ಬೆಂಗಳೂರು: ಮೇ 7ಕ್ಕೆ 2ನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತದಾನದ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು (ಮೇ 5) ಸಂಜೆ 6 ಗಂಟೆಗೆ ತೆರೆ ಬಿದ್ದಿದೆ. ಈ ಮೂಲಕ ಧ್ವನಿವರ್ಧಕಗಳು, ಮೈಕ್ ಗಳು, ಬ್ಯಾನರ್ ಗಳು ಮತ್ತು ಮೆಗಾ ರ್ಯಾಲಿಗಳನ್ನು ಬಳಸಿ ಪ್ರಚಾರ ಮಾಡುವಂತಿಲ್ಲ. ಕೇವಲ ಮನೆ ಮನೆ ಪ್ರಚಾರಕ್ಕೆ ಅವಕಾಶ ಇರುತ್ತದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಜಿಲ್ಲೆಗಳಲ್ಲಿ ಚುನಾವಣೆ ಮುಗಿಯುವವರೆಗು ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಬೇರೆ ರಾಜ್ಯಗಳಿಂದಲೂ ಮದ್ಯ ತುರುವುದನ್ನು ಕೂಡ ನಿಷೇಧಿಸಲಾಗಿದೆ.
ಒಟ್ಟು 14 ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ 17 ಜನ ಪುರುಷರು, ಓರ್ವ ಮಹಿಳೆ ಸ್ಪರ್ಧಿಸಿದ್ದಾರೆ. ಬೆಳಗಾವಿಯಲ್ಲಿ 13 ಜನ ಪುರುಷರು, ಬಾಗಲಕೋಟೆಯಲ್ಲಿ 20 ಜನ ಪುರುಷರು, ಇಬ್ಬರು ಮಹಿಳೆಯರು, ವಿಜಯಪುರದಲ್ಲಿ ಆರು ಪುರುಷರು, ಇಬ್ಬರು ಮಹಿಳೆಯರು, ಕಲಬುರಗಿಯಲ್ಲಿ 12 ಜನ ಪುರುಷರು, ಓರ್ವ ಮಹಿಳೆ, ರಾಯಚೂರಿನಲ್ಲಿ ಏಳು ಜನ ಪುರುಷರು, ಓರ್ವ ಮಹಿಳೆ, ಬೀದರ್ 18 ಜನ ಪುರುಷರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 17 ಜನ ಪುರುಷರು, ಇಬ್ಬರು ಮಹಿಳೆಯರು, ಬಳ್ಳಾರಿ 10 ಜನ ಪುರುಷರು, ಹಾವೇರಿಯಲ್ಲಿ 11 ಜನ ಪುರುಷರು ಹಾಗೂ ಮೂವರು ಮಹಿಳಾ ಅಭ್ಯರ್ಥಿಗಳು, ಧಾರವಾಡದಲ್ಲಿ 17 ಜನ ಪುರುಷರು, ಉತ್ತರ ಕನ್ನಡದಲ್ಲಿ 12 ಜನ ಪುರುಷರು ಹಾಗೂ ಓರ್ವ ಮಹಿಳೆ, ದಾವಣಗೆರೆಯಲ್ಲಿ 25 ಜನ ಪುರುಷ ಐವರು ಮಹಿಳೆಯರು, ಶಿವಮೊಗ್ಗದಲ್ಲಿ 21 ಜನ ಪುರುಷರು ಇಬ್ಬರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಗಳವಾರ ಮತದಾರ ಭವಿಷ್ಯ ಬರೆಯಲಿದ್ದಾನೆ.