ಭಾರತದಲ್ಲಿ ಕೋವಿಡ್ ಬಿಕ್ಕಟ್ಟು ಶಮನಗೊಳ್ಳುವ ಆರಂಭಿಕ ಲಕ್ಷಣಗಳೇನೂ ಗೋಚರಿಸದ ಹಿನ್ನೆಲೆಯಲ್ಲಿ ಆದಷ್ಟು ಬೇಗ ಭಾರತ ಬಿಟ್ಟು ತಾಯ್ನಾಡಿಗೆ ಮರಳುವಂತೆ ಅಮೆರಿಕಾ ತನ್ನ ಪ್ರಜೆಗಳಿಗೆ ಹೇಳಿದೆ.
ಕೋವಿಡ್ 19 ಕಾರಣದಿಂದ ಭಾರತದಲ್ಲಿ ಆರೋಗ್ಯ ಸೇವೆಯ ಲಭ್ಯತೆ ಸೀಮಿತವಾಗಿದೆ. ಆದಷ್ಟು ಬೇಗ ಭಾರತವನ್ನು ತೊರೆಯಬೇಕೆಂದು ಅಮೆರಿಕಾ ಹೇಳಿದೆ.
ಭಾರತಕ್ಕೆ ಯಾರೂ ಪ್ರಯಾಣ ಬೆಳಸಬೇಡಿ, ಹಾಗೂ ಆದಷ್ಟು ಭಾರತವನ್ನು ತೊರೆಯುವುದು ಸುರಕ್ಷಿತ. ಭಾರತ ಮತ್ತು ಅಮೆರಿಕಾ ನಡುವೆ 14 ನೇರ ದೈನಂದಿನ ವಿಮಾನಗಳು ಮತ್ತು ಯುರೋಪ್ ಮೂಲಕ ಸಂಪರ್ಕಿಸುವ ಇತರ ಸೇವೆಗಳಿವೆ ಆ ಮೂಲಕ ಅಮೆರಿಕಾಕ್ಕೆ ಮರಳಿ ಬನ್ನಿ ಎಂದು ಪ್ರಯಾಣಗಳ ರಾಜ್ಯ ಇಲಾಖೆ ತಿಳಿಸಿದೆ.
ವಿಪರೀತವಾಗಿ ಏರುತ್ತಿರುವ ಕೋವಿಡ್ -19 ಸೋಂಕುಗಳು ಮತ್ತು ಸಾವುಗಳನ್ನು ನಿಭಾಯಿಸಲು ಭಾರತೀಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳು ಹೆಣಗಾಡುತ್ತಿವೆ. ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 3,60,960 ಏರಿಕೆಯಾಗಿದೆ ಎಂದು ಬುಧವಾರದ ಅಧಿಕೃತ ಮಾಹಿತಿಯು ತೋರಿಸಿದೆ, ಹಾಗೂ 3,293 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಹೊಸ ಪ್ರಕರಣಗಳು ದಾಖಲಾಗುತ್ತಿರುವ ದೇಶವಾಗಿ ಮಾರ್ಪಟ್ಟಿದೆ.
ಈ ವಾರದ ಆರಂಭದಲ್ಲಿ ಆಸ್ಟ್ರೇಲಿಯಾವು ಭಾರತದಿಂದ ಎಲ್ಲಾ ವಿಮಾನಗಳನ್ನು ನಿಷೇಧಿಸಿತ್ತು, ಇಂಗ್ಲೆಂಡ್, ಐರ್ಲೆಂಡ್ ಕೂಡಾ ಭಾರತದಿಂದ ಮರಳುವವರನ್ನು ಕಡ್ಡಾಯ ಕ್ವಾರಂಟೈನ್ನಲ್ಲಿ ಇರಲು ಸೂಚಿಸಿದೆ.