ಉತ್ತರ ಪ್ರದೇಶದ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಸರಣಿಯಾಗಿ ಹಲವಾರು ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಶನಿವಾರ ಕೂಡ ಸುಮಾರು 36,230 ಕೋಟಿ ರೂ. ವೆಚ್ಚದ ʼಗಂಗಾ ಎಕ್ಸ್‌ಪ್ರೆಸ್-ವೇ ಯೋಜನೆಗೆʼ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ವೇಳೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಮೋದಿ, “ಇಂದು ಬುಲ್ಡೋಜರ್ ಮಾಫಿಯಾಗಳ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದಾಗ, ಆ ಮಾಫಿಯಾಗಳನ್ನು ಬೆಳೆಸಿದವರಿಗೆ ನೋವಾಗುತ್ತಿದೆ, ಮಾಫಿಯಾ ವಿರುದ್ಧ ಸಮರ ಸಾರಿರುವ ಯೋಗಿಯವರನ್ನು ಜನರು ʼUP + YOGI = ಉಪಯೋಗಿ, ಯೋಗಿ ಬಹುತ್ ಉಪಯೋಗಿ ಎಂದು ಬಣ್ಣಿಸಿದ್ದಾರೆ.
ಯಾದವರ ಭದ್ರಕೋಟೆ ಮೈನ್‌ಪುರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಈ ಸಂದರ್ಭದಲ್ಲೇ ಮೋದಿ ಬುಲ್ಡೋಜರ್ ರೂಪಕ ಬಳಸಿ ಮಾತನಾಡಿದ್ದು ಗಮನಾರ್ಹ.
ಐಟಿ ಇಲಾಖೆ ದಾಳಿ ಕುರಿತು ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಇದೀಗ ಐಟಿ ಬಂದಿದೆ, ಮುಂದೆ ಜಾರಿ ನಿರ್ದೇಶನಾಲಯ ಬರಲಿದೆ, ಸಿಬಿಐ ಕೂಡ ಬರಲಿದೆ. ಆದರೆ ಸೈಕಲ್ (ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ) ನಿಲ್ಲಲಾರದು” ಎಂದು ಅಖಿಲೇಶ್ ಮೋದಿ ವಿರುದ್ಧ ಕುಟುಕಿದ್ದಾರೆ.
ಇದಾದ ಕೆಲವು ಗಂಟೆಗಳ ನಂತರ ಪ್ರಧಾನಿ ತಮ್ಮ ಭಾಷಣದಲ್ಲಿ ಅಖಿಲೇಶ್ ಯಾದವ್‌ರಿಗೆ ತಿರುಗೇಟು ನೀಡಿ, “ಈ ಹಿಂದೆ ಜನರ ತೆರಿಗೆ ಹಣವನ್ನು ಯಾವ ರೀತಿಯಲ್ಲಿ ಬಳಸಿದ್ದರು ಎಂಬುದನ್ನು ನೀವು ನೋಡಿದ್ದೀರಿ. ಆದರೆ ಇಂದು ಯುಪಿ ಸರ್ಕಾರ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದೆ. ಈ ಮೊದಲು ಈ ಯೋಜನೆಗಳು ಕಾಗದದ ಮೇಲೆ ಮಾತ್ರ ಕಾಣಿಸಿಕೊಂಡಿದ್ದವು. ಯೋಜನೆಯ ಹಣ ಅವರ ತಿಜೋರಿ ಸೇರುತ್ತಿತ್ತು. ಇಂದು ನಿಮ್ಮ ಹಣ ಉಳಿತಾಯವಾಗಿದೆ, ಅದು ನಿಮ್ಮ ಜೇಬಿನಲ್ಲಿದೆ,ʼ ಎಂದು ಖಾತ್ರಿಪಡಿಸುವೆ ಎಂದಿದ್ದಾರೆ.

ರಾಜ್ಯ ಚುನಾವಣೆಗೆ ಮುನ್ನ ಯುಪಿಯಲ್ಲಿ ನಡೆದ ದೊಡ್ಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕರ ದಾಳಿಯ ಕುರಿತು ವಾಗ್ದಾಳಿ ನಡೆಸಿದ ಮೋದಿ, “ಕೆಲವು ರಾಜಕೀಯ ಪಕ್ಷಗಳು ದೇಶದ ಪರಂಪರೆ ಮತ್ತು ಪ್ರಗತಿ ವಿಚಾರದಲ್ಲಿ ತೊಡಕಾಗಿವೆ. ಇವರಿಗೆ ಕಾಶಿ ವಿಶ್ವನಾಥ ಧಾಮ, ಅಯೋಧ್ಯೆಯ ರಾಮ ಮಂದಿರ ಕೂಡ ಕಿರಿಕಿರಿಯಾಗಿವೆʼ ಎಂದು ತಿಳಿಸಿದರು.
“ಇವರೆಲ್ಲ ಸೇನೆಯ ಕ್ರಮಗಳು, ಮೇಕ್-ಇನ್-ಇಂಡಿಯಾ ಯೋಜನೆಗಳು, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ. ಇದು ದೊಡ್ಡ ದೇಶ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ನಾವು ದೇಶದ ಪ್ರಗತಿಯಿಂದ ಸಂತೋಷ ಪಡಬೇಕು. ಆದರೆ ಈ ಜನರು ಹಾಗೆ ಯೋಚಿಸುವುದಿಲ್ಲ, ಎಂದು ಎಂದು ಖೇದ ವ್ಯಕ್ತಪಡಿಸಿದರು.












