ಯುಪಿಎಸ್ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಭಾನುವಾರ ಟ್ವಿಟರ್ ಅಭಿಯಾನ ಕೈಗೊಂಡಿದ್ದು ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
#ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ನಲ್ಲಿ ಭಾನುವಾರ ಬೆಳಗ್ಗೆ 10.10 ಗಂಟೆಯಿಂದ ಟ್ವಿಟರ್ ಅಭಿಯಾನ ಆರಂಭವಾಗಿ. ಇದರ ಜೊತೆಗೆ ವಿಚಾರ ಸಂಕಿರಣ, ಚಿತ್ರ- ಪತ್ರ ಚಳವಳಿಗಳನ್ನೂ ಸಂಘಟನೆ ಹಮ್ಮಿಕೊಂಡಿತ್ತು.
ಸಾವಿರಾರು ಜನರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಅಭಿಯಾನವನ್ನು ಇನ್ನು ಹೆಚ್ಚು ಕೈ ಜೋಡಿಸಿ ಎಂದು ಕನ್ನಡ ಮನಸ್ಸುಗಳು ಮನವಿ ಮಾಡಿ. #ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ನಲ್ಲಿ ಟ್ವೀಟ್ ಮಾಡಲು ಕರವೇ ತಿಳಿಸಿದ್ದೆ ತಡ ಟ್ವೀಟರ್ ನಲ್ಲಿ ಟ್ರೆಂಡ್ ಆಗಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಯುಪಿಎಸ್ ಸಿ ಪರೀಕ್ಷೆಗಳ ಎಲ್ಲ ಹಂತಗಳಲ್ಲೂ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು, ಕನ್ನಡದಲ್ಲೂ ಉತ್ತರ ಬರೆಯುವ ಅವಕಾಶ ಇರಬೇಕು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ. ಭಾರತ ಒಕ್ಕೂಟ ಸರ್ಕಾರ ಈ ಕೂಡಲೇ ಪರೀಕ್ಷಾ ವಿಧಾನ ಬದಲಿಸಿ, ಕನ್ನಡ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.
ಬ್ರಿಟಿಷರ ಕಾಲದ ಸಾಮ್ರಾಜ್ಯಶಾಹಿ ನೀತಿಗಳನ್ನೇ ಭಾರತ ಒಕ್ಕೂಟ ಸರ್ಕಾರ ಈಗಲೂ ಮುಂದುವರೆಸುತ್ತಿದೆ. ಇದರಿಂದಾಗಿ ಭಾರತದ ಹಿಂದಿಯೇತರ ಭಾಷಾ ಸಮುದಾಯಗಳು ಎರಡನೇ ದರ್ಜೆ ಪ್ರಜೆಗಳಂತೆ ಬದುಕುವಂತಾಗಿದೆ. ಹಿಂದೆ ನಾವು ಬ್ರಿಟಿಷರ ಗುಲಾಮರಾಗಿದ್ದೆವು. ಈಗ ಬ್ರಿಟಿಷರ ಜಾಗದಲ್ಲಿ ಹಿಂದಿ ಸಾಮ್ರಾಜ್ಯಶಾಹಿಗಳು ಕುಳಿತಿದ್ದಾರೆ.
ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಹಿಂದಿ ಭಾಷಿಕರಿಗೆ ಎಷ್ಟು ಹಕ್ಕಿದೆಯೋ ಕನ್ನಡ, ತಮಿಳು, ತೆಲುಗು, ಬಂಗಾಳಿ, ಮಲಯಾಳಂ, ಪಂಜಾಬಿ, ಒರಿಯಾ, ಮರಾಠಿ, ಕಾಶ್ಮೀರಿ, ಅಸ್ಸಾಮಿ ಇತ್ಯಾದಿ ಭಾಷಿಕರಿಗೂ ಅಷ್ಟೇ ಹಕ್ಕಿದೆ. ಹೀಗಿರುವಾಗ ಹಿಂದಿಯನ್ನರಿಗೆ ಮಾತ್ರ ಅವರ ನುಡಿಯಲ್ಲಿ ಪರೀಕ್ಷೆ ಬರೆಸುವ ಮೋಸ ಯಾಕೆ? ಎಂದು ಪ್ರಶ್ನಿಸಿದ್ದರು.
ಸಂವಿಧಾನದ ಹದಿನಾಲ್ಕನೇ ಪರಿಚ್ಛೇದದ ಪ್ರಕಾರ ಭಾರತದ ಎಲ್ಲ ನಾಗರಿಕರೂ ಸಮಾನರು. ಆದರೆ ಹಿಂದಿ ಭಾಷಿಕ ಸಮುದಾಯಕ್ಕೆ ಎಲ್ಲ ಅವಕಾಶಗಳನ್ನು ನೀಡಿ, ಇತರ ಭಾಷಿಕರ ಹಕ್ಕುಗಳನ್ನು ಕಿತ್ತುಕೊಂಡರೆ ಸಮಾನತೆ ಇರಲು ಸಾಧ್ಯವೇ? ಇದು ಯಾವ ರೀತಿಯ ಸಮಾನತೆ? ಇದನ್ನು ಹಿಂದಿಯೇತರ ಜನಸಮುದಾಯಗಳು ಕೇಳುತ್ತಿದ್ದೇವೆ.
ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯೂ ಇಲ್ಲ, ಕನ್ನಡದಲ್ಲಿ ಬರೆಯುವ ಅವಕಾಶವೂ ಇಲ್ಲ. ಪ್ರಿಲಿಮ್ಸ್ ಆದರಷ್ಟೇ ಮುಖ್ಯ ಪರೀಕ್ಷೆ ಬರೆಯುವ ಅವಕಾಶ. ಅಲ್ಲೂ ಸಹ ಪ್ರಶ್ನೆ ಪತ್ರಿಕೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ಇದು ಕನ್ನಡಿಗರ ಹಕ್ಕುಗಳನ್ನು ಮೊಟಕುಗೊಳಿಸಿದಂತಲ್ಲವೇ?
ಪ್ರತಿ ವರ್ಷ ಸಾವಿರಾರು ಮಂದಿ ಕನ್ನಡದ ಮಕ್ಕಳು ಕೆಪಿಎಸ್ ಸಿ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುತ್ತಾರೆ. ಇವರಿಗೆ ಯುಪಿಎಸ್ ಸಿ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ಇಲ್ಲ. ಇದರ ಅರ್ಥ ಕನ್ನಡಿಗರನ್ನು ಒಕ್ಕೂಟ ಸರ್ಕಾರ ಎರಡನೇ ದರ್ಜೆ ಪ್ರಜೆಗಳಂತೆ ನೋಡುತ್ತಿದೆ ಎಂದಾಗುವುದಿಲ್ಲವೇ? ಈ ಅನ್ಯಾಯ ಇನ್ನೆಷ್ಟು ದಿನ ಸಹಿಸುವುದು?
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಿಗರ ಚಳವಳಿಯ ಹಿನ್ನೆಲೆಯಲ್ಲಿ ಐಬಿಪಿಎಸ್ ಪರೀಕ್ಷೆಗಳಲ್ಲಿ ಕ್ಲರಿಕಲ್ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ದೊರೆತಿದೆ. ಆದರೆ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಇಲ್ಲ. ಆದರೆ ಹಿಂದಿ ಭಾಷಿಕರು ಎಲ್ಲ ಪರೀಕ್ಷೆಗಳನ್ನು ಹಿಂದಿಯಲ್ಲೇ ಬರೆಯುತ್ತಾರೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಸೇನಾ ನೇಮಕಾತಿಗಳ ಎಲ್ಲ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಗಳಲ್ಲೇ ನಡೆಯುತ್ತವೆ. ಇದರ ಉದ್ದೇಶವದರೂ ಏನು? ಕನ್ನಡಿಗರಿಗೆ ಉದ್ಯೋಗ ನಿರಾಕರಣೆಯ ಹಿಂದಿನ ಕುತಂತ್ರವಾದರೂ ಯಾಕೆ?
ರೈಲ್ವೆಯಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆ ನಡೆಸಲಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಕ್ರಾಂತಿಕಾರಿ ಹೋರಾಟದಿಂದಾಗಿ ಈಗ ಕನ್ನಡದಲ್ಲೂ ಪರೀಕ್ಷೆ ಬರೆಯುವ ಅವಕಾಶವಿದೆ. ಆದರೆ ಅಲ್ಲೂ ಸಹ ಮೇಲಿನ ಹಂತದ ಹುದ್ದೆಗಳ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲ.
ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲದಂತಾಗಿರುವಾಗ ಯುಪಿಎಸ್ ಸಿ ಪರೀಕ್ಷೆಗಳೇ ಯಾಕೆ ಬೇಕು ಎಂದು ನಾವು ಕೇಳಬೇಕಾಗುತ್ತೆ. ನಮ್ಮ ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೆಪಿಎಸ್ ಸಿ ಮೂಲಕವೇ ನೇಮಕ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಕಾಲ ಬಂದಿದೆ.
ಭಾರತ ಒಕ್ಕೂಟದಲ್ಲಿ ಗೌರವದ ಸ್ಥಾನ ಪಡೆಯಬೇಕಿದ್ದ ಕನ್ನಡಿಗರನ್ನು ತಮ್ಮ ಹಕ್ಕುಗಳಿಗಾಗಿ ಅಂಗಲಾಚುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಒಕ್ಕೂಟದ ರಾಜ್ಯಗಳ ಪೈಕಿ ಅತಿಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ಕರ್ನಾಟಕ. ಆದರೂ ನಮ್ಮ ಮೇಲೆ ಈ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಯುಪಿಎಸ್ ಸಿ ಮಾತ್ರವಲ್ಲ, ಒಕ್ಕೂಟ ಸರ್ಕಾರದ ಅಡಿಯಲ್ಲಿ ನಡೆಯುವ ಎಲ್ಲ ಉದ್ಯೋಗಗಳ ಎಲ್ಲ ಹಂತದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಇದು ನಮ್ಮ ಸಂವಿಧಾನಬದ್ಧ ಹಕ್ಕು. ಇದನ್ನು ನಿರಾಕರಿಸುವ ಯಾವುದೇ ಶಕ್ತಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮುಂದುವರೆಸಲಿದೆ. #UPSCInKannada #ಕನ್ನಡದಲ್ಲಿUPSC
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಕುರಿತು ಜನರ ಅಭಿಪ್ರಾಯ ಹೀಗಿದೆ