ಉತ್ತರ ಪ್ರದೇಶದಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಜೋರಾಗಿದೆ. ಈ ವಿಚಾರದಲ್ಲಿ ಬಿಜೆಪಿಗೆ ಹೆಚ್ಚು ಹೊಡೆತ ಬೀಳುತ್ತಿದೆ ಎಂದೇ ಹೇಳಬಹುದು. ಕಳೆದ ಒಂದು ವಾರದ ಅವಧಿಯಲ್ಲಿ ಬಿಜೆಪಿಯ ಪ್ರಭಾವಿ ಹಿಂದುಳಿದ ವರ್ಗಗಳ ಇಬ್ಬರು ಸಚಿವರು ಹಾಗೂ 6 ಶಾಸಕರು ಪಕ್ಷ ತೊರೆದು ಎಸ್ಪಿ ಹಾಗೂ ಆರ್ ಎಲ್ ಡಿ ಗೆ ಸೇರಿದ್ದರು. ಇದೀಗ ಇವರ ಸಾಲಿಗೆ ಯೋಗಿ ಸಂಪುಟದ ಮತ್ತೊಬ್ಬ ಸಚಿವ ಹಿಂದುಳಿದ ವರ್ಗಗಳ ನಾಯಕ ಧರ್ಮ್ ಸಿಂಗ್ ಸೈನಿ ಬಿಜೆಪಿಗೆ ಗುಡ್ ಬೈ ಹೇಳಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ 24 ಗಂಟೆಗಳ ಹಿಂದೆಯಷ್ಟೇ ಸೈನಿ ಬಿಜೆಪಿ ತೊರೆಯುವ ಪ್ರಶ್ನೆಯನ್ನು ನಿರಾಕರಿಸಿ ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದರು. ಆದರೆ 24 ಗಂಟೆ ಕಳೆದ ನಂತರ ಸೈನಿ ಎಸ್ಪಿಗೆ ಸೇರಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕರು ಪಕ್ಷ ತೊರೆದ ವಿಚಾರವಾಗಿ ಹರಿಹಾಯ್ದಿದ್ದ ಸೈನಿ ತಾವು ಮಾತ್ರ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದರು. ನಾಲ್ಕು ಭಾರಿ ನಾಕುಡ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸೈನಿ ಮುಂಬರುವ ಚುನಾವಣೆಯಲ್ಲಿ ಎಸ್ಪಿಯಿಂದ ಸ್ಪರ್ಧಿಸಬಹುದು.
ಈ ಕುರಿತು ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್ ಸೈನಿಯೊಂದಿಗೆ ಇರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಈ ನಡುವೆ ಬಿಜೆಪಿಯ ಶಾಸಕ ಹಿಂದುಳಿದ ವರ್ಗಗಳ ನಾಯಕ ಮುಕೇಶ್ ವರ್ಮಾ ಕೂಡ ಬಿಜೆಪಿಯನ್ನು ತೊರೆದಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಹಿತಿ ಇನ್ನೂ ತಿಳಿದಿಲ್ಲ.