ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖಾ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು.ಮಾತ್ರವಲ್ಲ ಇದಕ್ಕಾಗಿ 150 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಈ ಬಗ್ಗೆ ಎಲ್ಲಾ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ ಎಂದು ಸಾಕ್ಷಾತ್ ಅನ್ವರ್ ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.ಇದನ್ನು ಸಿಎಂ ಸಿದ್ದರಾಮಯ್ಯ ನಿನ್ನೆ ಮಾಧ್ಯಮ ಪ್ರಕಟಣೆ ಮೂಲಕ ಬಿಜೆಪಿ ನಾಯಕರಿಗೆ ವಕ್ಫ್ ಆಸ್ತಿ ವಿಚಾರದಲ್ಲಿ ತಿರುಗೇಟು ನೀಡುವ ಕೆಲಸ ಮಾಡಿದ್ದರು.ಇದೀಗ ಸಿಎಂ ಮಾಧ್ಯಮ ಪ್ರಕಟಣೆ ಬಳಿಕ ಅನ್ವರ್ ಮಾಣಿಪ್ಪಾಡಿ ಉಲ್ಟಾ ಹೊಡೆದಿದ್ದಾರೆ.
ವಕ್ಫ್ ಆಸ್ತಿ ವಿವಾದದಲ್ಲಿ ಮೌನವಾಗಿರಲು ಆಮಿಷ ಕೊಟ್ಟಿದ್ದಾರೆ ಎಂಬ ಸಿಎಂ ಹೇಳಿಕೆಗೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾರಿಂದಲೂ 150 ಕೋಟಿ ರೂಪಾಯಿ ಆಮಿಷ ಬಂದಿರಲಿಲ್ಲ. ಆದ್ರೆ, ಐದಾರು ವರ್ಷಗಳ ಹಿಂದೆ ಬಿಜೆಪಿ ಕಚೇರಿಯಲ್ಲೇ ವಿಜಯೇಂದ್ರ ಭೇಟಿ ಆಗಿದ್ರು. ನೀವು ನೊಂದಿದ್ದೀರಾ ಸುಮ್ಮನಿದ್ದುಬಿಡಿ ಎಂದಿದ್ರು. ವಿಜಯೇಂದ್ರ ಹೇಳಿಕೆಗೆ ಸಿಕ್ಕಾಪಟ್ಟೆ ಬೈದು ಕೋಪಗೊಂಡಿದ್ದೆ, ವರದಿ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ವಿಜಯೇಂದ್ರ ಮೇಲೂ ಕಿಡಿಕಾರಿದ್ದೆ. ಅಂದು ವಿಜಯೇಂದ್ರ ಯಾಕೆ ಸುಮ್ಮನಿದ್ದುಬಿಡಿ ಅಂತಾ ಹೇಳಿದ್ರು ಗೊತ್ತಿಲ್ಲ ಅಂತ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ವಕ್ಪ್ ಆಸ್ತಿ ವಿವಾದದಲ್ಲಿ ಮೌನವಾಗಿರಲು ಆಮಿಷದ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಈ ಬಗ್ಗೆ ಚರ್ಚೆ ಮಾಡಲಿ, ನಾವೂ ಚರ್ಚೆಗೆ ತಯಾರಿದ್ದೇವೆ. ಪ್ರಿಯಾಂಕ್ ಖರ್ಗೆ ಹೇಳಿಕೆ ಗಮನಿಸಿದ್ದೇನೆ. ಬುದ್ಧಿ ಭ್ರಮಣೆ ಆದವರಂತೆ ವರ್ತಿಸ್ತಿದ್ದಾರೆ. ನಾನ್ಯಾಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಬೇಕು. 150 ಕೋಟಿ ಆಫರ್ ಮಾಡಬೇಕು..? ಅದು ಕೂಡ ಕಾಂಗ್ರೆಸ್ ಮುಖಂಡರನ್ನ ಬಚಾವ್ ಮಾಡೋದಕ್ಕೆ..!? ಲಜ್ಜೆಗೆಟ್ಟ ಸರ್ಕಾರ ಇದು ಅಂತ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. 150 ಕೋಟಿ ಆಮಿಷ ಅನ್ನೋದೇ ನಾನ್‌ಸೆನ್ಸ್ ಎಂದಿದ್ದಾರೆ. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು, ಅದನ್ನು ತಗೀರಿ ಎಂದಿದ್ದಾರೆ ಜೋಶಿ. ನಮ್ಮ ಮಂತ್ರಿಗಳು ಇದ್ರೂ ಹೊರಬರಲಿ. 150 ಕೋಟಿ ಅಲ್ಲ, 1500 ಕೋಟಿ ಎಂದು ಹೇಳಬೇಕಿತ್ತು. ವಿಜಯೇಂದ್ರ ನಮ್ಮ ಮನೆಗೆ ಬಂದಿದ್ದ ಎಂದು ಅನ್ವರ್ ಮಣಿಪ್ಪಾಡಿ ಹೇಳಿಲ್ಲ. ಕಾಂಗ್ರೆಸ್ ಮಾಡಿರೋ ಅಪಚಾರ ಮುಚ್ಚಿಕೊಳ್ಳಲು ಈ ಆರೋಪ ಎಂದಿದ್ದಾರೆ.