ಬಿಬಿಎಂಪಿ ಮೇಲೆ ತೂಗು ಕತ್ತಿಯಂತೆ ತೂಗುತ್ತಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಇದೀಗ ಕಂದಾಯ ಇಲಾಖೆ ಮುಂದಿದೆ. ವಕ್ಫ್ ಬೋರ್ಡ್ ಖಾತ ಇಂಡೀಕರಣಕ್ಕೆ ಕೋರಿ ಸಲ್ಲಿಸಿದ ಅರ್ಜಿ ಬಿಬಿಎಂಪಿ ವಜಾಗೊಳಿಸಿ, ಇದು ವಕ್ಫ್ ಬೋರ್ಡ್ ಆಸ್ತಿಯೂ ಅಲ್ಲ, ಬಿಬಿಎಂಪಿಯದ್ದೂ ಅಲ್ಲ ಎಂದು ಹೇಳಿ ವಿವಾದಕ್ಕೆ ರೋಚಕ ಟ್ವಿಸ್ಟ್ ನೀಡಿದೆ.
ಕಳೆದ ಮೂರು ತಿಂಗಳಿನಿಂದ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ವಕ್ಫ್ ಬೋರ್ಡ್ ಖಾತ ಇಂಡೀಕರಣಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾಗೊಳಿಸಿ, ವಿವಾದಿತ ಸ್ವತ್ತು ಕಂದಾಯ ಇಲಾಖೆಯ ಅಧೀನಕ್ಕೆ ನೀಡಿದೆ. ಅಲ್ಲದೆ ಈ ಬಗ್ಗೆ ಆದೇಶ ಪತ್ರ ಹೊರಡಿಸಿದ್ದು, ಬಿಬಿಎಂಪಿ ನಿಯಮ 2020 ಕಲಂ 149 ಪ್ರಕಾರ ವಕ್ಫ್ ಬೋರ್ಡ್ ದಾಖಲೆ ಸಲ್ಲಿದ ಹಿನ್ನೆಲೆ ಖಾತ ಇಂಡೀಕರಣ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಲಾಗಿದೆ. ಅಲ್ಲದೆ ಈ ಪ್ರಸ್ತುತ ಮೈದಾನವನ್ನು ಕಂದಾಯ ಇಲಾಖೆಗೆ ನೀಡಿದ್ದು, ವಕ್ಫ್ ಬೋರ್ಡ್ ಮುಂದಕ್ಕೆ ದಾಖಲೆ ಸಲ್ಲಿಸಿ ವ್ಯವಹರಿಸಲು ಈ ಆದೇಶ ಅಡ್ಡಿಯಾಗುವುದಿಲ್ಲ ಎಂದೂ ಹೇಳಿದೆ.
ಬಿಬಿಎಂಪಿಯ ಆದೇಶ ನ್ಯಾಯಾಂಗ ನಿಂದನೆ : ವಕ್ಫ್ ಬೋರ್ಡ್ ಕಿಡಿ
ಇದು ಕಂದಾಯ ಇಲಾಖೆಯ ಆಸ್ತಿ ಎಂದು ಬಿಬಿಎಂಪಿ ಘೋಷಿಸಿದ ಬಿಬಿಎಂಪಿ ನಡೆಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಕಿಡಿ ಕಾರಿದ್ದಾರೆ. ಸುಪ್ರೀಂ ಕೋರ್ಟ್ 1965ರಲ್ಲಿ ಮೈದಾನ ವಕ್ಫ್ ಬೋರ್ಡ್ ದು ಅಂತ ತೀರ್ಪು ಕೊಟ್ಟಿದೆ. ಈಗ ಬಿಬಿಎಂಪಿ ಅವರದ್ದೇ ಒಂದು ಆದೇಶ ಹೊರಡಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ. ನಾವು ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ. ಬಿಬಿಎಂಪಿಯೇ ಒಂದು ಘಟ್ಟದಲ್ಲಿ ಇದು ನಮ್ಮ ಆಸ್ತಿಯಲ್ಲ ಎಂದು ಹೇಳಿತ್ತು. ಈಗ ರಾಜ್ಯ ಕಂದಾಯ ಇಲಾಖೆಗೆ ಎಂದು ಆದೇಶ ಮಾಡಿದೆ. ಈ ಬಗ್ಗೆ ನಾವು ಕಾನೂನು ತಜ್ಞರಲ್ಲಿ ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ವಿವಾದ ಒಂದು ಹಂತಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ಅತ್ತ ಬಿಬಿಎಂಪಿ ಇದು ವಕ್ಫ್ ಬೋರ್ಡ್ ಆಸ್ತಿ ಅಲ್ಲ ಎಂದಿದ್ದೇ ತಡ ಇತ್ತ ಚಾಮರಾಜಪೇಟೆ ನಾಗರೀಕ ಒಕ್ಕೂಟ ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡಿದ ಚಾಮರಾಜಪೇಟೆ ನಾಗರೀಕ ಒಕ್ಕೂಟದ ಮುಖಂಡ ಲಹರಿ ವೇಲು, ಇವತ್ತು ನಮಗೆ ಹಬ್ಬದ ಸಂಭ್ರಮ. ಸತತವಾಗಿ 16 ವರ್ಷಗಳಿಂದ ಈ ಹೋರಾಟ ಮಾಡಿದ್ದೇವೆ. ಗಣೇಶೋತ್ಸವ, ಧ್ವಜಾರೋಹಣ ಮಾಡೋಕೆ ಬಹಳ ಹೋರಾಟ ಮಾಡಿದ್ದೇವೆ. ಸತ್ಯ ಮೇವಾ ಜಯಹೇ… ಧರ್ಮೋ ರಕ್ಷಿತ ರಕ್ಷಿತಃ.. ಗೆಲವು ನಮ್ಮದಾಗಿದೆ. ಬಿಬಿಎಂಪಿ ಇದು ಕಂದಾಯ ಇಲಾಖೆದ್ದು ಅಂತ ಆದೇಶ ಮಾಡಿರೋದು ಸ್ವಾಗತಾರ್ಹ ಎಂದರು.
ಮೈದಾನದ ಸುತ್ತ ಓಡಾಡಿ ಸಿಹಿ ಹಂಚಿ ಸಂಭ್ರಮಿಸಿದ ಚಾಮರಾಜಪೇಟೆ ನಾಗರೀಕ ಒಕ್ಕೂಟ
ಬಿಬಿಎಂಪಿ ಆದೇಶ ನೀಡ್ತಿದ್ದಂತೆ ಮೈದಾನಕ್ಕೆ ಖಾಕಿ ಸರ್ಪಗಾವಲು ಏರ್ಪಡಿಸಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯ ಪೊಲೀಸರು, ಹೋಮ್ ಗಾರ್ಡ್ ಗಳನ್ನು ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿಯೋಜನೆ ಮಾಡಲಾಗಿದೆ. ಇದೇ ವೇಳೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕಯ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೆ ಮೈದಾನದ ಪಕ್ಕದಲ್ಲೇ ಇರುವ ಮಲೆಮಹಾದೇಶ್ವರ ದೇವರಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿಕೊಂಡರು. ಬಳಿಕ ಚಾಮರಾಜಪೇಟೆ ನಾಗರೀಕ ಒಕ್ಕೂಟ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಬಿಬಿಎಂಪಿಯ ನಿರ್ಧಾರವನ್ನು ಸಂಭ್ರಮಿಸಿದರು.
ಒಟ್ಟಾರೆ ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿ ಜನರ ನೆಮ್ಮದಿ ಕೆಡಿಸಿದ್ದ ಈದ್ಗಾ ಮೈದಾನ ಇದೀಗ ಕಂದಾಯ ಇಲಾಖೆ ಕೈ ಸೇರಿದೆ. ಎಂದರೆ ಇನ್ನೇನಿದ್ದರೂ ಸರ್ಕಾರ ಈ ಬಗ್ಗೆ ತೀರ್ಮಾನ ಪ್ರಕಟಿಸಬೇಕಿದೆ. ಈ ಮೂಲಕ ತನ್ನ ಹೆಗಲ ಮೇಲಿದ್ದ ಹೊರೆಯನ್ನು ಬಿಬಿಎಂಪಿ ಅಧಿಕಾರಿಗಳು ಕೆಳಗಿಳಿಸಿದ್ದಾರೆ. ಜೊತೆಗೆ ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಅನುಮತಿ ಕೊಟ್ಟರೂ ಕೊಡದಿದ್ದರೂ ನಾವು ತ್ರಿವರ್ಣ ಧ್ವಜ ಹಾರಿಸೇ ತೀರುತ್ತೇವೆ ಎಂಬ ಶಪಥ ಚಾಮರಾಜಪೇಟೆ ನಾಗರೀಕ ಒಕ್ಕೂಟ ಮಾಡಿಕೊಂಡಿದೆ.