ನಿನ್ನೆಯಷ್ಟೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ರಾಜ್ಯಾದ್ಯಂತ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಚಲಾಯಿಸಿದ್ದಾರೆ. ನಿನ್ನೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆವರೆಗಿತ್ತು. ಆದರೆ ಕೆಲವೆಡೆ ಇನ್ನೇನು ಸಯಮ ಮುಗಿಯಲು ಬಂದಾಗ ಹೆಚ್ಚು ಹೆಚ್ಚು ಮತದಾರರು ಮತಗಟ್ಟೆಗೆ ಬರಲು ಆರಂಭಿಸಿದ್ದರು. ಹಾಗಾಗಿ ಸಂಜೆ 6 ಗಂಟೆ ಮತದಾನದ ಅವಧಿ ಮುಗಿದಿದ್ದರೂ ಬಾಕಿ ಇರುವ ಮತದಾರರ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ರಾತ್ರಿ 10 ಗಂಟೆವರೆಗೂ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. ಈ ಕುರಿತಾಗಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಮತದಾನ ಪ್ರಕ್ರಿಯೆಗೆ 224 ಕ್ಷೇತ್ರಗಳಲ್ಲಿ ಸಹ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಕೆಲ ಕ್ಷೇತ್ರಗಳಲ್ಲಿ ಸಂಜೆಯಾಗುತ್ತಿದ್ದಂತೆ ರಾಜ್ಯದ ಬಹುತೇಕ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದಾರೆ. ಆದರೆ ಅದಕ್ಕೂ ಮುಂಚೆ ಬಂದಿರುವ ಮತದಾರರಿಗೆ ಕೂಪನ್ ನೀಡಿ ಮತಚಲಾವಣೆಗೆ ಅನುವು ಮಾಡಿಕೊಡಲಾಗಿತ್ತು. ಹಾಗಾಗಿ ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ 10 ಗಂಟೆ ಆಗಿದೆ.