ಇದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಎಂ.ಬಿ. ಪಾಟೀಲರ ರಾಜಕೀಯ ದುಸ್ಸಾಹಸ. ಅವರು ತಮ್ಮದೇ ಪಕ್ಷದ ಹಿರಿಯ ನಾಯಕ, ಎರಡು ಸಲ ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷದ ನಾಯಕರೂ ಆಗಿರುವ ಎಸ್.ಆರ್.ಪಾಟೀಲರಿಗೆ ಎಂಎಲ್ಸಿ ಟಿಕೆಟ್ ತಪ್ಪಿಸಿ, ತಮ್ಮ ಸಹೋದರ ಸುನಿಲ್ಗೌಡ ಪಾಟೀಲರಿಗೆ ಟಿಕೆಟ್ ಕೊಡಿಸಿದ್ದು ಹಲವಾರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಆಶ್ಚರ್ಯ ಮತ್ತು ಆಕ್ರೋಶ ಮೂಡಿಸಿದೆ.
ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಮಾಡಿರುವ ಟ್ವೀಟ್ನಲ್ಲಿ, ʼಎಸ್.ಆರ್ ಪಾಟೀಲರಂತಹ ಸಜ್ಜನ, ಅನುಭವಿ ನಾಯಕರು ಕಾಂಗ್ರೆಸ್ಗೆ ಬೇಕಾಗಿಲ್ಲ. ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬಾತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆʼ ಎಂದು ಕಾಲೆಳೆದಿದೆ.
ವಿಜಯಪುರ-ಬಾಗಲಕೋಟೆ ಈ ಎರಡು ಜಿಲ್ಲೆಯಿಂದ ಇಬ್ಬರು ಎಂಎಲ್ಸಿಯಾಗುವ ಅವಕಾಶವಿದೆ. ಕಳೆದ ಸಲ ಕಾಂಗ್ರೆಸ್ನಿಂದ ಎಸ್ಆರ್ ಪಾಟೀಲ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಎಂಎಲ್ಸಿಯಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ನಂತರ ತೆರವಾದ ಎಂಎಲ್ಸಿ ಸ್ಥಾನಕ್ಕೆ ಎಂ.ಬಿ. ಪಾಟೀಲ್ ಸಹೋದರ ಸುನಿಲ್ಗೌಡ ಪಾಟೀಲ ಬಂದರು.
ಬಹುತೇಕ ಕ್ಷೇತ್ರಗಳಂತೆ ಇಲ್ಲೂ ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಎರಡೂ ಸೀಟುಗಳಿಗೆ ಅಭ್ಯರ್ಥಿಗಳನ್ನು ಹಾಕದೇ ತಲಾ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸುತ್ತವೆ. ಅದು ಸುರಕ್ಷಿತ ವಿಧಾನವೂ ಹೌದು.
ಎಸ್.ಆರ್. ಪಾಟೀಲರು ಹೈಮಾಂಡ್ ಎದುರು, ʼಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಸದಸ್ಯರು ಶೇ.50ರಷ್ಟು ಮಾತ್ರ ಇರುವುದರಿಂದ ಒಂದೇ ಸೀಟಿಗೆ ಸ್ಪರ್ಧಿಸೋಣ. ಹಾಗಿದ್ದರೆ ಮಾತ್ರ ನಾನು ಸ್ಪರ್ಧಿಸುವೆʼ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಬಹುತೇಕ ಅವರಿಗೇ ಟಿಕೆಟ್ ಗ್ಯಾರಂಟಿಯಾಗಿತ್ತು. ಆದರೆ ಎಂ,ಬಿ ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಸೇರಿ ಅವರಿಗೆ ಟಿಕೆಟ್ ತಪ್ಪಿಸಿ ಎಂ.ಬಿ. ಪಾಟೀಲ್ ಸಹೋದರನಿಗೆ ಮತ್ತೊಂದು ಅವಕಾಶ ನೀಡಿದ್ದಾರೆ.
ಈ ಕುರಿತು ʻಪ್ರತಧ್ವನಿʼಯೊಂದಿಗೆ ಮಾತನಾಡಿದ ಎಸ್.ಆರ್.ಪಾಟೀಲ್ರವರು ಟಿಕೆಟ್ ಹೇಗೆ ಕೈ ತಪ್ಪಿತ್ತು ಎಂಬುದರ ಬಗ್ಗೆ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದಾರೆ. ನಾವೇ ಟಿಕೆಟ್ ಕೊಡುವವರು ನಮ್ಮ ಟಿಕೆಟನ್ನೇ ಹಾರಿಸಿದ್ದಾರೆ ಇದಕ್ಕೆ ಜಿಲ್ಲೆಯ ಆಂತರಿಕ ರಾಜಕೀಯವೇ ಪ್ರಮುಖ ಕಾರಣವಾಗಿದೆ ನನ್ನ ಬದಲಿಗೆ ಟಿಕೆಟ್ ಪಡೆದಿರುವ ಸುನೀಲ್ ಗೌಡ ಪರಿಷತಿನಲ್ಲೂ ಕ್ರಿಯಾಶೀಲನಾಗಿರಲಿಲ್ಲ ಅಷ್ಟಾಗಿ ಜನ ಸಂಪರ್ಕವೂ ಇಲ್ಲ. ನಾನು ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ನಿಂದ ಉತ್ತರ ನಿರೀಕ್ಷೆಯಲ್ಲಿದ್ದೇನೆ. ನಮ್ಮ ಕಾರ್ಯಕರ್ತರಲ್ಲಿ ಅಸಮಾಧಾನಕ್ಕಿಂತ ಆಕ್ರೋಶ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಗೆಲುವು ಖಚಿತ, ಕಾಂಗ್ರೆಸ್ನಿಂದ ಬಂಡಾಯ ಅಭ್ಯರ್ಥಿ!
ಕಳೆದ ಬಾರಿ ಯತ್ನಾಳ್ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಸೋಲುಂಟು ಮಾಡಿದ್ದರು. ಈ ಸಲ ಬಿಜೆಪಿ ನಿರಾಳವಾಗಿದೆ. ಅವರ ಕಡೆಯಿಂದ ಬಂಡಾಯ ಅಭ್ಯರ್ಥಿಗಳಿಲ್ಲ. ಬಿಜೆಪಿಯಿಂದ ರೆಡ್ಡಿ ಲಿಂಗಾಯತ ಸಮುದಾಯದ ಪಿ.ಎಚ್ ಪೂಜಾರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಅವರ ಗೆಲವು ಬಹುತೇಕ ಖಚಿತ.
ಇನ್ನೊಂದು ಕಡೆ, ಕಾಂಗ್ರೆಸ್ನಲ್ಲಿ ಬಂಡಾಯ ಶುರುವಾಗಿದ್ದು, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ಅಣ್ಣನ ಮಗ ಹರ್ಷಗೌಡ ಪಾಟೀಲ ಸ್ಪರ್ಧಿಸಿದ್ದು, ಎಂ.ಬಿ. ಪಾಟೀಲರ ಸಹೋದರ ಸುನಿಲಗೌಡರಿಗೆ ತೊಂದರೆ ಆಗಲಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಕೂಡ ಎಂ.ಬಿ. ಪಾಟೀಲ್ ಬಗ್ಗೆ ಅಸಮಾಧಾನ ಹೊಂದಿದ್ದು, ಅವರು ಕೂಡ ತೆರೆಮರೆಯಲ್ಲಿ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ ಎಂ.ಬಿ. ಪಾಟೀಲರು ಕೂಡ ಒಕ್ಕಲಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇಲ್ಲಿ ಈ ಸಮುದಾಯ ತುಂಬ ಕಡಿಮೆ ಸಂಖ್ಯೆಯಲ್ಲಿದೆ. ಆದರೆ ಹಣಬಲ ಮತ್ತು ತಂತ್ರಗಾರಿಕೆ ಮೂಲಕ ಎಂ.ಬಿ. ಪಾಟೀಲರು ಎಂಎಲ್ಎ ಆಗುತ್ತ ಬಂದಿದ್ದಾರೆ. ಈಗ ಸಹೋದರನನ್ನು ಗೆಲ್ಲಿಸಲು ಅವರು ಅದೇ ಪಟ್ಟುಗಳನ್ನು ಹಾಕಲಿದ್ದಾರೆ.
ಅನುಭವಿ ಎಸ್.ಆರ್ ಪಾಟೀಲ್ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವ ಅವರು ತಮಗೆ ಟಿಕೆಟ್ ಸಿಗದ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಬಿಜೆಪಿ ಅವರಿಗೆ ಟಿಕೆಟ್ ಆಫರ್ ಮಾಡಿತ್ತು. ಪಾಟೀಲರು ಅದನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ನ ಸಿದ್ದಾಂತಗಳಿಗೆ ಅವರು ಬದ್ಧರು.
ಕಳೆದ ಸಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕಾರಣ ಹಲವು ವೀರಶೈವ ಮತ್ತು ಲಿಂಗಾಯತ ಸ್ವಾಮಿಗಳು ಬಿಜೆಪಿ ಪರ ನಿಲುವು ವ್ಯಕ್ತಪಡಿಸಿದ್ದರು. ಇದನ್ನು ಸರಿಪಡಿಸಲು ಎಸ್.ಆರ್. ಪಾಟೀಲರು ರಾಜ್ಯಾದ್ಯಂತ ಇರುವ ಲಿಂಗಾಯತ-ವೀರಶೈವ ಮಠಗಳಿಗೆ ಭೇಟಿ ನೀಡಿ, ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ. ಎಲ್ಲ ಒಟ್ಟಾಗಿ ಹೋಗೋಣ ಎಂದು ಮನವರಿಕೆ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ಬೆಂಬಲವೂ ಇತ್ತು. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ. ಪಾಟೀಲರು ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಎಸ್.ಆರ್.ಪಾಟೀಲರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಬಹುದು ಎಂಬ ಅಂದಾಜೂ ಇತ್ತು. ಅವರು ಬೆಳೆದರೆ ತಮ್ಮ ಸ್ಥಾನಮಾನಕ್ಕೆ ಧಕ್ಕೆ ಎಂದು ಭಾವಿಸಿದ ಎಂ.ಬಿ. ಪಾಟೀಲ್ ಎಸ್ಆರ್ ಪಾಟೀಲರಿಗೆ ಟಿಕೆಟ್ ತಪ್ಪಿಸಿದ್ದಾರೆ.
ಸಿದ್ದರಾಮಯ್ಯ ಪಾತ್ರವಿದೆಯೇ?
ಎಸ್ಆರ್ ಪಾಟೀಲರು ಸಿದ್ದರಾಮಯ್ಯರಿಗೆ ಆಪ್ತರು. ಡಿ.ಕೆ ಶಿವಕುಮಾರ್ಗೂ ಅವರ ಬಗ್ಗೆ ಗೌರವವಿದೆ. ಹೈಕಮಾಂಡಿನಲ್ಲೂ ಎಸ್ಆರ್ ಪಾಟೀಲರಿಗೆ ಮನ್ನಣೆ ಇದೆ. ಹೀಗಿದ್ದೂ ಎಂ.ಬಿ. ಪಾಟೀಲರಂತಹ ಎರಡನೇ ಸ್ತರದ ನಾಯಕ ಟಿಕೆಟ್ ತಪ್ಪಿಸಲು ಸಾಧ್ಯವಾಗಿದ್ದು ಹೇಗೆ? ಕೆಲವು ಮೂಲಗಳ ಪ್ರಕಾರ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ, ತಮ್ಮ ಸಹೋದರನಿಗೇ ಟಿಕೆಟ್ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು. ಸಿದ್ದರಾಮಯ್ಯʼಶಿವಕುಮಾರ್ ಅವರನ್ನು ಒಪ್ಪಿಸುʼ ಎಂದರು.
ಶಿವಕುಮಾರ್ ಕೂಡ ಎಂಬಿ. ಪಾಟೀಲ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ವೆಚ್ಚ ನೋಡಿಕೊಂಡು ಗೆಲ್ಲಿಸಿಕೊಂಡು ಬರುವೆ. ನೀವು ಸಿಎಂ ಆಗಲು ಅದು ನೆರವಾಗುತ್ತದೆʼ ಎಂದು ಭರವಸೆ ನೀಡಿದರಂತೆ. ಎಸ್ಆರ್. ಪಾಟೀಲರಿಗೇ ಟಿಕೆಟ್ ಕೊಡಲು ನಿರ್ಧರಿಸಿದ್ದ ಡಿ.ಕೆ. ಶಿವಕುಮಾರ್ ಅಂತಿಮ ಹಂತದಲ್ಲಿ ಎಂ.ಬಿ. ಪಾಟೀಲ್ ಸಹೋದರನಿಗೆ ಟಿಕೆಟ್ ನೀಡಿದ್ದಾರೆ. ಸಿದ್ದರಾಮಯ್ಯರ ಒಪ್ಪಿಗೆ ಇಲ್ಲದೇ ಈ ಮಹತ್ವದ ಬದಲಾವಣೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಕೂಡ ಇದಕ್ಕೆ ಮೌನ ಒಪ್ಪಿಗೆ ಸೂಚಿಸಿರುವ ಸಾಧ್ಯತಗಳಿವೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಸ್.ಆರ್ ಪಾಟೀಲರೊಂದಿಗೆ ಮಾತನಾಡಿ, ʼಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ನೋಡೋಣʼ ಎಂದಿದ್ದಾರೆ. ಅದಕ್ಕೆ ಎಸ್ಆರ್ ಪಾಟೀಲರು, ʼಇಲ್ಲಿಯ ರಾಜಕಾರಣ ನಿಮಗೆ ಗೊತ್ತಿಲ್ಲ. ಎರಡನೇ ಅಭ್ಯರ್ಥಿಯಾಗಿ ನಿಂತರೆ ನಮ್ಮ ಪಕ್ಷದ ಸ್ಥಳೀಯ ಕೆಲವು ನಾಯಕರು ನನ್ನನು ಸೋಲಿಸಲು ಯತ್ನಿಸುತ್ತಾರೆʼ ಎಂದು ರಣದೀಪ್ ಆಫರ್ ಅನ್ನು ನಿರಾಕರಿಸಿದ್ದಾರೆ.
ಎಂ.ಬಿ ಪಾಟೀಲರಿಗೆ ಬಂಡಾಯದ ಬಿಸಿ!
ಪಂಚಮಸಾಲಿ ನಾಯಕ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಅವರ ಅಣ್ಣನ ಮಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಎಂ.ಬಿ. ಪಾಟೀಲರನ್ನು ವಿಚಲಿತಗೊಳಿಸಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಕೂಡ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಈಗ ಎಂಬಿ. ಪಾಟೀಲರಿಗೆ ಹಣಬಲವೊಂದೇ ಮಾರ್ಗ.
ಒಟ್ಟಿನಲ್ಲಿ ಹಿರಿಯ ರಾಜಕಾರಣಿ ಎಸ್.ಆರ್ ಪಾಟೀಲರಿಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್ ಅಲ್ಲದೇ ಬಿಜೆಪಿಯ ಹಲವು ನಾಯಕರಿಗೂ ಬೇಸರ ಮೂಡಿಸಿದೆ. ಜೆಡಿಎಸ್ ವರಿಷ್ಠ ದೇವೆಗೌಡರು ಕೂಡ ಪಾಟೀಲರೊಂದಿಗೆ ಮಾತನಾಡಿ, ʼನಿಮ್ಮಂತಹ ಹಿರಿಯ ನಾಯಕರಿಗೆ ಹೀಗಾಗಬಾರದಿತ್ತುʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಹಿನ್ನಡೆಗಳನ್ನು ಹಿಂದೆಲ್ಲ ಕಂಡಿರುವ ಎಸ್ ಆರ್ ಪಾಟೀಲ್ ಹೈಕಮಾಂಡ್ ಬೆಂಬಲದಿಂದ ಬೇರೊದು ರೂಪದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಈ ಸಲ ಏನಾಗುತ್ತದೋ ಕಾಯ್ದು ನೋಡಬೇಕು.