ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಶಾಸಕರೊಬ್ಬರು ತಮ್ಮದೇ ಪಕ್ಷದ ವಿರುದ್ಧ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ ನಾವು ಮಾಧ್ಯಮಗಳ ಮುಂದೆ ಹೆಚ್ಚಿನ ಹೇಳಿಕೆ ಕೊಟ್ಟರೆ, ಹೆಚ್ಚು ಮಾತನಾಡಿದರೆ ದೇಶದ್ರೋಹದ ಪ್ರಕರಣ ದಾಖಲಾಗಬಹುದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರವನ್ನು ಪುನಃ ಕಾರ್ಯಗತಗೊಳಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಾಸಕ ರಾಕೇಶ್ ರಾಥೋಡ್ ಪ್ರತಿಕ್ರಿಯಿಸಿ ನಾನು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ, ಆದರೆ ಶಾಸಕರಿಗೆ ಯಾವ ಸ್ಥಾನಮಾನವಿದೆ..? ನಾನು ಹೆಚ್ಚು ಮಾತನಾಡಿದರೆ, ನನ್ನ ವಿರುದ್ಧ ದೇಶದ್ರೋಹ ಆರೋಪ ಹೊರಿಸಬಹುದು ಎಂದು ತಮ್ಮದೇ ಪಕ್ಷದ (ಬಿಜೆಪಿ) ವಿರುದ್ಧ ಆರೋಪ ಮಾಡಿದ್ದಾರೆ.

ತಮ್ಮದೆ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಾಗ ಶಾಸಕರಾಗಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲಿ ಶಾಸಕರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಬಲ್ಲರು ಎಂದು ನಿಮಗೆ ಅನ್ನಿಸುತ್ತಿದೆಯೇ..? ನಾನು ಈ ಕುರಿತು ಹಿಂದೆಯೂ ಪ್ರಶ್ನೆ ಮಾಡಿದ್ದೇನೆಂದು ನಿಮಗೆ ತಿಳಿದಿಲ್ಲವೇ” ಎಂದಿದ್ದಾರೆ.
ಕರೋನಾ ದೇಶಕ್ಕೆ ಲಗ್ಗೆ ಇಟ್ಟಾಗ ಪ್ರಧಾನಿ ಮೋದಿಯವರು ಜನರಿಗೆ ಚಪ್ಪಾಳೆ ತಟ್ಟಲು ಮತ್ತು ಜಾಗಂಟೆ ಬಾರಿಸಲು ಕರೆ ನೀಡಿದ್ದನ್ನು ಬಿಜೆಪಿ ಶಾಸಕ ರಾಕೇಶ್ ರಾಥೋಡ್ ವಿರೋಧಿಸಿದ್ದರು, ಈ ಸಂಬಂಧ ಮೋದಿಯನ್ನು ಟೀಕಿಸಿದ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ಬಿಜೆಪಿ ಈ ಆಡಿಯೋ ವಿಚಾರ ಕುರಿತು ಸ್ಪಷ್ಟನೆ ನೀಡುವಂತೆ ರಾಕೇಶ್ ರಾಥೋಡ್ ಅವರನ್ನು ಕೇಳಿತ್ತು.
