ಮೈಸೂರು : ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಕಟ್ಟಿ ಹಾಕೋಕೆ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದ್ದು ಲಿಂಗಾಯತ ಮತಗಳನ್ನು ಸೆಳೆಯಲು ಸಚಿವ ವಿ.ಸೋಮಣ್ಣರನ್ನು ಕಣಕ್ಕಿಳಿಸಿದೆ. ಆದರೆ ಹೈಕಮಾಂಡ್ ಒತ್ತಾಯಕ್ಕೆ ಮಣಿದು ವಿ.ಸೋಮಣ್ಣ ತಮಗೆ ಇಷ್ಟವಿಲ್ಲದಿದ್ದರೂ ಸಹ ಈ ಬಾರಿ 2 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಂಡರಾ ಎಂಬ ಅನುಮಾನ ಮೂಡಿದೆ.

ಸೋಮಣ್ಣ ಸಂಸದ ಶ್ರೀನಿವಾಸ್ ಪ್ರಸಾದ್ರನ್ನು ಭೇಟಿ ಮಾಡಿದ್ದು ಅವರ ಬಳಿಯಲ್ಲಿ ಈ ಸಂಬಂಧ ಅಳಲು ತೋಡಿಕೊಂಡಿದ್ದಾರೆಎ ಎನ್ನಲಾಗಿದೆ. ಸಚಿವ ಸೋಮಣ್ಣರ ಜೊತೆ ಮಾತುಕತೆ ನಡೆಸಿದ ಬಳಿಕ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಶ್ರೀನಿವಾಸ ಪ್ರಸಾದ್, ನಾನೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇನೆ. ಹೈಕಮಾಂಡ್ ಎರಡು ಕ್ಷೇತ್ರಗಳಲ್ಲಿ ನಿಲ್ಲಲೇಬೇಕು ಎಂದು ಹೇಳಿದೆ, ಹೀಗಾಗಿ ನಾನು ಚುನಾವಣೆಯಲ್ಲಿ ನಿಲ್ಲಲ್ಲೇಬೇಕಾಗಿದೆ ಎಂದು ಸೋಮಣ್ಣ ನನ್ನ ಬಳಿ ಹೇಳಿಕೊಂಡರು ಎಂದು ಹೇಳಿದ್ದಾರೆ.

ಎರಡು ಕಡೆ ನಿಲ್ಲೋದರ ಬಗ್ಗೆ ಹೈಕಮಾಂಡ್ ಒತ್ತಾಯ ಮಾಡಿತ್ತು. ಇದೇ ಕಾರಣಕ್ಕೆ ನಾನು ನಿಂತಿದ್ದೇನೆ ಎಂದು ಸೋಮಣ್ಣ ನನ್ನ ಬಳಿ ಹೇಳಿಕೊಂಡರು ಅಂತಾ ಶ್ರೀನಿವಾಸ್ ಪ್ರಸಾದ್ ಹೇಳಿದ್ದು ವರುಣ ಕ್ಷೇತ್ರದ ಕಡೆಗೆ ಸೋಮಣ್ಣರಿಗೆ ಸ್ವಲ್ಪವೂ ಒಲವಿಲ್ಲವಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.