ಮೊದಲ 2 ಹಂತಗಳ ಚುನಾವಣೆ ನಡೆದ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಜಾಟ್ ಸಮುದಾಯದ (jat community in uttar pradesh) ಪ್ರಾಬಲ್ಯವಿದೆ. ಈ ಬಾರಿ ಸಮಾಜವಾದಿ ಪಕ್ಷ (Samajawadi Party) ಮತ್ತು ಜಾಟ್ ಸಮುದಾಯದ ಪಕ್ಷ ಎಂದೇ ಹೇಳಲಾಗುವ ರಾಷ್ಟ್ರೀಯ ಲೋಕದಳ (Rashtriya Lok Dal) ಮೈತ್ರಿ ಮಾಡಿಕೊಂಡಿರುವುದರಿಂದ ಮೊದಲೆರಡು ಹಂತಗಳ ಮತದಾನದಲ್ಲಿ ಈ ಮೈತ್ರಿ ಮುನ್ನಡೆ ಸಾಧಿಸಬಹುದು ಎಂದು ಹೇಳಲಾಗುತ್ತಿದೆ. 3ನೇ ಹಂತದಲ್ಲಿ ಚುನಾವಣೆ ನಡೆದ 16 ಜಿಲ್ಲೆಗಳ 59 ಕ್ಷೇತ್ರಗಳು ಯಾದವ್ ಸಮುದಾಯದ (Yadav community ) ಪ್ರಭಾವವನ್ನು ಹೊಂದಿವೆ. ಹಾಗಾಗಿ 3ನೇ ಹಂತದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಗಳಿಸಬಹುದು ಎಂಬ ಲೆಕ್ಕಾಚಾರ ಇದೆ. ಹೀಗೆ ಮೊದಲ ಮೂರೂ ಹಂತಗಳು ಆಶಾದಾಯಕವಾಗಿಲ್ಲದ ಕಾರಣಕ್ಕೆ ಬಿಜೆಪಿಗೆ ನಾಳೆ (ಫೆಬ್ರವರಿ 23ರಂದು) ನಡೆಯುವ 4ನೇ ಹಂತದ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ.
4ನೇ ಹಂತದಲ್ಲಿ 9 ಜಿಲ್ಲೆಗಳ 60 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರೋಹಿಲ್‌ಖಂಡ್‌ನಿಂದ ತೆರಾಯ್ ಬೆಲ್ಟ್ ಮತ್ತು ಅವಧ್ ಪ್ರದೇಶದವರೆಗೆ 4ನೇ ಹಂತ ಮತದಾನವಾಗಿದ್ದು ಇಲ್ಲಿ ಸೋನಿಯಾ ಗಾಂಧಿ (Sonia gandhi) ಅವರ ಲೋಕಸಭಾ ಕ್ಷೇತ್ರ ರಾಯ್ ಬರೇಲಿ, ರಾಜನಾಥ್ ಸಿಂಗ್ ಅವರ ಲೋಕಸಭಾ ಕ್ಷೇತ್ರ ಲಕ್ನೋ, ಮೇನಕಾ ಗಾಂಧಿ (Menaka Gandhi) ಮತ್ತು ವರುಣ್ ಗಾಂಧಿ ಅವರ ಪಿಲಿಭಿತ್, ಇತ್ತೀಚೆಗೆ ರೈತರ ಹತ್ಯಾಕಾಂಡ ನಡೆದ ಲಖಿಂಪುರ ಖೇರಿ, ಕೆಲ ದಿನಗಳ ಹಿಂದೆ ದಲಿತರ ನರಮೇಧ ನಡೆದ ಉನ್ನಾವೋ, ಫತೇಪುರ್ ಮತ್ತು ಬಂದಾ ಜಿಲ್ಲೆಗಳು ಇವೆ. 60 ಸ್ಥಾನಗಳ ಪೈಕಿ 16 ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಸಮಾಜವಾದಿ ಪಕ್ಷ 58 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಓಂ ಪ್ರಕಾಶ್ ರಾಜ್‌ಭರ್ ಅವರ ಪಕ್ಷಕ್ಕೆ ಉಳಿದ ಎರಡು ಸ್ಥಾನಗಳನ್ನು ನೀಡಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್ ಎಲ್ಲಾ 60 ಸ್ಥಾನಗಳಿಗೆ ಸೆಣಸಾಡುತ್ತಿವೆ. ಬಿಜೆಪಿ 57 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಅಪ್ನಾ ದಳಕ್ಕೆ 3 ಸ್ಥಾನ ಬಿಟ್ಟುಕೊಟ್ಟಿದೆ.
ಈ ಕ್ಷೇತ್ರಗಳಲ್ಲಿ 2017ರ ಚುನಾವಣೆಯಲ್ಲಿ ಸಂಪೂರ್ಣವಾಗಿ ಬಿಜೆಪಿ (BJP) ಪರವಾದ ಅಲೆ ಕಂಡುಬಂದಿತ್ತು. 60 ಸ್ಥಾನಗಳಲ್ಲಿ ಬಿಜೆಪಿ 51 ಮತ್ತು ಅದರ ಮೈತ್ರಿ ಪಕ್ಷ ಅಪನಾದಳ 1 ಗೆದ್ದಿದ್ದವು. ಸಮಾಜವಾದಿ ಪಕ್ಷ 4, ಕಾಂಗ್ರೆಸ್ ಮತ್ತು ಬಿಎಸ್‌ಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. ಬಳಿಕ ಕಾಂಗ್ರೆಸ್‌ನಿಂದ ಗೆದ್ದಿದ್ದ ಇಬ್ಬರು ಶಾಸಕರು ಮತ್ತು ಬಿಎಸ್‌ಪಿಯ ಓರ್ವ ಶಾಸಕ ಬಿಜೆಪಿಗೆ ಸೇರಿದ್ದರು. ಅಲ್ಲಿಗೆ ಬಿಜೆಪಿ ಇಲ್ಲಿ 55 ಸ್ಥಾನಗಳನ್ನು (ಶೇಕಡಾ 90ರಷ್ಟು) ತನ್ನದಾಗಿಸಿಕೊಂಡಿತ್ತು. 9 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲಕ್ನೋ ಜಿಲ್ಲೆಯ 9 ಸ್ಥಾನಗಳ ಪೈಕಿ ಬಿಜೆಪಿ 8 ಸೀಟು ಗೆದ್ದುಕೊಂಡಿತ್ತು. ಹರ್ದೋಯ್ ಜಿಲ್ಲೆಯ 8 ಸ್ಥಾನಗಳಲ್ಲಿ 7 ಕಡೆ ಬಿಜೆಪಿ ಗೆದ್ದಿತ್ತು. ಸೀತಾಪುರ ಜೆಲ್ಲೆಯಲ್ಲು 9ರ ಪೈಕಿ 7 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಬಂಡಾ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ತಲಾ 6 ಸ್ಥಾನಗಳನ್ನು ಗೆದ್ದಿತ್ತು.
ಲಖಿಂಪುರ್ ಖೇರಿ (lakhimpur kheri) ಪ್ರಕರಣದ ಪರಿಣಾಮ
2021ರ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿ ರೈತರ ಹತ್ಯಾಕಾಂಡ ಪ್ರಕರಣ ಕೂಡ ಉತ್ತರ ಪ್ರದೇಶ ಚುನಾವಣೆಯ (Uttar Pradesh Election) ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಘಟನೆ ನಡೆದ ತೆರಾಯ್ ಪ್ರದೇಶದಲ್ಲಿ. ಇಲ್ಲಿ ಕೂಡ 4ನೇ ಹಂತದಲ್ಲಿ ಮತದಾನ ನಡೆಯಲಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ (Union minister Ajay Kumar Mishra ‘Teni’ ) ಅವರ ಪುತ್ರ ಆಶಿಶ್ ಮಿಶ್ರಾ (Ashish Mishra) ಅವರು ಲಖಿಂಪುರ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ರೈತರನ್ನು ಕಾರಿನಲ್ಲಿ ಕೊಂದ ಆರೋಪ ಹೊತ್ತಿದ್ದಾರೆ. ಆಶಿಶ್ ಮಿಶ್ರಾ ಅವರನ್ನು ಉಳಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಬಿಜೆಪಿ ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಬಿಂಬಿತವಾಗಿರುವುದು ತೆರಾಯ್ ಪ್ರದೇಶದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಲಖಿಂಪುರ ಖೇರಿ ಮತ್ತು ನೆರೆಯ ಜಿಲ್ಲೆಗಳಾದ ಪಿಲಿಭಿತ್, ಹರ್ದೋಯಿ ಮತ್ತು ಸೀತಾಪುರದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಪಿಲಿಭಿತ್‌ನ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು 2017 ರಲ್ಲಿ ಬಿಜೆಪಿ ಗೆದ್ದಿತ್ತು. ಹರ್ದೋಯ್‌ನಲ್ಲಿ ಬಿಜೆಪಿ 8 ವಿಧಾನಸಭಾ ಸ್ಥಾನಗಳ ಪೈಕಿ 7 ಸ್ಥಾನಗಳನ್ನು ವಶಪಡಿಸಿಕೊಂಡಿದ್ದರೆ, ಸೀತಾಪುರದಲ್ಲಿ ಬಿಜೆಪಿ 9 ರಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿತು. ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣವು ಚುನಾವಣೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದರೆ ಬಿಜೆಪಿಯು ಸ್ವಲ್ಪ ನೆಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
ನಾಲ್ಕನೇ ಹಂತವು ಅನೇಕ ಹಿರಿಯ ನಾಯಕರ ಪ್ರಾಬಲ್ಯವನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅದಿತಿ ಸಿಂಗ್ ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಸದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಸಮಾಜವಾದಿ ಪಕ್ಷದ ಆರ್‌ಪಿ ಯಾದವ್ ವಿರುದ್ಧ ಕಣಕ್ಕಿಳಿದಿದ್ದಾರೆ. ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ಮತ್ತು ಪಕ್ಷದ ಬ್ರಾಹ್ಮಣ ಮುಖ, ಬ್ರಿಜೇಶ್ ಪಾಠಕ್ ಅವರು ತಮ್ಮ ಹಳೆಯ ಸ್ಥಾನವನ್ನು ತ್ಯಜಿಸಿ ಲಕ್ನೋ ಕ್ಯಾಂಟ್ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪೊಲೀಸ್ ಅಧಿಕಾರಿ ಹುದ್ದೆ ತೊರೆದು ರಾಜಕೀಯ ಪ್ರವೇಶಿಸಿರುವ ರಾಜೇಶ್ವರ್ ಸಿಂಗ್ ಸರೋಜಿನಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರ ವಿರುದ್ಧ ಸಮಾಜವಾದಿ ಪಕ್ಷದ ಮಾಜಿ ಸಚಿವ ಅಭಿಷೇಕ್ ಮಿಶ್ರಾ ಕಣದಲ್ಲಿದ್ದಾರೆ.
ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದ ಮನೋಜ್ ಪಾಂಡೆ ಅವರು ತಮ್ಮ ಸಾಂಪ್ರದಾಯಿಕ ಸ್ಥಾನವಾದ ಉಂಚಹರ್‌ನಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ವಿರುದ್ಧ ಬಿಜೆಪಿ ಅಮರನಾಥ್ ಮೌರ್ಯ ಅವರನ್ನು ಕಣಕ್ಕಿಳಿಸಿದೆ. ನರೇಶ್ ಅಗರ್ವಾಲ್ ಅವರ ಪುತ್ರ ನಿತಿನ್ ಅಗರ್ವಾಲ್ ಈ ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಹರ್ದೋಯ್ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದಾರೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರು ಉನ್ನಾವೋ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸಂಸದ ವಿಶಂಭರ್ ಪ್ರಸಾದ್ ನಿಶಾದ್ ಅವರು ಫತೇಪುರ್‌ನ ಅಯಾ ಶಾ ಅಸೆಂಬ್ಲಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಹೀಗೆ 4ನೇ ಹಂತ ತೀವ್ರ ಕುತೂಹಲ ಮೂಡಿಸಿದೆ. ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ. ರಾಷ್ಟ್ರ ನಾಯಕರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಕಳೆದ ಬಾರಿಯಂತೆ ಈ ಸಲವೂ ಇಲ್ಲಿ ಭರ್ಜರಿ ಮುನ್ನಡೆ ಸಾಧಿಸಿದರೆ ಮಾತ್ರ ಇನ್ನೊಮ್ಮೆ ಉತ್ತರ ಪ್ರದೇಶದ ಗದ್ದುಗೆ ಏರಲು ಸಾಧ್ಯವಾಗುತ್ತದೆ.