ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನ ಮಾಡಲಾಗಿದೆ. ಗುಜರಾತ್ನಲ್ಲಿ ಬಂಧನ ಮಾಡಿದ ಬಳಿಕ ಬೆಂಗಳೂರು ಮೂಲಕ ಮೈಸೂರಿಗೆ ಕರೆತರಲಾಗಿದೆ. ಆದರೆ ಯುವತಿಯರು ಹಾಗು ಮಹಿಳೆಯರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮಾಂಸ ದಂಧೆ ಮಾಡುವ ಕೆಲಸ ಮಾಡ್ತಿದ್ದ ಸ್ಯಾಂಟ್ರೋ ರವಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅತೀ ಗಣ್ಯವ್ಯಕ್ತಿಗಳಿಗೆ ನೀಡುವ ಸೌಲಭ್ಯ ನೀಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮಧ್ಯರಾತ್ರಿ ಮಾಧ್ಯಮಗಳ ಕಣ್ತಪ್ಪಿಸಿ ಕರೆದೊಯ್ದ ಖಾಕಿ ಪಡೆ..!
ಸ್ಯಾಂಟ್ರೋ ರವಿ ಮೂಲಕ ಕೋಟಿ ಕೋಟಿ ಹಣ ಕೊಟ್ಟು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ತಿದ್ದ ಪೊಲೀಸ್ ಅಧಿಕಾರಿಗಳು, ಸ್ಯಾಂಟ್ರೋ ರವಿಗೆ ಐಶಾರಾಮಿ ವ್ಯವಸ್ಥೆ ಮಾಡುವ ಕೆಲಸ ಮಾಡ್ತಿದ್ದಾರೆ. ಗುಜರಾತ್ನ ಅಹಮದಾಬಾದ್ನಿಂದ ಮಧ್ಯರಾತ್ರಿ ಕರೆದುಕೊಂಡು ಬಂದ ಪೊಲೀಸರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮಾನ್ಯ ದ್ವಾರದಲ್ಲಿ 30ಕ್ಕೂ ಹೆಚ್ಚು ಜನ ಪೊಲೀಸರ ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲಾಗಿತ್ತು. ಮಾಧ್ಯಮ ಸಿಬ್ಬಂದಿಗಳೂ ಕೂಡ ಸಾಮಾನ್ಯ ದ್ವಾರದಲ್ಲೇ ಕಾಯುತ್ತಿದ್ದರು. ಆದರೆ ಸ್ಯಾಂಟ್ರೋ ರವಿಯನ್ನು ವಿಶೇಷ ಗಣ್ಯ ವ್ಯಕ್ತಿಗಳು ಹೊರಕ್ಕೆ ಬರುವ ( VVIP ) ದ್ವಾರದ ಮೂಲಕ ಮಾಧ್ಯಮಗಳ ಕಣ್ತಪ್ಪಿಸಿ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಪೊಲೀಸರು ಕರ್ತವ್ಯಕ್ಕೂ ಮಿಗಿಲಾದ ಆತ್ಮೀಯತೆ ಸ್ಯಾಂಟ್ರೋ ರವಿ ಜೊತೆಗೆ ಇದೆ ಎನ್ನುವುದನ್ನು ಸಾಬೀತು ಮಾಡಿಕೊಂಡಿದ್ದಾರೆ.
ಒನ್ ಟು ಒನ್ ಟಚ್ ಇದ್ದಾರೆ ಎಂದಿದ್ದ ಸ್ಯಾಂಟ್ರೋ ರವಿ..!!
ಪೊಲೀಸರ ವರ್ಗಾವಣೆ ವಿಚಾರದಲ್ಲಿ ಫೋನ್ ಮೂಲಕ ಸಂಭಾಷಣೆ ನಡೆಸಿದ್ದ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ, ಹಿರಿಯ ಅಧಿಕಾರಿಗಳು ನನ್ನ ಜೊತೆಗೆ ನೇರ ಸಂಪರ್ಕದಲ್ಲಿ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಹಿತೈಷಿಗಳು, ಗೃಹ ಸಚಿವರನ್ನು ಅವರ ಮನೆಯಲ್ಲೇ ನೇರವಾಗಿ ಭೇಟಿ ಮಾಡಿ ಮಾತನಾಡುವ ಆತ್ಮೀಯತೆ ಇದೆ ಎಂದಿದ್ದನು. ಜೊತೆಗೆ ಸಿಎಂ ಹಾಗು ಅವರ ಪುತ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತೀರ್ಥಹಳ್ಳಿ ನಿವಾಸದಲ್ಲಿ ಭೇಟಿ ಮಾಡಿದ್ದ ಫೋಟೋಗಳು ಬಿಡುಗಡೆ ಆಗಿದ್ದವು. ಇದೀಗ ಬಂಧನ ಆದ ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದಾಗ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿಶೇಷ ಗಣ್ಯರು ಸಂಚಾರ ಮಾಡುವ ಬಾಗಿಲಿನ ಮೂಲಕ ಗೌಪ್ಯವಾಗಿ ಕರೆದುಕೊಂಡು ಹೋಗಲಾಗಿದೆ. ಅಂದರೆ ಈ ಹಿಂದೆ ಸ್ಯಾಂಟ್ರೋ ರವಿ ಹೇಳಿಕೆ ನಿಜ ಎನ್ನಬಹುದಾಗಿದೆ.
ರಹಸ್ಯವಾಗಿ ಸ್ಯಾಂಟ್ರೋ ರವಿ ಕರೆದೊಯ್ದ ಪೊಲೀಸರ ವಿರುದ್ಧ HDK ಕಿಡಿ..!
ಸ್ಯಾಂಟ್ರೋ ರವಿಯನ್ನ ಪೊಲೀಸರು ರಹಸ್ಯವಾಗಿ ಕರೆದೊಯ್ದಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲ ಆಗಿದ್ದಾರೆ. Kempegowda international airport limited ( KIAL ) ಬಳಿ ಮಾತನಾಡಿರುವ ಕುಮಾರಸ್ವಾಮಿ, ಪ್ರಧಾನಿ, ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ ಕರೆದೊಯ್ದರು..? ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಜ್ಯ ಪೊಲೀಸ್ರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡ್ತಿದ್ದಾರೆ ಎನಿಸುತ್ತದೆ ಎಂದು ದೂರಿದ್ದಾರೆ. ಇನ್ನು ಗೃಹ ಮಂತ್ರಿಗಳು ಆಹಮದಾಬಾದ್ಗೆ ಹೋಗ್ತಾರೆ, ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನ ವಾಗುತ್ತೆ. ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಾಗಿ ಮೊದಲೇ ರವಿಯನ್ನ ಬಂಧನ ಮಾಡಿದ್ದಾರೆ. ಅವನಿಂದ ಎಲ್ಲಾ ದಾಖಲೆಗಳನ್ನ ಪಡೆದುಕೊಂಡು ಈಗ ಬಂಧನದ ನಾಟಕ ಮಾಡ್ತಿದ್ದಾರೆ ಎಂದಿದ್ದಾರೆ. ಸ್ಯಾಂಟ್ರೋ ರವಿ ಬಳಿ ಇರುವ ಎಲ್ಲಾ ಸಾಕ್ಷಿಗಳನ್ನ ಈಗಾಗಲೇ ನಾಶ ಮಾಡಿರುತ್ತಾರೆ. ಪಿಎಸ್ಐ ಡ್ರಗ್ಸ್ ಕೇಸ್ ರೀತಿಯಲ್ಲೇ ಈ ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ಅನುಮಾನ ಬರುವ ಹಾಗೆ ನಡೆದುಕೊಳ್ತಿದ್ರೆ, ಮತ್ತೊಂದು ಕಡೆ ರಾಜ್ಯ ಪೊಲೀಸರೂ ಕೂಡ ಸ್ಯಾಂಟ್ರೋ ರವಿ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಅನುಮಾನಕ್ಕೆ ಕಾರಣ ಆಗುವಂತೆ ನಡೆದುಕೊಳ್ಳುವ ಮೂಲಕ ಅನುಮಾನಕ್ಕೆ ಪುಷ್ಟಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲೇ ಮಧ್ಯವರ್ತಿಯಾಗಿ ಅಕ್ರಮ ದಂಧೆ ನಡೆಸುತ್ತಾ, ಸಚಿವರ ಕೈ ಬೆಚ್ಚಗೆ ಮಾಡುವ ಕೆಲಸ ಮಾಡ್ತಿದ್ದ ಸ್ಯಾಂಟ್ರೋ ರವಿಗೆ ಸರ್ಕಾರ ಶಿಕ್ಷೆ ನೀಡುತ್ತಾ..? ಅಸಾಧ್ಯವಾದ ಮಾತು ಎನ್ನುತ್ತಿವೆ ವಿಪಕ್ಷಗಳು. ಆದರೆ ಸಚಿವ ಆರ್. ಅಶೋಕ್ ಸೇರಿದಂತೆ ಬೇರೆ ಬೇರೆ ಸಚಿವರು ಮಾತ್ರ, ಯಾರನ್ನೂ ರಕ್ಷಣೆ ಮಾಡುವ ಕೆಲಸ ಮಾಡಲ್ಲ, ತಪ್ಪು ಮಾಡಿದ್ದವರಿಗೆ ಶಿಕ್ಷೆ ಖಂಡಿತ ಎಂದಿದ್ದಾರೆ.
-ಕೃಷ್ಣಮಣಿ