ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಮುಂದಿನ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅಧಿಕೃತವಾಗಿ ಶಿಫಾರಸು ಮಾಡಿದ್ದಾರೆ.
ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಅಧಿಕಾರವಧಿ ಅಂತ್ಯಗೊಳ್ಳಲಿದೆ. ನಂತರ ಉದಯ್ ಉಮೇಶ್ ಲಲಿತ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲಿದ್ದಾರೆ.
ಯುಯು ಲಲಿತ್ ನವೆಂಬರ್ ೮ರಂದು 65 ವರ್ಷ ಪೂರೈಸಲಿದ್ದು, ಅಂದು ನಿವೃತ್ತಿ ಆಗಲಿದ್ದಾರೆ. ಆದ್ದರಿಂದ ಅವರ ಅಧಿಕಾರವಧಿ ಕೇವಲ 74 ದಿನಗಳಾಗಿರುತ್ತದೆ. ನಂತರ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರಲಿದ್ದಾರೆ.
ಡಿವೈ ಚಂದ್ರಚೂಡ್ ಅವರ ತಂದೆ ವೈ ವಿ ಚಂದ್ರಚೂಡ್ ಕೂಡ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ್ದು, ಅವರು 1978ರಿಂದ 1985ರವರೆಗೆ ಅತೀ ದೀರ್ಘಾವಧಿಯ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ನ್ಯಾಯಮೂರ್ತಿ ಕಮಲ್ ನಾರಾಯಣ್ ಕೇವಲ 17 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದು, ಅತ್ಯಂತ ಕಡಿಮೆ ಅವಧಿಯ ಸಿಜೆಐ ಆಗಿದ್ದಾರೆ. ಅದು ಕೂಡ 1991ರಲ್ಲಿ.