ಕೋಲಾರ: ಟಿಪ್ಪು ಸುಲ್ತಾನ್ ರನ್ನು ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡ ಅವರೇ ಕೊಂದಿದ್ದು ಎಂದು ನಮ್ಮ ಬಿಜೆಪಿ ಪಕ್ಷದ ಸಚಿವರಾದ ಅಶ್ವತ್ಥನಾರಾಯಣ ಮತ್ತು ಆರ್.ಅಶೋಕ್ ಅವರು ಬಹಳಷ್ಟು ಸಂಶೋಧನೆ ಮಾಡಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೂ ಈ ವಿಚಾರದಲ್ಲಿ ಕುಮಾರಸ್ವಾಮಿಯವರಿಗೆ ಯಾಕೆ ಅನುಮಾನ ಎಂಬುದು ಗೊತ್ತಾಗುತ್ತಿಲ್ಲ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಟಿಪ್ಪುವನ್ನು ಉರಿಗೌಡ, ನಂಜೇಗೌಡರೇ ಕೊಂದಿದ್ದು ಎಂದು ಸಂಶೋಧನೆಯಲ್ಲಿ ಸ್ಪಷ್ಟವಾಗಿದೆ:
ಕೋಲಾರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತಿಹಾಸವನ್ನು ಯಾರೂ ತಿರುಚೋಕೆ ಆಗುವುದಿಲ್ಲ. ಸಚಿವರಾದ ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರು ಬಹಳಷ್ಟು ಸಂಶೋಧನೆ ಮಾಡಿ ಇವರೇ ಕೊಂದಿದ್ದು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇಷ್ಟು ದಿನ ಬೇರೆಯವರು ಸತ್ಯ ಮುಚ್ಚಿಟ್ಟಿದ್ದರು. ಈಗ ಸತ್ಯ ಹೊರಗಡೆ ಬಂದಿದೆ. ಅದಕ್ಕೆ ಅವರಿಗೆ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ಲ. ನಾವು ಹೇಳುತ್ತಿರುವುದು ಹೊಸ ಇತಿಹಾಸವಲ್ಲ. ಮುಚ್ಚಿಹೋಗಿರುವ ಹಳೆಯ ಇತಿಹಾಸ ಈಗ ಹೊರಗಡೆ ಬರುತ್ತಿದೆ ಎಂದರು.
ಆನಂದಕ್ಕೂ ಕಣ್ಣೀರು ಬರುತ್ತೆ, ಅದನ್ನ ದುಃಖದ ಕಣ್ಣೀರು ಎನ್ನಬಾರದು:
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಚಿವ ವಿ.ಸೋಮಣ್ಣ ಅವರಿಗೆ ಅಸಮಾಧಾನ ಇದೆ ಎಂದು ಯಾರು ಹೇಳಿದ್ದು? ಕೆಲವೊಮ್ಮೆ ಆನಂದಕ್ಕೂ ಕಣ್ಣಲ್ಲಿ ನೀರು ಬರುತ್ತೆ. ಅದನ್ನು ದುಃಖದ ಕಣ್ಣೀರು ಎಂದುಕೊಳ್ಳಬಾರದು. ಸೋಮಣ್ಣ ಅವರ ಮಗನ ಬಗ್ಗೆಯೂ ನನಗೆ ಗೌರವ ಇದೆ. ಅವರು ಮಾತನಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದರು. ಆರ್. ಶಂಕರ್ ಅವರ ಮನೆಯ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಐಟಿ ದಾಳಿ ಮಾಡಿದ್ರೆ ಅದಕ್ಕೆ ಸರಿಯಾದ ದಾಖಲೆಗಳನ್ನು ಕೊಡಬೇಕು. ಎಲ್ಲಾ ಕಡೆಯೂ ಐಟಿ ದಾಳಿಯಾಗುತ್ತಿರುತ್ತದೆ. ದಾಳಿಗೆ ಒಳಪಟ್ಟವರು ದಾಖಲೆ ಕೊಡಬೇಕಾದ್ದು ಅವರ ಕರ್ತವ್ಯ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ:
ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ. ಕೋಲಾರದಲ್ಲಿ ಬಿಜೆಪಿ ಅಲೆ ಮಾತ್ರ ಇರುವುದು. ಬಿಜೆಪಿ ಅಭ್ಯರ್ಥಿಯನ್ನು ಸೂಕ್ತ ಸಮಯಕ್ಕೆ ನಮ್ಮ ಪಕ್ಷ ಘೋಷಣೆ ಮಾಡುತ್ತೆ. ಆಗ ಹುಲಿಯನ್ನು ಬಿಡಬೇಕೋ ಸಿಂಹವನ್ನು ಬಿಡಬೇಕೋ ಬಿಟ್ಟೇ ಬಿಡುತ್ತೇವೆ. ಇದು ಸಿನಿಮಾಗೆ ಸಂಬಂಧಿಸಿದ ಚುನಾವಣೆ ಅಲ್ಲ ಎಂದರು. ಇನ್ನು ಕೋಲಾರದಲ್ಲಿ ಕಾರಣಾಂತರಗಳಿಂದ ವಿಜಯ ಸಂಕಲ್ಪ ಯಾತ್ರೆ ರದ್ದಾಗಿದ್ದು, ಮುಂದಿನ ದಿನಗಳಲ್ಲಿ ಯಾತ್ರೆ ಮಾಡುತ್ತೇವೆಂದರು. ವಿಜಯ ಸಂಕಲ್ಪ ಯಾತ್ರೆಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ:
ಇನ್ನು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿರುವುದನ್ನು ಖಾತ್ರಿ ಪಡಿಸಲು ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಶಿಲ್ಪ ಕಲಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದ್ವಿಚಕ್ರ ವಾಹನಗಳನ್ನು ಹಾಗೂ ವಿವಿಧ ಯೋಜನೆಗಳಡಿ ಆಯ್ಕೆಯಾದ ವಿದ್ಯಾನಿಧಿ, ಪಿ.ಎಂ.ಕಿಸಾನ್ ಸಮ್ಮಾನ್, ರೈತ ಶಕ್ತಿ ಯೋಜನೆ, ಭೂ ಒಡೆತನ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆದೇಶ ಪ್ರತಿ, ಆಭಾ ಕಾರ್ಡ್, ಪಡಿತರ ಚೀಟಿ, ಕಾರ್ಮಿಕ ಇಲಾಖೆಯಿಂದ ಮತ್ತು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.