• Home
  • About Us
  • ಕರ್ನಾಟಕ
Thursday, October 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಗ್ರಾಮ ಭಾರತ – ಕಟ್ಟುವ ಕನಸು ನನಸಾದಾಗ

ನಾ ದಿವಾಕರ by ನಾ ದಿವಾಕರ
October 20, 2025
in Top Story, ಕರ್ನಾಟಕ, ಜೀವನದ ಶೈಲಿ, ದೇಶ, ವಾಣಿಜ್ಯ, ವಿಶೇಷ
0
ಗ್ರಾಮ ಭಾರತ – ಕಟ್ಟುವ ಕನಸು ನನಸಾದಾಗ
Share on WhatsAppShare on FacebookShare on Telegram

ಪ್ರಗತಿ-ಅಭಿವೃದ್ಧಿಯ ವ್ಯಾಖ್ಯಾನಗಳಲ್ಲಿ ಮರೆಯಾಗಿರುವ ಗ್ರಾಮೀಣ ಭಾರತದ ಒಂದು  ದೃಶ್ಯ

ADVERTISEMENT

ನಾ ದಿವಾಕರ

ಒಂದು ದೇಶವನ್ನು ಸ್ವಾವಲಂಬಿಯಾಗಿ ಕಟ್ಟುವ ಕನಸು ಸಹಜವಾಗಿ ಸಮಸ್ತ ಜನತೆಗೆ ಇರುವಂತೆಯೇ ಬದಲಾಗುತ್ತಲೇ ಹೋಗುವ ವಾಸ್ತವಗಳ ನೆಲೆಯಲ್ಲಿ ಆಳುವ ವರ್ಗಗಳಿಗೂ ಇರುತ್ತದೆ. ಆದರೆ ಈ ಎರಡು ಕನಸುಗಳ ನಡುವೆ ಒಂದು ಅತಿಸೂಕ್ಷ್ಮ ವ್ಯತ್ಯಾಸವೂ ಇರುತ್ತದೆ. ತತ್ವ-ಸಿದ್ಧಾಂತ-ಮಾದರಿ-ಪಕ್ಷಗಳನ್ನು ಮೀರಿ  ನೋಡಿದಾಗ ಆಳುವವರಿಗೆ ಸ್ವಾವಲಂಬನೆ ಎನ್ನುವುದು ಅಸ್ತಿತ್ವವಾದಿ ನೆಲೆಯಲ್ಲಿ, ಭೌಗೋಳಿಕ ರಕ್ಷಣೆಯ ಚೌಕಟ್ಟಿನಲ್ಲಿ ಮತ್ತು ತಮ್ಮ ನಿರ್ದಿಷ್ಟ ಮುನ್ನಡೆ-ಭವಿಷ್ಯದಲ್ಲಿ ಉಳಿದುಕೊಳ್ಳಲು ಅಗತ್ಯವಾದ ಸುಭದ್ರ ತಳಪಾಯದಂತೆ ಕಾಣುತ್ತದೆ. ಸರ್ವತೋಮುಖ ಅಭಿವೃದ್ಧಿ ಎಂಬ ಆಡಳಿತಾತ್ಮಕ ಪರಿಭಾಷೆಯನ್ನು ಒಡೆದು ನೋಡಿದಾಗ, ಅಲ್ಲಿ ಮುಖ್ಯವಾಗಿ ಕಾಣುವುದು ಆರ್ಥಿಕ ಪ್ರಗತಿ, ಜನರ ಜೀವನಶೈಲಿಯ ಮೇಲ್‌ ಚಲನೆ, ಮೂಲ ಸೌಕರ್ಯಗಳ ಉನ್ನತೀಕರಣ ಹಾಗೂ ಆಡಳಿತ ನಡೆಸಲು ಅಗತ್ಯವಾದ ಆರ್ಥಿಕತೆಯ ಮುಂಚಲನೆ.

 ಇದರಿಂದ ಭಿನ್ನವಾಗಿ, ತಳಸಮಾಜವನ್ನು ಪ್ರತಿನಿಧಿಸುವ ಮತ್ತು ಅಲ್ಲಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಬಹುಸಂಖ್ಯಾತ ಜನತೆಗೆ ಸುಸ್ಥಿರ ವೈಯುಕ್ತಿಕ ಬದುಕಿನ, ಸುಗಮ ಜೀವನೋಪಾಯ ಮಾರ್ಗಗಳ, ಕೂಡಿ ಬಾಳುವ-ಹಂಚಿ ತಿನ್ನುವ ವಾತಾವರಣ, ಜಾತಿ-ಮತ-ಭಾಷಾ ಅಸ್ಮಿತೆಗಳ ಬೇಲಿಗಳಿಲ್ಲದ  ಸೌಹಾರ್ದ ಸಮಾಜ ಹಾಗೂ ತಮ್ಮ ಶ್ರಮ-ದುಡಿಮೆಗೆ ತಕ್ಕಂತೆ ದೊರೆಯಬೇಕಾದ ಫಸಲು-ಆದಾಯ ಇವುಗಳು ಸ್ವಾವಲಂಬನೆಯನ್ನು ನಿರ್ವಚಿಸುವ ಆಕರಗಳಾಗುತ್ತವೆ. ಇಲ್ಲಿ ಸರ್ವತೋಮುಖ ಅಥವಾ ಸರ್ವಾಂಗೀಣ ಪದಕ್ಕೆ ಜೋಡಣೆಯಾಗುವುದು ಅಭಿವೃದ್ಧಿ-ಪ್ರಗತಿ ಅಲ್ಲ ಬದಲಾಗಿ, ಬೆಳವಣಿಗೆ. ಅಂದರೆ ತಾವು ಬದುಕು ಸವೆಸುವ ಸಮಾಜ ಬೆಳವಣಿಗೆಯಾಗುವುದು ಎಂದರೆ ಭೌತಿಕವಾಗಿ ಈಗಿರುವ ಸ್ಥಿತಿಗಿಂತಲೂ ಉನ್ನತ ಸ್ಥಿತಿ ತಲುಪುವುದು, ಬೌದ್ಧಿಕವಾಗಿ ಸಮಾಜ-ಜೀವನವನ್ನು ನೋಡುವ ದೃಷ್ಟಿಯಲ್ಲಿ ಗತವನ್ನು ಹಿಂದಿಕ್ಕಿ ಭವಿತವ್ಯದತ್ತ ಹೆಜ್ಜೆ ಹಾಕುವುದು.

Belagavi DCC Bank Election : ಜಾತಿ ಟ್ರಂಪ್ ಕಾರ್ಡ್ ವರ್ಕೌಟ್ ಆಗಿಲ್ಲ ಜನ ಉತ್ತರ ಕೊಟ್ಟಿದ್ದಾರೆ..! #pratidhvani

 ಅಡ್ಡಬೇಲಿಗಳನ್ನು ದಾಟಿ ನಡೆದಾಗ

 ಈ ಹೆಜ್ಜೆಗಳು ಅನುಸರಿಸುವ ಹಾದಿಯಲ್ಲಿ ಅಜ್ಞಾನ-ಅರೆಜ್ಞಾನದ ಗಿಡಗಂಟಿಗಳನ್ನು ತೆರವುಗೊಳಿಸಿ, ಅರಿವಿನ ವೃಕ್ಷಗಳನ್ನು ಬೆಳೆಸುವ ಮೂಲಕ, ಭವಿಷ್ಯದ ತಲೆಮಾರಿಗೆ ಶಾಶ್ವತವಾದ ಹಸಿರು ದಾರಿಗಳನ್ನು ನಿರ್ಮಿಸುವುದು ತಳಸಮಾಜದ ಆಶಯವಾಗಿರುತ್ತದೆ. ಹಾಗಾಗಿಯೇ ಎಂತಹುದೇ ಸಮಾಜದಲ್ಲಿ ಆತ್ಮತೃಪ್ತಿ ಎನ್ನುವ ಔದಾತ್ಯವೇನಾದರೂ ಕಾಣುವುದಾದರೆ ಅದು ತಳಸಮಾಜದ ದುಡಿಯುವ ಜನತೆಯಲ್ಲಿ ಮಾತ್ರ ಕಾಣುತ್ತದೆ. ಇಲ್ಲಿ ವೈಚಾರಿಕ ಆಲೋಚನೆ, ವೈಜ್ಞಾನಿಕ ಚಿಂತನೆಗಳಿಗಿಂತಲೂ, ನಿತ್ಯ ಬದುಕಿನ ಅನುಭವಗಳ ನಡುವೆಯೇ ಜೀವನಾದರ್ಶಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಆಳವಾಗಿ ನೋಡಿದಾಗ ಈ ಮನೋಭಾವವನ್ನು ಗ್ರಾಮ ಭಾರತದಲ್ಲಿ ಇಂದಿಗೂ ಕಾಣಬಹುದು. ಅಭಿವೃದ್ಧಿಯ ಪಥದಲ್ಲಿ ಗ್ರಾಮಗಳ ಬಾಹ್ಯ ಸ್ವರೂಪ ಬದಲಾಗಿದ್ದರೂ, ಆಂತರಿಕವಾಗಿ ಅಲ್ಲಿ ಬದುಕು ಕಟ್ಟುವ ಸಮಸ್ಯೆ-ಸವಾಲುಗಳು ಜೀವಂತವಾಗಿದ್ದು, ಬಡತನ, ಹಸಿವೆ, ಕೊರತೆ ಮತ್ತು ಆತಂಕಗಳ ನಡುವೆ ಗ್ರಾಮೀಣ ಜೀವನ ಸಾಗುತ್ತಿದೆ.

 ಈ ಸವಾಲುಗಳನ್ನು ಅರಿತು, ಗ್ರಾಮ ಭಾರತದ ತಳಸಮಾಜಗಳೊಡನೆ ಬೆರೆತು, ಅವರ ಜೀವನಾವಶ್ಯಕತೆಗಳನ್ನು ಗಮನಿಸಿ, ಸಾಂವಿಧಾನಿಕ ಸೌಕರ್ಯ , ಸವಲತ್ತುಗಳ ಮೂಲಕವೇ, ಗ್ರಾಮೀಣ ಬದುಕನ್ನು ಸುಧಾರಿಸುವ, ಉತ್ತಮಪಡಿಸುವ ಪ್ರಯತ್ನಗಳು ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಹೇರಳವಾಗಿ ದಾಖಲಾಗಿವೆ. ಅರುಣಾ ರಾಯ್‌, ರಾಜೇಂದ್ರ ಸಿಂಗ್‌ ಮೊದಲಾದವರು ಪ್ರಾಯೋಗಿಕವಾಗಿ ಅನುಸರಿಸಿದ ಗಾಂಧಿ ಪರಿಕಲ್ಪನೆಯ ಗ್ರಾಮ ಭಾರತದ ಉನ್ನತೀಕರಣದ ಮಾದರಿಗಳು ಯಶಸ್ವಿಯಾಗಿದ್ದು, ಗಾಂಧಿಯವರನ್ನು ನಿರಾಕರಿಸುವ ವರ್ಗಗಳ ಆಟಾಟೋಪಗಳ ನಡುವೆಯೂ, ಗಾಂಧಿ ಪ್ರಣೀತ ಗ್ರಾಮೀಣಾಭಿವೃದ್ಧಿಯ ಮಾದರಿಗಳನ್ನು ದೇಶದ ಮುಂದಿರಿಸಿದ್ದಾರೆ. ಕರ್ನಾಟಕದಲ್ಲೂ ಅಂತಹುದೇ ಒಂದು ಮಾದರಿಯನ್ನು ಧಾರವಾಡದ ಡಾ. ಪ್ರಕಾಶ್‌ ಭಟ್‌ ಅವರ ಪ್ರಾಯೋಗಿಕತೆ ಮತ್ತು ಯಶೋಗಾಥೆಯಲ್ಲಿ ಕಾಣಬಹುದು.

 ಕಷ್ಟ ಸುಖಗಳ ಯಶೋಗಾಥೆ

 ಈ ಯಶೋಗಾಥೆಯನ್ನು ಡಾ. ಪ್ರಕಾಶ್‌ ಭಟ್‌ ತಮ್ಮ “ ಹಳ್ಳಿಗಳನ್ನು ಕಟ್ಟುವ ಕಷ್ಟಸುಖ  ” ಎಂಬ ಅಮೂಲ್ಯ ಕೃತಿಯ ಮೂಲಕ ಕನ್ನಡದ ಓದುಗರ, ಕಾರ್ಯಕರ್ತರ, ಸಮಾಜಮುಖಿ ಚಿಂತಕರ ಮುಂದಿಟ್ಟಿದ್ದಾರೆ. ( ಬಹುರೂಪಿ ಪ್ರಕಾಶನ ಇದನ್ನು ಪ್ರಕಟಿಸಿದೆ). ಇತ್ತೀಚೆಗೆ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ಹಾಗೆ ನೋಡಿದರೆ ಡಾ. ಭಟ್‌ ಮತ್ತು ಅವರ ಸಹಚರರ ಯಶಸ್ಸಿನ ಪಯಣವೇ ಎಲ್ಲ ಪ್ರಶಸ್ತಿಗಳಿಗಿಂತ ಮಿಗಿಲಾದುದು. ಏಕೆಂದರೆ ಈ ಪ್ರಾಯೋಗಿಕ ಪರಿಶ್ರಮ ಫಲ ನೀಡಿದೆ, ವಿಶಾಲ ದೇಶದ ಸಣ್ಣ ಭಾಗ ಆದರೂ, ಒಂದು ಭೂ ಪ್ರದೇಶದ ಗ್ರಾಮೀಣ ಜನತೆಯ ಬದುಕನ್ನು ಸ್ವಾವಲಂಬಗೊಳಿಸಿದೆ. ಈ ಗ್ರಾಮಗಳ ಜನರಲ್ಲಿ ಆತ್ಮವಿಶ್ವಾಸ ಮತ್ತು ಶ್ರಮದಾನದ ಪ್ರಜ್ಞೆಯನ್ನು ಮೂಡಿಸಿದೆ. ಪುಸ್ತಕದ ಶೀರ್ಷಿಕೆಯೇ ಸೂಚಿಸುವ ಹಾಗೆ, ಹಳ್ಳಿಗಳನ್ನು ಕಟ್ಟುವುದರಲ್ಲಿ ಕಷ್ಟ ಮತ್ತು ಸುಖ ಎರಡೂ ಇರುವುದು ಸಹಜ.

 ಕಷ್ಟಗಳು ಎಂದರೆ ಅಲ್ಲಿನ ಜನತೆಗೆ ಅವಕಾಶ/ಅನುಕೂಲಗಳನ್ನು ಕಲ್ಪಿಸುವ ಹಾದಿಯಲ್ಲಿ ನಮ್ಮ ನಗರ ಕೇಂದ್ರಿತ ಆಡಳಿತ ವ್ಯವಸ್ಥೆಯೊಡನೆ ಮುಖಾಮುಖಿಯಾಗುವುದೇ ಮುಖ್ಯ ಸವಾಲಾಗುವುದು ಸಹಜ. ಏಕೆಂದರೆ ಆಳ್ವಿಕೆ ನಡೆಸುವ ಸರ್ಕಾರಗಳಿಗೆ ಹಳ್ಳಿಗಳು ಆದ್ಯತೆಯಾಗುವುದಿಲ್ಲ, ಕೃಷಿ ಪ್ರಧಾನ ದೇಶವಾದರೂ ರೈತರು ಮತ್ತು ಕೃಷಿ ಆಧಾರಿತ ಸಮಾಜಗಳು ಅನುಷಂಗಿಕ (Secondary) ಆದ್ಯತೆಯಾಗಿ ಮಾತ್ರ ಕಾಣುತ್ತದೆ. ಹಳ್ಳಿಗಳ ಅಭಿವೃದ್ಧಿ ಎನ್ನುವುದು ವಿಶಾಲ ಮಾರುಕಟ್ಟೆ ಆವರಣದಲ್ಲಿ ನಿಷ್ಕರ್ಷೆಯಾಗುವ ರಾಜಕೀಯ ಆಯ್ಕೆಯಾಗಿರುತ್ತದೆ. ಆದರೆ ಇಲ್ಲಿ ಸುಖ ಕಾಣುವುದು, ಸಾಂಘಿಕ ಚಟುವಟಿಕೆಗಳ ಮೂಲಕ, ಸ್ವ ಪ್ರೇರಿತ ಶ್ರಮದಾನದ ಮೂಲಕ ಹಾಗೂ ಹಳ್ಳಿಯ ಜನರ ಸಹಭಾಗಿತ್ವದ ಮುಖಾಂತರ , ಸಾಧಿಸಲಾಗುವ ಯಶಸ್ಸಿನಲ್ಲಿ. ಈ ಎರಡೂ ಆಯಾಮಗಳನ್ನು ವಸ್ತುನಿಷ್ಠವಾಗಿ ಮಂಡಿಸುವ ಆತ್ಮವಿಮರ್ಶೆಯ ಒಂದು ಕೃತಿ “ ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ”.

 ಮಾರ್ಗ-ಗುರಿ ಮತ್ತು ಬದ್ಧತೆ

 ತಮ್ಮ ಹಳ್ಳಿಗಳನ್ನು ಕಟ್ಟುವ ಶ್ರಮದ ಕಥನದಲ್ಲಿ ಆತ್ಮರತಿಯ ಎಳ್ಳಿನಷ್ಟು ಲಕ್ಷಣವೂ ಇಲ್ಲದ ಹಾಗೆ ಡಾ. ಭಟ್‌ ತಮ್ಮ ನಡೆದ ಹಾದಿಯ ಸಾಫಲ್ಯ, ವೈಫಲ್ಯಗಳನ್ನು ದಾಖಲಿಸಿರುವುದು ಮೆಚ್ಚಲೇಬೇಕಾದ ಅಂಶ. ಅವರು ಅನುಸರಿಸಿದ ಗಾಂಧಿ ಮಾರ್ಗ ಮತ್ತು ಅನುಕರಿಸಿದ ಗಾಂಧಿ ಪ್ರಣೀತ ಮಾದರಿ ಎರಡನ್ನೂ ಸಹ, ಎಲ್ಲಿಯೂ ಪ್ರಸ್ತಾಪಿಸದೆಯೇ, ತಮ್ಮ ಗುರಿ ಸಾಧನೆಯ ಹಾದಿಯನ್ನು ಈ ಕೃತಿಯಲ್ಲಿ ಡಾ. ಭಟ್‌ ದಾಖಲಿಸುತ್ತಾ ಹೋಗುತ್ತಾರೆ. ಈ ಮಾರ್ಗ ಮತ್ತು ಮಾದರಿ ಎಂಬ ಪ್ರಶ್ನೆ ಬಂದಾಗ, ಸಾಮಾನ್ಯವಾಗಿ , ಮಾರ್ಕ್ಸ್‌, ಅಂಬೇಡ್ಕರ್‌, ಲೋಹಿಯಾ, ಮಾವೋ, ಹೀಗೆ ಎಲ್ಲ ದಾರ್ಶನಿಕರು ಹಾಕಿಕೊಟ್ಟ ಹಾದಿಯನ್ನೂ, ಕವಲುಗಳಿಲ್ಲದ ರಸ್ತೆಯಂತೆ ಭಾವಿಸುವುದೇ ಹೆಚ್ಚು. ಹಾಗಾಗಿ ಈ ದೂರಗಾಮಿ ಚಿಂತನಾ ವಿಧಾನಗಳನ್ನು  ಏಕಮುಖಿ ರಸ್ತೆಗಳಂತೆ ಪರಿಗಣಿಸಿ, ಭಿನ್ನವಾಗಿ ಕಂಡವರನ್ನು ಪರಿಷ್ಕರಣವಾದಿ, ಸುಧಾರಣಾವಾದಿ ಎಂದು ಮೂದಲಿಸುವುದು ನಾವು ಕಂಡಿರುವ ವಾಸ್ತವ.

 ಗಾಂಧಿ ಮಾರ್ಗ ಎನ್ನುವಾಗಲೂ ಇದನ್ನು ಗಮನಿಸಿದಾಗ, ಈ ಚಿಂತನೆಯ ಮೂಲ ಸ್ಥಾಯಿಯನ್ನು ಭಂಗಗೊಳಿಸದೆಯೇ, ವರ್ತಮಾನದ ಸಂದರ್ಭಗಳಿಗೆ ಉಪಯುಕ್ತವಾಗುವಂತೆ ಸಮಕಾಲೀನಗೊಳಿಸುವ ಅನಿವಾರ್ಯತೆ ನಮ್ಮ ಮುಂದಿದೆ. ಏಕೆಂದರೆ ಗಾಂಧಿ ಕಾಲದ ಬಂಡವಾಳ, ಮಾರುಕಟ್ಟೆ, ವಾಣಿಜ್ಯ ಪ್ರಪಂಚ, ವ್ಯಾಪಾರ ಸಂಬಂಧಗಳು ಮತ್ತು ಇವುಗಳನ್ನು ನಿಯಂತ್ರಿಸುವ ಬೌದ್ಧಿಕ ಚಿಂತನಾಧಾರೆಗಳು ಈಗ ಬದಲಾಗಿವೆ. ಈ ವಿದ್ಯಮಾನಗಳೂ ಸಹ ರೂಪಾಂತರಗೊಂಡು ವರ್ತಮಾನದ ಸಮಾಜದ ಮೇಲೆ ಸವಾರಿ ಮಾಡುತ್ತಿವೆ. ಈ ಸಿಕ್ಕುಗಳನ್ನು ಅರ್ಥಮಾಡಿಕೊಂಡು, ಗಾಂಧಿ ಪ್ರಣೀತ ಗ್ರಾಮೀಣಾಭಿವೃದ್ಧಿಯ ಆಲೋಚನೆಗಳನ್ನು ಕಾರ್ಯಗತಗೊಳಿಸುವುದು ಇಂದಿನ ತುರ್ತು. ಡಾ. ಪ್ರಕಾಶ್‌ ಭಟ್‌ ಮಾಡಿರುವುದು ಇದನ್ನೇ ಎನ್ನುವುದು ಅವರ ʼ ಕಷ್ಟ ಸುಖ ʼಗಳ ಪಯಣದುದ್ದಕ್ಕೂ ಕಾಣಬಹುದು.

 ಮೊಳೆತ ಸಸಿ ಹೆಮ್ಮರವಾಗುವ ಬಗೆ

 ಡಾ. ಭಟ್‌ ಮತ್ತು ಅವರ ಪತ್ನಿ ಮತ್ತು ಸಹವರ್ತಿಗಳ ಕಾರ್ಯಯೋಜನೆಗೆ ಸ್ಪೂರ್ತಿ ನೀಡಿದ್ದು ಗಾಂಧೀಜಿಯ ನೇರ ಶಿಷ್ಯರೆಂದೇ ಹೆಸರಾದ ಡಾ. ಮಣಿಭಾಯಿ ದೇಸಾಯಿ ಅವರ ಕನಸಿನ ಬೈಫ್‌ ಸಂಸ್ಥೆ. 1967ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಮೂಲ ಉದ್ದೇಶ ಗ್ರಾಮೀಣ ಭಾರತದ ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಬೆಳವಣಿಗೆ. “ಭಾರತೀಯ ಕೃಷಿ ಉದ್ಯೋಗ ಪ್ರತಿಷ್ಠಾನ” ಎಂದು ಆರಂಭವಾದ ಈ ಸಂಸ್ಥೆಯನ್ನು “ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನ” ಎಂದು ಮರುನಾಮಕರಣ ಮಾಡಲಾಗಿತ್ತು. “ ಗ್ರಾಮೀಣಾಭಿವೃದ್ಧಿಗಾಗಿ ದುಡಿಯುವವರೆಲ್ಲ ಬದಲಾವಣೆಗಾಗಿ ಕೆಲಸ ಮಾಡುತ್ತಾರೆ, ಸಮುದಾಯ ಸಂಘಟನೆ, ಜೀನವೋಪಾಯದ ಸುಧಾರಣೆ, ಸಾಮಾಜಿಕ ನ್ಯಾಯ, ಮಣ್ಣು ನೀರು ಸಂರಕ್ಷಣೆ, ಸುಸ್ಥಿರ ಕೃಷಿ ಮರಗಳನ್ನು ಬೆಳೆಯುವುದು,  ಸಮುದಾಯ ಆರೋಗ್ಯ, ನೀರು ನೈರ್ಮಲ್ಯ,,,,,,” (ಪ್ರವೇಶಿಕೆ ಪುಟ 10) ಹೀಗೆ ತಮ್ಮ ಕಾರ್ಯಕ್ಷೇತ್ರವನ್ನು ನಿರ್ವಚಿಸಿಕೊಂಡ ಡಾ. ಭಟ್‌ ಈ ಎಲ್ಲ ಸ್ತರಗಳಲ್ಲೂ ಸಫಲವಾಗಿರುವುದು ಪ್ರತಿಯೊಂದು ಅಧ್ಯಾಯದಲ್ಲೂ, ಕೆಲವೆಡೆ ನಮೂದಿಸಿರುವ ʼಫಲಶ್ರುತಿ ʼಯ ವಿವರಗಳಲ್ಲೂ ಎದ್ದು ಕಾಣುತ್ತದೆ.

 50 ಹಳ್ಳಿಗಳಲ್ಲಿ, ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳೊಡನೆ ಕೆಲಸ ಮಾಡಲು 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿಯೋಜಿಸಿ ತಮ್ಮ ಗುರಿಯತ್ತ ಸಾಗಿರುವುದನ್ನು , ಸಂಖ್ಯೆಯ ದೃಷ್ಟಿಯಿಂದ ನೋಡದೆ, ಕಾರ್ಯಸಾಧನೆಯ ಮೂಲಕ ನೋಡಿದಾಗ, ಡಾ. ಭಟ್‌ ಅವರ ಸಾಧನೆ ಅಪ್ರತಿಮ ಎನಿಸುತ್ತದೆ. ಬೈಫ್‌ ಸಂಸ್ಥೆಯಲ್ಲಿ ಕೈಗೊಂಡ ಕಾರ್ಯಗಳನ್ನು ತಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲೇ ಸಾಕಾರಗೊಳಿಸಲು ಮೂರು ದಶಕಗಳ ಕಾಲ ಅಹರ್ನಿಶಿ ದುಡಿದಿರುವ ಡಾ. ಭಟ್‌ ಮತ್ತು ಅವರ ತಂಡ (ಇದನ್ನು ಕುಟುಂಬ ಎಂದೇ ವ್ಯಾಖ್ಯಾನಿಸಬಹುದು) ಆಯ್ಕೆ ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ದಾಸನಕೊಪ್ಪ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಕೊಪ್ಪ . ಈ ವ್ಯಾಪ್ತಿಯ 50 ಹಳ್ಳಿಗಳನ್ನು. 23 ಅಧ್ಯಾಯಗಳಲ್ಲಿ ತಮ್ಮ ಕಾರ್ಯಸಾಧನೆಯನ್ನು ವಿವರಿಸುವ ಪ್ರಕಾಶ್‌ ಭಟ್‌, ಇಡೀ ಪುಸ್ತಕದಲ್ಲಿ ಗುರುತಿಸುವುದು ಆಯಾ ಹಳ್ಳಿಗಳ ಜನತೆಯ ಕಾರ್ಯೋತ್ಸಾಹ, ಬದ್ಧತೆ, ವಿಶ್ವಾಸ ಮತ್ತು ಮುಂದಣ ಹೆಜ್ಜೆ ಇಡುವ ಇಚ್ಛಾಶಕ್ತಿಯನ್ನು. ಪ್ರತಿ ಅಧ್ಯಾಯದಲ್ಲೂ ಬಾಕ್ಸ್‌ಗಳಲ್ಲಿ ನೀಡಿರುವ ಹಳ್ಳಿಯ ಜನರ ಅನುಭವಾತ್ಮಕ ಮಾತುಗಳು ಇದನ್ನು ಸ್ಪಷ್ಟಪಡಿಸುತ್ತದೆ.

 ಯಶೋಗಾಥೆಯ ಅಂತಃಸತ್ವ

 ಗಾಂಧಿ ತತ್ವದ ಮೂಲ ಧಾತು ಇರುವುದು ಪ್ರತಿ ವ್ಯಕ್ತಿಯೂ ತನ್ನ ಕೆಲಸಗಳನ್ನು ತಾನೇ ಮಾಡುವುದು ಹಾಗೂ ತನ್ನ ಸುತ್ತಲಿನ ಪರಿಸರವನ್ನೂ ತನ್ನಂತೆಯೇ ಭಾವಿಸಿ ಉನ್ನತೀಕರಣಕ್ಕಾಗಿ ಶ್ರಮಿಸುವುದು. ಮಣಿಭಾಯಿ ಅವರು ಗಾಂಧಿ ಆಶ್ರಮ ಸೇರಿದಾಗ ಅವರಿಗೆ ಕೊಟ್ಟ ಕೆಲಸ ಪಾಯಿಖಾನೆ (Toilet) ಸ್ವಚ್ಛಗೊಳಿಸುವುದು. ಆಗಿನ ಪಾಯಿಖಾನೆ ಎಂದರೆ ಬಕೆಟ್‌ಗಳಲ್ಲಿ ಮಲ ಸಂಗ್ರಹಿಸುವ ಮಾದರಿಯದು. ಆ ಬಕೆಟ್‌ ತೊಳೆಯುವುದೂ ಸಹ ಸ್ವಚ್ಛತೆಯ ಒಂದು ಭಾಗ. ಬಕೆಟ್‌ ಹೇಗೆ ತೊಳೆಯಬೇಕು ಎಂದು ಮಣಿಭಾಯಿ ಕೇಳಿದಾಗ ಗಾಂಧಿ  “ ಬಕೆಟ್‌ ತಳದಲ್ಲಿ ನಿನ್ನ ಮುಖ ಕಾಣಬೇಕು ” (ಪುಟ 25) ಎಂದು ಹೇಳಿರುವುದು ಈ ತತ್ವದ ಔದಾತ್ಯವನ್ನು ಸೂಚಿಸುತ್ತದೆ. ಇದೇ ತತ್ವವನ್ನು ತಮ್ಮ ಇಡೀ ಕಾರ್ಯಕ್ಷೇತ್ರದಲ್ಲಿ ಅಳವಡಿಸಿ ಹಳ್ಳಿಯ ಜನರಲ್ಲಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿರುವುದು ಡಾ. ಭಟ್‌ ಅವರ ಸಾಧನೆಗೆ ಸಾಕ್ಷಿ.

ಭಟ್‌ ಅವರು ತಮ್ಮ ಯಶೋಗಾಥೆಯ ಕಥನವನ್ನು ಮೂರನೆ ಅಧ್ಯಾಯ “ಸೂರಶೆಟ್ಟಿ ಕೊಪ್ಪ-ದಾಸನಕೊಪ್ಪ ” ದಿಂದ ಆರಂಭಿಸುತ್ತಾರೆ. ಮಾವೋ ಹೇಳಿದಂತೆ, ಸುದೀರ್ಘ ಪಯಣಕ್ಕೆ ಮೊದಲ ಹೆಜ್ಜೆ ಮುಖ್ಯವಾಗುತ್ತದೆ. ಹೀಗೆ ತಮ್ಮ ಮೊದಲ ಹೆಜ್ಜೆಯ ಸಂಕಟಗಳನ್ನು, ಸವಾಲುಗಳನ್ನು ಈ ಅಧ್ಯಾಯದಲ್ಲಿ ಹಂಚಿಕೊಳ್ಳುತ್ತಾರೆ.  “ ಇಲ್ಲಿ ನಮ್‌ ಸಂಗ್ಡ ಹೀಗೆ ಕುಂತು ನಮ್ಮ ಕಷ್ಟ-ಸುಖ ಯಾರು ಮಾತಾಡಿರಲಿಲ್ಲ ಬಿಡ್ರಿ ” (ಪುಟ 28)  ಎಂಬ ಗ್ರಾಮಸ್ಥರ ಮಾತುಗಳು ಭವಿಷ್ಯದ ಸವಾಲುಗಳನ್ನೂ ಸೂಚಿಸುವಂತೆ ಕಾಣುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ದುಡಿಯುವವರಿಗೆ ಇರಬೇಕಾದ ಎರಡು ಮುಖ್ಯ ಗುಣಗಳೆಂದರೆ, “ ಸಮಾಜಕ್ಕಾಗಿ ದುಡಿಯುವ ತುಡಿತ ಮತ್ತು ಏನು ಮಾಡಬೇಕು ಎಂಬ ಜ್ಞಾನ ” , ಮಣಿಭಾಯಿ ಅವರ ಈ ಮಾತುಗಳು ಭಟ್‌ ಅವರ ಭವಿಷ್ಯ ನಡಿಗೆಯ ಧ್ಯೇಯವಾಕ್ಯವಾಗಿದ್ದನ್ನು ,ಇವರ ಕಷ್ಟ ಸುಖಗಳ ಪಯಣದಲ್ಲಿ ಉದ್ದಕ್ಕೂ ಗುರುತಿಸಲು ಸಾಧ್ಯ. ಉಳಿಯುವ ಸೌಕರ್ಯಗಳಿಲ್ಲದ, ಮನೆಗಳಲ್ಲಿ ಶೌಚಾಲಯಗಳಿಲ್ಲದ, ನೀರಿನ ಸೌಲಭ್ಯವಿಲ್ಲದ, ಸಂಚಾರ ಯೋಗ್ಯ ರಸ್ತೆಗಳಿಲ್ಲದ ಈ ಹಳ್ಳಿಗಳ ಆಯ್ಕೆಯೇ, ಭಟ್‌ ಅವರ ಪಯಣದ ಔದಾತ್ಯಕ್ಕೆ ಸಾಕ್ಷಿಯಾಗಿ ಕಾಣುತ್ತದೆ.

RameshKatti vs jarkiholi brothers:ಬ್ಯಾಡರು ಸೂ***ಳು ಎಂದು  ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ.!

“ ಕಾರ್ಯಕರ್ತರ ತಂಡ ಕಟ್ಟುವ ” ಪ್ರಕ್ರಿಯೆಯಲ್ಲಿ ಭಟ್‌ ಅವರು ಎದುರಿಸಿದ ಜಟಿಲ ಸಿಕ್ಕುಗಳನ್ನು ನಾಲ್ಕನೆ ಅಧ್ಯಾಯ ತೆರೆದಿಡುತ್ತದೆ.  ಗಬ್ಬೂರು ಎಂಬ ಗ್ರಾಮವನ್ನು ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ, ಹೆದ್ದಾರಿಯ ಮತ್ತೊಂದು ಬದಿಗೆ ವರ್ಗಾಯಿಸಿದಾಗ ಆ ಹಳ್ಳಿಯ ಜನರು ಹೋಗಲು ಒಪ್ಪದಿದ್ದುದು, ಅವಕಾಶವಂಚಿತರಾಗಿದ್ದು ಇತ್ಯಾದಿ ಸಮಸ್ಯೆಗಳು ಇಂದಿಗೂ ಸಹ ಭಾರತದ ಅಭಿವೃದ್ಧಿ ಪಥದಲ್ಲಿ ಗುರುತಿಸಬಹುದಾದ ವಾಸ್ತವಗಳು. (ಪುಟ 48). ಗ್ರಾಮೀಣ ಬದುಕಿನಲ್ಲಿ ಜನರು ನೆಲಸಂಸ್ಕೃತಿಗೆ ಅಂಟಿಕೊಂಡಿರುತ್ತಾರೆ. ಇದು ಅವರ ಜೀವನದ ಎಲ್ಲ ಮಗ್ಗುಲುಗಳನ್ನೂ ಆವರಿಸಿರುತ್ತದೆ. ಹಳ್ಳಿಗಳನ್ನು ವಿಭಜಿಸುವ, ಕೃಷಿ ಭೂಮಿಯಿಂದ ವಸತಿಯನ್ನು ಪ್ರತ್ಯೇಕಿಸುವ ಆಧುನಿಕ ಸೂಪರ್‌ ಹೈವೇಗಳ ನಿರ್ಮಾಣದಲ್ಲಿ ಈ ಅಂಶ ಪರಿಗಣನೆಗೇ ಬರದೆ ಇರುವುದು, ವರ್ತಮಾನ ಭಾರತದ ದುರಂತಗಳಲ್ಲೊಂದು. ಈ ನಿರ್ದಿಷ್ಟ ಸಮಸ್ಯೆ ರೈತ ಸಂಘಟನೆಗಳಿಗಾಗಲೀ, ಇತರ ಪ್ರಗತಿಪರ ಹೋರಾಟಗಾರರಿಗಾಗಲೀ ಪ್ರಮುಖ ವಿಷಯವಾಗಿ ಕಾಣದೆ ಇರುವುದೂ ವಿಪರ್ಯಾಸ.

 ಸ್ವ ಸಹಾಯದ ಔದಾತ್ಯವನ್ನು ಹಳ್ಳಿಯ ಜನರಿಗೆ ಮನದಟ್ಟು ಮಾಡಿ, ಒಪ್ಪಿಸುವುದು ಸುಲಭ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ಭಟ್‌ ಅವರ ಕುಟುಂಬದ ಪರಿಶ್ರಮ “ಜನ ಮೊದಲು” ಅಧ್ಯಾಯದಲ್ಲಿ ಎದ್ದು ಕಾಣುತ್ತದೆ. ಹಂಚಿ ತಿನ್ನುವ, ಕೂಡಿ ಬಾಳುವ ಕಲ್ಪನೆಯೇ ಕ್ಷೀಣಿಸುತ್ತಿರುವ ಯುಗದಲ್ಲಿ ( ಇದು 1990ರಿಂದಲೇ ತೀವ್ರತೆ ಪಡೆದ ಸಮಸ್ಯೆ) ಈ ಭಾವನೆಗಳನ್ನು ಜನರಲ್ಲಿ ಮೂಡಿಸುವುದು , ಅಭಿವೃದ್ಧಿ ಪಥದ ಮೂಲ ಧ್ಯೇಯವಾಗಬೇಕು ಎನ್ನುವುದನ್ನು ಭಟ್‌ ಅವರ ಉಪಕ್ರಮಗಳು ಸಾಕ್ಷೀಕರಿಸುತ್ತವೆ. ʼ ಬಡತನ ʼ ಎಂಬ ಅಧಿಕೃತ ಆಡಳಿತಾತ್ಮಕ ಪರಿಕಲ್ಪನೆಗೂ, ನೆಲದ ವಾಸ್ತವಗಳ (Ground reality) ಮೂಲಕ ಕಾಣಬಹುದಾದ ಬಡತನಕ್ಕೂ ಅಪಾರ ಅಂತರ ಇರುವುದನ್ನು “ ಬಡವರೆಲ್ಲಿದ್ದಾರೆ ” ಅಧ್ಯಾಯ ಸ್ಪಷ್ಟವಾಗಿ ಮನದಟ್ಟು ಮಾಡುತ್ತದೆ.

 ನವ ಉದಾರವಾದದ ಛಾಯೆಯಲ್ಲಿ

 ಉಳ್ಳವರ ಭಂಡಾರವನ್ನು ತುಂಬಿಸುತ್ತಾ ಇಲ್ಲದವರ ಕಡೆಗೆ ಸೌಲಭ್ಯಗಳ ತುಣುಕುಗಳನ್ನು ಎಸೆಯುವ ಡಿಜಿಟಲ್‌ ಯುಗದ ಆರ್ಥಿಕ ವ್ಯವಸ್ಥೆಯಲ್ಲಿ, ಸುಸ್ಧಿರ ಅಭಿವೃದ್ಧಿ ಎಂಬ ಪದದ ಔದಾತ್ಯವೇ ಕಳೆದುಹೋಗಿದೆ. ಈ ಕಲ್ಪನೆಯ ಮೂಲ ಸ್ಥಾಯಿಯನ್ನು, ಧಾತುವನ್ನು ಅಧ್ಯಾಯ 8 ( ಸುಸ್ಧಿರಾಭಿವೃದ್ಧಿಯ ಹೃದಯ) ತೆರೆದಿಡುತ್ತದೆ. ಸ್ವ ಸಹಾಯ ಸಂಘ, ಬ್ಯಾಂಕಿಂಗ್‌ ಸೌಲಭ್ಯ, ಮಹಿಳಾ ಸಂಘಗಳು, ಉತ್ತಮ ಶಿಕ್ಷಣ ಮತ್ತು ಆರೋಗ್ಯ, ಕೃಷಿ ಮತ್ತು ಹೈನುಗಾರಿಕೆಗೆ ಅಗತ್ಯವಾದ ಸೌಕರ್ಯಗಳು, ಹೀಗೆ ಹಳ್ಳಿಯ ಜನರ ಜೀವನೋಪಾಯವನ್ನು ಉನ್ನತೀಕರಿಸುವ ಉಪಕ್ರಮಗಳಿಗೆ ಮಾರ್ಗದರ್ಶಿ ಸೂತ್ರವನ್ನು ಭಟ್‌ ಅವರು ಈ ಅಧ್ಯಾಯದಲ್ಲಿ ವಿವರಿಸುತ್ತಾರೆ. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಯಾವುದೇ ಹೊಸ ಚಿಂತನೆಗಳನ್ನು ಸಾಮಾನ್ಯ ಜನತೆ ನೋಡುವುದೇ ತಮ್ಮ ಸಾಂಸ್ಕೃತಿಕ ಹಾಗೂ ಶ್ರದ್ಧೆ- ನಂಬಿಕೆಗಳ ಮೂಲಕ.

 ಹಾಗಾಗಿ ಹೊಸ ಕೃಷಿ ವಿಧಾನಗಳನ್ನು ಅನುಸರಿಸುವುದೂ ಸಹ ದುಸ್ತರವಾಗಿಬಿಡುತ್ತದೆ.  ಇಲ್ಲಿ ಜಾತಿ ಶ್ರೇಣೀಕರಣವೂ ಮುಖ್ಯ ಪಾತ್ರ ವಹಿಸುವುದರಿಂದ, ಪಾರಂಪರಿಕವಾಗಿ ಅನುಸರಿಸಿಕೊಂಡು ಬಂದ ಜೀವನ ವಿಧಾನ, ಶ್ರಮದ ಮಾದರಿ ಎಲ್ಲವೂ ಸಹ ಕೋಶೀಕರಣಕ್ಕೊಳಗಾಗಿರುತ್ತದೆ. (Cellularisation )̤ “ ಹೊಸ ವಿಚಾರದ ನೋವು ” ಅಧ್ಯಾಯ 9ರಲ್ಲಿ ಭಟ್‌ ಅವರು ಇದನ್ನು ಸ್ಪಷ್ಟೀಕರಿಸುವುದೇ ಅಲ್ಲದೆ, ತಾವು ಹೇಗೆ ಇದನ್ನು ದಾಟಲು ಸಾಧ್ಯವಾಯಿತು ಎನ್ನುವುದನ್ನೂ ವಿವರಿಸುತ್ತಾರೆ. ಕೃಷಿ ಆಧಾರಿತ ಸಮಾಜವಾದ್ದರಿಂದ ಈಗಲೂ ಹಳ್ಳಿಗಳಲ್ಲಿ ಮಣ್ಣಿನ ಗುಣ, ಪ್ರಮಾಣ ಮತ್ತು ಫಲವತ್ತತೆ ಜೀವನ ನಿರ್ವಹಣೆಯ ಆಕರಗಳಾಗಿವೆ. ಹಾಗೆಯೇ ನೀರಿನ ಸಂಪನ್ಮೂಲಗಳ ಸದ್ಬಳಕೆ ಮತ್ತು ಸಂರಕ್ಷಣೆ.  ಈ ದೃಷ್ಟಿಯಿಂದ ಅಧ್ಯಾಯ 10ರ  ಕೊನೆಯ ಹನಿ ʼಫಲಶ್ರುತಿ ʼ  ಭಟ್‌ ಅವರ ಕುಟುಂಬದ ಅಪಾರ ಶ್ರಮ ಮತ್ತು ಬದ್ಧತೆಯನ್ನು ಸಾಕ್ಷೀಕರಿಸುತ್ತದೆ. “,,,,, ಮಳೆ ನೀರನ್ನು ಹಿಡಿಯುವುದಕ್ಕಿಂತ ದೊಡ್ಡ ನೀರಾವರಿ ಯೋಜನೆ ಮತ್ತೊಂದಿಲ್ಲ ”ಎಂಬ ಕೊನೆಯ ವಾಕ್ಯ ಈಗಿನ ಮಳೆನೀರು ಸಂಗ್ರಹ ತಂತ್ರಜ್ಞಾನದ ಆಕರವಾಗಿ ಕಾಣುತ್ತದೆ.

HD kumaraswamy: ಎರಡುವರೆ ವರ್ಷದಲ್ಲಿ ಆಗದ ಅಭಿವೃದ್ಧಿ ಇನ್ನೂ ಸಾಧ್ಯವೇ...? #priyankkharge #hdkumaraswamy

 ಹೀಗೆ ತಮ್ಮ ಪಯಣವನ್ನು ಎಲ್ಲ ಮಗ್ಗುಲುಗಳಲ್ಲೂ ವಿಸ್ತರಿಸುತ್ತಾ ಸಾಗಿರುವ ಭಟ್‌ ಅವರ ಕುಟುಂಬ, ಆರೋಗ್ಯ, ಹಸಿರು ರಕ್ಷಣೆ, ಶಿಕ್ಷಣ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆ, ಇದರಿಂದಲೇ ಸೃಷ್ಟಿಯಾಗುವ ಉದ್ಯೋಗಾವಕಾಶಗಳು, ನಗರಾವಲಂಬಿಗಳಾಗುವುದನ್ನು ತಪ್ಪಿಸುವ ಜೀವನ ವಿಧಾನ ಎಲ್ಲ ದಾರಿಗಳಲ್ಲೂ, ಅಡ್ಡಿ ಬಂದ ಅಡೆತಡೆಗಳನ್ನು ನಿವಾರಿಸುತ್ತಾ ಸಾಗಿರುವುದು ಮುಂದಿನ ಅಧ್ಯಾಯದಲ್ಲಿ ಸ್ಪಷ್ಟವಾಗುತ್ತದೆ. “ ನಮ್ಮ ಕಾಲದ ಬಲುದೊಡ್ಡ ಆತಂಕವೆಂದರೆ, ಮಾನವ ಸಮುದಾಯದ ಆರರಲ್ಲಿ ಒಂದು ಭಾಗವು ಇನ್ನೂ ಅಭಿವೃದ್ಧಿಯ ಏಣಿಯ ಮೇಲೆ ಕಾಲನ್ನಿಟ್ಟೇ ಇಲ್ಲ,,,,, ” ಎಂಬ ಜೆಫರಿ ಸಾಕ್ಸ್‌ ಅವರ ಮಾತುಗಳನ್ನು ಉಲ್ಲೇಖಿಸುವ ಮೂಲಕ ʼ ಸ್ವಾಸ್ಥ್ಯ ʼ (ಅಧ್ಯಾಯ 15) ಅಧ್ಯಾಯದಲ್ಲಿ ತಮ್ಮ ಸಾಂಘಿಕ ಪ್ರಯತ್ನಗಳನ್ನು ಭಟ್ ದಾಖಲಿಸುತ್ತಾರೆ. ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಪೌಷ್ಟಿಕತೆಯ ಕೊರತೆ ಹಾಗೂ ಮಲಿನ ಪರಿಸರವೇ ಭಾರತದ ಗ್ರಾಮೀಣ ಸಮಾಜದ ಎಲ್ಲ ಸಮಸ್ಯೆಗಳಿಗೂ ಮೂಲ ಎನ್ನುವುದನ್ನು ಅರಿತು ಈ ನಿಟ್ಟಿನಲ್ಲಿ ಸುಧಾರಣೆಗಳತ್ತ ಸಾಗುವುದು, ವರ್ತಮಾನದ ಆದ್ಯತೆಯಾಗಬೇಕಿದ್ದು, ಭಟ್‌ ಅವರ ಕುಟುಂಬ ಇದನ್ನು ಸಾಧಿಸಿ ತೋರಿಸಿದೆ.

 ಭಾರತದಂತಹ ಸಾಂಪ್ರದಾಯಿಕ ಸಮಾಜಗಳಲ್ಲಿ ಜನಜೀವನದ ಒಂದು ಭಾಗವಾಗಿಯೇ ಕಾಣುವ ಸಾಂಸ್ಕೃತಿಕ ಹಬ್ಬಗಳು, ಉತ್ಸವಗಳು ಮತ್ತು ಅದರ ಹಿಂದಿನ ನಂಬಿಕೆಗಳನ್ನು, ಅಲ್ಲಗಳೆಯದೆ, ನಿರಾಕರಿಸದೆ,  ಆ ಸಮಾಜದೊಡನೆ ಗುರುತಿಸಿಕೊಂಡು, ಮುನ್ನಡೆಯ ಹಾದಿಯಲ್ಲಿ ಅವರನ್ನೂ ಒಳಗೊಳ್ಳುವುದು ಬಹಳ ಮುಖ್ಯವಾದ ಒಂದು ತತ್ವ. ಇದನ್ನು ಭಟ್‌ ಅವರ ಕುಟುಂಬ ಸಾಕ್ಷೀಕರಿಸಿರುವುದು ಅಧ್ಯಾಯ 18ರಲ್ಲಿ ದಾಖಲಿಸಲಾಗಿದೆ. “ನಾವೂ ಬದಲಾಗುತ್ತೇವೆ” ಎಂಬ ಆತ್ಮವಿಶ್ವಾಸವೇ ಸಮುದಾಯಗಳನ್ನು ಭವಿಷ್ಯದ ಹಾದಿಯಲ್ಲಿ ಕರೆದೊಯ್ಯುತ್ತದೆ. ಇದನ್ನು ಆಗುಮಾಡಿರುವ ಶ್ರೇಯ, ಕೀರ್ತಿ ಡಾ. ಪ್ರಕಾಶ್‌ ಭಟ್‌ ಮತ್ತು ಪತ್ನಿ ಸುನಂದಾ ಅವರಿಗೆ, ಕೊನೆಯ ಪುಟದಲ್ಲಿ ನಮೂದಿಸಿರುವ 20 ಕ್ಕೂ ಹೆಚ್ಚು ಕಾರ್ಯಕರ್ತರು, ಹಾಗೂ ಇವರೊಡನೆ ಸಹಕರಿಸಿ, ಜೊತೆಗೂಡಿ ನಡೆದ ಸಮಸ್ತ ಜನರಿಗೂ ಸಲ್ಲುತ್ತದೆ.

ಕೊನೆಯದಾಗಿ

 ಗ್ರಾಮೀಣಾಭಿವೃದ್ಧಿ ಎಂಬ ಉದಾತ್ತ ಕಲ್ಪನೆ ಸರ್ಕಾರದ ಕಡತಗಳಲ್ಲೇ ಕೊಳೆಯಲು ಅವಕಾಶ ನೀಡದೆ, ರಾಜಕೀಯ ಪಕ್ಷಗಳನ್ನೂ, ಅಧಿಕಾರಶಾಹಿಯನ್ನೂ, ವಿಶಾಲ ವ್ಯವಸ್ಥೆಯನ್ನೂ ಈ ಕಲ್ಪನೆಯ ಅಂಗಳಕ್ಕೆ ಎಳೆದುತರುವ ಒಂದು ಉದಾತ್ತ ಜನಾಂದೋಲನವನ್ನು ಡಾ. ಪ್ರಕಾಶ್‌ ಭಟ್‌ ಅವರ ಯಶೋಗಾಥೆಯಲ್ಲಿ ಗುರುತಿಸಬಹುದು.  ಗಾಂಧಿವಾದವನ್ನೂ ಒಳಗೊಂಡಂತೆ, ಯಾವ ವಾದಗಳನ್ನೂ ಉಲ್ಲೇಖಿಸದೆ, ಗ್ರಾಮೀಣ ಸಮಾಜದ ಸರ್ವತೋಮುಖ-ಸರ್ವಾಂಗೀಣ ಅಭಿವೃದ್ಧಿ ಮತ್ತು ಬೆಳವಣಿಗೆಯ ಹಾದಿಯಲ್ಲಿ ಮೂರು ದಶಕಗಳ ಕಾಲ ಅಹರ್ನಿಶಿ ದುಡಿದಿರುವ ಡಾ. ಪ್ರಕಾಶ್‌ ಭಟ್‌ ಅವರ ವೈಯುಕ್ತಿಕ , ಸಾಂಘಿಕ ಹಾಗೂ ಸಾಂಸ್ಥಿಕ ಯಶೋಗಾಥೆಯ ಕಥನ ನಿಜಕ್ಕೂ  ವರ್ತಮಾನದ ಸಮಾಜಕ್ಕೆ ದಿಕ್ಸೂಚಿಯಾಗಿ, ಮಾರ್ಗದರ್ಶಿಯಾಗಿ ಕಾಣುತ್ತದೆ. ಈ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಪ್ರಶಸ್ತಿಯ ಹಿರಿಮೆಯನ್ನು ಹೆಚ್ಚಿಸಿದೆ. ಡಿಜಿಟಲ್‌ ಯುಗದ ಆಧುನಿಕ ಭಾರತದಲ್ಲೂ ಅವಕಾಶವಂಚಿತರಾಗಿ ಬದುಕು ಸವೆಸುತ್ತಿರುವ ಭಾರತದ ಹಳ್ಳಿಗಳಿಗೆ ಈ ಯಶೋಗಾಥೆ ತೆರೆದ ಪುಸ್ತಕದಂತೆ ಕಾಣುತ್ತದೆ.

 ಡಾ. ಪ್ರಕಾಶ್‌ ಭಟ್‌ ಮತ್ತು ಅವರ ಸಮಸ್ತ ಕುಟುಂಬ ಸದಸ್ಯರು ಅಭಿನಂದನಾರ್ಹರು. ಇವರ ಹಾದಿಯಲ್ಲಿ ಹೆಜ್ಜೆ ಹಾಕಿದ ಗ್ರಾಮದ ಜನತೆಯೂ ಸಹ ಅಷ್ಟೇ ಅಭಿನಂದನೀಯರು. ಈ ಅಮೂಲ್ಯ ಕೃತಿಯನ್ನು ಪ್ರಕಟಿಸಿದ ಬಹುರೂಪಿ ಪ್ರಕಾಶನಕ್ಕೆ ವಿಶೇಷ ಧನ್ಯವಾದಗಳು.

-೦-೦-೦-೦-

Tags: 4 bed room village home plan in 31x31 feetaffordable luxury home in villagesBJPbuilding architecturedefinition of rural developmentdream home ideasimportance of rural developmentluxury house design in rural areasrural developmentmansion in the skymodern village housemost beautiful places in the worldnabard rural development fundsnew buildingsrural development class 10rural development class 12rural development class 12 cbserural development funds of nabardrural development in englishrural development in hindirural development in indiarural development loanrural development meaningthe most beautiful placesthe most beautiful places in the worldthe most beautiful places on earthtop 10 countries that support south korea in the world 2024urban vs rural developmentusda rural development loanvillage lifewhat is rural developmentwhich countries in the world support south koreawhite house in the skyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪ್ರತಿಧ್ವನಿ ವೀಕ್ಷಕರಿಗೆ ದೀಪಾವಳಿಹಬ್ಬದ ಶುಭಾಶಯಗಳು

Next Post

Darshan : ‘ನಾನು ಹೀಗೆ ಸಾಯ್ಬೇಕಾ’? ರಿಪೋರ್ಟ್ ತಿಳಿದು ಕಿರುಚಾಡಿದ್ರಾ ದರ್ಶನ್?

Related Posts

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ....

Read moreDetails
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Next Post
Darshan : ‘ನಾನು ಹೀಗೆ ಸಾಯ್ಬೇಕಾ’? ರಿಪೋರ್ಟ್  ತಿಳಿದು ಕಿರುಚಾಡಿದ್ರಾ ದರ್ಶನ್?

Darshan : 'ನಾನು ಹೀಗೆ ಸಾಯ್ಬೇಕಾ'? ರಿಪೋರ್ಟ್ ತಿಳಿದು ಕಿರುಚಾಡಿದ್ರಾ ದರ್ಶನ್?

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
Top Story

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada