ರಾಜ್ಯ ರೈತಸಂಘದ ಜೊತೆಗೂಡಿ ಗ್ರಾಮಸಂಪರ್ಕ ಅಭಿಯಾನದ ಮೂಲಕ ಆಮ್ ಆದ್ಮಿ ಪಾರ್ಟಿಯು ಹಳ್ಳಿಗಳನ್ನು ತಲುಪಲಿದೆ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹೇಳಿದರು.
ಬೆಂಗಳೂರಿನ ಸಿಟಿ ಸೆಂಟರ್ ಹೋಟೆಲ್ನಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯು ಗುರುವಾರ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
“ಗ್ರಾಮಸಂಪರ್ಕ ಅಭಿಯಾನದ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಆಮ್ ಆದ್ಮಿ ಪಾರ್ಟಿಯು ಆದ್ಯತೆ ನೀಡಲಿದೆ. ಹಳ್ಳಿಹಳ್ಳಿಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಎಎಪಿಗೆ ಬೆಂಬಲ ಸೂಚಿಸಿರುವ ರಾಜ್ಯ ರೈತ ಸಂಘದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಪಕ್ಷಕ್ಕೆ ನೆರವಾಗಲಿದ್ದಾರೆ. ಗ್ರಾಮೀಣ ಜನರು, ಅದರಲ್ಲೂ ವಿಶೇಷವಾಗಿ ರೈತರು ಆಮ್ ಆದ್ಮಿ ಪಾರ್ಟಿಗೆ ಆನೆಬಲ ತಂದುಕೊಡಲಿದ್ದಾರೆ. ನಾಡಿನ ರೈತರು ಹಾಗೂ ಸಾಮಾನ್ಯ ಜನರ ಆಶೀರ್ವಾದದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬರಲಿದೆ” ಎಂದು ದಿಲೀಪ್ ಪಾಂಡೆ ಹೇಳಿದರು.
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯಗಳು ಸೇರಿದಂತೆ ಎಲ್ಲ ವಲಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕಾಲಕ್ಕೆ ತಕ್ಕಂತಹ ಸುಧಾರಣೆ ತರುವುದರಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಭ್ರಷ್ಟಾಚಾರ ಮಾಡಿ, ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುವುದಕ್ಕಾಗಿ ಬಿಜೆಪಿಯು ಆಡಳಿತ ನಡೆಸುತ್ತಿದೆ. ಜನರ ಬೇಕುಬೇಡಗಳನ್ನು ಅರ್ಥ ಮಾಡಿಕೊಂಡು ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ರಾಜ್ಯದ ಜನತೆ ಚಿಂತನೆ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಇಡೀ ದೇಶಕ್ಕೆ ಎಎಪಿ ಒಂದೇ ಭರವಸೆ. ಸಾಮಾನ್ಯ ಜನರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದು ಎಂಬುದನ್ನು ಕಳೆದ 10 ವರ್ಷಗಳಲ್ಲಿ ಆಮ್ ಆದ್ಮಿ ಪಾರ್ಟಿ ತೋರಿಸಿಕೊಟ್ಟಿದೆ. ಅಧಿಕಾರ ಸಿಕ್ಕ ರಾಜ್ಯಗಳಲ್ಲಿ ಹೇಗೆ ಕೆಲಸ ಮಾಡಿದ್ದೇವೆ ಎಂಬುದನ್ನು ಜನರು ನೋಡಿದ್ದಾರೆ. ಆರಂಭದ ದಿನಗಳಲ್ಲಿ ಎಎಪಿಯನ್ನು ನೋಡಿ ಜನರು ನಗುತ್ತಿದ್ದರು. ಈಗ ಸ್ವಯಂಪ್ರೇರಿತರಾಗಿ ಪಕ್ಷ ಸೇರುತ್ತಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಈಗಿನ ರಾಜಕೀಯ ಪರಿಸ್ಥಿತಿ ಹೀನಾಯ ಸ್ಥಿತಿ ತಲುಪಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ರಾಜ್ಯಕ್ಕೆ ಆಮ್ ಆದ್ಮಿ ಪಾರ್ಟಿಯ ಅಗತ್ಯವಿದೆ. ಹಳ್ಳಿಗಳಲ್ಲಿ ತಂಡಗಳನ್ನು ಕಟ್ಟಿ, ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗೆ ಉತ್ತರ ನೀಡಬೇಕಿದೆ” ಎಂದು ಹೇಳಿದರು.