ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಿದ್ದ ವಿಡಿಯೋ ಸಂಬಂಧ ಜೈಲಾಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದು, ಐವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಜೈಲು ಅಧಿಕಾರಿಗಳು ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿದ್ದ ಸರಣಿ ಕೊಲೆಗಾರ, ಅತ್ಯಾಚಾರಿ ಉಮೇಶ್ ರೆಡ್ಡಿ, ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್, ತರುಣ್ ಕೊಂಡೊರು, ಚೋರ್ ಷಾಹೀದ್ ಹಾಗೂ ಕಾರ್ತಿಕ್ @ ಚಿಟ್ಟೆಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆ ವೇಳೆ ವಿಡಿಯೋ ಸಂಬಂದ ಐವರು ಕೂಡ ವಿಡಿಯೋ ಸಂಬಂಧ ತಮ್ಮ ಹೇಳಿಕೆ ನೀಡಿದ್ದಾರೆ.

1.ಸಜಾ ಬಂಧಿ ಉಮೇಶ್ ರೆಡ್ಡಿ ವಿಚಾರಣೆ ನಡೆಸಿದಾಗ ಆತ ತಾನು ಜೈಲಿನಲ್ಲಿ ಪೋನ್ ನಲ್ಲಿ ಮಾತಾಡಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆದರೆ ತಾನು 2023ರಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರು ಜೈಲಿಗೆ ವರ್ಗಾವಣೆಯಾಗಿ ಬಂದಿದ್ದು, 2023 ಜೂನ್/ಜುಲೈನಲ್ಲಿ ಸಜಾಬಂದಿ ಖೈದಿ ವಡ್ಡನಾಗ ತನಗೆ ಪೋನ್ ನೀಡಿದ್ದ. ತಾಯಿಯ ಜೊತೆ ಮಾತನಾಡಲು ಬಲವಂತ ಮಾಡಿದ್ದಕ್ಕೆ ಮಾತಾಡಿದ್ದಾಗಿ, ಈ ವೇಳೆ ಯಾರೋ ಗೊತ್ತಿಲ್ಲದೆ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.
2.ಜೈಲಿನಲ್ಲಿ ಕೈಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ವಿಚಾರಣೆ ಮಾಡಿದಾಗ, ಆತ ಎರಡು ವರ್ಷಗಳ ಹಿಂದೆ ಬಂಧಿಯೊಬ್ಬ ಮೊಬೈಲ್ ನೀಡಿದ್ದ. ಮೊಬೈಲ್ ಕೈಯಲ್ಲಿ ಹಿಡಿದಿದ್ದೆ ವಿನಾಃ, ಪೋನ್ ನಲ್ಲಿ ಮಾತನಾಡಿಲ್ಲ. ಪುನಃ ಮೊಬೈಲ್ ವಾಪಸ್ ಕೊಟ್ಟಿದ್ದೆ, ಮೊಬೈಲ್ ಕೊಟ್ಟವನು ಯಾರು ಅಂತಾ ನೆನಪಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

3. ಸ್ಮಗ್ಲಿಂಗ್ ಆರೋಪಿ ತರುಣ್ ಕೊಂಡೂರು ರಾಜು ವಿಚಾರಣೆ ವೇಳೆ ಮೊಹಮ್ಮದ್ ಪಾಜೀಲ್ ಖಾನ್ ಎಂಬಾತ 6 ತಿಂಗಳ ಹಿಂದೆ ಮೊಬೈಲ್ ನೀಡಿ ನೆಟ್ವರ್ಕ್ ಬರ್ತಿಲ್ಲ ನೋಡಿಕೊಡು ಎಂದಿದ್ದ. ಅದನ್ನ ನೋಡಿ ಪುನಃ ವಾಪಸ್ ನೀಡಿದ್ದೆ. ಮೊಬೈಲ್ ಕೈಯಲ್ಲಿ ಹಿಡಿದಿದ್ದನ್ನ ಯಾರೋ ವಿಡಿಯೋ ಮಾಡಿದ್ದರು. ಬಳಿಕ ಆತ ನನಗೆ ಆಗಾಗ ಹಣ ನೀಡುವಂತೆ ಪೀಡಿಸುತ್ತಿದ್ದ. ನಾನು ಹಣ ನೀಡಲು ನಿರಾಕರಿಸಿದ್ದೆ, ಈ ವಿಚಾರ ಅಧಿಕಾರಿಗಳಿಗೂ ಹೇಳಿರುವುದಿಲ್ಲ ಎಂದಿದ್ದಾನೆ.
4. ವೈರಲ್ ವಿಡಿಯೋದಲ್ಲಿ ವರಂಡಾದಲ್ಲಿ ಕುಳಿತಿದ್ದ ಷಾಹೀದ್ ಖಾನ್ ಅಲಿಯಾಸ್ ಚೋರ್ ಷಾಹೀದ್ ವಿಚಾರಣೆ ವೇಳೆ, ನಾನು 3-4 ಬಾರಿ ಜೈಲಿಗೆ ಬಂದಿದ್ದೇನೆ. ಮಾದಕ ವಸ್ತು ಕೇಸಿನಲ್ಲಿ 2024 ರಲ್ಲಿ ಜೈಲಿಗೆ ಬಂದಿದ್ದು, ಯಾವುದೇ ಮೊಬೈಲ್ ಫೋನ್ ಬಳಸಿಲ್ಲ, ವರಾಂಡದಲ್ಲಿ ಕುಳಿತಿರುವ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

5.ಜೈಲಿನ ಬ್ಯಾರಕ್ ನಲ್ಲಿ ಡ್ರಮ್ ಬಾರಿಸಿ ಡ್ಯಾನ್ ಮಾಡಿದ್ದು ವಿಚಾರಣಾ ಕೈದಿಗಳಾದ ಮಂಜುನಾಥ್ @ ಕೋಳಿ ಮಂಜ, ಚರಣ್ ರಾವ್, ಧನಂಜಯ್, ಕಾರ್ತಿಕ್ @ ಚಿಟ್ಟೆ ಅನ್ನೋದು ಗೊತ್ತಾಗಿದೆ. ಆದರೆ ಕೋಳಿ ಮಂಜ 2022ರಲ್ಲೇ ಬಿಡುಗಡೆ ಆಗಿದ್ದು, ಚರಣ್ ರಾವ್ 2025 ರ ಮಾರ್ಚ್ ನಲ್ಲಿ ಬಿಡುಗಡೆಯಾಗಿದ್ದಾನೆ. ಧನಂಜಯ ವಿಡಿಯೋ ವೈರಲ್ ಆದ ಎರಡು ದಿನದ ಮುಂಚೆ ಅಂದ್ರೆ ನ. 7 ರಂದು ಬಿಡುಗಡೆಯಾಗಿದ್ದ. ಇನ್ನು ಕಾರ್ತಿಕ್ @ ಚಿಟ್ಟೆ ಇನ್ನು ಜೈಲಿನಲ್ಲಿದ್ದು, ಆತನ ವಿಚಾರಣೆ ವೇಳೆ ವೈರಲ್ ವಿಡಿಯೋ 3-4. ವರ್ಷಗಳ ಹಿಂದೆ ಮಾಡಿರಬಹುದು ಎಂದು ಹೇಳಿಕೆ ನೀಡಿದ್ದಾನೆ.
ಸದ್ಯ ಜೈಲು ಅಧಿಕಾರಿಗಳು ಈ ಐವರ ಹೇಳಿಕೆ ದಾಖಲಿಸಿದ್ದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

