ಈ ರೀತಿಯ ಊಟವನ್ನು ಪ್ರಾಣಿಗಳು ಕೂಡ ತಿನ್ನಲು ಸಾಧ್ಯವಿಲ್ಲ. ಈ ವಿಷಯದ ಬಗ್ಗೆ ಗಲಾಟೆ ಮಾಡಿದರೆ ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ನಮಗೆ ಸರಿಯಾದ ಊಟ ಸಿಗದಿದ್ದರೆ ನಾವು ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಣ್ಣೀರು ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ನ ಪೊಲೀಸ್ ರಸ್ತೆಯಲ್ಲಿ ತನಗೆ ನೀಡಿದ ಊಟವನ್ನು ಪ್ರದರ್ಶಿಸುತ್ತಾ ಪೊಲೀಸ್ ಮೆಸ್ನಲ್ಲಿ ನೀಡಲಾದ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಕಣ್ಣೀರು ಹಾಕಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಮನೋಜ್ ಕುಮಾರ್ ತಮಗೆ ಪೊಲೀಸ್ ಮೆಸ್ನಲ್ಲಿ ಪ್ರತಿದಿನ ನೀಡಲಾಗುವ ರೊಟ್ಟಿ, ದಾಲ್ ಮತ್ತು ಅನ್ನದ ತಟ್ಟೆಯನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಅಳುತ್ತಾ ತನ್ನ ಸಂಕಷ್ಟ ಹೇಳಿಕೊಂಡಿದ್ದಾರೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಪೊಲೀಸ್ ಠಾಣೆಯೊಳಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ.
ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನೋಜ್ ಹೇಳಿದ್ದಾರೆ. ಒಳ್ಳೆಯ ಊಟ ಕೊಡಿ ಎಂದಿದ್ದಕ್ಕೆ ನನ್ನನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು. ಆದರೆ, ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಿಸಿದರೂ ನಮಗೆ ಸಿಗುವ ಊಟ ಈ ರೀತಿಯದ್ದು. ಇದನ್ನು ಪ್ರಾಣಿಗಳು ಕೂಡ ತಿನ್ನುವುದಿಲ್ಲ. ಇದನ್ನು ತಿಂದು ೧೨ ಗಂಟೆ ಕೆಲಸ ಮಾಡುವುದು ಹೇಗೆ ಎಂದು ಮನೋಜ್ ಕುಮಾರ್ ಪ್ರಶ್ನಿಸಿದ್ದಾರೆ.
ನಮಗೆ ಸರಿಯಾದ ಆಹಾರ ಸಿಗದಿದ್ದರೆ ಪೊಲೀಸರು ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಮನೋಜ್ ಕುಮಾರ್ ಪ್ರಶ್ನಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಫಿರೋಜಾಬಾದ್ ಪೊಲೀಸರು, ಕಾನ್ಸ್ಟೆಬಲ್ ಮನೋಜ್ ಕುಮಾರ್ ಅವರಿಗೆ ಶಿಸ್ತಿಲ್ಲ.
ಈಗಾಗಲೇ ಅವರು ಶಿಸ್ತಿನ ಕೊರತೆಯಿಂದ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆ ಗಡಿಯಲ್ಲಿ ಕೂಡ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ಸೈನಿಕನೊಬ್ಬ ಅಳಲು ತೊಡಿಕೊಂಡಿದ್ದು, ಚಹಾದಲ್ಲಿ ರೋಟಿ ಅದ್ದಿ ತಿನ್ನಬೇಕಾದ ಪರಿಸ್ಥಿತಿಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಆ ಸೈನಿಕನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.