ಕರ್ನಾಟಕದಲ್ಲಿ 2021ರ (Karnataka) ಅಂತ್ಯದ ಹೊತ್ತಿಗೆ 19 ಸರ್ಕಾರಿ, 30ಖಾಸಗಿ ಮತ್ತು 12 ಡೀಮ್ಡ್ ವಿವಿ ವೈದ್ಯಕೀಯ ಕಾಲೇಜುಗಳಿವೆ. ಈ ಒಟ್ಟು ಅರವತ್ತೂ ಚಿಲ್ಲರೆ ಕಾಲೇಜುಗಳಲ್ಲಿ 19ಸರ್ಕಾರಿ ಕಾಲೇಜುಗಳನ್ನು ಬಿಟ್ಟು ಬಹುತೇಕ ಯಾವುದೇ ವೈದ್ಯಕೀಯ ಕಾಲೇಜನ್ನು ಪರಿಶೀಲಿಸಿದರೂ, ಅದು ರಾಜ್ಯದ ಯಾರಾದರೂ ಒಬ್ಬರು ಪ್ರಮುಖ ರಾಜಕಾರಣಿಯ ಕಡೆಗೆ ಬೊಟ್ಟು ಮಾಡುತ್ತದೆ.
ಉದಾರೀಕರಣದ ತನಕ ಕೇವಲ ಸರ್ಕಾರಿ ಗುತ್ತಿಗೆ, ಪೆಟ್ರೋಲ್ ಬಂಕು, ಗ್ಯಾಸ್ ಏಜನ್ಸಿ, ಸಾರಾಯಿ ಗುತ್ತಿಗೆಗೆ ತನ್ನ ಅನುಯಾಯಿಗಳು, ಬೆಂಬಲಿಗರ ಋಣ ಸಂದಾಯವನ್ನು ಸೀಮಿತಗೊಳಿಸಿಕೊಂಡಿದ್ದ ರಾಜಕೀಯ ಪಕ್ಷಗಳಿಗೆ 1990ರಲ್ಲಿ ಉದಾರೀಕರಣ ಪ್ರಕ್ರಿಯೆ ಆರಂಭಗೊಂಡ ಬಳಿಕ ದೊರೆತ ಹೊಸ ಅವಕಾಶ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಲೈಸನ್ಸ್. ಋಣದ ಗಾತ್ರಕ್ಕೆ ತಕ್ಕಂತೆ ಪ್ರಾಥಮಿಕ, ಹೈಸ್ಕೂಲು, ಕಾಲೇಜು, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ಕಾಲೇಜುಗಳಿಗೆ ಅವಕಾಶಗಳು ತೆರೆದುಕೊಳ್ಳತೊಡಗಿದವು.
ಯಾವುದೇ ದೀರ್ಘಕಾಲಿಕ ಚಿಂತನೆಗಳಿಲ್ಲದೆ ನಡೆದ ಈ “ಶಿಕ್ಷಣ ವ್ಯಾಪಾರ”ದ ಲೈಸನ್ಸ್ ನೀಡಿಕೆಯ ದುಷ್ಪರಿಣಾಮ ಕಳೆದ ನಾಲ್ಕೈದು ವರ್ಷಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗೋಚರಿಸಲಾರಂಭಿಸಿದೆ. ಈ ವರ್ಷ 25,000ದಷ್ಟು ಇಂಜಿನಿಯರಿಂಗ್ ಸೀಟುಗಳನ್ನು ಕೇಳುವವರಿಲ್ಲದೆ ಕಾಲೇಜುಗಳು ಪಾಳುಬಿದ್ದಿವೆಯಂತೆ. ಶಿಕ್ಷಣದ ವ್ಯಾಪಾರ ಬೇರೆಯದೇ ಚರ್ಚೆ. ಇಲ್ಲಿ ನಾವು ವೈದ್ಯಕೀಯ ಶಿಕ್ಷಣಕ್ಕೆ ಸೀಮಿತವಾಗಿ ಚರ್ಚಿಸುತ್ತಿದ್ದೇವೆ.
ರಾಜಕೀಯ ಹಾದಿಯಲ್ಲಿ ಗಳಿಸಿಕೊಂಡ ಅವಕಾಶಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಗಿಟ್ಟಿಸಿಕೊಂಡವರು, ಈಗ ಬೆಳೆದು, ರಾಜ್ಯದ ರಾಜಕೀಯ, ಸಂಸದೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ಥಾನಗಳಲ್ಲಿ ತಲುಪಿದ್ದಾರೆ, ಆಯಕಟ್ಟಿನ ಜಾಗಗಳಲ್ಲೆಲ್ಲ ಆವರಿಸಿಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ, ಈ ವ್ಯವಹಾರದ ವಿಚಾರದಲ್ಲಿ ಅಂತಿಮ ತೀರ್ಮಾನಗಳು ಯಾವತ್ತೂ ಅವರ ಹಿತಾಸಕ್ತಿಗಳ ಪರವೇ. ಇದು ಈವತ್ತಿನ “ಖಾಸಗಿ ಮೆಡಿಕಲ್ ಶಿಕ್ಷಣ” ವ್ಯವಸ್ಥೆಯ ತಾಯಿ ಬೇರು.
Also read : NEET ಎಂಬುದು ಕಾಸಿದ್ದವರ ಮೆಡಿಕಲ್ “ಮೀಸಲಾತಿ” ಯೋಜನೆ
ಹಾಲೀ ಅಧಿಕಾರದಲ್ಲಿರುವವರಂತು “Government has no business to be in business” ಎಂದು ತೀರ್ಮಾನಿಸಿಕೊಂಡು ಬಿಟ್ಟಿರುವುದು, ಈ ಲಾಬಿಗೆ ಹಾಲನ್ನ ಉಂಡಂತಾಗಿದೆ. ಶಿಕ್ಷಣ ಎಂಬುದು ಧಾರಾಳ ಹಣ ತಂದುಕೊಡುವುದರಿಂದ ಅದು “Business” ಎಂಬುದು ಅವರಿಗೆ ಖಚಿತವಾಗಿದೆ. ಹಾಗಾಗಿ ಈಗ ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳ ಕೊರತೆ ಇರುವುದನ್ನು ಮನಗಂಡಿರುವ ಅವರು PPP ಮಾಡೆಲ್ಲಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಪ್ರೋತ್ಸಾಹ ಕೊಡುತ್ತಿದ್ದಾರೆ. ಹಾಲೀ ಮೆಡಿಕಲ್ ಕಾಲೇಜು ಮಾಲಕರು ಈ ಅವಕಾಶವನ್ನು ತಮ್ಮ ವ್ಯವಹಾರ ವಿಸ್ತರಣೆಗೆ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಗಳನ್ನೇ ಈ ಖಾಸಗಿಯವರಿಗೆ ಪರಾಭಾರೆ ಮಾಡುವ ಸ್ಕೆಚ್ ರೆಡಿಯಾಗಿದೆ. ಇದಕ್ಕೆ ಜೀವಂತ ಉದಾಹರಣೆ ಉಡುಪಿಯಲ್ಲೇ ಸಿದ್ಧಗೊಳ್ಳುತ್ತಿದೆ.
ಕೋಟಿ ವೆಚ್ಚ ಮಾಡಿ ಕಲಿತು ಬರುವ ವೈದ್ಯರಿಗೆ ಅದಕ್ಕೆ ತಕ್ಕ ಸಂಬಳ ಸರ್ಕಾರಿ ವ್ಯವಸ್ಥೆಯಲ್ಲಿದೆಯೇ ಕೇಳಬೇಡಿ. ಕೋವಿಡ್ ಕಾಲದಲ್ಲಿ ವೈದ್ಯರು ಬೇಕೆಂದು ಸರ್ಕಾರಿ ಜಾಹೀರಾತುಗಳು ರಾಜ್ಯದಾದ್ಯಂತ ಎಷ್ಟು ಬಾರಿ ಅತ್ತು-ಕರೆದು ಮೊರೆಯಿಟ್ಟಿದ್ದವೆಂದು ನೆನಪಿಸಿಕೊಳ್ಳಿ. ಹೀಗೆ ಎಲ್ಲ ಹಂತಗಳಲ್ಲೂ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಕೊಂದು, ಖಾಸಗಿ ವೈದ್ಯಕೀಯ ಶಿಕ್ಷಣವನ್ನು ಭದ್ರಪಡಿಸಿಕೊಳ್ಳುವ ಮತ್ತು ವಿಮೆ ಆಧರಿತ “ಲಕ್ಸುರಿ ಕಾರ್ಪೋರೇಟ್ ಆರೋಗ್ಯ ಆರೈಕೆ” ವ್ಯವಸ್ಥೆಯನ್ನು ಮಾರುಕಟ್ಟೆ ಮಾಡುವ ಒಂದು ಆರ್ಕೆಸ್ಟ್ರೇಟೆಡ್ ಪ್ರಯತ್ನ ಕಳೆದ ಹತ್ತು ವರ್ಷಗಳಿಂದ ಬಲಗೊಳ್ಳುತ್ತಿದೆ. ಕೋವಿಡ್ ಸಂಕಷ್ಟ ಈ ಪ್ರಕ್ರಿಯೆಗೆ ವೇಗ ಕೊಟ್ಟಿದೆ.
ಅಂತಿಮವಾಗಿ ನಾನು ಹೇಳಬೇಕಿರುವುದು ಇಷ್ಟು:
ಒಂದು ಸರಳ ವೈದ್ಯಕೀಯ ಕಾಲೇಜು – ಆಸ್ಪತ್ರೆ ನಿರ್ಮಾಣವಾಗಲು ಮುನ್ನೂರರಿಂದ ಐನೂರು ಕೋಟಿ ರೂಪಾಯಿಗಳು ಬೇಕಾಗುತ್ತವೆ. ಒಂದೋ ಸರ್ಕಾರ ಇಲ್ಲವೇ ಧನಾಡ್ಯರು ಮಾತ್ರ ಕೈ ಹಾಕಬಹುದಾದ ವ್ಯವಹಾರ ಇದು. ಸರ್ಕಾರ ಈಗಾಗಲೇ ಆಗೋದಿಲ್ಲ ಎಂದಮೇಲೆ ಆಕಿ ಉಳಿದಿರುವುದು ಧನಾಢ್ಯ ವ್ಯವಹಾರಸ್ಥರು ಮಾತ್ರ. ಕೋವಿಡ್ ಕಾಲದಲ್ಲಿ ಸರ್ಕಾರೇತರ ಆರೋಗ್ಯ ವ್ಯವಸ್ಥೆ ಹೇಗೆ ಜನರನ್ನು ಸುಲಿಯಿತು ಮತ್ತು ಸೇವೆಯನ್ನು ವ್ಯಾಪಾರ ಮಾಡಿತು ಎಂಬ ನೆನಪು ಹಸಿ ಇರುವ ಈ ಸಂದರ್ಭದಲ್ಲೇ ಜನಸಾಮಾನ್ಯರು ಎಚ್ಚೆತ್ತುಕೊಂಡು ಪರ್ಯಾಯ ಹಾದಿಗಳನ್ನು ಕಂಡುಕೊಳ್ಳಬೇಕು.
೧. ಸರ್ಕಾರ ವೈದ್ಯಕೀಯ ಶಿಕ್ಷಣ ಕೊಡಲು ಸಿದ್ಧವಿಲ್ಲ ಎಂದಾದಲ್ಲಿ ಜನ ಒಟ್ಟಾಗಿ ಸಹಕಾರಿ ರಂಗದಲ್ಲೋ ಅಥವಾ ಬೇರಾವುದಾದರೂ ಜನ ಪಾಲುದಾರಿಕೆಯ ರೂಪದಲ್ಲೋ ವೈದ್ಯಕೀಯ ಶಿಕ್ಷಣ ಸಾಧ್ಯವೇ ಎಂಬುದರ ಕುರಿತು ಚಿಂತನೆ ಆರಂಭಿಸಬೇಕು. ಕೇವಲ ಕಾರ್ಪೋರೇಟ್ ಕೈಗೆ ಶಿಕ್ಷಣ ತಲುಪಿತೆಂದರೆ, ಅದು ಕೇಡುಗಾಲ.
Also Read : ಅರ್ಹತಾ ಪರೀಕ್ಷೆ ಹೆಸರಲ್ಲಿ, ದುಡ್ಡಿದ್ದರೆ ಮಾತ್ರ ಮೇಲುತೊಟ್ಟಿಲು ಕಟ್ಟುವ NEET
೨. ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಯುವ ಕಾಲೇಜುಗಳು ರಾಜ್ಯದವರಿಗೇ 95% ಪ್ರಾಶಸ್ತ್ಯ ಕೊಡಬೇಕು. ಹಾಗಾಗಿ ಬೇರೆ ರಾಜ್ಯಗಳಿಗೆ, ದುಡ್ಡಿದ್ದವರಿಗೆ ಬಾಗಿಲು ತೆರೆಯುವ ನೀಟ್ ಬೇಡ.
೩ ವೈದ್ಯಕೀಯ ಶಿಕ್ಷಣ ದುಬಾರಿಯಾಗದೇ ಗುಣಮಟ್ಟ ವರ್ಧನೆಯಾಗಲು, ದೂರಗಾಮಿ ಪರಿಣಾಮಗಳಾಗಬಲ್ಲ ಚಿಂತನೆ ಆರಂಭ ಆಗಬೇಕು.