ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮೈತ್ರಿ ಮಾಡಿಕೊಳ್ಳುವ ಪ್ರಕ್ರಿಯೆ ಚುರುಕುಗೊಂಡಿದೆ. ಈಗಲೇ ಈ ಮೈತ್ರಿಗಳ ಬಗ್ಗೆ ನಿಖರವಾಗಿ ಹೇಳಲಾಗದು. ಆದರೆ, ಕೆಲವು ವಾಸ್ತವಗಳನ್ನು ಪರಿಗಣಿಸಿದಾಗ, ಈ ಸಲ ಯಾವುದೇ ಎರಡು ದೊಡ್ಡ ಪಕ್ಷಗಳ ನಡುವೆ ಮೈತ್ರಿ ಅಸಾಧ್ಯ ಎಂಬ ವಾತಾವರಣವಿದೆ.
ಸದ್ಯಕ್ಕೆ ಪ್ರಧಾನಿ ಮೋದಿ ಮತ್ತು ಅಖಿಲೇಶ್ ಯಾದವ್ ಪರಸ್ಪರ ಟೀಕಾ ಪ್ರಹಾರದಲ್ಲಿ ಮುಳುಗಿರುವುದನ್ನು ನೋಡಿದರೆ, ಮುಂಬರುವ ಚುನಾವಣೆ ಕಳೆದ ಸಲದಂತೆ, ಬಿಜೆಪಿ ಮತ್ತು ಅಖಿಲೇಶರ ಸಮಾಜವಾದಿ ಪಕ್ಷಗಳ ನಡುವಿನ ನೇರಾನೇರ ಹೋರಾಟ ಎಂಬಂತೆ ಕಂಡು ಬರುತ್ತಿದೆ.
ಈ ನಡುವೆ ಇಲ್ಲಿ ಮೈತ್ರಿಯ ಕಸರತ್ತುಗಳು ಚಾಲ್ತಿಯಲ್ಲಿವೆ. ಈ ಪ್ರಕ್ರಿಯೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ಅದು ಹೇಗೆ ರೂಪುಗೊಳ್ಳುತ್ತದೆ ಎಂಬುದು ಎರಡು ಕಾರಣಗಳಿಗಾಗಿ ಮುಖ್ಯವಾಗಿದೆ.
ಮೊದಲನೆಯದಾಗಿ, 2017 ರ ವಿಧಾನಸಭಾ ಚುನಾವಣೆ ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ನಿರ್ಣಾಯಕ ಎನಿಸಿದ್ದವು.
2017 ರಲ್ಲಿ, ಆಡಳಿತಾರೂಢ ಎಸ್‌ಪಿಯು ಬಿಜೆಪಿಯ ಕಠಿಣ ಸವಾಲು ಮತ್ತು ಗಮನಾರ್ಹ ಮಟ್ಟದ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಕೆಮಿಸ್ಟ್ರಿ (ಬಾಂಧವ್ಯ) ಸರಿಯಾಗಿಯೇ ಇರಲಿಲ್ಲ. ಈ ಮೈತ್ರಿಯು 403 ಸ್ಥಾನಗಳಲ್ಲಿ 54 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಎಸ್ಪಿಗೆ 47 ಮತ್ತು ಕಾಂಗ್ರೆಸ್ಗೆ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಿಕ್ಕಿತ್ತು.
ಒಟ್ಟಾರೆಯಾಗಿ, ಎಸ್ಪಿ ಮತ್ತು ಕಾಂಗ್ರೆಸ್ 28.1 ಶೇಕಡಾ ಮತಗಳನ್ನು ಪಡೆದವು. ಎಸ್ಪಿ 21.83 ಶೇಕಡಾ ಮತಗಳನ್ನು ಮತ್ತು ಕಾಂಗ್ರೆಸ್ 6.25 ಶೇಕಡಾ ಮತಗಳನ್ನು ಪಡೆದಿದ್ದವು.
ಕಡುವೈರಿ ಬಿಎಸ್ಪಿ ಜೊತೆ ಎಸ್ಪಿ!
2019 ರ ಲೋಕಸಭಾ ಚುನಾವಣೆಯಲ್ಲಿ , ಎಸ್‌ಪಿ ತನ್ನ ಹಿಂದಿನ ಪ್ರತಿಸ್ಪರ್ಧಿ, ರಾಜಕೀಯ ಕಡುವೈರಿ ಬಹುಜನ ಸಮಾಜ ಪಕ್ಷದೊಂದಿಗೆ ʼಅಸಂಭವʼ ಮೈತ್ರಿಯನ್ನು ಮಾಡಿಕೊಂಡಿತ್ತು. ಆದರೆ. ಊಹಿಸಿದಂತೆ ಮತಗಳ ವರ್ಗಾವಣೆಯು ಯಾವುದೇ ಗಮನಾರ್ಹ ಮಟ್ಟಕ್ಕೆ ತಲುಪಲಿಲ್ಲ. ರಾಜ್ಯದಲ್ಲಿನ 80 ಲೋಕಸಭಾ ಸ್ಥಾನಗಳಲ್ಲಿ ಎಸ್‌ಪಿ ಕೇವಲ ಐದು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಮತ್ತು 19.26 ಶೇಕಡಾ ಮತ ಪಡೆದಿತ್ತು. ಆದರೆ ಬಿಎಸ್‌ಪಿ 17.96 ಶೇಕಡಾ ಮತ ಹಂಚಿಕೆಯೊಂದಿಗೆ 10 ಸ್ಥಾನಗಳನ್ನು ಗಳಿಸಿತ್ತು.
ಈಗ ಎಸ್ಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಆಗಬಹುದೇ ಎಂಬುದನ್ನು ಮುಂಬರುವ ದಿನಗಳಲ್ಲಿ ನೋಡಬಹುದು. ಪ್ರಿಯಾಂಕಾ ಗಾಂಧಿ ಯಾವ ನಿಲುವು ತಳೆಯುತ್ತಾರೆ, ಯಾವ ನಡೆ ಅನುಸರಿಸುತ್ತಾರೆ ಎಂಬುದರ ಮೇಲೆ ಈ ಮೈತ್ರಿ ನಿರ್ಧಾರವಾಗಲಿದೆ.
ಎಸ್‌ಪಿ ಮತ್ತು ಬಿಎಸ್‌ಪಿ ನಡುವಿನ ದೀರ್ಘಕಾಲದ ಅಪನಂಬಿಕೆ ಹಾಗೇ ಇದೆ. ಅಖಿಲೇಶರ ಎಸ್ಪಿ ಮತ್ತು ಮಾಯಾವತಿಯವರ ಬಿಎಸ್ಪಿ ನಡುವೆ ಈ ಸಲ ಮೈತ್ರಿಯಾಗುವ ಯಾವುದೇ ಸಾಧ್ಯತೆ ಕಂಡು ಬರುತ್ತಿಲ್ಲ.
ಎರಡನೆಯದಾಗಿ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ರಾಜಕೀಯ ಸ್ಪರ್ಧೆಯಲ್ಲಿ ಹೊಸ ಸಾಮಾಜಿಕ ವಲಯಗಳು ರೂಪು ತಾಳಿವೆ. ಇದು ಹಲವಾರು ಪ್ರಾದೇಶಿಕ ಪಕ್ಷಗಳ ಹೊರಹೊಮ್ಮುವಿಕೆಗೆ ಕಾರಣವಾಗಿದೆ. ಆದರೆ, ಈ ಪ್ರಾದೇಶಿಕ ಪಕ್ಷಗಳ ಪ್ರಭಾವ ಕೆಲವು ಜಿಲ್ಲೆಗಳನ್ನು ಮೀರಿ ವಿಸ್ತರಿಸುವುದಿಲ್ಲ. ಆದರೆ, ಇದು ದೊಡ್ಡ ಪಕ್ಷಗಳಿಗೆ ಅಂತಿಮ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಯಾದವ – ಅಲ್ಲದ ಒಬಿಸಿ ಸಮುದಾಯಗಳಲ್ಲಿರುವ ಹಲವಾರು ಜಾತಿ ಗುಂಪುಗಳು ಮತ್ತು ದಲಿತ ಸಮುದಾಯದ ಒಳಗಿನ ಜಾಟ್ ಅಲ್ಲದ ಗುಂಪುಗಳಿಂದ ಹೊರಹೊಮ್ಮುತ್ತಿರುವ ಹೊಸ ರಾಜಕೀಯ ಧ್ವನಿಗಳು ಕೂಡ ಪರಿಣಾಮಕಾರಿ ಆಗಬಹುದು.

ಈ ಸಣ್ಣ ಗುಂಪುಗಳು ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಗೆ ಹಲವು ರೀತಿಯಲ್ಲಿ ಅನಾನುಕೂಲ ಉಂಟು ಮಾಡಿವೆ. ತಮ್ಮ ಪ್ರದೇಶದ ಅಧ್ಯಯನಗಳ ಆಧಾರದ ಮೇಲೆ, ಸಮಾಜ ವಿಜ್ಞಾನಿ ಬದರಿ ನಾರಾಯಣ್ ಅವರು ತಮ್ಮ ಇತ್ತೀಚಿನ ಪುಸ್ತಕದಲ್ಲಿ,, ಆರ್ಎಸ್ಎಸ್ಎರಡು ದಶಕಗಳಲ್ಲಿ ಮಾಡುತ್ತಿರುವ ಸೋಷಿಯಲ್ಇಂಜಿನಿಯರಿಂಗ್ ಬಿಜೆಪಿಗೆ ನೆರವಾಗುತ್ತಿದೆ. ಇದರಿಂದ ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಲಾಭವಾಯಿತು.
ಎಸ್ ಪಿ ತನ್ನ ಬೆಂಬಲದ ನೆಲೆಯನ್ನು ವಿಸ್ತರಿಸಲು ಈ ಸಣ್ಣ ಪಕ್ಷಗಳ ಮೇಲೆ ಕಣ್ಣಿಟ್ಟಿದೆ.
ಬಿಜೆಪಿಯು ಈ ಸಣ್ಣ ಪಕ್ಷಗಳ ಅಥವಾ ಜಾತಿವಾರು ಗುಂಪುಗಳ ಪ್ರಮುಖ ಪ್ರತಿನಿಧಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಲಾಭವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಭೀಮ್ ರಾಜ್‌ಭರ್ ನೇತೃತ್ವದ ಭಾರತೀಯ ಸುಹೇಲ್‌ದೇವ್ ಜನತಾ ಪಕ್ಷ ಮತ್ತು ಬಾಬುಲಾಲ್ ರಾಜ್‌ಭರ್ ನೇತೃತ್ವದ ಶೋಷಿತ್ ಸಮಾಜ್ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಎಸ್‌ಪಿ ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪೂರ್ವ ಯುಪಿ ಜಿಲ್ಲೆಗಳಲ್ಲಿ ಸುಮಾರು 18 ಪ್ರತಿಶತ ಮತದಾರರನ್ನು ಹೊಂದಿರುವ ರಾಜಭರ್ ಪಕ್ಷದ ಧ್ವನಿಗಳನ್ನು ಕಡೆಗಣಿಸಲಾಗುವುದಿಲ್ಲ.
ಕೃಷ್ಣ ಪಟೇಲ್ ನೇತೃತ್ವದ ಅಪ್ನಾ ದಳ (ಕಾಮರ್‌ವಾಡಿ) ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕುರ್ಮಿ ಮತಗಳನ್ನು ಪಡೆಯುವ ಪ್ರಯತ್ನದಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಯಾದವೇತರ ಒಬಿಸಿ ಬೆಂಬಲದ ಹುಡುಕಾಟದಲ್ಲಿ ಎಸ್ಪಿ ಕೆಲಸ ಮಾಡುತ್ತಿದೆ.
ಬಿಜೆಪಿ ತನ್ನ ವಿಶಾಲವಾದ ಒಬಿಸಿ ಸಂಯೋಜನೆಯೊಂದಿಗೆ ಮುಂದುವರಿದಿದೆ. ನಿಶಾದ್ ಸಮುದಾಯದ ಬೆಂಬಲವನ್ನು ಪಡೆಯುವಲ್ಲಿ ಅದು ಯಶಸ್ವಿಯಾಗುತ್ತಿದೆ. ಉದಾಹರಣೆಗೆ, ಸಂಜಯ್ ನಿಶಾದ್ ನೇತೃತ್ವದ ನಿಶಾದ್ ಪಕ್ಷ ಮತ್ತು ಕೇವತ್ ರಾಮಧಾನಿ ಬಿಂದ್ ನೇತೃತ್ವದ ಭಾರತೀಯ ಮಾನವ್ ಸಮಾಜ್ ಪಕ್ಷಗಳ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಹಾದಿಯಲ್ಲಿದೆ..
ಜಾತಿ ಗುಂಪುಗಳು ಮತ್ತು ಪ್ರದೇಶದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಹೊಸ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಮಧ್ಯೆ, ರಾಜ್ಯ ಚುನಾವಣೆಯಲ್ಲಿ ಪ್ರಮುಖ ಎನಿಸಿರುವ ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳನ್ನು ಉಳಿಸಿಕೊಳ್ಳುವ ಅಗತ್ಯತೆಯ ಬಗ್ಗೆಯೂ ಬಿಜೆಪಿ, ಎಸ್ಪಿ ಗಮನ ಹರಿಸಿವೆ. ಈ ವಾರ, ಉದಾಹರಣೆಗೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದರು. ಶಿವಪಾಲ್ ಅವರ ಪಕ್ಷವು ಪ್ರಮುಖ ಶಕ್ತಿಯಾಗಿಲ್ಲದಿದ್ದರೂ ಸಹ, ಎಸ್ಪಿಯ ಯಾದವ್ ಮತಗಳಲ್ಲಿ ವಿಭಜನೆ ಆಗದಂತೆ ಅಖಿಲೇಶ್‌ಗೆ ಸಹಾಯ ಮಾಡುತ್ತದೆ.
ಪಶ್ಚಿಮ ಯುಪಿ ಜಿಲ್ಲೆಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ಇತ್ತೀಚೆಗೆ ಜಾಟ್‌ಗಳ ನೇತೃತ್ವದ ಆಂದೋಲನದ ಜೊತೆ ಗುರುತಿಸಿಕೊಂಡಿದ್ದ ರಾಷ್ಟ್ರೀಯ ಲೋಕದಳದ ಜೊತೆ ಎಸ್‌ಪಿ ಮೈತ್ರಿ ಮುಂದುವರೆದರೆ ಅದು ಎಸ್ಪಿಗೆ ಲಾಭ ತರಲಿದೆ. ಅಂತಹ ಮೈತ್ರಿಯು ಪಶ್ಚಿಮ ಯುಪಿಯಲ್ಲಿ ಮತದಾರರನ್ನು ಆಕರ್ಷಿಸಿಬಹುದು. ಇದು ಕಳೆದ ಎರಡು ಚುನಾವಣೆಗಳಲ್ಲಿ ಪಶ್ಚಿಮ ಯುಪಿಯಲ್ಲಿ ಬಿಜೆಪಿ ಸಾಧಿಸಿದ್ದ ಪ್ರಾಬಲ್ಯವನ್ನು ಮುರಿಯಬಹುದು.
ಇಷ್ಟಾಗಿಯೂ, ಎಸ್‌ಪಿ ನೇತೃತ್ವದ ಮೈತ್ರಿಕೂಟದ ಸವಾಲು ಎಂದರೆ ರೈತ ಆಂದೋಲನವು ಬಹುತೇಕವಾಗಿ ರಾಜ್ಯದ ಪಶ್ಚಿಮ ಭಾಗಕ್ಕೆ ಸೀಮಿತವಾಗಿದೆ. ಬಿಜೆಪಿಯ ಪ್ರಬಲ ಭದ್ರಕೋಟೆಗಳನ್ನು ಆಕ್ರಮಿಸಲು ಇತರ ಭಾಗಗಳಲ್ಲಿ ಹೊಸ ಸಾಮಾಜಿಕ ಕ್ಷೇತ್ರಗಳನ್ನು ಎಸ್ಪಿ ಅನ್ವೇಷಿಸಬೇಕಾಗಿದೆ.
ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ತನ್ನನ್ನು ತಾನು ಪ್ರಮುಖ ಸವಾಲಾಗಿ ಇರಿಸಿಕೊಳ್ಳುವ ಮೂಲಕ, ಎಸ್‌ಪಿ ನೇತೃತ್ವದ ರಚನೆಯು ಮುಸ್ಲಿಂ ಮತದಾರರಲ್ಲಿ ತನ್ನ ಬೆಂಬಲವನ್ನು ವಿಸ್ತರಿಸಲು ಬಯಸುತ್ತಿದೆ. ಅದು ಕಾಂಗ್ರೆಸ್ ಅಥವಾ ಬಿಎಸ್‌ಪಿಗೆ ಮತ ಹಾಕುತ್ತಿರುವ ಸಮುದಾಯದ ಮುಸ್ಲಿಂ ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ.
ಯುಪಿಯಲ್ಲಿ, ಪ್ರಮುಖ ಸ್ಪರ್ಧಿಗಳು ಪ್ರದೇಶ-ನಿರ್ದಿಷ್ಟ ಮತ್ತು ಸಮುದಾಯ-ಆಧಾರಿತ ಸಣ್ಣ ಪಕ್ಷಗಳಿಗೆ ಸ್ಥಳಾವಕಾಶ ನೀಡುತ್ತಿರುವುದರಿಂದ ದ್ವಿಧ್ರುವಿ ಮೈತ್ರಿ ಸ್ಪರ್ಧೆಯು ರೂಪುಗೊಳ್ಳುತ್ತಿದೆ ಎಂದು ಚುನಾವಣಾ ಅಧ್ಯಯನಗಳು ಸೂಚಿಸುತ್ತವೆ. ಇದೆಲ್ಲವೂ ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಕುಸಿತದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಎಸ್ಪಿ 2021 ರಲ್ಲಿ 224 ಸ್ಥಾನಗಳನ್ನು ಗೆದ್ದಿದ್ದರೂ ಸಹ 29 ಪ್ರತಿಶತದಷ್ಟು ಮತ ಹಂಚಿಕೆಯನ್ನು ದಾಟಿರಲಿಲ್ಲ. ಇಲ್ಲಿ ಎಸ್‌ಪಿ ಮೈತ್ರಿ ಮಾಡಿಕೊಳ್ಳುವಲ್ಲಿ ಹೊಸ ಸಾಮಾಜಿಕ ಕ್ಷೇತ್ರಗಳನ್ನು ಮಾತ್ರವಲ್ಲದೆ ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ಬೆಂಬಲದ ನೆಲೆಯ ಮೇಲೆಯೂ ಕಣ್ಣಿಟ್ಟಿದೆ.

ಬಿಜೆಪಿಗೆ, ಲಕ್ನೋದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಮಾರ್ಗವೂ ಒಂದೇ ಆಗಿದೆ: ತನ್ನ ಭದ್ರಕೋಟೆಗಳನ್ನು ಉಳಿಸಿಕೊಳ್ಳುವುದು ಮತ್ತು ಇತ್ತೀಚಿನ ವರ್ಷಗಳಲ್ಲಿ ಅದು ಸೃಷ್ಟಿಸಿದ ಹೊಸ ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಭಾಗವನ್ನು ತನ್ನ ಕಡೆ ಒಲಿಸಿಕೊಳ್ಳುವುದು…
ಮೋದಿ ಪದೇ ಪದೇ ಉತ್ತರಪ್ರದೇಶಕ್ಕೆ ಭೇಟಿ ನೀಡಿ ಬೃಹತ್ ಯೋಜನೆಗಳ ಶಂಕುಸ್ಥಾಪನೆ ಮಾಡುತ್ತ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಇದು ಬಿಜೆಪಿ ವರ್ಸಸ್ ಎಸ್ಪಿ ಎನ್ನುವುದನ್ನು ತೋರಿಸುತ್ತಿದೆ. ಎಸ್ಪಿ ಜೊತೆ ಬಹುಪಾಲು ಸಣ್ಣ ಪಕ್ಷಗಳು ಕೈ ಜೋಡಿಸಿದರೆ ಬಿಜೆಪಿ ಪ್ರಾಬಲ್ಯಕ್ಕೆ ಏಟು ಬೀಳಲಿದೆ.
ಬರಲಿರುವ ದಿನಗಳಲ್ಲಿ ಸಂಭವಿಸಬಹುದಾದ ಮೈತ್ರಿಗಳ ಆಧಾರದಲ್ಲಿ ಯುಪಿ ಚುನಾವಣೆಯನ್ನು ನೋಡಬೇಕಿದೆ.






