ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಲಿಂಗಾಯತರನ್ನು ಓಲೈಸಲು ಬಿಜೆಪಿ ತಂತ್ರಗಾರಿಕೆ ಮಾಡಿತ್ತು. ಯಡಿಯೂರಪ್ಪನನ್ನು ಕೆಣಕಿದ್ದಕ್ಕೆ ಲಿಂಗಾಯತರು ಮುನಿಸಿಕೊಂಡು ಕಾಂಗ್ರೆಸ್ನತ್ತ ಹೋಗಿದ್ದಾರೆ ಎಂದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಯ್ತು. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗ್ತಿದ್ದಂತೆ ಲೋಕಸಭಾ ಚುನಾವಣೆ ತನಕ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿರೋಧಿ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಹೇಳಿದ್ರು. ಲೋಕಸಭಾ ಚುನಾವಣೆ ಮುಗಿದ ಬಳಿಕ ಎಲ್ಲವೂ ಬದಲಾಗಲಿದೆ

ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಬಗ್ಗೆ ನಡೆದ ಪಾದಯಾತ್ರೆ ಡಿ.ಕೆ ಶಿವಕುಮಾರ್ ಸೂಚನೆಯಂತೆ ನಡೆದಿದೆ ಎನ್ನುವ ಆರೋಪದ ನಡುವೆ ಬಂಡಾಯ ನಾಯಕರು ಸಭೆ ನಡೆಸಿದ್ದರು. ಸಭೆ ಬೆನ್ನಲ್ಲೇ ವಿಜಯೇಂದ್ರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಸಲ್ಲಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದವು. ಇನ್ನು ಶಿಕಾರಿಪುರದಲ್ಲಿ ಕಾಂಗ್ರೆಸ್ ಭಿಕ್ಷೆಯಿಂದ ವಿಜಯೇಂದ್ರ ಗೆಲುವು ಪಡೆದಿದ್ದು ಎನ್ನುವ ಕಾಂಗ್ರೆಸ್ ನಾಯಕರ ಮಾತುಗಳು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೊತೆಗೆ ಆಗಸ್ಟ್ 14ರಂದು ಮಹತ್ವದ ಸಭೆ ನಡೆದಿತ್ತು. ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಭೆ ಬೆನ್ನಲ್ಲೇ ವಿಜಯೇಂದ್ರ ಶಿಕಾರಿಪುರಕ್ಕೆ ತೆರಳಿದ್ದರು.

ಸಾಮಾನ್ಯವಾಗಿ ರಾಜ್ಯಾಧ್ಯಕ್ಷರಾದವರು ರಾಜ್ಯ ಮಟ್ಟದ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಮಾಡುವುದು ಸಾಮಾನ್ಯ ವಿಚಾರ. ಆದರೆ ರಾಜ್ಯ ಬಿಜೆಪಿ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮಾಡಿರುವುದು, ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್. ಬಿಜೆಪಿ ಕಚೇರಿಯಲ್ಲಿ ಮುಖಂಡರ ಜೊತೆ ಧ್ವಜಾರೋಹಣ ನೆರವೇರಿಸಿದ್ದಾರೆ. ಸಂಸದ ಪಿ.ಸಿ ಮೋಹನ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ರವಿಕುಮಾರ್, ಭಾರತಿ ಶೆಟ್ಟಿ, ಮಾಜಿ ಸಂಸದ ಭಗವಂತ ಖೂಬಾ ಉಪಸ್ಥಿತರಿದ್ದರು. ಆದರೆ ವಿಜಯೇಂದ್ರ ಅಂಡ್ ಟೀಂ ಬಿಜೆಪಿ ಕಚೇರಿಯತ್ತ ಸುಳಿಯಲಿಲ್ಲ. ಇದು ಅಧಿಕಾರ ಕಸಿಯುವ ಮೊದಲ ಹೆಜ್ಜೆ ಎನ್ನುವಂತೆ ಭಾಸವಾಯ್ತು.

ವಿಜಯೇಂದ್ರ ನಡೆದುಕೊಳ್ತಿರೋ ರೀತಿ ನೀತಿಗಳು ಮತ್ತೊಂದು ಬಣಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹೊಂದಾಣಿಕೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಬಹುತೇಕ ನಾಯಕರು ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧವಾಗಿ ಮಾತನಾಡಿದ್ದಾರೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರ ಬದಲಾವಣೆ ಕಾರ್ಯ ನಡೆಯುತ್ತಾ..? ಎನ್ನುವ ಶಂಕೆ ಮೂಡಿಸಿದೆ. ಇನ್ನು ವಿಧಾನಸಭಾ ಚುನಾವಣೆ ಮೂರೂವರೆ ವರ್ಷಗಳಿದ್ದು, ಅಲ್ಲೀವರೆಗೂ ಪಕ್ಷದ ಚುಕ್ಕಾಣಿಯನ್ನು ಅನುಭವಿ ನಾಯಕರ ಕೈಗೆ ಕೊಟ್ಟು, ಎಲ್ಲರನ್ನೂ ಒಟ್ಟಿಗೆ ಕರೆಯೊಯ್ಯುವಂತೆ ಮಾಡುವ ಚರ್ಚೆಗಳು ನಡೆಯುತ್ತಿವೆ. ಆದರೆ ಯಡಿಯೂರಪ್ಪ ಬಳಿಕ ವಿಜಯೇಂದ್ರಗೂ ಅವಮಾನ ಎನ್ನುವ ಪುಕಾರು ಬಿಜೆಪಿ ಒಳಗೇ ಹಬ್ಬಿದ್ರೆ ಕೇಸರಿ ಪಡೆ ವಿರುದ್ಧ ಲಿಂಗಾಯತರು ಸಿಟ್ಟಿಗೇಳುವುದು ನಿಶ್ಚಿತ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.
