ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸ್ ರಾಜಕಾರಣ ದಿನದಿಂದ ದಿನಕ್ಕೆ ತೀವ್ರ ಕಾವು ಪಡೆಯುತ್ತಿದ್ದು ಈ ಮಧ್ಯೆ ಪಕ್ಷೇತರ ಶಾಸಕ ರವಿ ರಾಣಾ ಹಾಗೂ ಸಚಿವ ಆದಿತ್ಯ ಠಾಕ್ರೆ ನಡಿವಿನ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಇತ್ತೀಚಿಗೆ MNS ನಾಯಕ ರಾಜ್ ಠಾಕ್ರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಮೇ 3ರ ಒಳಗೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಗೂ ಹನುಮಂತನಿಗೆ ಸಂಬಂಧಿಸಿದ ಭಕ್ತಿ ಗೀತೆಗಳನ್ನು ದೊಡ್ಡ ದೊಡ್ಡ ಸ್ಪೀಕರ್ಗಳಲ್ಲಿ ಹಾಕುತ್ತಾರೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಎಚ್ಚರಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ನಾಯಕ ಹಾಗೂ ಸಚಿವ ಆದಿತ್ಯ ಠಾಕ್ರೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಂತಹ ವಿಚಾರಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಧ್ವನಿವರ್ಧಕಗಳಲ್ಲಿ ಚರ್ಚಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಪಕ್ಷೇತರ ಶಾಸಕ ರವಿ ರಾಣಾ ಶನಿವಾರ ಹನುಮಾನ್ ಜಯಂತಿಯ ದಿವಸದಂದು ಮುಖ್ಯಮಂತ್ರಿಗಳು ತಮ್ಮ ಖಾಸಗಿ ನಿವಾಸದಲ್ಲಿ ಹನುಮಾನ್ ಚಾಲೀಸ್ ಅನ್ನು ಪಠಿಸುವಂತೆ ಸಲಹೆಯನ್ನ ನೀಡಿದ್ದರು ರಾಣಾರ ಈ ಹೇಳಿಕೆ ಶಿವಸೇನೆ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಗೆ ಇತ್ತೀಚಿಗಷ್ಟೇ ಸೇರ್ಪಡೆಯಾದ ವಿದರ್ಭ ಪ್ರದೇಶದ ಬದ್ನೇರಾದ ಪಕ್ಷೇತರ ಶಾಸಕ ರವಿ ರಾಣಾ ಒಂದು ವೇಳೆ ಮುಖ್ಯಮಂತ್ರಿ ಹನುಮಾನ್ ಚಾಲೀಸಾವನ್ನು ಪಠಿಸದಿದ್ದರೆ ನಾವು ಅವರ ಖಾಸಗಿ ನಿವಾಸದ ಎದುರು ನಿರಂತರವಾಗಿ ಹನುಮಾನ್ ಚಾಲೀಸವನ್ನು ಪಠಿಸುತ್ತೇವೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಉದ್ದವ್ ಠಾಕ್ರೆರವರು ತಮ್ಮ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆರವರ ಆಲೋಚನೆ, ತತ್ವ, ಸಿದ್ಧಾಂತ ಮತ್ತು ದೂರದೃಷ್ಟಿಯನ್ನು ಮರೆತಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಹನುಮಾನ್ ಚಾಲೀಸವನ್ನು ಪಠಿಸಿದರೆ ಇದೆಲ್ಲವೂ ಅವರ ಜ್ಞಾಪಕಕ್ಕೆ ಬರುತ್ತದೆ ಒಂದು ವೇಳೆ ಅವರು ಹಾಗೇ ಮಾಡದಿದ್ದರೆ ಅವರ ನಿವಾಸ ಮಾತೋಶ್ರೀಯ ಎದುರು ನಾವು ಹಾಗೇ ಮಾಡಬೇಕಾಗುತ್ತದೆ ಎಂದು ರಾಣಾ ಹೇಳಿದ್ದಾರೆ.

ರಾಣಾ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ ನಾಯಕಿ ಕಿಶೋರಿ ಪಡ್ನೇಕರ್ ನಾವು ಶಿವಸೇನೆಯ ಸೈನಿಕರು ಇನ್ನು ಬದುಕಿದ್ದೇವೆ ನಾವು ನಿಮ್ಮನ್ನು ಮಾತೋಶ್ರೀ ಬಳಿ ಬರಲು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಒಂದು ವೇಳೆ ಬಂದರೆ ನೀವು ಶಿವಸೇನೆಯ ಸೈನಿಕರ ಇನ್ನೊಂದು ಮುಖವನ್ನು ನೋಡಬೇಕಾಗುತ್ತದೆ ಬೇಕಾದಲ್ಲಿ ನೀವು ನಿಮ್ಮ ಮನೆಯಲ್ಲಿಯೇ ಹನುಮಾನ್ ಚಾಲೀಸವನ್ನು ಪಠಣ ಮಾಡಿ ಎಂದು ಹೇಳಿದ್ದಾರೆ. ಶನಿವಾರ ರಾಜ್ ಠಾಕ್ರೆ ಪುಣೆಯಲ್ಲಿ ಸಾರ್ವಜನಿಕ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ.