ಸ್ವತಂತ್ರ ಭಾರತದ ಇತಿಹಾಸದಲ್ಲಿ ಜಾತಿ, ಮತ, ಭಾಷೆ ಮತ್ತು ಸಾಮುದಾಯಿಕ ಅಸ್ಮಿತೆಗಳು ಸದಾ ಕಾಲವೂ ತಮ್ಮ ಸೂಕ್ಷ್ಮತೆಯನ್ನು ಉಳಿಸಿಕೊಂಡೇ ಬಂದಿದೆ. ಸಮ ಸಮಾಜ ನಿರ್ಮಾಣದ ಕನಸನ್ನು ಹೊತ್ತು, ಸೌಹಾರ್ದಯುತ ಪರಿಸರವನ್ನು ರೂಪಿಸುವ ನಿಟ್ಟಿನಲ್ಲಿ ಈ ನಾಲ್ಕೂ ವಿದ್ಯಮಾನಗಳು ನೆರವಾಗಿರುವಷ್ಟೇ ತೊಡಕುಗಳಾಗಿಯೂ ಪರಿಣಮಿಸಿವೆ. ೭೪ ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ, ಜಾತ್ಯತೀತೆಯ ತತ್ವಗಳಿಗೆ ಬದ್ಧತೆಯನ್ನು ಪ್ರಮಾಣೀಕರಿಸಿ ಏಳು ದಶಕಗಳ ನಂತರವೂ ಭಾರತದಲ್ಲಿ ಈ ನಾಲ್ಕು ವಿದ್ಯಮಾನಗಳು ಸಾರ್ವಜನಿಕ ಜೀವನದಲ್ಲಿ ಪ್ರಕ್ಷ ಬದ್ದತೆಯನ್ನು, ಗೊಂದಲಗಳನ್ನು, ವಿವಾದಗಳನ್ನು ಸೃಷ್ಟಿಸುತ್ತಲೇ ಇವೆ. ಚಿಕಿತ್ಸಕ ಗುಣ ಇಲ್ಲದ ಯಾವುದೇ ಒಂದು ಸಾಂಪ್ರದಾಯಿಕ ಸಮಾಜದಲ್ಲಿ ಇದು ಸಹಜ ಪ್ರಕ್ರಿಯೆ.
ವೈವಿಧ್ಯಮಯ ಸಂಸ್ಕೃತಿಗಳನ್ನೊಳಗೊಂಡ ಭಾರತೀಯ ಸಮಾಜ ಕ್ರಮೇಣ ತನ್ನ ಚಿಕಿತ್ಸಕ ಗುಣಗಳನ್ನು ಕಳೆದುಕೊಳ್ಳುತ್ತಾ, ಸಾಮಾಜಿಕ ವಿಘಟನೆಗೆ ಎಡೆಮಾಡಿಕೊಡುತ್ತಿದೆ. ಈ ನಾಲ್ಕೂ ಅಸ್ಮಿತೆಗಳನ್ನು ಒಂದು ಸುಸ್ಥಿರ ಮಾನವೀಯ ಸಮಾಜದ ನಿರ್ಮಾಣಕ್ಕೆ ಮೆಟ್ಟಿಲುಗಳನ್ನಾಗಿ ಬಳಸಬೇಕಾಗಿದ್ದ ಸಾಂಪ್ರದಾಯಿಕ ಸಮಾಜ, ಇವುಗಳನ್ನು ರಾಜಕೀಯ ಬಂಡವಾಳವನ್ನಾಗಿ, ಸಾಮಾಜಿಕ ಅಸ್ಮಿತೆಗಳ ಆಗರಗಳಾಗಿ, ಸಾಂಸ್ಕೃತಿಕ ಪಾರಮ್ಯದ ಸಾಧನಗಳಾಗಿ ಬಳಸುತ್ತಲೇ ಬಂದಿದೆ. ಇದರ ಪರಿಣಾಮವೇ ಇಂದು ಸಮಾಜ ತನ್ನ ಸೃಜನಶೀಲ ಗುಣಗಳನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿದೆ. ಪಾರಂಪರಿಕ ಬೇರುಗಳಿಗೆ ಅಂಟಿಕೊAಡೇ, ದಲಿತ ಕಾಂಡಗಳಿಗೆ ಅಸ್ಮಿತೆಯ ಲೇಪನಗಳನ್ನು ನೀಡುವ ಮೂಲಕ ಭಾರತದ ಜಾತಿ ವ್ಯವಸ್ಥೆಯ ಪಾಲಕರು ಯುವ ಪೀಳಿಗೆಯ ದಿಕ್ಕು ತಪ್ಪಿಸುತ್ತಿದ್ದಾರೆ.
ಜಾತಿ ಎನ್ನುವುದು ನಮ್ಮ ದೇಶದ ವ್ಯಾಧಿಯಾಗಿ ಶತಮಾನಗಳಿಂದ ಕಾಡುತ್ತಲೇ ಇದೆ. ಜಾತಿ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪಾರಮ್ಯ ಒಂದು ವ್ಯಸನವಾಗಿ ಸಮಾಜದ ಎಲ್ಲ ವರ್ಗಗಳನ್ನೂ ಆವರಿಸುತ್ತಿದೆ. ವ್ಯಾಧಿಯನ್ನು ಶಮನಗೊಳಿಸುವ ಬದಲು, ಸಾಮೂಹಿಕ ಅರಿವಳಿಕೆಯ ಸಾಧನಗಳನ್ನು ಬಳಸಿ, ಸೃಜನಶೀಲ ಮನಸುಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತಿದೆ. ಹೊಸತನ್ನು ಸೃಜಿಸಬೇಕಾದ ಯುವ ಮನಸುಗಳೂ ಸಹ ಪ್ರಾಚೀನತೆಯನ್ನೇ ವೈಭವೀಕರಿಸುವ ಮಟ್ಟಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಶಕ್ತಿಗಳು ತಮ್ಮ ಪಾರಮ್ಯ ಸಾಧಿಸಿವೆ. ಹಿಂದೂ ಮತದ ಪ್ರತಿಪಾದಕರಲ್ಲಿ ಭದ್ರವಾಗಿ ತಳವೂರಿರುವ ವೈದಿಕಶಾಹಿ ಧೋರಣೆ, ಎಲ್ಲ ರೀತಿಯ ಸೃಜನಶೀಲತೆಯನ್ನೂ ಶ್ರೇಷ್ಠತೆಯ ಚೌಕಟ್ಟಿನೊಳಗೇ ಬಂಧಿಸಿಡುವ ಮೂಲಕ, ಒಂದು ಸಂವೇದನಾರಹಿತ ಸಮಾಜವನ್ನು ಕಟ್ಟಲು ಯತ್ನಿಸುತ್ತಿದೆ. ದಿನೇ ದಿನೇ ರಾಜಕೀಯವಾಗಿ ಬಲಗೊಳ್ಳುತ್ತಿರುವ ಹಿಂದುತ್ವ ಮತ್ತು ಈ ರಾಜಕಾರಣಕ್ಕೆ ಸಾಮಾಜಿಕ-ಸಾಂಸ್ಕೃತಿಕ ಸ್ಪರ್ಶ ನೀಡುವ ಮನುಸ್ಮೃತಿ ಆಧರಿತ ಚಿಂತನೆಗಳು ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸುವುದೇ ಅಲ್ಲದೆ, ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಗಳನ್ನು ತೆಳುಪರದೆಯ ಹಿಂದೆ ಕಾಪಾಡಿಕೊಂಡೇ ಬಂದಿದೆ.
ಸೃಜನಶೀಲತೆಯನ್ನು ಕಳೆದುಕೊಂಡ ಸಮಾಜ ಕ್ರಿಯಾಶೀಲತೆಯನ್ನೂ ಸೃಜಿಸುವುದಿಲ್ಲ ಎಂದು ನಿರೂಪಿಸಲು, ಜಾತಿಪೀಡಿತ ಭಾರತೀಯ-ಹಿಂದೂ ಸಮಾಜವೇ ಸಾಕು. ಮೇಲ್ಜಾತಿಗಳ ಮೇಲರಿಮೆ ಮತ್ತು ವೈದಿಕಶಾಹಿಯ ಶ್ರೇಷ್ಠತೆಯ ಅಹಮಿಕೆಗಳು ತಮ್ಮ ಸಾಂಸ್ಕೃತಿಕ ಪಾರಮ್ಯವನ್ನು ಉಳಿಸಿಕೊಳ್ಳಲು ಬಂಡವಾಳಶಾಹಿಯನ್ನು ಬಳಸಿಕೊಳ್ಳುವಷ್ಟೇ ಜಾಣ್ಮೆಯಿಂದ ಹಿಂದುತ್ವ ರಾಜಕಾರಣವನ್ನೂ ಬಳಸಿಕೊಳ್ಳುತ್ತಿವೆ. ಹಾಗಾಗಿಯೇ ಶಮನಗೊಳಿಸಬೇಕಾದ ವ್ಯಾಧಿ ಉಲ್ಬಣಿಸುತ್ತಲೇ ಹೋಗುತ್ತಿದೆ ಅದರೊಟ್ಟಿಗೆ ಒಂದು ಇಡೀ ಪೀಳಿಗೆಯನ್ನು ಮತವ್ಯಸನಿಗಳನ್ನಾಗಿ ಮಾಡುತ್ತಿದೆ. ಈ ಮತವ್ಯಸನಿಗಳೇ ನಮಗೆ ಅಸ್ಸಾಂನ ಛಾಯಾಗ್ರಾಹಕನಲ್ಲಿ, ಕೊಪ್ಪಳದ ದೇವಸ್ಥಾನದ ಧರ್ಮದರ್ಶಿಗಳಲ್ಲಿ, ಲಖೀಂಪುರದ ಹಂತಕರಲ್ಲಿ ಕಂಡುಬರುತ್ತಾರೆ.
ಯಾವುದೇ ರೀತಿಯ ವ್ಯಸನ ವ್ಯಕ್ತಿಯ ಸಂವಹನದ ಇಂದ್ರಿಯಗಳನ್ನು ನಿಷ್ಕಿçಯಗೊಳಿಸಿಬಿಡುತ್ತದೆ. ಮನುಷ್ಯ ತನ್ನ ವಿವೇಚನೆ ಮತ್ತು ವಿವೇಕ ಎರಡನ್ನೂ ಕಳೆದುಕೊಳ್ಳುತ್ತಾನೆ. ಒಂದು ಸಮಾಜ ಅಥವಾ ಸಮುದಾಯವೂ ಇದಕ್ಕೆ ಹೊರತಾದದ್ದಲ್ಲ. #ಆತ್ಮನಿರ್ಭರ ಭಾರತದ ಸಮಾಜ ಇಂತಹ ಒಂದು ವ್ಯಸನಕ್ಕೆ ಈಡಾಗಿದೆ. ಹಿಂಸೆ,ದೌರ್ಜನ್ಯ, ಅತ್ಯಾಚಾರ, ಭ್ರಷ್ಟತೆ, ದಬ್ಬಾಳಿಕೆ, ಕ್ರೌರ್ಯ ಇದಾವುದೂ ನಮ್ಮ ಸಮಾಜದ ಸುಶಿಕ್ಷಿತ ವರ್ಗಗಳನ್ನು ಎಚ್ಚರಿಸುತ್ತಿಲ್ಲ. ಅಚ್ಚೇದಿನ್, ಸ್ವಚ್ಚ ಭಾರತ್, ಶುದ್ಧ ಜಲ,ಉಜ್ವಲ ಭಾರತ ಮುಂತಾದ ಸರ್ಕಾರದ ಯೋಜನೆಗಳು ಸೃಷ್ಟಿಸುತ್ತಿರುವ ಭ್ರಮಾಲೋಕದ ಅಂಗಳದಲ್ಲೇ ನಡೆಯುತ್ತಿರುವ ಅನ್ಯಾಯಗಳು ಸಮಾಜದ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತಿಲ್ಲ ಎಂದರೆ ಅದಕ್ಕೆ ಕಾರಣ ಈ ಮತವ್ಯಸನ ಮತ್ತು ಜಾತಿ ಶ್ರೇಷ್ಠತೆಯ ವ್ಯಾಧಿ.
ಸ್ವಾತಂತ್ರ ಬಂದ ೭೪ ವರ್ಷಗಳ ನಂತರವೂ, ಎರಡು ವರ್ಷದ ಹಸುಳೆಯ ಪಾದಸ್ಪರ್ಶದಿಂದ ಮಲಿನವಾಗುವ ದೇವಾಲಯಗಳು ನಮ್ಮ ನಡುವೆ ಅಸ್ತಿತ್ವದಲ್ಲಿವೆ ಎಂದರೆ ನಾವು ಇನ್ನೆಷ್ಟು ಜಡಗಟ್ಟಿದ ಸಮಾಜವಾಗಿದ್ದೇವೆ ಎಂದು ಅರ್ಥವಾಗಬೇಕು. ಕೊಪ್ಪಳದಲ್ಲಿ ನಡೆದ ಘಟನೆ ಈ ದೇಶದ ವಾಸ್ತವತೆಗೆ ಹಿಡಿದ ಕನ್ನಡಿಯಷ್ಟೇ. ಅಸ್ಪೃಶ್ಯತೆ ಸಾಂವಿಧಾನಿಕವಾಗಿ ನಿಷೇಧಿತವಾಗಿದೆ ಆದರೆ ಸಮಾಜದ ಆಂತರಿಕ ವಲಯದಲ್ಲಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅಸ್ಪೃಶ್ಯ ಸಮುದಾಯದ ಹಸುಳೆಯಿಂದ ಮಲಿನವಾಯಿತೆನ್ನುವ ದೇವಾಲಯದ ಶುದ್ಧೀಕರಣ ಮಾಡುವುದು, ಈ ಶುದ್ಧೀಕರಣದ ವೆಚ್ಚವನ್ನು ಮಗುವಿನ ತಂದೆಯೇ ಭರಿಸುವಂತೆ ಶಿಕ್ಷೆ ವಿಧಿಸುವುದು ಈ ಎರಡೂ ಸಂವಿಧಾದ ಉಲ್ಲಂಘನೆಯೇ ಅಲ್ಲವೇ ? ಈ ಶುದ್ಧೀಕರಣವಾಗುವುದೂ ಅದೇ ಅಸ್ಪೃಶ್ಯನ ಬೆವರಿನ ದುಡಿಮೆಯಿಂದ ಎಂತಾದಮೇಲೆ ಯಾವ ಪಾವಿತ್ರತ್ಯೆಯನ್ನು ಸಂರಕ್ಷಿಸಲು ಮೇಲ್ಜಾತಿ ಸಮುದಾಯ ಹಪಹಪಿಸುತ್ತಿದೆ ? ಕೊಪ್ಪಳದ ಘಟನೆಯ ಕೆಲವೇ ದಿನದ ನಂತರ ಮತ್ತೊಂದು ಪ್ರಕರಣದಲ್ಲಿ, ಅದೇ ಊರಿನಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನ ಪ್ರವೇಶಿಸಿದ ಅಸ್ಪೃಶ್ಯನಿಗೆ ೧೧ ಸಾವಿರ ರೂದಂಡ ವಿಧಿಸಲಾಗಿದೆ.
‘ನಮ್ಮವರಲ್ಲದವರನ್ನು’ ಹೊರಗಿಡುವ ಈ ಸಾಂಸ್ಕೃತಿಕ ಬೇರುಗಳನ್ನು ಶಾಶ್ವತವಾಗಿ ಸಂರಕ್ಷಿಸಲು ಬೇಕಾದ ಎಲ್ಲ ಪರಿಕರಗಳನ್ನೂ ಈ ದೇಶದ ಸಾಂಸ್ಕೃತಿಕ ರಾಜಕಾರಣ ಒದಗಿಸುತ್ತಲೇ ಇದೆ. ಅಯೋಧ್ಯೆಯ ರಾಮಮಂದಿರದಿಂದ ದೆಹಲಿಯ ಸೆಂಟ್ರಲ್ ವಿಸ್ತಾವರೆಗೆ ಈ ವೈದಿಕಶಾಹಿಯ ಪರಂಪರೆ ಜ್ವಲಿಸುತ್ತಲೇ ಇದೆಯಲ್ಲವೇ ? ಈ ಬೇರುಗಳನ್ನು ಕಿತ್ತೊಗೆಯಬೇಕಾದ ಜನಪ್ರತಿನಿಧಿಗಳು ಪೀಠದಾಹಕ್ಕೆ ಬಲಿಯಾಗಿ, ಸ್ವಹಿತಾಸಕ್ತಿಗಳಿಗಾಗಿ, ವ್ಯಕ್ತಿನಿಷ್ಠೆಗೆ ಶರಣಾಗಿ, ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಬೆತ್ತಲಾಗಿ ನಿಂತಿದ್ದಾರೆ. ಕೊಪ್ಪಳದ ಘಟನೆಯ ಸಂದರ್ಭದಲ್ಲೂ ಕಂಡುಬಂದ ಈ ಮೌನ ಮತ್ತು ನಿಷ್ಕ್ರಿಯುತ ಸಾಂಸ್ಕೃತಿಕ ರಾಜಕಾರಣದ ಪ್ರಾಬಲ್ಯ ಮತ್ತು ಪಾರಮ್ಯ ಎರಡನ್ನೂ ನಿರೂಪಿಸುವಂತೆಯೇ ಇದೆ.

ಆಡಳಿತ ವ್ಯವಸ್ಥೆಯ ದಬ್ಬಾಳಿಕೆಗೆ ಬಲಿಯಾದ ಅಮಾಯಕನ ಶವದ ಮೇಲೆ ನರ್ತನ ಮಾಡುವ ಮೂಲಕ ಬಿಜೋಯ್ ಬನಿಯಾ ಎಂಬ ಮಾಧ್ಯಮ ಛಾಯಾಗ್ರಾಹಕ ನಮ್ಮ ಸಮಾಜದ ಮತ್ತೊಂದು ಮಜಲನ್ನು ತೆರೆದಿಟ್ಟಿದ್ದೇನೆ. ಈ ನರ್ತನ ಮತ್ತು ಸಂಭ್ರಮಾಚರಣೆ ಏಕವ್ಯಕ್ತಿಯ ಅಭಿವ್ಯಕ್ತಿ ಅಲ್ಲ ಎನ್ನುವ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಈ ದೇಶದ ಗೃಹ ಸಚಿವರಾಗಲೀ, ಪ್ರಧಾನಮಂತ್ರಿಯಾಗಲೀ ಇದನ್ನು ಖಂಡಿಸಲಿಲ್ಲ. ಶೋಷಿತ, ದಮನಿತ ಜನಸಮುದಾಯಗಳು ಜೀವಂತವಾಗಿ ಅನುಭವಿಸುತ್ತಿರುವ ನೋವುಗಳನ್ನೂ ಹೀಗೆಯೇ ಸಂಭ್ರಮಿಸಲಾಗುತ್ತದೆ. ಈ ಅಮಾಯಕ ಜನರು, ವ್ಯವಸ್ಥೆಯ ಅಮಾನುಷತೆಗೆ ಬಲಿಯಾದರೂ ಆಳುವ ವ್ಯವಸ್ಥೆಯನ್ನು ಬಾಧಿಸುವುದಿಲ್ಲ ಎನ್ನುವುದನ್ನು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ, ಆಶಿಶ್ ಮಿಶ್ರಾ, ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರುಹರಿಸಿ ಹತ್ಯೆ ಮಾಡುವ ಮೂಲಕ ನಿರೂಪಿಸಿದ್ದಾನೆ. ಈ ಘಟನೆಯ ಬಗ್ಗೆಯೂ ಪ್ರಧಾನಮಂತ್ರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುವುದನ್ನು ಗಮನಿಸಲೇಬೇಕಿದೆ.

ಜಾತಿ ವ್ಯವಸ್ಥೆ ಸೃಷ್ಟಿಸುವ ಅಹಮಿಕೆಯ ವಿಭಿನ್ನ ಆಯಾಮಗಳನ್ನು ವರ್ಗ ಹಿನ್ನೆಲೆಯಲ್ಲೂ ಹೀಗೆ ಕಾಣಲು ಸಾಧ್ಯ ಅಲ್ಲವೇ ? ಇಂದು #ಆತ್ಮನಿರ್ಭರ ಭಾರತ ಡಿಜಿಟಲ್ ಯುಗದ ವೈಭವಗಳ ನಡುವೆಯೇ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕವಲು ಹಾದಿಯಲ್ಲಿದೆ. ಜಾತಿ ವ್ಯವಸ್ಥೆಯ ಎಲ್ಲ ಅನಿಷ್ಠಗಳೂ ಸಮಾಜದ ಗರ್ಭದಿಂದಲೇ ಪುನಃ ಉಗಮಿಸುತ್ತಿವೆ. ಕೆರೆ ನೀರಿನ ಬಳಕೆಯಿಂದ ಹಿಡಿದು ಕಚೇರಿಯ ಚೇಂಬರ್‌ವರೆಗೆ, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳು ಅಲೆಗಳು ಪ್ರವಹಿಸುತ್ತಲೇ ಇವೆ. ಮುಂದುವರೆದ ಆರ್ಥಿಕ ಸ್ಥಿತ್ಯಂತರಗಳ ಪರಿಣಾಮ ಮಧ್ಯಮ ವರ್ಗಗಳ ಕಣ್ಣುಗಳಿಗೆ ಪೊರೆ ಬಂದಿದೆ. ಅವರು ತೊಟ್ಟಿರುವ ನಿರ್ದಿಷ್ಟ ವಿನ್ಯಾಸದ ಮಸೂರುಗಳಲ್ಲಿ ಅವರಿಗೆ ಸತ್ಯ ದರ್ಶನ ಆಗುತಿಲ್ಲ. ಹಾಗಾಗಿಯೇ ಅವಮಾನಿತ ಜನಸಮುದಾಯಗಳನ್ನು ಜನ್ಮತಃ ಪ್ರತಿನಿಧಿಸುವ ಮೇಲ್ವರ್ಗಗಳೂ ಸಹ ಅಗ್ರಹಾರಗಳ ಹಿತವಲಯದಲ್ಲಿ ವಿಶ್ರಮಿಸುತ್ತಿವೆ.

ಕಾಶ್ಮೀರದ ಸಾಮಾನ್ಯ ಜನರ ಬಗ್ಗೆ ಇದ್ದ ಪೂರ್ವಗ್ರಹಗಳಿಗೆ ಬಲಿಯಾಗಿ, ಅಂತರ್ಜಾಲ ಮತ್ತಿತರ ಸಂವಹನ-ಸಂಪರ್ಕ ಸಾಧನಗಳ ನಿಷೇಧ ಅಥವಾ ನಿರ್ಬಂಧಗಳನ್ನು ಸ್ವಾಗತಿಸಿದ ಭಾರತದ ಹಿತವಲಯದ ಸುಶಿಕ್ಷಿತ ಸಮಾಜ, ಇಂದು ಲಖೀಂಪುರ ಖೇರಿಯಲ್ಲಿ ನಡೆದ ಹತ್ಯಾಕಾಂಡದ ನಡುವೆಯೂ ಇದೇ ಾಸೂಕ್ಷ್ಮ ಕ್ರಮಗಳ ಬಗ್ಗೆ ಯೋಚಿಸಬೇಕಿದೆ. ಆಳುವ ವರ್ಗಗಳನ್ನು ಪ್ರತಿರೋಧಿಸುವ ದನಿಗಳೆಲ್ಲವನ್ನೂ ಪರಸ್ಪರ ಸಂಪರ್ಕದಿಂದ ದೂರ ಇರಿಸುವ ಒಂದು ಹೊಸ ಡಿಜಿಟಲ್ ಮಾರ್ಗವನ್ನು ಸರ್ಕಾರಗಳು ಅನುಸರಿಸುತ್ತಿವೆ. ಪ್ರಜಾತಂತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ ಸಂವಿಧಾನವನ್ನು ಎತ್ತಿಹಿಡಿಯುವ ಜನಪ್ರತಿನಿಧಿಗಳು ಇದಕ್ಕೂ ಮೌನ ವಹಿಸುತ್ತಾರೆ. ಪ್ರಜಾತಂತ್ರದ ನಾಲ್ಕನೆಯ ಅಂಗ, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಅಗ್ರಹಾರ ವಾಸಿಗಳಿಗೆ ಈ ಡಿಜಿಟಲ್ ಬೌದ್ಧಿಕ ಕ್ರೌರ್ಯ ಮತ್ತು ದಬ್ಬಾಳಿಕೆ, #ಆತ್ಮನಿರ್ಭರತೆಯ ಅನಿವಾರ್ಯತೆಯಾಗಿಯೇ ಕಾಣುತ್ತಿರುವುದು ದುರಂತ.
ಇತ್ತೀಚೆಗೆ ಬೆಳಗಾವಿಯಲ್ಲಿ ಬಲಪಂಥೀಯ ಅನಧಿಕೃತ ಆರಕ್ಷಕ ಪಡೆಗಳು (ಮತದ ಅಮಲು ಏರಿರುವವರು) ಮುಸ್ಲಿಂ ಯುವಕನೊಬ್ಬನ ಕೊಲೆಗೈದು, ತಲೆ ಕಾಲುಗಳನ್ನು ಕತ್ತರಿಸಿ ರೈಲು ಹಳಿಯ ಮೇಲೆ ಎಸೆದಿರುವುದಾಗಿ ವರದಿಯಾಗಿದೆ. ಹಿಂದೂ ಯುವತಿಯ ಸ್ನೇಹವೇ ಈ ಹತ್ಯೆಗೆ ಕಾರಣವಾಗಿದೆ.ಕೆಲವು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಶಹಾಪುರದ ಬಳಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಬ್ಬಿನಜಲ್ಲೆಯಿಂದ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯೂ ವರದಿಯಾಗಿದೆ. ಕರ್ನಾಟಕದ ಕರಾವಳಿ ಕೋಮುದ್ವೇಷ ಮತ್ತು ಮತಾಂಧ ದಬ್ಬಾಳಿಕೆಯ ಪ್ರಯೋಗಶಾಲೆಯಾಗಿದೆ. ಬೆಂಗಳೂರಿನಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ವಾಹನದಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಯ ಮೇಲೆ ಮುಸ್ಲಿಂ ಮತಾಂಧರು ಹಲ್ಲೆ ನಡೆಸಿದ್ದಾರೆ. ಮೂಲಭೂತವಾದ ಮತ್ತು ಮತಾಂಧತೆ ಫ್ಯಾಸಿಸಂಗೆ ಸುಲಭ ಮಾರ್ಗವಾಗುತ್ತದೆ ಎನ್ನಲು ಇಂತಹ ಘಟನೆಗಳೇ ಸಾಕ್ಷಿಗಳಾಗುತ್ತವೆ. ಕೊಪ್ಪಳದ ಅಪರಾಧಿಗಳೊಡನೆ ರಾಜಿ ಸಂಧಾನ ನಡೆಸುವ ಮೂಲಕ ರಾಜ್ಯ ಬೊಮ್ಮಾಯಿ ಸರ್ಕಾರ, ತನ್ನೊಳಗಿನ ವೈದಿಕಶಾಹಿ ಮನೋಭಾವವನ್ನೂ, ಫ್ಯಾಸಿಸ್ಟ್ ಧೋರಣೆಯನ್ನೂ ಸ್ಪಷ್ಟವಾಗಿ ಪ್ರದರ್ಶಿಸಿದೆ.
ನಿರ್ಗತಿಕ ಅಮಾಯಕರನ್ನು ಎತ್ತಂಗಡಿ ಮಾಡಲು ಅಸ್ಸಾಂ ಪೊಲೀಸರು ಸಶಸ್ತ್ರ ಪಡೆ ದಾಳಿ ನಡೆಸುವುದು, ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಹೆಣದ ಮೇಲೆ ಮಾಧ್ಯಮ ಪ್ರತಿನಿಧಿಯೊಬ್ಬ ನೃತ್ಯಮಾಡುವುದು, ಕೊಪ್ಪಳದ ದೇವಾಲಯಕ್ಕೆ ಅಸ್ಪೃಶ್ಯರನ್ನು ಸೇರಿಸದೆ ಇರುವುದು ಮತ್ತು ದೆಹಲಿಯಿಂದ ಕನ್ಯಾಕುಮಾರಿಯವರೆಗೆ ದಲಿತರ ಮೇಲೆ, ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಮತ್ತು ಅತ್ಯಾಚಾರಗಳು, ಕರ್ನಾಟಕದ ಕರಾವಳಿಯಲ್ಲಿ ಅನ್ಯ ಕೋಮಿನ ಯುವಕ-ಯುವತಿಯರ ಮೇಲೆ ಹಾಡಹಗಲಲ್ಲೇ ಧಾಳಿ ನಡೆಸುವುದು, ಉಡುಪಿಯಲ್ಲಿ ಮತಾಂತರ ನಡೆಯುತ್ತಿದೆ ಎಂಬ ನೆಪದಲ್ಲಿ ಚರ್ಳಚಗಳ ಮೇಲೆ ಧಾಳಿ ನಡೆಸುವುದು. ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಪಮಾನಗೊಳಿಸುವುದು, ಎನ್ಕೌಂಟರ್ ಮಾಡಲು ಪೊಲೀಸರಿಗೆ ಮುಕ್ತ ಪರವಾನಗಿ ನೀಡಿರುವುದು ಇವೆಲ್ಲವನ್ನು ಒಂದು ಕೂದಲೆಳೆಯ ಕೊಂಡಿ ಸೂತ್ರದಂತೆ ಬಂಧಿಸಿರುವುದನ್ನು ಗಮನಿಸಬೇಕಿದೆ.

ಈ ದುಷ್ಟ ಮನಸ್ಥಿತಿಯನ್ನು ಮತ್ತು ವಿಕೃತ ಸಂಸ್ಕೃತಿಯನ್ನು ತಾಲಿಬಾನ್‌ಗೆ ಹೋಲಿಕೆ ಮಾಡುವ ಮೂಲಕ ನಾವು “ ನಮ್ಮಲ್ಲಿ ಎಲ್ಲವೂ ಚೆನ್ನಾಗಿತ್ತು, ಅದರಿಂದ ಪ್ರಭಾವಿತವಾಗಿದೆ ” ಎಂದು ತಾತ್ವಿಕವಾಗಿ ಒಪ್ಪಿಕೊಂಡುಬಿಡುತ್ತಿದ್ದೇವೆ. ಇದು ಅರ್ಧಸತ್ಯ ಮಾತ್ರ. ತಾಲಿಬಾನ್ ಕುರಿತ ನಾವು ಕೇಳಿರುವ, ಕಂಡಿರುವ ಮತ್ತು ಕಾಣುತ್ತಿರುವ ಹಿಂಸಾತ್ಮಕ ದಬ್ಬಾಳಿಕೆಯ ಪ್ರತಿರೂಪವನ್ನು ಭಾರತದಲ್ಲಿ ಕಳೆದ ನಾಲ್ಕು ದಶಕಗಳಿಂದಲೇ ಕಾಣುತ್ತಿದ್ದೇವೆ ಅಲ್ಲವೇ? ಅಸಹಿಷ್ಣುತೆ, ಮತದ್ವೇಷ , ಜಾತಿ ತಾರತಮ್ಯ ಮತ್ತು ದೌರ್ಜನ್ಯ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು, ಜಾತಿ ದ್ವೇಷ ಇವೆಲ್ಲವೂ ಭಾರತ ಸಂಜಾತವೇ ಎನ್ನುವುದನ್ನು ಗಮನಿಸಬೇಕು. ತಾಲಿಬಾನ್ ಹುಟ್ಟುವ ಮುಂಚೆಯೇ ಇವೆಲ್ಲವೂ ನಮ್ಮ ನಡುವೆ ಇತ್ತಲ್ಲವೇ? ಅಕ್ಲಾಖ್‌ನ ಕೊಲೆ, ಉನ್ನಾವೋ ಗ್ರಾಮದಲ್ಲಿ ನಡೆದ ಅತ್ಯಾಚಾರ, ಊನ ಗ್ರಾಮದಲ್ಲಿ ನಡೆದ ಘಟನೆ, ಹಾಥ್ರಸ್ ಪ್ರಕರಣ, ದೆಹಲಿಯ ಮಸಣಪೂಜಾರಿಯಿಂದ ನಡೆದ ಅತ್ಯಾಚಾರ, ಕರ್ನಾಟಕದ ಯಾದಗಿರಿಯಲ್ಲಿ ನಡೆದ ಘಟನೆ ಮತ್ತು ಇತ್ತೀಚಿನದಾಗಿ ಶಾಂತಿಯುತ ಮುಷ್ಕರ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸುವ ಮೂಲಕ ಮಾಡಿರುವ ಹತ್ಯೆ, ಇವೆಲ್ಲವೂ ಭಾರತ ಸಂಜಾತ ಮನಸ್ಥಿತಿಯ ಸಂಕೇತವೇ ಅಲ್ಲವೇ?
“ ನಮ್ಮೊಳಗೆಲ್ಲವೂ ಪರಿಶುದ್ಧ ಪ್ರಾಮಾಣಿಕತೆ ಇದೆ ” ಎಂದು ಭಾವಿಸುತ್ತಲೇ ‘ಅನ್ಯ’ರನ್ನು ಶತ್ರುಗಳನ್ನಾಗಿ ಮಾಡುವ ಒಂದು ಪರಂಪರೆಯನ್ನು ಹಿಂದುತ್ವ ರಾಜಕಾರಣ ಬೆಳೆಸಿಕೊಂಡು ಬಂದಿದೆ. ಈ ಹಿಂದುತ್ವ-ಬಂಡವಾಳಶಾಹಿಯ ಮೈತ್ರಿಕೂಟವು ಸಾವುಗಳನ್ನು ಲೆಕ್ಕಿಸುವುದಿಲ್ಲ, ಹಾಗೆಯೇ ಅಮಾಯಕರ ಸಾವಿಗೆ ಕಾರಣವಾಗುವ ದ್ವೇಷ ರಾಜಕಾರಣ ಮತ್ತು ಸಾಂಸ್ಕೃತಿಕ ನೆಲೆಗಳನ್ನೂ ಗುರುತಿಸುವುದಿಲ್ಲ. ಮತಾಂಧ ರಾಜಕಾರಣ, ಹಣಕಾಸು ಬಂಡವಾಳ ಮತ್ತು ಕಾರ್ಪೋರೇಟ್ ಪ್ರಭಾವದಲ್ಲಿ ಮನುಜ ಸೂಕ್ಷ್ಮತೆಯನ್ನು ಮಾರಾಟದ ಸರಕುಗಳಂತೆಯೇ ಪರಿಗಣಿಸಲಾಗುತ್ತದೆ. ಒಂದು ಅಮಾಯಕ ಜೀವದ ಸಾವು ನೂರು ಜನರ ಸಂಭ್ರಮಕ್ಕೆ ಕಾರಣವಾಗುವಂತಹ ಒಂದು ಸಂಸ್ಕೃತಿಯನ್ನು ಈ ದೇಶದ ರಾಜಕಾರಣ ಪೋಷಿಸುತ್ತಲೇ ಬಂದಿದೆ. ಹಾಗಾಗಿಯೇ ಸಾವಿಗೆ ಮಿಡಿಯುವ ಮುನ್ನ ಸತ್ತ ವ್ಯಕ್ತಿಯ ಸಾಮುದಾಯಿಕ ಅಥವಾ ಜಾತಿ ಮತಗಳ ಮೂಲ ಅಸ್ಮಿತೆ ನಿರ್ಣಾಯಕವಾಗುತ್ತದೆ. ಹತ್ಯೆಗೈದವರ ಅಸ್ಮಿತೆಗಳು ನೇಪಥ್ಯಕ್ಕೆ ಸರಿಯುತ್ತವೆ.
ವೈದಿಕಶಾಹಿ ಮನಸ್ಥಿತಿ, ಆಡಳಿತ ವ್ಯವಸ್ಥೆಯ ಕ್ರೌರ್ಯ, ಜಾತಿ ಮತ ಶ್ರೇಷ್ಠತೆಯ ವ್ಯಸನ, ಮಹಿಳೆಯರ ಮೇಲಿನ ದೌರ್ಜನ್ಯ-ಅತ್ಯಾಚಾರ ಈ ಎಲ್ಲ ಸಾಮಾಜಿಕ ಅನಿಷ್ಟಗಳನ್ನೂ ಗಮನಿಸಬೇಕಾದ, ಹಿತವಲಯದ ಅಗ್ರಹಾರದ ಮನಸುಗಳು ತಮ್ಮದೇ ಮಸೂರಗಳ ಮೂಲಕ ನೋಡುತ್ತವೆ. ಹಾಗಾಗಿಯೇ ರೈತರ ಮೇಲೆ ಕಾರು ಹರಿಸಿ ನಾಲ್ವರ ಹತ್ಯೆಮಾಡಿದ ಸಚಿವರ ಪುತ್ರ ಇಂದಲ್ಲಾ ನಾಳೆ ನಿರಪರಾಧಿಯಾಗಿ ಹೊರಬರುತ್ತಾನೆ. ಹಾಥ್ರಸ್ ಘಟನೆ ನಡುರಾತ್ರಿಯಲ್ಲೇ ದಹಿಸಿಹೋಗುತ್ತದೆ. ಅಸ್ಸಾಂನ “ಅಕ್ರಮ ನಿವಾಸಿಗಳ ಮೂಲೋತ್ಪಾಟನೆ ” ದೇಶದ ಹಿತದೃಷ್ಟಿಯಿಂದ ಸ್ವೀಕೃತವಾದರೆ, ಶವ ನರ್ತಕ ಬಿಜೋಯ್ ಬನಿಯಾ ಈ ಹಿತದೃಷ್ಟಿಗೆ ಹೊಸ ಆಯಾಮವನ್ನು ಕೊಡುತ್ತಾನೆ. ಕೋಮದ್ವೇಷಕ್ಕೆ ಮೃತರ ಅಸ್ಮಿತೆಗಳನ್ನು ಗುರುತಿಸಲು ಬಳಸುತ್ತಿದ್ದ ‘ ಶವ ಎಣಿಕೆಯ’ ಪರಂಪರೆಯನ್ನು ದಾಟಿ ಭಾರತೀಯ ಸಮಾಜ ‘ ಶವನರ್ತನ ’ದ ಮಾರ್ಗಕ್ಕೆ ತೆರೆದುಕೊಳ್ಳುತ್ತದೆ.

ಈ ಧೋರಣೆ ಮತ್ತು ದ್ವೇಷಾಸೂಯೆಗಳ ವಿಷಬೀಜಗಳು ಯುವಪೀಳಿಗೆಯಲ್ಲೂ ವ್ಯವಸ್ಥಿತವಾಗಿ ಬಿತ್ತನೆಯಾಗುತ್ತಿರುವುದು ಆತಂಕ ಉಂಟುಮಾಡುವುದು ಸಹಜ. ಏಕೆಂದರೆ ಈ ದೇಶದಲ್ಲಿ ಸಂವೇದನೆ ಕೊಂಚಮಟ್ಟಿಗಾದರೂ ಉಳಿದುಕೊಂಡಿದೆ. ಮನುಷ್ಯತ್ವದ ಛಾಯೆ ಇನ್ನೂ ಪೂರ್ತಿಯಾಗಿ ಮರೆಯಾಗಿಲ್ಲ. ಆದರೆ ಈ ಕ್ಷೀಣ ದನಿಯನ್ನು ಮೀರಿ ಮತಾಂಧತೆ ಮತ್ತು ಜಾತಿ ದೌರ್ಜನ್ಯ ಬೆಳೆದುನಿಂತಿದೆ. ಅಸ್ಪೃಶ್ಯತೆಯ ಆಚರಣೆ, ಅತ್ಯಾಚಾರದ ಕಾಮುಕತೆ, ದಬ್ಬಾಳಿಕೆಯ ಆಡಳಿತ ನೀತಿಗಳು, ದಮನಕಾರಿ ಶಾಸನಗಳು, ನಿರಂಕುಶ ಅಧಿಕಾರ ಇವೆಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ದೃಷ್ಟಿಯಿಂದ ಅಸ್ಸಾಂನ ಶವನರ್ತಕ ಬಿಜೋಯ್ ಬನಿಯಾ, ರೈತರ ಹತ್ಯೆ ಮಾಡಿದ ಆಶಿಶ್ ಮಿಶ್ರ ಮತ್ತು ಬೆಳಗಾವಿಯಲ್ಲಿ ಮುಸ್ಲಿಂ ಯುವಕನ ಹತ್ಯೆ ಮಾಡಿದ ಹಿಂದೂ ಮತಾಂಧರು ಇವೆಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬಹುದಾಗಿದೆ.
ಇದು ಮೂರು ದಶಕಗಳ ಕಾಲ ಬಿತ್ತಲಾದ ಬೀಜಗಳ ಪ್ರತಿಫಲ. ಬಿತ್ತನೆ ಮಾಡಿದವರು ಮೌನಕ್ಕೆ ಶರಣಾಗಿದ್ದಾರೆ, ಕೆಲವರು ಶಾಶ್ವತ ವಿದಾಯ ಹೇಳಿದ್ದಾರೆ. ಅಮಾಯಕ ಜನರು, ದುರ್ಬಲ ವರ್ಗಗಳು ದಿನನಿತ್ಯ ಸಾಂಸ್ಕೃತಿಕ ಧಾಳಿಯನ್ನು ಎದುರಿಸುತ್ತಲೇ ಇದ್ದಾರೆ. ಕಳೆದ ಏಳು ವರ್ಷಗಳಲ್ಲಿ ನಡೆದ ಯಾವುದೇ ಮನುಷ್ಯವಿರೋಧಿ ಚಟುವಟಿಕೆಗಳಿಗೆ ಈ ಬೀಜಾಕ್ಷರವೇ ಮೂಲ ಎನ್ನುವುದನ್ನೂ ಗಮನಿಸಬೇಕಿದೆ. ಇದರ ಮೂಲವನ್ನು ತಾಲಿಬಾನ್‌ನಲ್ಲಿ ಶೋಧಿಸುವುದಕ್ಕಿಂತಲೂ, ನಮ್ಮ ಜಾತಿ ಪೀಡಿತ, ಸಾಂಪ್ರದಾಯಿಕ ಸನಾತನಿಗಳ ನಡುವೆಯೇ ಶೋಧಿಸಬೇಕಿದೆ. ಕೊಪ್ಪಳಕ್ಕೂ ಅಸ್ಸಾಂಗೂ ಸಾವಿರಾರು ಮೈಲಿ ಅಂತರವಿದೆ. ಲಖೀಂಪುರಕ್ಕೂ ಬೆಳಗಾವಿಗೂ ಅಂತರವಿದೆ. ಆದರೆ ಆ ಧೃವದಿಂದ ಈ ಧೃವದವೆಗೆ ಹರಡಿರುವ ದ್ವೇಷ ರಾಜಕಾರಣದ ಛಾಯೆ ಮತ್ತು ಸರಪಳಿ ಒಂದೇ ಆಗಿದೆ. ಆಳುವ ಪಕ್ಷಗಳು ಇದರ ಫಲಾನುಭವಿಗಳಾಗಿವೆ.