ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲಾಠಿ, ಕಲ್ಲು, ಬಂದೂಕು ಅಷ್ಟೇ ಯಾಕೆ ಬಾಂಬ್ ಗಳು ಕೂಡಾ ಪಾಲ್ಗೊಂಡಿವೆ. ರಕ್ಷಣೆ ನೀಡಬೇಕಾಗಿದ್ದ ಪೊಲೀಸರ ಮೇಲೆ ದಾಳಿಯಾದಾಗಲೂ ಅಸಹಾಯಕರಂತೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಸಾಮಾನ್ಯವಾಗಿ ಉತ್ತರ ಪ್ರದೇಶದಿಂದ ಪೊಲೀಸರ ದೌರ್ಜನ್ಯದ ಕುರಿತಾದ ಸುದ್ದಿಗಳು ಬರುತ್ತಿದ್ದವು. ತೀರಾ ಅಪರೂಪವೆಂಬಂತೆ, ಪೊಲೀಸರೊಬ್ಬರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಅಸಹಾಯಕತೆಯಿಂದ ಮೇಲಧಿಕಾರಿಗೆ ಕರೆ ಮಾಡಿ ತಿಳಿಸುತ್ತಿರುವ ಘಟನೆ ಈ ಬಾರಿ ವರದಿಯಾಗಿದೆ.
ಇಟಾವ ಜಿಲ್ಲೆಯ ಎಸ್ ಪಿ ಆಗಿರುವ ಪ್ರಶಾಂತ್ ಕುಮಾರ್ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. “ಇವರು ನಮ್ಮ ಮೇಲೆ ಕಲ್ಲು ಮತ್ತು ಇಟ್ಟಿಗೆ ಎಸೆಯುತ್ತಿದ್ದಾರೆ ಸರ್. ನನ್ನ ಕೆನ್ನೆಗೂ ಬಾರಿಸಿದರು. ಬಾಂಬ್ ಗಳನ್ನು ಕೂಡಾ ತಂದಿದ್ದಾರೆ. ಬಿಜೆಪಿಯ ಜನರು. ಶಾಸಕ ಮತ್ತು ಜಿಲ್ಲಾಧ್ಯಕ್ಷ,” ಎಂದು ಅವರು ಫೋನ್ ನಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ರೆಕಾರ್ಡ್ ಆಗಿದೆ
ಇನ್ನೊಂದು ವಿಡಿಯೋದಲ್ಲಿ ಪ್ರಶಾಂತ್ ಕುಮಾರ್ ಅವರ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಅಜಯ್ ಧಾಕ್ರೆ ಆವಾಜ್ ಹಾಕುತ್ತಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ.
ಈ ಪರಿಸ್ಥಿತಿ ಕೇವಲ ಪೊಲೀಸರದಷ್ಟೇ ಅಲ್ಲದೇ ಪತ್ರಕರ್ತರದೂ ಆಗಿತ್ತು. ಈ ಬಾರಿ ಉನ್ನಾವೋದಲ್ಲಿ ಒಬ್ಬ ಹಿರಿಯ ಅಧಿಕಾರಿ ಪತ್ರಕರ್ತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ಪತ್ರಕರ್ತರು ಸ್ಥಳದಲ್ಲಿಯೇ ಧರಣಿಗೆ ಕುಳಿತುಕೊಂಡರು.
ಇಂತಹ ಅಹಿತಕಾರಿ ಘಟನೆಗಳ ಕುರಿತಾಗಿ ಹೇಳಿಕೆ ನೀಡಿರುವ ಇಟಾವಾ ಜಿಲ್ಲೆಯ SSP ಬ್ರಜೇಶ್ ಕುಮಾರ್ ಅವರು, ಜನರ ಗುಂಪು ಪೋಲಿಂಗ್ ಬೂತ್ ಕಡೆಗೆ ಬರುವುದನ್ನು ತಡೆಯಲು ಪ್ರಯತ್ನಿಸಿದೆವು. ಆಗ, ಕಲ್ಲು ತೂರಾಟ ಮತ್ತು ಫೈರಿಂಗ್ ಶುರುವಾಯಿತು. ನಮ್ಮಲ್ಲಿ ಸಿಸಿಟಿವಿ ಫೂಟೇಜ್ ಇದೆ. ಚುನಾವಣೆ ಮುಗಿದ ಬಳಿಕ ಈ ಕುರಿತಾಗಿ ವಿಚಾರಣೆ ನಡೆಸಲಿದ್ದೇವೆ. ಶೀಘ್ರದಲ್ಲಿಯೇ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ.
ದಾಳಿಯೇ ಚುನಾವಣೆ ಗೆಲ್ಲುವ ‘ಮಾಸ್ಟರ್ ಸ್ಟ್ರೋಕ್’- ರಾಹುಲ್ ಗಾಂಧಿ ಟೀಕೆ
ಚುನಾವಣೆ ವೇಳೆಯಲ್ಲಿ ನಡೆದಿರುವ ‘ಹಿಂಸೆ’ಯನ್ನು ಮರುನಾಮಕರಣ ಮಾಡಿ ಮಾಸ್ಟರ್ ಸ್ಟ್ರೋಕ್ ಎಂದು ಕರೆಯಲಾಗುವುದು, ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಚುನಾವಣೆ ವೇಳೆ ನಡೆದಿರುವ ಅನಾಹುತಕಾರಿ ಘಟನೆಗಳ ಕುರಿತು ಪ್ರಿಯಾಂಕ ಗಾಂಧಿ ಕೂಡಾ ಯೋಗಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
“ಕೆಲವು ವರ್ಷಗಳ ಹಿಂದೆ, ಅತ್ಯಾಚಾರ ಸಂತ್ರಸ್ತೆ ಬಿಜೆಪಿ ಶಾಸಕರ ವಿರುದ್ದ ದನಿ ಎತ್ತಿದ್ದಳು. ಅವಳನ್ನು ಮತ್ತು ಅವಳ ಕುಟುಂಬವನ್ನು ಕೊಲ್ಲಲಾಯಿತು. ಮಹಿಳೆ ನಾಮಪತ್ರ ಸಲ್ಲಿಸುವುದನ್ನು ತಡೆಯುವ ಮೂಲಕ ಬಿಜೆಪಿ ಎಲ್ಲಾ ಮಿತಿಗಳನ್ನು ದಾಟಿದೆ. ಅದೇ ಸರ್ಕಾರ, ಅದೇ ವರ್ತನೆ,” ಎಂದು ಅವರು ಹೇಳಿದ್ದಾರೆ.