ಚುನಾವಣಾ ರಣಾಂಗಣದಲ್ಲಿ ಅಬ್ಬರ, ಕೂಗಾಟ, ಟೀಕೆ, ಟಿಪ್ಪಣಿಗಳ ಬಳಿಕ ಇಂದು ಪೂರ್ವ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಬಂಗಾಳದಲ್ಲಿ ಈವರೆಗೂ ಪ್ರಾದೇಶಿಕ ಪಕ್ಷದ ಆಳ್ವಿಕೆಯಿದೆ. ಆದರೆ ಈ ಬಾರಿಯ ಚುನಾವಣೆಯು ನಾನಾ ಕಾರಣಗಳಿಗೆ ವಿಶೇಷವಾಗಿತ್ತು. ಹೀಗಾಗಿ ಇಂದು ನಡೆಯುತ್ತಿರುವ ಮತದಾನ ಹತ್ತು ಹಲವು ರೀತಿಯ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳ ಇಂದು ಮೊದಲ ಹಂತದಲ್ಲಿ 294 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಏಪ್ರಿಲ್ 29ರಂದು ಮತದಾನ ನಡೆಯಲಿದ್ದು ಎರಡನೇ ಹಂತಕ್ಕೆ ಬಾಕಿ ಉಳಿದಿವೆ. ಇಲ್ಲಿ ಮುಖ್ಯವಾಗಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಬಿಜೆಪಿಯು ರಾಷ್ಟ್ರೀಯತೆ, ಹಿಂದುತ್ವ, ಟಿಎಂಸಿ ಸರ್ಕಾರದ ಭ್ರಷ್ಟಾಚಾರ, ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ವಿಚಾರ ಹಾಗೂ ಮಹಿಳೆಯರ ಸುರಕ್ಷತೆಯ ವಿಷಯಗಳನ್ನು ಮುಂದಿಟ್ಟುಕೊಂಡು ಆಕ್ರಮಣಕಾರಿ ಪ್ರಚಾರ ನಡೆಸಿದೆ.
ಇನ್ನೂ ಬಂಗಾಳಿ ಅಸ್ಮಿತೆ, ಸಸ್ಯಾಹಾರಿ vs ಮಾಂಸಾಹಾರಿ ಸಂಸ್ಕೃತಿ, ಲಕ್ಷ್ಮೀರ್ ಭಂಡಾರ್ (ಮಹಿಳೆಯರಿಗೆ ₹2,000) ಕಲ್ಯಾಣ ಯೋಜನೆಗಳ ಮೇಲೆ ಒತ್ತು ನೀಡಿ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಸಾರುವ ಮೂಲಕ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರಕ್ಕೆ ಮರಳುವ ಉಮೇದಿನಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೇರ ವಾಗ್ದಾಳಿ ನಡೆಸಿ, ಮತಬೇಟೆ ನಡೆಸಿದ್ದಾರೆ.

ಪ್ರಮುಖ ಮತದಾರರ ಪಟ್ಟಿಗಳಿಂದ ಸುಮಾರು 91 ಲಕ್ಷ ಹೆಸರುಗಳನ್ನು ತೆಗೆದುಹಾಕಿರುವುದಕ್ಕೆ ಚುನಾವಣಾ ಆಯೋಗ ಹಾಗೂ ಬಿಜೆಪಿಯನ್ನು ಟಿಎಂಸಿ ಟೀಕಿಸಿದೆ.
ಸುಮಾರು 3.76 ಕೋಟಿ ಮಹಿಳೆಯರಿಗೆ ಬಿಜೆಪಿ ₹3,000 ರೂಪಾಯಿ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ.
ಉಳಿದಂತೆ ಎಡಪಕ್ಷಗಳು ಉತ್ತರ ಬಂಗಾಳ, ಜಂಗಲ್ ಮಹಲ್, ಚಹಾ ಬಾಗಾನ್ ಪ್ರದೇಶಗಳ ಅಭಿವೃದ್ಧಿಯ ವಾಗ್ದಾನವನ್ನೂ ನೀಡಿದೆ.

ಹೀಗಾಗಿ ಬಂಗಾಳದ ಹೈವೋಲ್ಟೇಜ್ ಕಣಗಳಾಗಿ ನಂದಿ ಗ್ರಾಮದಿಂದ ಬಿಜೆಪಿಯ ಸುವೇಂದು ಅಧಿಕಾರಿ, ಬೆರ್ಹಾಂಪುರ್ ಕ್ಷೇತ್ರದಿಂದ ಅಧೀರ್ ರಂಜನ್ ಚೌಧರಿ, ಮಥಾಭಂಗಾ ಕ್ಷೇತ್ರದಿಂದ ನಿಸಿತ್ ಪ್ರಮಾಣಿಕ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಳೆದ 2021ರಲ್ಲಿ ಮಾಡಿದ ತಪ್ಪುಗಳು ಮರುಕಳಿಸಬಾರದೆಂದು ಅವುಗಳಿಂದ ಪಾಠ ಕಲಿತಿರುವ ಬಿಜೆಪಿಯು ಈ ಯೋಜಿತ ಪ್ರಚಾರ ಕಾರ್ಯವನ್ನು ನಡೆಸಿದೆ. ಖುದ್ದು ಅಮಿತ್ ಶಾ ಎರಡರಿಂದ ಮೂರು ವಾರಗಳ ಕಾಲ ಬಂಗಾಳದಲ್ಲಿ ಠಿಕಾಣಿ ಹೂಡಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ, ಚುನಾವಣೆಯ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಚುನಾವಣಾ ರ್ಯಾಲಿಗಳನ್ನು ನಡೆಸಿ ಟಿಎಂಸಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಥಳೀಯ ಸಮಸ್ಯೆಗಳೊಂದಿಗೆ ದಾಳಿ ನಡೆಸಿದ್ದಾರೆ.
ಹೀಗಾಗಿ ಪೂರ್ವ ರಾಜ್ಯದ ಚುನಾವಣಾ ರಣಕಣ ಸಾಕಷ್ಟು ರಂಗು ಪಡೆಯಲು ಕಾರಣವಾಗಿತ್ತು. ಅಲ್ಲದೆ ರಾಜಕೀಯ ಪಕ್ಷಗಳ ನಾಯಕರ ಆರೋಪ – ಪ್ರತ್ಯಾರೋಪಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕಾರಣಕ್ಕೆ ಬಂಗಾಳ ಗಮನ ಸೆಳೆದು ಕುತೂಹಲ ಮೂಡಿಸಿದೆ.






