ತಮಿಳುನಾಡು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕ ಬಂದ್ ಕೂಡಾ ಆಚರಿಸಲಾಗುತ್ತಿದೆ. ಈ ನಡುವೆ, ಕಾವೇರಿ ನದಿಯಿಂದ ಮತ್ತೆ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಒತ್ತಾಯ ಹೇರೋದಾಗಿ ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗೋದಾಗಿ ಹೇಳಿರುವ ದುರೈಮುರುಗನ್, ಕರ್ನಾಟಕಕ್ಕೆ ನೀರು ಬಿಡುವಂತೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸೋದಾಗಿ ಹೇಳಿದ್ದಾರೆ.
ಕಳೆದ ಮಂಗಳವಾರವಷ್ಟೇ ಹೊಸ ದಿಲ್ಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಹೇಳಿತ್ತು. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಆದೇಶಿಸಿತ್ತು. ವಿಪರ್ಯಾಸ ಎಂದರೆ ಅದೇ ದಿನ ಬೆಂಗಳೂರು ಬಂದ್ ಇತ್ತು. ಬೆಂಗಳೂರು ಬಂದ್ ಆಗಿದ್ದ ದಿನವೇ ಕಾವೇರಿ ನೀರು ನಿರ್ವಹಣಾ ಸಮಿತಿ ಕರ್ನಾಟಕ ಸರ್ಕಾರಕ್ಕೆ ಮತ್ತಷ್ಟು ಕಾವೇರಿ ನೀರು ಹರಿಸುವಂತೆ ಆದೇಶ ನೀಡಿತ್ತು.