ಕೋವಿಡ್ ಲಸಿಕ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವುದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಈ ಬಗ್ಗೆ ಪರ ವಿರೋಧದ ಚರ್ಚೆಗಳೂ ನಡೆದಿದ್ದವು. ಇದೀಗ ಪಂಚ ರಾಜ್ಯ ಚುನಾವಣೆ ಸಮೀಪಿಸಿದ ಹಿನ್ನೆಲೆ ಕೋವಿಡ್ ಲಸಿಕಾ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ನಿರ್ಧರಿಸಲಾಗಿದೆ.
ಲಸಿಕೆ ಪ್ರಮಾಣ ಪತ್ರದಲ್ಲಿರುವ ಮೋದಿ ಫೋಟೋ ತೆಗೆಯಲು ಆಯೋಗ ತಾಕೀತು!
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ, ಹಾಗೂ ಗೋವಾದಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ಜರುಗಲಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ, ಒಟ್ಟು ಏಳು ಹಂತಗಳಲ್ಲಿ ಈ ಪಂಚರಾಜ್ಯ ಚುನಾವಣೆ ನಡೆಯಲಿದೆ ಎಂದು ಹೇಳಿದೆ. ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿರುವ ಹಿನ್ನೆಲೆ ಕೊರೋನಾ ಲಸಿಕೆ ಸರ್ಟಿಫಿಕೇಟ್‌ನಲ್ಲಿರುವ ಮೋದಿಯ ಫೋಟೋವನ್ನು ತೆಗೆಯಲು ಸೂಚಿಸಲಾಗಿದೆ.
ಚುನಾವಣೆ ನೀತಿ ಸಂಹಿತೆಯನುಸಾರ ರಾಜಕೀಯ ಪಕ್ಷಗಳ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ, ಪ್ರಚಾರ ಪಡೆದುಕೊಳ್ಳುವುದಾಗಲಿ ನಿಷೇಧಿಸಲಾಗಿದೆ. ಇದು ಎಲ್ಲಾ ಮಾದರಿಯ ಚುನಾವಣೆಗೂ ಅನ್ವಯವಾಗಲಿದೆ. ಹೀಗಾಗಿ ಕೊರೋನಾ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲಿರುವ ಮೋದಿ ಫೋಟೋವನ್ನು ತೆಗೆಯಲು ಹೇಳಲಾಗಿದೆ.
ಈ ಹಿಂದೆಯೂ ಹೀಗಿಯೇ ಫೋಟೋ ತೆಗೆಸಿದ್ದ ಚುನಾವಣಾ ಆಯೋಗ!
ಈ ಬಗ್ಗೆ PTI ವರದಿ ಮಾಡಿದ್ದು, ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿನ್ ಪೋರ್ಟಲ್‌ನಿಂದ ಕೊರೋನಾ ಸರ್ಟಿಫಿಕೇಟ್ ಮೇಲಿರುವ ಪ್ರಧಾನಿ ಮೋದಿ ಫೋಟೋವನ್ನು ತೆಗೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ ಎಂದು ತಿಳಿಸಿದೆ. 201ರ ಮಾರ್ಚ್ ನಲ್ಲಿ ನಡೆದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪಾಂಡಿಚೇರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ವಿರೋಧ ಕೇಳಿ ಬಂದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗ ಇದೇ ರೀತಿಯಲ್ಲಿ ಲಸಿಕ ಸರ್ಟಿಫಿಕೇಟ್ ಮೇಲಿರುವ ತೆಗೆಯಲು ಸೂಚಿಸಲಾಗಿತ್ತು. ಇದೀಗ ಈ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಮೋದಿ ಭಾವಚಿತ್ರ ತೆಗೆಯಲು ಆಯೋಗ ಹೇಳಿದೆ.