ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೊಂದು ಸುತ್ತಿನ ಹಗ್ಗಜಗ್ಗಾಟ ಶುರುವಾಗಿದೆ. ಪರಿಷತ್ ಚುನಾವಣೆ ಸಂಬಂಧ ಮೂರು ಪಕ್ಷಗಳು ತಮ್ಮ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು. ಕಾಂಗ್ರೆಸ್ ನಿಂದ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಹಾಗೂ ಜೆಡಿಎಸ್ ನಿಂದ ಶರವಣ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಇದೇ ವೇಳೆ ಭಾಜಪದಿಂದ ಚಲವಾದಿ ನಾರಯಾಣಸ್ವಾಮಿ, ಹೇಮಲತಾ ನಾಯ್ಕ್, ಎಸ್ ಕೇಶವಪ್ರಸಾದ್, ಲಕ್ಷ್ಮಣ ಸವದಿಗೆ ಮಣೆಹಾಕಲಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಪರಿಷತ್ ಅಭ್ಯರ್ಥಿಗಳ ಆಯ್ಕೆಗೆ ಈ ಮೂಲಕ ತೆರೆ ಬಿದ್ದಿದೆ. ಆದರೆ ಇಲ್ಲಿ ಅಚ್ಚರಿ ಎನ್ನುವಂಥಾ ಪಟ್ಟಿ ಬಿಡುಗಡೆಗೊಳಿಸಿದ್ದು ಬಿಜೆಪಿ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಪರಿಷತ್ ಟಿಕೆಟ್ ಪಕ್ಕಾ ಸಿಗುತ್ತೆ ಎಂದೇ ಹೇಳಲಾಗಿತ್ತು. ಆದರೆ ಬಿಜೆಪಿ ಹೈ ಕಮಾಂಡ್ ವಿಜಯೇಂದ್ರರನ್ನು ಈ ಬಾರಿಯೂ ದೂರ ಇಟ್ಟಿದೆ.
ಬಿಎಸ್ ಯಡಿಯೂರಪ್ಪನವರು ಸಿಎಂ ಗಾದಿಯಿಂದ ಕೆಳಕ್ಕಿಳಿಯುವಾಗ ಪುತ್ರ ವಿಜಯೇಂದ್ರನಿಗೆ ಡಿಸಿಎಂ ಅಥವಾ ಪ್ರಬಲ ಪೋರ್ಟ್‌ಫೋಲಿಯೋಗೆ ಬೇಡಿಕೆ ಇಟ್ಟಿದ್ದರು. ಆದರೆ ಭಾಜಪ ಹೈ ಕಮಾಂಡ್ ನಯವಾಗಿ ಅದನ್ನು ತಿರಸ್ಕರಿಸಿ ಬಿಎಸ್‌ವೈ ಅನ್ನು ಅಧಿಕಾರಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿಯನ್ನು ಅಧಿಕಾರಕ್ಕೇರಿಸಿತು. ಅದಾಗಿಯೂ ಪಕ್ಷದಲ್ಲಿ ಬಿಎಸ್‌ವೈ ಓರ್ವ ಆಟಕ್ಕಿದ್ದಾರೆ ಆದರೆ ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳುತ್ತಾರೆ.
ಈ ಹಿಂದೆ ಬಿಜೆಪಿ ಜೊತೆ ಮುನಿಸಿಕೊಂಡು ಕೆಜೆಪಿ ಪಕ್ಷ ಕಟ್ಟಲು ಮುಂದಾದಾಗ ಬಿಎಸ್ ಯಡಿಯೂರಪ್ಪ ಕಾಲಿಗೆ ಕಮಲ ಹೈಕಮಾಂಡ್ ಬಂದು ನಿಂತಿತ್ತು. ಅಲ್ಲಿಂದ ಬಿಎಸ್ ಯಡಿಯೂರಪ್ಪ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಲೇ ಬಂದರು ಎಂದರೆ ತಪ್ಪೇನಿಲ್ಲ. ಈಗ ಪಕ್ಷದಲ್ಲಿ ಹಿರಿಯ ಮುತ್ಸದ್ಧಿ ಎಂಬ ಪಟ್ಟದೊಂದಿಗೆ ಯಡಿಯೂರಪ್ಪ ಸೀಮಿತವಾಗಿದ್ದಾರೆ. ಇದರ ನಡುವೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೊಂದು ದಿಕ್ಕು ತೋರುವ ಪ್ರಯತ್ನವನ್ನು ಬಿಎಸ್‌ವೈ ಮಾಡುತ್ತಲೇ ಇದ್ದಾರೆ.
ಆದರೆ ಅದ್ಯಾವಾಗ ಬಿಎಸ್‌ವೈ ಸಿಎಂ ಗಾದಿಯಿಂದ ಕೆಳಗಿಳಿದರೋ ಹೈ ಕಮಾಂಡ್ ಯಡಿಯೂರಪ್ಪನವರನ್ನು ಕಡೆಗಣಿಸುತ್ತಿದೆ ಎಂಬುವುದು ಈಗ ಗೌಪ್ಯವಾಗಿಯೇನು ಉಳಿದಿಲ್ಲ. ಈಗ ಪರಿಷತ್ ಟಿಕೆಟ್ ವಿಚಾರದಲ್ಲೂ ಬಿಎಸ್‌ವೈಗೆ ಭಾರೀ ಹಿನ್ನಡೆಯಾಗಿದೆ. ಪುತ್ರ ವಿಜಯೇಂದ್ರ ಹೆಸರು ಸೂಚಿಸಿದ್ದ ಬಿಎಸ್‌ವೈ ಸಲಹೆಯನ್ನು ಕಮಲ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದೆ ತಿರಸ್ಕರಿಸಿದೆ. ಇದೇ ವೇಳೆ ಸಂತೋಷ್ ಜಿ ನೀಡಿದ ಲಕ್ಷ್ಮಣ ಸವದಿಗೆ ಹೈಕಮಾಂಡ್ ಮಣೆ ಹಾಕಿದೆ. ಇಲ್ಲಿರುವ ಪಾಲಿಟಿಕ್ಸ್ ಏನೆಂದರೆ, ಲಕ್ಷ್ಮಣ ಸವದಿ ಹೇಳಿ ಕೇಳಿ ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು. ಇವರಿಬ್ಬರ ನಡುವಿನ ರಾಜಕೀಯ ಸಂಬಂಧ ಅಷ್ಟಕ್ಕಷ್ಟೇ ಇದೆ. ಬಿಎಸ್‌ವೈ ಸೂಚಿಸಿದ ವ್ಯಕ್ತಿಗೆ ಟಿಕೆಟ್ ನೀಡಿಲ್ಲವಲ್ಲದೆ ತಮ್ಮ ವಿರೋಧಿ ಬಣದಲ್ಲೊಬ್ಬರಿಗೆ ಟಿಕೆಟ್ ನೀಡಿ ಹೈ ಕಮಾಂಡ್ ಬಿಎಸ್ ಯಡಿಯೂರಪ್ಪನವರಿಗೆ ಒಂದು ಪರೋಕ್ಷ ಸಂದೇಶ ರವಾನಿಸಿದೆ.

ಬಿಜೆಪಿಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಎಸ್ ಯಡಿಯೂರಪ್ಪ.!?
ಒಂದಂತು ಸ್ಪಷ್ಟ. ಬಿಜೆಪಿಯಲ್ಲಿ ಬಿಎಸ್‌ವೈ ತಮ್ಮ ಹಿಡಿತ ಹಾಗೂ ಪ್ರಭಾವ ಕಳೆದುಕೊಳ್ಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಸಂಪೂರ್ಣವಾಗಿ ಸಂಪುಟ ಸಮಿತಿ ರಚನೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಲೂ ಸಂಪುಟ ರಚನೆಗೆ ಸಿಎಂ ಬೊಮ್ಮಾಯಿ ತಿಣುಕಾಡುತ್ತಿದ್ದಾರೆ. ಹೈ ಕಮಾಂಡ್ ಕೂಡ ಸದ್ಯಕ್ಕೆ ಸಂಪುಟಕ್ಕೆ ಕತ್ತರಿ ಅಥವಾ ಹೊಸ ಸೇರ್ಪಡೆಗೆ ಮನಸ್ಸು ತೋರುತ್ತಿಲ್ಲ. ಇದರ ನಡುವೆ ಸಂಪುಟ ಸಮಿತಿಗೆ ತಮ್ಮ ಪುತ್ರ ವಿಜಯೇಂದ್ರರನ್ನು ಕಳುಹಿಸಿಕೊಡುವ ಪ್ರಯತ್ನಗಳು ಬಿಎಸ್‌ವೈ ಮಾಡುತ್ತಿದ್ದಾರೂ ಯಶ ಕಾಣುತ್ತಿಲ್ಲ.
ಯಾವುದೇ ಕಾರಣಕ್ಕೂ ವಿಜಯೇಂದ್ರಗೆ ನೋ ಎಂಟ್ರಿ ಎಂಬಂತಿದೆ ಹೈ ಕಮಾಂಡ್ ನಿಲ್ಲು. ಸಮ್ಮಿಶ್ರ ಸರ್ಕಾರ ಬೀಳಿಸಿ. ಆಪರೇಷನ್ ಕಮಲ ನಡೆಸಿ ಮತ್ತೊಮ್ಮೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಬಿಎಸ್‌ವೈ ಯಡಿಯೂರಪ್ಪನವರಿಗೆ ಕನಿಷ್ಠ ತಮ್ಮ ಪುತ್ರನನ್ನು ಸಂಪುಟಕ್ಕೆ ಸೇರಿಸಲಾಗದಷ್ಟು ಬಲಹೀನರಾದರೇ ಪಕ್ಷದೊಳಗೆ ಎಂಬ ಪ್ರಶ್ನೆಯನ್ನು ಈ ಬೆಳವಣಿಗೆಗಳು ಹುಟ್ಟು ಹಾಕಿದೆ. ಇದೀಗ ಕೌನ್ಸಿಲ್ ಟಿಕೆಟನ್ನೂ ಮಗನಿಗೆ ಕೊಡಿಸಲಾಗದಷ್ಟು ದಯನೀಯ ಸ್ಥಿತಿಗೆ ಬಿಜೆಪಿ ಪಕ್ಷದೊಳಗೆ ಬಂದು ನಿಂತಿದ್ದಾರೆ ಎಂದರೆ ತಳ್ಳಿಹಾಕಲಾಗದು.
ಪಕ್ಷದೊಳಗಿನ ಒಂದು ಮಾತು.. ʻʻಬಿಎಸ್‌ವೈ ಬಿಜೆಪಿಗೆ ಗುಡ್ ಬೈʼʼ.!?.
ರಾಜ್ಯದಲ್ಲಿ ಇಡೀ ಬಿಜೆಪಿಯ ರಾಜಕೀಯ ಒಂದು ತೂಕವಾದರೆ ಬಿಎಸ್ ಯಡಿಯೂರಪ್ಪನವರ ರಾಜಕೀಯ ಮತ್ತೊಂದು ತೂಕ. ಅಷ್ಟರ ಮಟ್ಟಿಗೆ ಬಿಎಸ್‌ವೈ ಪ್ರಭಾವಿ ಹಾಗೂ ಜನ ಬೆಂಬಲಿತ ನಾಯಕ. ಲಿಂಗಾಯುತ ಸಮುದಾಯದ ಹಾರ್ಡ್ ಕೋರ್ ಲೀಡರ್ ಕೂಡ ಹೌದು. ಅಂಥಾ ಬಿಎಸ್‌ವೈ ಅನ್ನು ಬಿಜೆಪಿ ಹೈ ಕಮಾಂಡ್ ಇದೀಗ ಕಡೆಗಣಿಸುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಬಿಜೆಪಿ ಪಕ್ಷದೊಳಗಿಂದಲೇ ಮಾತು ಕೇಳಿ ಬರುತ್ತಿದೆ.
ಹೆಸರು ಹೇಳಲು ಇಚ್ಛಿಸಿದ ಒಬ್ಬರು, ಬಿಎಸ್‌ವೈ ಮತ್ತೊಂದು ಹೊಸ ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆ ಎಂದು ʻಪ್ರತಿಧ್ವನಿʼಗೆ ಇತ್ತೀಚೆಗಷ್ಟೇ ತಿಳಿಸಿದರು. ಒಮ್ಮೆ ಕೆಜೆಪಿ ಬಿಟ್ಟು ಯಡವಟ್ಟು ಮಾಡಿಕೊಂಡಿದ್ದ ಬಿಎಸ್‌ವೈಗೆ ಈ ಬಾರಿ ಅಂದಿಗಿಂತ ಹೆಚ್ಚಿನ ರಾಜಕೀಯ ಪ್ರಬುಧ್ಧತೆ ಇದೆ. ಹೀಗಾಗಿ ಈ ಬಾರಿ ಬಿಎಸ್ ಯಡಿಯೂರಪ್ಪನವರು ಹೊಸ ಪಕ್ಷ ಕಟ್ಟಲು ಮುಂದಾದರೆ ಬಿಜೆಪಿ ಮತ್ತೊಮ್ಮೆ ಹೆಗಲು ಮುಟ್ಟಿಕೊಳ್ಳಬೇಕಾದೀತು. ಆದರೆ ಸದ್ಯದ ಮಟ್ಟಿಗೆ ಹೊಸ ಪಕ್ಷ ಎಂಬುವುದು ಸಾಧ್ಯವಾಗದ ಮಾತು ಎಂದು ಎನಿಸಿದರೂ ಕೂಡ ಅಸಾಧ್ಯವಾದದ್ದು ಏನಲ್ಲ.
ಹೀಗೆ ಪುತ್ರ ವಿಜಯೇಂದ್ರರ ರಾಜಕೀಯ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಬಿಎಸ್‌ವೈ ಮುಂದಿನ ದಿನಗಳಲ್ಲಿ ಯಾವ ನಿರ್ಧಾರವನ್ನು ಬೇಕಿದ್ದರೂ ತೆಗೆದುಕೊಳ್ಳಬಹುದು. ಬಿಜೆಪಿ ಹೈ ಕಮಾಂಡ್ ಬಿಎಸ್‌ವೈ ಕಡೆಗಣೆನೆಗೆ ದೊಡ್ಡ ಪ್ರಮಾಣದ ಬೆಲೆಯನ್ನೂ ತೆರಬೇಕಾದೀತು. ಈಗ ಪರಿಷತ್ ಟಿಕೆಟ್ ಹಂಚಿಕೆಯಲ್ಲೂ ವಿಜಯೇಂದ್ರರ ಕಡಗಣೆನೆ ಬಿಜೆಪಿ ಪಾಲಿಕೆ ಕಬ್ಬಿಣದ ಕಡಲೆಕಾಯಿ ಎಂಬುವುದು ಮಾತ್ರ ಸುಳ್ಳಲ್ಲ.