ವಿದೇಶಿ ವಿವಿಗಳು ಶಿಕ್ಷಣಕ್ಕಾಗಿ ವಿವಿ ಪ್ರವೇಶಕ್ಕೆ ಮುನ್ನ ಭಾರತೀಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂಬ ಷರತ್ತು ವಿಧಿಸುತ್ತಿರುವುದು ಲಸಿಕೆ ಕೊರತೆಯ ಹಿನ್ನೆಲೆಯಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಸಪ್ಟೆಂಬರಿನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು ಅದಕ್ಕೂ ಮೊದಲು ವ್ಯಾಕ್ಸಿನೇಷನ್ ಪಡೆದುಕೊಳ್ಳಲೇಬೇಕಿರುವ ಒತ್ತಡಕ್ಕೆ ವಿದ್ಯಾರ್ಥಿಗಳು ಸಿಲುಕಿದ್ದಾರೆ.

ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಆಗಾಗ ಬದಲಾಗುತ್ತಿದ್ದ ವೀಸಾ ಮಾನದಂಡಗಳು, ವಲಸೆ ವಿರೋಧಿ ಮನಸ್ಥಿತಿ, ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಅಮೆರಿಕದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ ಕಳೆದ ವರ್ಷ ಶೇಕಡಾ 4.4ರಷ್ಟು ಕುಸಿದಿತ್ತು. ತಾವು ವ್ಯಾಸಂಗ ಪಡೆಯುತ್ತಿರುವ ವಿಶ್ವ ವಿದ್ಯಾಲಯಗಳು ಕೇವಲ ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸುತ್ತಿದ್ದರೆ ವಿದೇಶಿ ವಿದ್ಯಾರ್ಥಿಗಳು ದೇಶ ಬಿಟ್ಟು ತಮ್ಮದೇ ದೇಶಕ್ಕೆ ಹಿಂದಿರುಗಬೇಕು ಅಥವಾ ಗಡೀಪಾರನ್ನು ಎದುರಿಸಬೇಕು ಎಂದು ಟ್ರಂಪ್ ಸರ್ಕಾರ ಎಚ್ಚರಿಕೆ ಕೊಟ್ಟಿತ್ತು. ಇದಾದನಂತರ ವಿದೇಶಗಳಲ್ಲಿ ಅದರಲ್ಲೂ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿದ್ದ ಬಹುತೇಕ ಭಾರತೀಯರು ದೇಶಕ್ಕೆ ಮರಳಿದ್ದರು. ಇದೀಗ ವಿದೇಶಗಳಲ್ಲಿ ಕಾಲೇಜು ಪುನರಾರಂಭವಾಗುವ ಸಮಯವಾಗಿದ್ದು ಭಾರತೀಯ ವಿದ್ಯಾರ್ಥಿಗಳು ಈ ವರ್ಷ ವೀಸಾ ಮತ್ತು ಪ್ರಯಾಣದ ನಿರ್ಬಂಧಗಳ ಹೊರತಾಗಿಯೂ ‘ವ್ಯಾಕ್ಸಿನೇಷನ್ ಕಡ್ಡಾಯ’ ಎಂಬ ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಅನೇಕ ಭಾರತೀಯ ರಾಜ್ಯಗಳಲ್ಲಿ ಲಸಿಕೆ ಕೊರತೆ ಮತ್ತು ರಿಜಿಸ್ಟ್ರೇಷನ್‌ಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಲಸಿಕೆ ಪಡೆದುಕೊಳ್ಳುವುದು ಭಾರತೀಯ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇದರ ಜೊತೆಗೆ ಭಾರತ್ ಬಯೋಟೆಕ್‌ನ ‘ಕೊವಾಕ್ಸಿನ್’ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಿಂದ ಇನ್ನೂ ಅನುಮೋದನೆ ಪಡೆಯದೇ ಇದ್ದುದರಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಈ ಲಸಿಕೆಯನ್ನು ಒಪ್ಪುವುದಿಲ್ಲ. ಹಾಗಾಗಿ ವಿದೇಶದಲ್ಲಿ ಅಧ್ಯಯನ ಮಾಡಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಕೋವಿಶೀಲ್ಡ್ ಪಡೆದುಕೊಳ್ಳುವ ಆಯ್ಕೆ ಮಾತ್ರ ಇದೆ.

ಇತ್ತೀಚೆಗೆ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವೆ ಅಂತರ ಹೆಚ್ಚಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಮಧ್ಯೆ ಈಗಾಗಲೇ ಕೊವಾಕ್ಸಿನ್ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಅಮೆರಿಕದ ಕೆಲವು ವಿಶ್ವ ವಿದ್ಯಾನಿಲಯಗಳು ಮತ್ತೊಮ್ಮೆ ಲಸಿಕೆ ಪಡೆದುಕೊಳ್ಳುವಂತೆ ಒತ್ತಾಯಿಸಿರುವುದೂ ವರದಿಯಾಗಿದೆ. ಕ್ಯಾಂಪಸ್ ಹಾಜರಾತಿಗೆ ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಿರುವ ಯುಎಸ್ ವಿಶ್ವವಿದ್ಯಾಲಯಗಳಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳು ನ್ಯೂಯಾರ್ಕ್‌ಗೆ ಬಂದ ನಂತರ ಮತ್ತು ಕಾಲೇಜು ಸೇರುವ ಮೊದಲು ಲಸಿಕೆ ಪಡೆಯಬಹುದು ಎಂದು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಿಳಿಸಿವೆ. ರಟ್ಜರ್ಸ್‌ನಂತಹ ಇತರ ವಿಶ್ವವಿದ್ಯಾಲಯಗಳು ಎಲ್ಲಾ ಕ್ಯಾಂಪಸ್‌ಗಳಲ್ಲಿ ಉಚಿತ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹೊಂದಿವೆ.
ಇನ್ನೊಂದೆಡೆ ಯುಕೆ ವಿಶ್ವವಿದ್ಯಾನಿಲಯಗಳು ಇಲ್ಲಿಯವರೆಗೆ ವ್ಯಾಕ್ಸಿನೇಷನ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಯುಕೆ ಸರ್ಕಾರವು ತನ್ನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ರೋಗನಿರೋಧಕ ಶಕ್ತಿಯನ್ನು ನೀಡುವ ಯೋಜನೆಯನ್ನು ಹೊಂದಿರುವುದರಿಂದ ಇದು ಭಾರತೀಯ ವಿದ್ಯಾರ್ಥಿಗಳಿಗೆ ಆತಂಕವನ್ನುಂಟುಮಾಡಲಾರದು ಎಂದು ಅಂತರರಾಷ್ಟ್ರೀಯ ಶಿಕ್ಷಣ ತಜ್ಞರು ಹೇಳಿದ್ದಾರೆ. ಕೆನಡಾದ ವಿಶ್ವವಿದ್ಯಾನಿಲಯಗಳು ಸಹ ವ್ಯಾಕ್ಸಿನೇಷನ್ ಬಗ್ಗೆ ವಿಭಿನ್ನ ನಿಲುವುಗಳನ್ನು ಹೊಂದಿವೆ. ಅವರು ಹೈಬ್ರಿಡ್ ಮಾದರಿಯಲ್ಲಿ ಅಂದರೆ ಕೆಲವು ತರಗತಿಗಳನ್ನು ಆಫ್‌ಲೈನ್ ಆಗಿಯೂ ಕೆಲವು ತರಗತಿಗಳನ್ನು ಆನ್‌ಲೈನ್‌ನಲ್ಲೂ ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಆದ್ದರಿಂದ ಲಸಿಕೆಗಳ ಅವಶ್ಯಕತೆಯ ಬಗ್ಗೆ ಕಟ್ಟುನಿಟ್ಟಾಗಿ ಏನೂ ಹೇಳಿಲ್ಲ.

ತೆಲಂಗಾಣ, ಕೇರಳ ಮತ್ತು ಮುಂಬೈ ವಿದ್ಯಾರ್ಥಿಗಳಿಗೆ ಅಲ್ಲಿನ ರಾಜ್ಯ ಸರ್ಕಾರ ವ್ಯಾಕ್ಸಿನೇಷನ್ ಅನ್ನು ಕಡ್ಡಾಯ ಮಾಡಿದ್ದರೂ ಪಂಜಾಬ್, ಆಂಧ್ರಪ್ರದೇಶದಂತಹ ರಾಜ್ಯಗಳು ಮತ್ತು ದೆಹಲಿ ಹಾಗಯು ಬೆಂಗಳೂರಿನಂತಹ ಮಹಾನಗರಗಳ ವಿದ್ಯಾರ್ಥಿಗಳಿಗೂ ವ್ಯಾಕ್ಸಿನೇಷನ್ ಕಡ್ಡಾಯ ಮಾಡಬೇಕೆಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಯಾಕೆಂದರೆ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಬಹುತೇಕ ವಿದ್ಯಾರ್ಥಿಗಳು ಈ ಪ್ರದೇಶದವರು. ಆದರೆ ವ್ಯಾಕ್ಸಿನೇಷನ್ ಕೊರತೆ, ಸರಿಯಾದ ಕಾರ್ಯಯೋಜನೆಗಳಿಲ್ಲದೆ ಇರುವುದರಿಂದ ಈ ಅಭಿಪ್ರಾಯ ಕಾರ್ಯರೂಪಕ್ಕೆ ಬರುವುದು ಸುಲಭವಲ್ಲ.