ಫಾರ್ಮ್ ಗೆ ಬರಲು ಹರಸಾಹಸಪಡುತ್ತಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತೊಂಡೆ ಸಂಧು ನೋವಿನಿಂದ ಬಳಲುತ್ತಿದ್ದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಓವಲ್ ನಲ್ಲಿ ಮಂಗಳವಾರ ನಡೆಯಲಿದೆ. ಸೋಮವಾರ ನಡೆದ ಅಭ್ಯಾಸದಿಂದ ಹೊರಗುಳಿದಿದ್ದು, ಅವರ ಗಾಯದ ಸಮಸ್ಯೆ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಿಲ್ಲ.
ವಿರಾಟ್ ಕೊಹ್ಲಿ ತೊಂಡೆ ಸಂಧು ನೋವಿನಿಂದ ಬಳಲುತ್ತಿದ್ದು, ಅವರ ಆಡುವ ಬಗ್ಗೆ ಪಂದ್ಯಕ್ಕೂ ಮುನ್ನ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಜುಲೈ 14 ಮತ್ತು 17ರಂದು ನಡೆಯುವ ಕೊನೆಯ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಇಂಗ್ಲೆಂಡ್ ವಿರುದ್ಧ ಮೂರನೇ ಟಿ-20 ಪಂದ್ಯದ ವೇಳೆ ಕೊಹ್ಲಿ ಗಾಯಗೊಂಡಿದ್ದರು. ಆದರೆ ಇದು ಬ್ಯಾಟಿಂಗ್ ವೇಳೆಯೋ ಅಥವಾ ಫೀಲ್ಡಿಂಗ್ ವೇಳೆ ಆಗಿದ್ದೋ ಎಂಬುದು ದೃಢಪಟ್ಟಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಅಭ್ಯಾಸದಿಂದ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.
ಕೊಹ್ಲಿ ನಾಟಿಂಗ್ ಹ್ಯಾಂನಿಂದ ತಂಡದ ಬಸ್ ನಲ್ಲಿ ಲಂಡನ್ ಗೆ ಆಗಮಿಸಿರಲಿಲ್ಲ. ಅವರು ಬಹುಶಃ ಆರೋಗ್ಯ ತಪಾಸಣೆಗೆ ಅಲ್ಲಿಯೇ ಉಳಿದಿದ್ದರು ಎನ್ನಲಾಗಿದೆ.
ಭಾರತ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೋಲುಂಡರೆ, ಮೂರು ಪಂದ್ಯಗಳ ಟಿ-20 ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಇದೀಗ ಪ್ರವಾಸದ ಕೊನೆಯ ಏಕದಿನ ಸರಣಿ ಮಂಗಳವಾರದಿಂದ ಆರಂಭಗೊಳ್ಳಲಿದೆ.











