‘ಗುಡ್ಡಕ್ಕ ಹೋಗಿದ್ಯಾ ಗುಲಗಂಜಿ ತಂದಿದ್ಯಾ ಎಂದ
ಬರ್ತಿ ಗುಳ್ಳವ್ವಾ.. ಗುಳ್ಳವ್ವ…
ಹೋಗಿ ಬಾ ಗುಳ್ಳವ್ವಾ… ಗುಳ್ಳವ್ವ….
ಸಾಗಿ ಬಾ ಗುಳ್ಳವ್ವಾ… ಗುಳ್ಳವ್ವ…
ಗುಳ್ಳವ್ವನ ಗಂಡ ಒಣಕಿ ಮಂಡ ತಳವರ ತಂಡ ಹೋಗಾನಿನ ಹುಚ್ಚನನಾ ಹಾ…” – ಎಂದು ತಮ್ಮ ಗ್ರಾಮೀಣ ಭಾಷೆಯ ಸೊಗಡಿನಲ್ಲಿ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಇಲ್ಲಿ ಆಚರಿಸುತ್ತಿದ್ದಾರೆ.
ಜಕ್ಕಲಿ ಗ್ರಾಮದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಗ್ರಾಮೀಣ ಸೊಗಡಿನ ಈ ಗುಳ್ಳವ್ವನ ಹಬ್ಬ ಬಂತೆಂದರೆ ಸಾಕು ಮಕ್ಕಳಿಗೆ ಸಡಗರ ಸಂಭ್ರಮವೋ ಮನೆ ಮಾಡಿರುತ್ತದೆ ಶಾಲೆ ಇರಲಿ ಇಲ್ಲದಿರಲಿ ಆಷಾಡ ಮಾಸದ ಪ್ರತಿ ಮಂಗಳವಾರ ಸಂಜೆ ಜಾನಪದ ಹಿನ್ನೆಲೆಯಲ್ಲಿ ಈ ಹಾಡುಗಳನ್ನು ಹಾಡುತ್ತ ಊರ ಸಮೀಪದ ಗುಳ್ಳವ್ವನ ಕೆರೆಯಿಂದ ತಂದಿದ್ದ ಎರೇ ಮಣ್ಣಿನಿಂದ ಗುಳ್ಳವ್ವ ಹಾಗೂ ಗೊಗ್ಗಪ್ಪನ ಗೊಂಬೆಗಳನ್ನು ತಯಾರಿಸಿ ಹಬ್ಬವನ್ನು ಹೀಗೆ ಮಣ್ಣಿತ್ತಿನ ಅಮಾವಾಸ್ಯೆಯಿಂದ ನಾಗರ ಅಮಾವಾಸ್ಯೆವರೆಗೆ ಬರುವ ಪ್ರತಿ ಮಂಗಳವಾರ ಮೆಣಸಿಗಿಯವರ ಓಣಿಯ ಮಕ್ಕಳು ಪಲ್ಲೇದವರ ಮನೆ ಬಂಕದ ಕಟ್ಟಿಯಲ್ಲಿ ಈ ಮೂರ್ತಿಗಳನ್ನು ಪ್ರತಿಷ್ಠಾಪಿಸುವರು, ಗುಳ್ಳವ್ವನಿಗೆ ಗುಲಗಂಜಿ. ಜೋಳಾ. ಬಿಳಿ ಕುಸುಬಿಯನ್ನು ಚುಚ್ಚಿ ಅರಿಷಿಣ ಕುಂಕುಮ ಹಚ್ಚಿ ಹೂಮಾಲೆ ಕೊರಳಿಗೆ ಹಾಕಿ. ಸೀರೆ. ರವಿಕೆ ನಡುಪಟ್ಟು ಕಿವಿಯೋಲೆ, ಕೊರಳು ದಾಗಿಣ ವಿಶಿಷ್ಟ ಶೃಂಗಾರ ಮಾಡುತ್ತಾರೆ.
ಗುಳ್ಳವ್ವನ ಮಗ್ಗುಲಿಗೆ ಗೊಗ್ಗಪ್ಪನ ಮೂರ್ತಿ ಕುಳ್ಳಿರಿಸಿ ಅವನ ಬಾಯಿಯಲ್ಲಿ ಬೀಡಿ ಅಥವಾ ಸಿಗರೇಟು ಇಟ್ಟು ವ್ಯಂಗ್ಯ ಮಾಡುವುದು ಸಂಪ್ರದಾಯ. ಸಂಪ್ರದಾಯದಂತೆ ಈ ವರ್ಷವೂ ಸಹ 2 ನೇ ವಾರದ ಹಬ್ಬವನ್ನು ಆಚರಿಸಲಾಯಿತು. ನಾಳೆ ಮಂಗಳವಾರ 3 ನೇ ವಾರದ ಹಬ್ಬವನ್ನು ಆಚರಿಸುತ್ತಾರೆ.
ಚಿತ್ರ ವಿಚಿತ್ರ ನಂಬಿಕೆ ಇಟ್ಟಕೊಂಡು ಬಂದಿರುವ ನಮ್ಮ ಉತ್ತರ ಕರ್ನಾಟಕದ ಕೃಷಿಕರು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸಲ್ಪಡುವ ಈ ಹಬ್ಬವು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ನಂತರ ಬರುವ ಈ ಗುಳ್ಳವ್ವ ಗೊಗ್ಗಪ್ಪನ ಗೊಂಬೆ ಹಬ್ಬವನ್ನು ಹೀಗೆ ಆಚರಣೆ ಮಾಡುತ್ತಾರೆ, ಗ್ರಾಮೀಣ ವೈವಿಧ್ಯಮಯ ಆಚರಣೆ, ನಂಬಿಕೆ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಗುಳ್ಳವ್ವನ ಪೂಜೆ ಮಹತ್ವ ವೆನಿಸುತ್ತದೆ, ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳ ಫಸಲು ಫಲವತ್ತತೆಯಿಂದ ರೈತರಿಗೆ ಸಿಗುವಂತಾಗಲಿ, ರೈತನ ಬಾಳು ಹಸನಾಗಲಿ ಎಂದು ರಾತ್ರಿ ವೇಳೆ ಶ್ರದ್ದಾ ಭಕ್ತಿಯಿಂದ ವಿಶೇಷವಾಗಿ ಎಡೆ ಹಿಡಿದು ಪೂಜೆ ಸಲ್ಲಿಸಿದರು, ಇದಾದ ಬಳಿಕ ಗೊಂಬೆ ಮೂರ್ತಿಗಳ ಹತ್ತಿರ ಸೇರಿದ ಮಕ್ಕಳೆಲ್ಲರೂ ಜಾತಿ ಮತ ಪಂಥ ಭೇದವಿಲ್ಲದೆ ಒಟ್ಟಾಗಿ ಕುಳಿತು ತಮ್ಮ ತಮ್ಮ ಮನೆಗಳಿಂದ ತಂದಿದ್ದ ಚೊಂಚಲಾ, ದೋಸೆ ಹಾಗೂ ನಾನಾ ಸಿಹಿ ಅಡುಗೆಗಳನ್ನು ಸವಿ ಭೋಜನ ಮಾಡಿದರು, ಹಿರಿಯ ರೈತ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಬಸವಣ್ಣನವರ ವಚನಗಳನ್ನು ಮತ್ತು ಗುಳ್ಳವ್ವ ಗೊಗ್ಗಪ್ಪನ ಪದಗಳನ್ನು ಹಾಡಿದರು,
ಮೊದಲನೇ ವಾರ ಒಂದು ಬಾಗಿಲಿನ ನಾಲ್ಕು ಕಂಬಗಳ ಮನೆ,
ಎರಡನೇ ವಾರ ಎರಡು ಬಾಗಿಲಿನ ಎಂಟು ಕಂಬಗಳ ಮನೆ,
ಮೂರನೇ ವಾರ ಮೂರು ಬಾಗಿಲಿಗೆ ಹನ್ನೆರಡು ಕಂಬಗಳ ಮನೆ,
ನಾಲ್ಕನೇ ವಾರಕ್ಕೆ ನಾಲ್ಕು ಬಾಗಿಲಿನ ಹದಿನಾರು ಕಂಬಗಳ ಮನೆ ಮಣಿ ಮೇಲೆ ಏರುಸುತ್ತಾ ಮನೆ ನಿರ್ಮಿಸುವರು
ಗ್ರಾಮೀಣ ಜನತೆಗೆ ಆಚರಣೆಗಳಲ್ಲಿ ನಂಬಿಕೆ ಇದೆ, ಹೀಗಾಗಿ ಇಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ ಈ ಹಿಂದೆ ಪೂಜೆ ಸಲ್ಲಿಸಿದಾಗಲೆಲ್ಲ ಮಳೆಯಾಗಿತ್ತೆಂಬ ನಂಬಿಕೆ ಇದೆ, ಅದೇ ರೀತಿ ಈಗ ಮಳೆಯಾದಲ್ಲಿ ಆಚರಣೆಗಳಿಗೆ ಒಂದು ಬೆಲೆ ಬರುತ್ತದೆ.
– ಸಂಗಮೇಶ ಮೆಣಸಿಗಿ
ಪ್ರತಿ ಮಂಗಳವಾರ ಪ್ರತಿಷ್ಠಾಪಿದ ಮೂರ್ತಿಗಳನ್ನು ಬುಧವಾರ ಹೊತ್ತು ಮುಳುಗುವ ಮುನ್ನ ಮಕ್ಕಳೆಲ್ಲರೂ ಅಗಸರ ಹಳ್ಳದಲ್ಲಿರಿಸಿ ಪೂಜೆ ಸಲ್ಲಿಸಿ ದಫನ್ ಮಾಡಲಾಗುತ್ತದೆ ಎಂದು ಹಿರಿಯ ರೈತ ಮಹಿಳೆ ಈರವ್ವ ಪಲ್ಲೇದ ಈ ಹಬ್ಬದ ವೈಶಿಷ್ಟ್ಯಗಳನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳಾದ ಕೀರ್ತಿ ಮೆಣಸಿಗಿ, ಇವಳ ನೇತೃತ್ವದಲ್ಲಿ ದೀಪಾ ಜಾಲಿಹಾಳ, ಶಿವು ಮೆಣಸಿಗಿ, ಸಂಜನಾ ಆದಿ, ಲಕ್ಷ್ಮೀ ಮಡಿವಾಳರ, ವಿನಯ್ ನರೇಗಲ್ಲ, ಐಶ್ವರ್ಯ ಉಮತಾರ, ಶೋಭಾ ಜೋಗಿ, ವಿಜಯ ನರೇಗಲ್ಲ, ಸಾನ್ವಿ ಮೆಣಸಿಗಿ, ಕಾರ್ತಿಕ್ ಹೂಗಾರ, ಪ್ರತೀಕ್ಷಾ ಮಂಗಳಗುಡ್ಡ, ಶಿದ್ದಲಿಂಗಮ್ಮ ಅಂಗಡಿ, ಹಿರಿಯ ಮಹಿಳೆಯರಾದ ನಂದಾ ಮೆಣಸಗಿ, ದೇವಕ್ಕಾ ಪಲ್ಲೇದ, ಶಿಲ್ಪಾ ಮೆಣಸಿಗಿ, ಶಾಂತಾ ಮೆಣಸಿಗಿ, ಶಾರದಾ ಬುಳ್ಳಾ, ಶರಣಮ್ಮ ನರೇಗಲ್ಲ, ಅನ್ನಪೂರ್ಣ ಬಳಗೇರ, ವಿಜಯಲಕ್ಷ್ಮೀ ಪಲ್ಲೇದ, ಬಸವಣ್ಣೆಮ್ಮ ನರೇಗಲ್ಲ, ಸಾವಿತ್ರಿ ವಾಲಿ, ಮಲ್ಲಮ್ಮ ಹೂಗಾರ ಇನ್ನಿತರರು ಭಾಗವಹಿಸಿದ್ದರು.
Reactions
ಆಧುನಿಕ ಯುಗದಲ್ಲಿ ಇಂತಹ ಹಬ್ಬ ಹರಿದಿನಗಳ ಆಚರಣೆ ಬಗ್ಗೆ ನಿರ್ಲಕ್ಷ್ಯೆ ಹೊಂದಿರುವ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಹಿರಿಯರ ಕರ್ತವ್ಯ ಇಂದಿಗೂ ಅವುಗಳನ್ನು ಆಚರಣೆಗಳ ಮೂಲಕ ಜನರಲ್ಲಿ ಹಬ್ಬಗಳ ವೈಶಿಷ್ಟ್ಯತೆ ಹಾಗೂ ಸರಳತೆಯ ಜಾನಪದ ಸಾಹಿತ್ಯದ ಸದಭಿರುಚಿ ಉಣಬಡಿಸುವ ಕಾಯಕ ನಮ್ಮದಾಗಿದೆ
– ಎನ್ ಎಸ್ ಮೆಣಸಿಗಿ
–ಕೆ. ಶ್ರೀಕಾಂತ್