ಮಹಿಸಾಗರ ನದಿಗೆ ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಸೇತುವೆ ಕುಸಿದ ಪರಿಣಾಮ ಒಂಬತ್ತು ಜನರು ಮೃತಪಟ್ಟು, ಹಲವರು ಗಾಯಗೊಂಡಿರುವ ಪ್ರಕರಣ ಗುಜರಾತ್ ನ ವಡೋದರಾದಲ್ಲಿ ಬುಧವಾರ ನಡೆದಿದೆ.

ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ‘ಗಂಭೀರ ಸೇತುವೆ’ ಮಧ್ಯದ ಭಾಗ ಕುಸಿದಿದೆ. ಇದರ ಪರಿಣಾಮ ವಾಹನಗಳು ನೀರಿಗೆ ಬಿದ್ದು ಹಲವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಋಷಿಕೇಶ ಪಟೇಲ್ ತಿಳಿಸಿದ್ದಾರೆ. ‘ಈ ಸೇತುವೆಯು 1985ರಲ್ಲಿ ನಿರ್ಮಾಣಗೊಂಡಿತ್ತು. ಇದರ ನಿರ್ವಹಣೆಯೂ ಆಯಾ ಕಾಲಕ್ಕೆ ನಡೆದಿದೆ. ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಂತ್ರಿಕ ಪರಿಣಿತ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿ ತನಿಖೆ ನಡೆಸಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆದೇಶಿಸಿದ್ದಾರೆ. ಈ ಘಟನೆಯು ಬುಧವಾರ ಬೆಳಿಗ್ಗೆ 7.30ಕ್ಕೆ ಸಂಭವಿಸಿದೆ. ಎರಡು ಪಿಲ್ಲರ್ ನಡುವಿನ ಸ್ಲಾಬ್ ಕುಸಿದಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಎರಡು ಟ್ರಕ್ ಮತ್ತು ಒಂದು ವ್ಯಾನ್ ನದಿಗೆ ಬಿದ್ದಿವೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ್ ಚರಣ್ ತಿಳಿಸಿದ್ದಾರೆ.

ಅಗ್ನಿಶಾಮಕದಳ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಈಗಲೂ ಶೋಧ ಕಾರ್ಯ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಧಾವಿಸಿದೆ. 900 ಮೀ. ಉದ್ದ ‘ಗಂಭೀರ ಸೇತುವೆ’ಗೆ 23 ಪಿಲ್ಲರ್‌ಗಳಿವೆ. ಇದು ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಗುಜರಾತಿನ ಮೊರ್ಬಿ ಪ್ರದೇಶದ ಮಚ್ಚು ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದು ಹಲವರು ನೀರುಪಾಲಾಗಿದ್ದರು. 2022ರ ಅಕ್ಟೋಬರ್ 30ರಂದು ನಡೆದ ಈ ಘಟನೆಯಲ್ಲಿ 135 ಜನ ಮೃತಪಟ್ಟಿದ್ದರು. 2024ರ ಜ. 18ರಂದು ವಡೋದರಾದ ಹರ್ನಿ ಸರೋವರದಲ್ಲಿ ದೋಣಿ ದುರಂತ ಸಂಭವಿಸಿ 12 ಮಕ್ಕಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದರು.