ಬೆಂಗಳೂರು : ಇಂದು ಲೋಕಸಭಾ ಚುನಾವಣೆಯ ಮತ ಹಬ್ಬ(Lok Sabha Election 2024 Phase 2 Voting) ಆರಂಭವಾಗಿದೆ. ಕರುನಾಡಿನ 14 ಕ್ಷೇತ್ರಗಳಲ್ಲಿ ಮತದಾನ (Voting) ಆರಂಭವಾಗಿದೆ.
ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ನಡೆಯಲಿದೆ. ಆಯೋಗವು ಮತದಾನಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಮತದಾನಕ್ಕೂ ಮುನ್ನ ನಾಯಕರು ಮತದಾರರನ್ನು ಸೆಳೆಯಲು ಭರಪೂರ ಭರವಸೆ, ಭಾಷಣದ ಅಬ್ಬರ ನಡೆಸಿದ್ದರು. ಇಂದು ಮತದಾರ ತಮ್ಮ ಹಕ್ಕು ಚಲಾಯಿಸುತ್ತಿದ್ದಾನೆ.
ಇಂದು ಬೆಂಗಳೂರಿನ ನಾಲ್ಕು ಕ್ಷೇತ್ರಗಳೊಂದಿಗೆ ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಾಂಗ್ರೆಸ್‌ನ 14, ಬಿಜೆಪಿಯ 11, ಜೆಡಿಎಸ್ ನ ಮೂವರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಇಂದು ಮತ ಪೆಟ್ಟಿಗೆಯಲ್ಲಿ ಭದ್ರ ಪಡಿಸುತ್ತಾನೆ.
ಒಟ್ಟು 2ಕೋಟಿ 88 ಲಕ್ಷದ 19 ಸಾವಿರದ 342 ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1ಕೋಟಿ 44 ಲಕ್ಷದ 17ಸಾವಿರದ 530 ಪುರುಷ ಮತದಾರರು, 1ಕೋಟಿ 43ಲಕ್ಷದ 87ಸಾವಿರದ 585 ಮಹಿಳಾ ಮತದಾರರಿದ್ದಾರೆ. 30,600 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ಲೈವ್ವೆಬ್ಕಾಸ್ಟ್ ಇರಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
14 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಕ್ಷೇತ್ರಗಳು ಜನರ ಆಕರ್ಷಣೀಯ ಕ್ಷೇತ್ರಗಳಾಗಿವೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇಂದು ಕರ್ನಾಟಕ ಅಷ್ಟೇ ಅಲ್ಲದೇ, ಒಟ್ಟು 13 ರಾಜ್ಯದ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೇರಳ 20, ಮಧ್ಯಪ್ರದೇಶ 06, ಮಹಾರಾಷ್ಟ್ರ 08, ರಾಜಸ್ಥಾನ 13, ಉತ್ತರ ಪ್ರದೇಶದ 8 ಕ್ಷೇತ್ರ ಸೇರಿ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಸ್ಪರ್ಧಿಸಿರುವ ವಯನಾಡಿನಲ್ಲಿ ಕೂಡ ಇಂದೇ ಮತದಾನ ನಡೆಯಲಿದೆ. ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಹಾಲಿ ಸಂಸದ ಶಶಿ ತರೂರ್ ಕಣದಲ್ಲಿದ್ದು, ಅವರ ವಿರುದ್ಧ ಕೇಂದ್ರದ ಹಾಲಿ ಸಚಿವ ರಾಜೀವ್ ಚಂದ್ರಶೇಖರ್ ಕಣದಲ್ಲಿ ಉಳಿದಿದ್ದಾರೆ.