ಅನುಸರಿಸುತ್ತಿರುವ ನವ ಉದಾರವಾದಿ-ಆಪ್ತ ಬಂಡವಾಳಶಾಹಿ ಆರ್ಥಿಕ ಮಾದರಿಯ ಒಂದು ಘೋರ ಪರಿಣಾಮವನ್ನು ವಯನಾಡು ದುರಂತ ಮತ್ತು ಪಶ್ಚಿಮ ಘಟ್ಟಗಳ ಸಮಸ್ಯೆಗಳು ಎತ್ತಿ ತೋರುತ್ತವೆ್ ಮಾಧವ್ ಗಾಡ್ಗಿಲ್ ವರದಿ ಸಲ್ಲಿಕೆಯಾದ ನಂತರದಲ್ಲಿ ಕೇರಳದಲ್ಲಿ ಎಡರಂಗ-ಸಂಯುಕ್ತ ರಂಗ ಎರಡೂ ಸರ್ಕಾರಗಳು ಆಳ್ವಿಕೆ ನಡೆಸಿವೆ. ಆದರೆ ಗಾಡ್ಗಿಲ್ ವರದಿಯನ್ನು ನಿರಾಕರಿಸುತ್ತಲೇ ಬರಲಾಗಿದೆ. ಈಗ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕರು ಗಾಡ್ಗಿಲ್ ವರದಿಯ ಅನುಷ್ಠಾನಕ್ಕಾಗಿ ಆಗ್ರಹಿಸಿದ್ದಾರೆ, ಆದರೆ ಪಕ್ಷವು ಅಧಿಕಾರದಲ್ಲಿದ್ದಾಗ ಮಾಡಿದ್ದೇನು ? ಕಳೆದ ಮೂರುನಾಲ್ಕು ದಶಕಗಳಿಂದಲೇ ಕೇರಳ ಜಾಗತೀಕರಣದ ಹಿಡಿತದಲ್ಲಿದೆ. ಅರಬ್ ಕೊಲ್ಲಿ ರಾಷ್ಟ್ರಗಳಲ್ಲಿನ ಆರ್ಥಿಕ ಉತ್ಕರ್ಷದ ಪರಿಣಾಮ ಆ ದೇಶಗಳಿಗೆ ಕೇರಳದಿಂದ ದೈಹಿಕ ಶ್ರಮಿಕರ ವಲಸೆಯೂ ಹೆಚ್ಚಾಗುತ್ತಲೇ ಇದೆ. ಕೇರಳದ ಬಹುತೇಕ ಕೃಷಿ ಭೂಮಿಯನ್ನು ಮಾಲೀಕರು ಬಾಡಿಗೆ ಕಾರ್ಮಿಕರ ಮೂಲಕ ನಿರ್ವಹಿಸುವುದರಿಂದ ವಲಸೆಗಾರಿಕೆ ಇಲ್ಲಿ ಕಾರ್ಮಿಕರ ಕೊರತೆಯನ್ನೂ ಸೃಷ್ಟಿಸಿದೆ.
ಮಾಧವ ಗಾಡ್ಗಿಲ್ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ಮಾನವ ಆರ್ಥಿಕ ಚಟುವಟಿಕೆಗಳಿಂದ ಸಂಪೂರ್ಣ ಮುಕ್ತಗೊಳಿಸುವ ಶಿಫಾರಸು ಮಾಡಲಾಗಿಲ್ಲ. ಬದಲಾಗಿ ಪರಿಸರಕ್ಕೆ ಹಾನಿಕಾರಕವಾದ, ವಿನಾಶಕಾರಿ-ಅಪಾಯಕಾರಿ ಚಟುವಟಿಕೆಗಳನ್ನು ಎಲ್ಲ ವಲಯಗಳಲ್ಲೂ ಸೂಕ್ತ ನಿರ್ಬಂಧಗಳೊಂದಿಗೆ ಕೈಗೊಳ್ಳುವಂತೆ ಹೇಳಲಾಗಿದೆ. ಪರಿಸರ ಸೂಕ್ಷ್ಮ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಳನ್ನು, ಕ್ವಾರಿಗಳನ್ನು ನಿಷೇಧಿಸುವಂತೆ ಹೇಳಲಾಗಿದೆ. ಆದರೆ ಆಪ್ತ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗೆ ಇದು ಅಪಥ್ಯವಾಗಿ ಕಾಣುತ್ತದೆ. ಪ್ರವಾಸೋದ್ಯಮ ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆಯ ಮೂಲಕ ಜಿಡಿಪಿ ಹೆಚ್ಚಿಸುವಂತಹ ಔದ್ಯೋಗಿಕ ಚಟುವಟಿಕೆಗಳನ್ನು ಅನುಸರಿಸಲಾಗುತ್ತದೆ. ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಒಂದು ದುಷ್ಪರಿಣಾಮವನ್ನು ಗೋವಾದ ಸಂದರ್ಭದಲ್ಲಿ ನೋಡಬಹುದು.
“ ಗೋವಾದಲ್ಲಿ ಗಣಿ ಮತ್ತು ಖನಿಜಗಳ (ಡಿಆರ್) ಕಾಯ್ದೆ 1957ರ ಭಾಗ 4 ಸೆಕ್ಷನ್ 24ನ್ನು ಅನುಸರಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಷಾ ಆಯೋಗದ ವರದಿಯಲ್ಲಿ ಹೇಳಿರುವಂತೆ ಯಾವುದೇ ಪರಿಶೋಧನೆಯನ್ನೂ ನಡೆಸಲಾಗಿಲ್ಲ. ತತ್ಪರಿಣಾಮವಾಗಿ ಕೃಷಿ, ಅಂತರ್ಜಲ, ನೈಸರ್ಗಿಕ ತೊರೆಗಳು, ಕೊಳಗಳು, ನದಿಗಳು ಮತ್ತು ಜೀವ ವೈವಿಧ್ಯತೆಯು ಅಪಾರ ನಷ್ಟ ಅನುಭವಿಸಿವೆ. ಒಂದು ವರದಿಯ ಅನುಸಾರ 2006 ರಿಂದ 2011ರ ಅವಧಿಯಲ್ಲಿ ಗೋವಾದಲ್ಲಿ ಅಕ್ರಮ ಗಣಿಗಾರಿಕೆಯಿಂದಲೇ 35 ಸಾವಿರ ಕೋಟಿ ರೂಗಳಷ್ಟು ಲಾಭ ಉಂಟಾಗಿದೆ ” ಎಂದು ಹೇಳಲಾಗಿದೆ.
ನವ ಉದಾರವಾದ ಮತ್ತು ಆಪ್ತ ಬಂಡವಾಳಶಾಹಿ ಆರ್ಥಿಕ ಮಾದರಿಯನ್ನು ಇಂದಿಗೂ ಬಲವಾಗಿ ವಿರೋಧಿಸುವ ಎಡಪಕ್ಷಗಳ ಅಧಿಕಾರಾವಧಿಯಲ್ಲೂ ಪಶ್ಚಿಮ ಘಟ್ಟ ಪ್ರದೇಶಗಳು ಮತ್ತು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಅವ್ಯಾಹತ ಲೂಟಿಗೊಳಗಾಗಿರುವುದು ರಾಜಕೀಯ ಆರ್ಥಿಕತೆಯ ನೆಲೆಯಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿ ಮಾದರಿಯನ್ನೇ ಪ್ರಶ್ನಾರ್ಹವಾಗಿಸುತ್ತದೆ. ಹಾಗೆಯೇ ಎಡಪಕ್ಷಗಳ ಸರ್ಕಾರಗಳಲ್ಲಿ ಪರಿಸರ ಪ್ರಜ್ಞೆಯ ಕೊರತೆ ಇರುವುದನ್ನೂ ಎತ್ತಿ ತೋರಿಸುತ್ತದೆ. ಬಂಡವಾಳಶಾಹಿಯ ಋಣಾತ್ಮಕ ಪರಿಣಾಮಗಳು ಕೇವಲ ಔದ್ಯೋಗಿಕ ವಲಯದ, ಔದ್ಯಮಿಕ ಕ್ಷೇತ್ರದ ಕಾರ್ಮಿಕರ ಮೇಲಷ್ಟೇ ಆಗುವುದಿಲ್ಲ, ಅದು ಪರಿಸರದ ಮೇಲೂ ಆಗುತ್ತದೆ. ಇಲ್ಲಿ ತಮ್ಮ ಬದುಕು ಸವೆಸುವ ಕೋಟ್ಯಂತರ ಶ್ರಮಜೀವಿಗಳ ಬಗ್ಗೆ ಮತ್ತು ಆ ಜನಸಮುದಾಯಗಳ ಭವಿಷ್ಯದ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸುವುದು ಎಡಪಕ್ಷಗಳ ಆದ್ಯತೆಯಾಗಬೇಕಿದೆ. ಕಾರ್ಪೋರೇಟ್ ಮಾರುಕಟ್ಟೆ ಅಭಿವೃದ್ಧಿ ಪಥದ ಹೊರನಿಂತು ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ವರ್ತಮಾನದ ತುರ್ತು.
ಈ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿ-ದತ್ತಾಂಶ-ಗಾಡ್ಗಿಲ್ ವರದಿಯ ಅಂಶಗಳಿಗೆ ಆಧಾರ
Wayanad tragedy exposes the gulf between haves and have-nots – Madhav Gadgil, Indian Express August 4 2024
ಮತ್ತು
Confronting the Wayanad tragedy and reflecting on crony capitalism: 25 forgotten guidelines -Madhav Gadgil, Indian Express August 1 2024
-೦-೦-೦-೦-