ಕೇಂದ್ರ ಸರ್ಕಾರ ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆ(ಪಿಎಸ್ ಯು)ಗಳಿಗೆ ಲಸಿಕೆ ಉತ್ಪಾದನೆಯ ಲೈಸನ್ಸ್ ಪಡೆಯುವ ಸ್ಪರ್ಧೆಯಲ್ಲಿ(ಬಿಡ್ಡಿಂಗ್) ಭಾಗವಹಿಸಲು ಅನುಮತಿ ನೀಡಿದೆ..!
ಅಂದರೆ, ಈ ಸಂಸ್ಥೆಗಳಿಗೆ ಲಸಿಕೆ ಉತ್ಪಾದಿಸುವ ಮೂಲಭೂತ ತಾಂತ್ರಿಕತೆ ಮೂಲ ಸೌಲಭ್ಯ ಮತ್ತು ಮಾನವ ಸಂಪನ್ಮೂಲ ಇದೆಯೆಂದರ್ಥ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಸ್ವಾಮ್ಯದ ಮುಂಬೈ ಮೂಲದ ಹಫ್ ಕೈನ್ ಬಯೋ ಫಾರ್ಮಸ್ಯುಟಿಕಲ್ಸ್ ಕಾರ್ಪೊರೇಷನ್, ನ್ಯಾಷನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡ್ ಗೆ ಸೇರಿದ ಹೈದರಾಬಾದಿನ ಇಂಡಿಯನ್ ಇಮ್ಯೂನಾಲಾಜಿಕಲ್ಸ್ ಲಿಮಿಟೆಡ್(ಐಐಎಲ್) ಮತ್ತು ಬುಲಂದಷಹರದ ಭಾರತ್ ಇಮ್ಯೂನಾಲಾಜಿಕಲ್ಸ್ ಅಂಡ್ ಬಯೊಲಾಜಿಕಲ್ಸ್ ಲಿಮಿಟೆಡ್ ಕಂಪನಿಗಳನ್ನು ಸರ್ಕಾರ, ಸದ್ಯ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೋವಾಕ್ಸಿನ್ ಲಸಿಕೆಯ ಹೆಚ್ಚುವರಿ ಉತ್ಪಾದನೆಗೆ ಬಳಸಿಕೊಳ್ಳಲು ಸರ್ಕಾರ ಯೋಚಿಸಿದೆ. ಈ ಸಂಸ್ಥೆಗಳು ಆರು ತಿಂಗಳೊಳಗೆ ಉತ್ಪಾದನೆ ಆರಂಭಿಸಬೇಕು ಎಂಬ ಶರತ್ತನ್ನು ಸರ್ಕಾರ ಹಾಕಿದೆ. ಆದರೆ ಈ ಸಂಸ್ಥೆಗಳು ಉತ್ಪಾದನೆ ಆರಂಭಿಸಲು ತಮಗೆ ಒಂದು ವರ್ಷ ಬೇಕು ಎಂದಿವೆ.

ಮೂಲತಃ ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ದಕ್ಷವಾಗಿ ಕಾರ್ಯ ನಿರ್ವಹಿಸದೇ ಇರುವಂತೆ ಅವುಗಳ ಬಂಡವಾಳ, ವ್ಯವಹಾರ ಎಲ್ಲವನ್ನೂ ಮೋದಿ ಸರ್ಕಾರ ಸತತವಾಗಿ ಅದುಮುತ್ತಾ ಅವುಗಳು ಅಸಹಾಯಕವಾಗುವಂತೆ ಮಾಡಿ, ಆ ಅಸಹಾಯಕತೆಯನ್ನೇ ಹೈ ಲೈಟ್ ಮಾಡಿ ಖಾಸಗಿಯವರಿಗೆ ಮಣೆ ಹಾಕುವ ಕುತಂತ್ರವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ. ರಾಫೆಲ್ ನಂಥಾ ಡೀಲಿನಲ್ಲಿ ಅತ್ಯುತ್ತಮ ಟ್ರಾಕ್ ರೆಕಾರ್ಡ್ ಹೊಂದಿದ್ದ ಹೆಚ್.ಎ.ಎಲ್. ಸಂಸ್ಥೆಯನ್ನು ಕೈ ಬಿಟ್ಟು ಈ ಕ್ಷೇತ್ರದ ಓನಾಮವೂ ಇಲ್ಲದ ದಿವಾಳಿಯಂಚಿಗೆ ಬಂದು ನಿಂತಿರುವ ಅನಿಲ್ ಅಂಬಾನಿಯ ಸಂಸ್ಥೆಗೆ ಚೌಕಿದಾರರು ಅವಕಾಶ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳಿ.
ಈಗ ಈ ಲಸಿಕಾ ಪುರಾಣ ನೋಡೋಣ.
ಕಳೆದ ವರ್ಷ ಸದ್ಯ ಲಸಿಕೆ ಉತ್ಪಾದಿಸುತ್ತಿರುವ ಎರಡು ಕಂಪೆನಿಗಳು ಅದೇನೋ ಕೋಳಿ ಜಗಳ ಶುರು ಹಚ್ಚಿಕೊಂಡಿದ್ದವು. ಮಾನ್ಯ ಚೌಕಿದಾರರು ಪೂನಾವಾಲಾನ ಫ್ಯಾಕ್ಟರಿಗೆ ಭೇಟಿ ಕೊಟ್ಟಲ್ಲಿಂದ ಈ ಲಸಿಕೆ ತಯಾರಿ ವ್ಯವಹಾರಕ್ಕೆ ಹೊಳಪು ಬಂದಿತು. ಸದರಿ ಪೂನಾವಾಲಾನಿಗೆ ಚೌಕಿದಾರನ ಸರ್ಕಾರ ಅಜಮಾಸು 4500 ಕೋಟಿ ರೂಪಾಯಿಯಷ್ಟು ಆಧಾರರಹಿತ ಸಾಲ ಕೊಟ್ಟು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ಕೊಟ್ಟಿದ್ದಲ್ಲದೇ ಕೇಂದ್ರ ಸರ್ಕಾರಕ್ಕೆ ರೂ.150ರಂತೆ ಲಸಿಕೆ ಪೂರೈಸಬೇಕೆಂದೂ ರಾಜ್ಯ ಸರ್ಕಾರಗಳಿಂದ ಲಸಿಕೆಯೊಂದಕ್ಕೆ ರೂ.400ರಂತೆ ವಸೂಲು ಮಾಡಬಹುದೆಂದೂ ಖಾಸಗಿ ವಲಯಕ್ಕೆ ರೂ.600ರಂತೆ ಮಾರಬಹುದೆಂದೂ ಒಪ್ಪಿಗೆ ಕೊಟ್ಟು ಅವ್ಯಾಹತ ಸುಲಿಗೆಗೆ ಅಧಿಕೃತಮುದ್ರೆ ಒತ್ತಿದ್ದೂ ಆಯಿತು. ಈ ಪೂನಾವಾಲಾ ಉತ್ಪಾದನೆ ಹೆಚ್ಚಿಸುವ ವ್ಯವಸ್ಥೆ ಮಾಡಿದ ದಾಖಲೆ ಇಲ್ಲ. ಬದಲಾಗಿ ಈಗ ನೇರಾ ಲಂಡನ್ನಿಗೆ ಹಾರಿ ಕೂತಿದ್ದಾನೆ.
ಇತ್ತ ದೇಶಕ್ಕೆ ಏನಿಲ್ಲವೆಂದರೂ 250 ಕೋಟಿ ಲಸಿಕೆ ಬೇಕು. ಅದೂ ಒಂದು ಸುತ್ತು ಪೂರೈಸಲು. ಇದರ ರೋಗ ನಿರೋಧಕತೆ ಆರೋ ಎಂಟೋ ತಿಂಗಳು ಎಂದಿಟ್ಟುಕೊಂಡರೂ ವರ್ಷದ ಒಳಗೆ ಎರಡನೇ ಸುತ್ತು ಹಾಕಲೇಬೇಕಾದ ಕೊರೊನಾ ಕಾರ್ಮೋಡ ನಮ್ಮ ತಲೆ ಮೇಲೆ ಇದೆ. ಈ ಲಸಿಕೆ ಮದುವೆ ಊಟ ಬಡಿಸಿದಂತಲ್ಲ. ಎಲ್ಲರಿಗೂ ನಿಗದಿತ ಕಾಲದೊಳಗೆ ಹಾಕಿದರೆ ಮಾತ್ರ ಅದು ಪರಿಣಾಮಕಾರಿ. ಅಂದರೆ ಕನಿಷ್ಠ 80 ಕೋಟಿ ಜನಕ್ಕೆ 3-4 ತಿಂಗಳ ಒಳಗೆ ಲಸಿಕೆ ಹಾಕಿದರೆ ಒಟ್ಟಾರೆ ಸುರಕ್ಷಾ ಕವಚ ನಿರ್ಮಾಣವಾಗುತ್ತದೆ. ಇದಕ್ಕೆ ಏನಿಲ್ಲವೆಂದರೂ 160 ಕೋಟಿ ಲಸಿಕೆ ಬೇಕು.
ನಮ್ಮ ರಾಜ್ಯ ಸರಕಾರ ಮೂರು ಕೋಟಿ ಲಸಿಕೆಗೆ ಆರ್ಡರ್ ಕೊಟ್ಟಿರುವುದಾಗಿ ಘೋಷಿಸಿದೆ. ಆದರೆ ಬಂದಿರುವುದು ಕೇವಲ ಹತ್ತು ಲಕ್ಷ. ಕೇಂದ್ರ ಸರ್ಕಾರದ ಕೋಟಾದಿಂದ ಪಡೆಯಲು ಹರ ಸಾಹಸ ಮಾಡುತ್ತಿದ್ದರೂ ತೃಪ್ತಿಕರವಾಗಿ ಲಸಿಕಾ ವಿತರಣೆ ಆಗುತ್ತಿಲ್ಲ. ನ್ಯಾಯಾಲಯಗಳು ಜಬರಿ ಕೇಳಿದಾಗ ಮೊನ್ನೆ ಕೇಂದ್ರ ಸರ್ಕಾರವೇ ಮೇ ಜುಲೈ ಅವಧಿಯಲ್ಲಿ ಹತ್ತು ಕೋಟಿ ಲಸಿಕೆ ಪೂರೈಕೆಯಾಗಲಿದೆ ಎಂದು ಹೇಳಿದೆ. ಅಂದರೆ ಅಂದಾಜು ಐದು ಕೋಟಿ ಮಂದಿಗೆ ಸಾಕಾಗುವಷ್ಟು. ಈಗ ನೀಡಿರುವುದು ಪ್ರಾಯಶ ಮೂರು ಕೋಟಿ ಜನರಿಗೆ. ಇದೇ ವೇಗದಲ್ಲಿ ಮುಂದುವರಿದರೆ ಎಲ್ಲರಿಗೂ ಒಂದು ಸುತ್ತು ಲಸಿಕೆ ನೀಡಲು ಒಂದೂವರೆ ವರ್ಷ ಬೇಕು. ಈ ವೇಳೆಗೆ ಲಕ್ಷಾಂತರ ಜನರು ಕರೋನಾಕ್ಕೆ ಬಲಿಯಾಗಬಹುದು.

ಈಗಲೀಗ ಮತ್ತೊಂದು ಬುರುಡೆ ಬಿಡುತ್ತಾ ಡಿಸೆಂಬರ್ ವೇಳೆಗೆ 215 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದೆ. ಈ 215 ಕೋಟಿ ಹೇಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಯಾವ ವಿಶ್ವಾಸಾರ್ಹ ವಿವರಣೆಯೂ ಇಲ್ಲ. ಮೇ-ಜುಲೈ ಮಧ್ಯೆ ಕೇವಲ ಹತ್ತು ಕೋಟಿ ಲಸಿಕೆ ಉತ್ಪಾದನೆಯಾಗುತ್ತದೆ. ಹೀಗಿರುವಾಗ ಡಿಸೆಂಬರ್ ವೇಳೆಗೆ ಇದರ ಇಪ್ಪತ್ತು ಪಟ್ಟು ಹೆಚ್ಚು ಉತ್ಪಾದನೆ ಹೇಗೆ ಮತ್ತು ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಎರಡೇ ಸಂಸ್ಥೆಗಳ ಬದಲು ಡಜನ್ ಸಂಸ್ಥೆಗಳಿಗೆ ಅವಕಾಶ ಕೊಟ್ಟರೆ ಉತ್ಪಾದನೆ ಹೆಚ್ಚಿ ಬೆಲೆಯಲ್ಲೂ ಸ್ಪರ್ಧಾತ್ಮಕತೆ ಬರುತ್ತದೆ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿರುವುದರಿಂದ ಚೌಕಿದಾರರ ಸರ್ಕಾರ ಒತ್ತಡಕ್ಕೊಳಗಾಗಿದೆ. ಈ ಕಾರಣಕ್ಕೇ ತನ್ನ ಸ್ವಾಮ್ಯದ ಸಂಸ್ಥೆಗಳಿಗೆ ಭಾಗವಹಿಸಲು ಅನುಮತಿ ಕೊಟ್ಟಿದೆ. ಇದೂ ಸ್ಪಷ್ಟವಾದ ಕಳ್ಳಾಟ!
ಈ ಮೂರು ಸಂಸ್ಥೆಗಳಿರುವುದು ಕಳೆದ ವರ್ಷ ಗೊತ್ತಿರಲಿಲ್ಲವೇ? ಹಾಗಿದ್ದರೆ ಅವುಗಳನ್ನು ಇಷ್ಟು ದಿನ ಕೈಕಾಲು ಕಟ್ಟಿದ್ದು ಯಾಕೆ? ಈಗ ಅವಾಸ್ತವಿಕ ಉತ್ಪಾದನಾ ಗಡುವು ಹಾಕಿದ್ದು ಯಾಕೆ? ಪೂನಾವಾಲಾನಿಗೆ ಕೊಟ್ಟಂತೆ ಈಸಂಸ್ಥೆಗಳಿಗೂ ಉತ್ಪಾದನೆಗೆ ಬೇಕಾದ ಮೂಲ ಸಂರಚನೆ, ಪರಿಕರ ಕೊಳ್ಳಲು ಉದಾರ ಸಾಲ/ ಅನುದಾನ ಮೋದಿ ಸರ್ಕಾರ ನೀಡುತ್ತದೆಯೇ? ಈ ಸಂಸ್ಥೆಗಳು ಉತ್ಪಾದನೆ ಮಾಡುವಾಗ ಶ್ರೀ ಸಾಮಾನ್ಯನಿಗೆ ಅನುಕೂಲವಾಗುವಂತೆ ತರಿಗೆ ವಿನಾಯಿತಿ ನೀಡುವುದೇ? ಎಂಬಿತ್ಯಾದಿ ವಿವರಗಳನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ.
ಇಷ್ಟು ದಿನದ ಚೌಕಿದಾರರ ಸರ್ಕಾರದ ಕುಚೋದ್ಯ ನೋಡಿದವರಿಗೆ ಇದು ಮೂಲತಃ ನಾಟಕ ಎಂದು ಅನ್ನಿಸುವುದು ಸಹಜ.”ನೋಡಿ, ಅವರಿಗೆ ಅವಕಾಶ ಕೊಟ್ಟಾಗಲೂ ಉತ್ಪಾದನೆ ಮಾಡಿಲ್ಲ” ಅಂತ ಗೂಬೆ ಕೂರಿಸಿ ಮತ್ತೆ ಕಾರ್ಪೋರೇಟ್ ಸಂಸ್ಥೆಗಳಿಗೇ ಮಣೆ ಹಾಕುವ ಸಾಧ್ಯತೆ ಇದೆ.
ಇಷ್ಟು ದಿನ ಕೊರೋನಾ ಮತ್ತು ಅರ್ಥಿಕತೆ ಎರಡನ್ನೂ ಎದುರಿಸುವಲ್ಲಿ ಮೋದಿ ಸರಕಾರ ಇಟ್ಟ ಹೆಜ್ಜೆಗಳನ್ನು ಗಮನಿಸಿದರೆ ಪ್ರತೀ ಹೆಜ್ಜೆಯಲ್ಲೂ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ನಿರ್ಲಜ್ಜಕಾರ್ಪೋರೇಟ್ ತುಷ್ಟೀಕರಣ ಕಾಣಿಸುತ್ತದೆ. ಈ ಹೊಸ ಔದಾರ್ಯದಲ್ಲೂ ಇದೇ ಕುಚೋದ್ಯ ಮುಂದುವರಿದಂತಿದೆ. ‘Method in madness’ ಅಂತ ಇಂಗ್ಲಿಷಿನ ನುಡಿಗಟ್ಟಿದೆ. ಅಂದರೆ ಹುಚ್ಚಿಗೂ ಒಂದು ವಿನ್ಯಾಸ ಇದೆ. “ಅಯ್ಯೋ ದಿಕ್ಕು ತಿಳಿಯದ ಸರ್ಕಾರ!!” ಎಂದು ಭಾವಿಸುವಂತೆ ಈ ನಡೆ ಇರುತ್ತದೆ. ಆದರೆ ಇದು ಬಲು ಲೆಕ್ಕಾಚಾರದ ನಡೆ. ಯಾವ ಸಂದರ್ಭದಲ್ಲೂ ಕಾರ್ಪೋರೇಟ್ತುಷ್ಟೀಕರಣವೇ ಪರಮ ಗುರಿ. ಈ ತುಷ್ಟೀಕರಣದ ಪ್ರಕ್ರಿಯೆಯಲ್ಲಿ ದೇಶದ ಜನ ಸಂಕಷ್ಟಕ್ಕೀಡಾಗಿ ಅಕ್ಷರಶಃ ಸತ್ತರೂ ಈ ಆಡಳಿತ ತಲೆ ಕೆಡಿಸಿಕೊಳ್ಳಲಾರದು. ಚುನಾವಣೆ ಗೆಲ್ಲಲು ತನ್ನಲ್ಲಿರುವ ಕೋಮು ಧ್ರುವೀಕರಣದ ಬ್ರಹ್ಮಾಸ್ತ್ರವನ್ನು ಹಿಂದಿನಂತೆ ಮುಂದೆಯೂ ನೆಚ್ಚಿಕೊಳ್ಳುವ ವಿಶ್ವಾಸ ಇರುವಾಗ ಇಂಥಾ ವೈಖರಿ ಅನಿರೀಕ್ಷಿತವಲ್ಲ.











