ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯ ಕ್ರಮ ಸಿದ್ಧತೆಗಳಿಗಾಗಿ ಕರ್ನಾಟಕದ DSERT ಸಲ್ಲಿಸಿರುವ ಮಕ್ಕಳ ಆರೋಗ್ಯ ಹಾಗೂ ಕ್ಷೇಮಗಳ ಬಗೆಗಿನ ತಜ್ಞರ ಸಲಹಾ ವರದಿಯಲ್ಲಿ, ‘ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಹಾಲು, ಬಿಸ್ಕೆಟ್, ಹೆಚ್ಚು ಕೊಬ್ಬಿನ ಅಂಶವಿರುವ ಮೊಟ್ಟೆಮತ್ತಿತರ ಆಹಾರ ಸೇವನೆಯಿಂದ ಮಕ್ಕಳ ಹಾರ್ಮೋನ್ಸ್ ವ್ಯತ್ಯಯವಾಗುತ್ತದೆ ಎಂಬುದು ಸುದ್ದ ಅವೈಜ್ಞಾನಿಕವಾಗಿದೆ ಅದನ್ನು ಕೂಡಲೇ ಸಂಪೂರ್ಣವಾಗಿ ಹಿಂಪಡೆಯಬೇಕು’ ಎಂದು rರಾಜ್ಯ ಸರ್ಕಾರಕ್ಕೆ ತಜ್ಞರು ಆಗ್ರಹಿಸಿದ್ದಾರೆ.
ಆಗ್ರಹ ಪತ್ರದಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯ ಕ್ರಮ ಸಿದ್ಧತೆಗಳಿಗಾಗಿ ಕರ್ನಾಟಕದ ಡಿಎಸ್ಇಆರ್‌ಟಿ ಸಲ್ಲಿಸಿರುವ ಮಕ್ಕಳ ಆರೋಗ್ಯ ಹಾಗೂ ಕ್ಷೇಮಗಳ ಬಗೆಗಿನ ತಜ್ಞರ ಸಲಹಾ ವರದಿಯು ಹಳಸಾಗಿ, ಅವೈಜ್ಞಾನಿಕವಾಗಿ, ಅತಿರೇಕದ್ದಾಗಿ, ಬಾಲಿಶವಾಗಿದ್ದು ಅದನ್ನು ಕೂಡಲೇ ಸಂಪೂರ್ಣವಾಗಿ ಹಿಂಪಡೆಯಬೇಕಾಗಿದೆ.
ಇಂಥದ್ದೊಂದು ಕೀಳಾದ, ಬೇಜವಾಬ್ದಾರಿಯ ವರದಿಯಲ್ಲಿ ನರಮಾನಸಿಕ ವಿಜ್ಞಾನದಲ್ಲಿ ಅಂತರರಾಷ್ಟ್ರೀಯ ಮನ್ನಣೆಯನ್ನೂ, ಖ್ಯಾತಿಯನ್ನೂ ಪಡೆದಿರುವ, ನಮ್ಮ ದೇಶದ ಅತ್ಯುನ್ನತವಾದ, ಗೌರವಾರ್ಹವಾದ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಹಾಗೂ ಹದಿಹರೆಯದ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಜಾನ್ ವಿಜಯ್ ಸಾಗರ್ ಅವರ ಹೆಸರನ್ನು ತಜ್ಞರ ಸಮಿತಿಯ ಅಧ್ಯಕ್ಷನೆಂದು ನೀಡಿರುವುದನ್ನು ಕಂಡು ಆ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದ ನಮಗೆ ಅತೀವ ಆಘಾತವೂ, ಬೇಸರವೂ ಆಗಿದೆ. ಮಕ್ಕಳ ಆರೋಗ್ಯದ ಬಗೆಗಿನ ಈ ತಜ್ಞರ ಸಮಿತಿಯಲ್ಲಿ ಒಬ್ಬರೇ ಒಬ್ಬ ಮಕ್ಕಳ ತಜ್ಞ ಇಲ್ಲದಿರುವುದು ಕಳವಳಕಾರಿಯಾಗಿದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು- ಮಂಗಳೂರು, ಡಾ. ಯೋಗಾನಂದ ರೆಡ್ಡಿ, ಮಕ್ಕಳ ತಜ್ಞರು- ಬಳ್ಳಾರಿ, ಡಾ. ಪಿವಿ ಭಂಡಾರಿ, ಮನೋವೈದ್ಯಕೀಯ ತಜ್ಞರು- ಉಡುಪಿ, ಡಾ. ಶಶಿಧರ ಬೀಳಗಿ, ಮನೋವೈದ್ಯಕೀಯ ತಜ್ಞರು- ಬೆಂಗಳೂರು, ಡಾ. ವಸುಧೇಂದ್ರ ಎನ್, ನೇತ್ರ ತಜ್ಞರು- ದಾವಣಗೆರೆ, ಡಾ. ರಾಜೇಶ್ ಪಂಪಾಪತಿ, ರೇಡಿಯೋಲಜಿಸ್ಟ್-ಸಿಡ್ನಿ, ಆಸ್ಟ್ರೇಲಿಯಾ, ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗೂ ಎಸ್ ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರಾಗಿರುವ ಡಾ. ನಿರಂಜನಾರಾಧ್ಯ ವಿಪಿ. ಆಗ್ರಹಿಸಿದ್ದಾರೆ.
‘ಈ ವರದಿಯನ್ನು ಆಯುರ್ವೇದ ಹಾಗೂ ಯೋಗ ತಜ್ಞರೆಂದುಕೊಳ್ಳುವವರೇ ಬರೆದಿರುವಂತೆ ಕಾಣುತ್ತಿದ್ದು, ಅನೇಕ ಆಧಾರರಹಿತವಾದ, ಅಪಾಯಕಾರಿಯಾದ ವಿಚಾರಗಳನ್ನೇ ತುಂಬಿಸಲಾಗಿದೆ. ಆದ್ದರಿಂದ ನಿಮ್ಹಾನ್ಸ್ ನ ನಿರ್ದೇಶಕರು ಈ ಕೂಡಲೇ ತಮ್ಮ ಸಂಸ್ಥೆಯನ್ನು ಈ ವರದಿಗೆ ತಳುಕು ಹಾಕಿರುವುದನ್ನು ಕೊನೆಗೊಳಿಸಬೇಕು ಹಾಗೂ ಡಾ. ಜಾನ್ ವಿ ಸಾಗರ್ ಅವರು ತಜ್ಞರ ಸಮಿತಿಯ ಅಧ್ಯಕ್ಷತೆಗೆ ರಾಜೀನಾಮೆ ನೀಡಿ ಈ ವರದಿಯೊಡನೆ ತಮಗೆ ಸಂಬಂಧವಿಲ್ಲವೆಂದು ಸ್ಪಷ್ಟ ಪಡಿಸಬೇಕು. ನಿಮ್ಹಾನ್ಸ್ ನ ಎಲ್ಲಾ ತಜ್ಞರು ಹಾಗೂ ವಿದ್ಯಾರ್ಥಿಗಳು ಕೂಡ ತಮ್ಮ ಮೇರು ಸಂಸ್ಥೆಯ ಹೆಸರನ್ನು ಹೀಗೆ ದುರ್ಬಳಕೆ ಮಾಡಿ ಅವಮಾನಿಸುವುದನ್ನು ವಿರೋಧಿಸಬೇಕು’ ಎಂದು ತಿಳಿಸಿದ್ದಾರೆ.
‘ಮನುಷ್ಯರ ಆತ್ಮದ ಸುತ್ತಲೂ ಐದು ಕೋಶಗಳಿವೆ ಎಂದು ಈ ವರದಿಯಲ್ಲಿ ಹೇಳಲಾಗಿದ್ದು, ನಿಮ್ಹಾನ್ಸ್ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರಾಗಿದ್ದವರು ಈ ಐದು ಕೋಶಗಳ ಇರುವಿಕೆಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಈ ಕೂಡಲೇ ಒದಗಿಸಬೇಕು, ಇಲ್ಲವಾದರೆ ಈ ವರದಿಯನ್ನೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ (ಎನ್ಇಪಿ) ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರದ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲೊಇ ಏನಿದೆ?
ಬದಲಾದ ಆಹಾರ ಪದ್ಧತಿಯಿಂದ ಹೆಣ್ಣುಮಕ್ಕಳು ಬಹಳ ಬೇಗ ಪ್ರೌಢಾವಸ್ಥೆಗೆ ತಲುಪುತ್ತಿದ್ದಾರೆ. ಗಂಡು ಮಕ್ಕಳೂ ಬೇಗ ಯೌವನಾವಸ್ಥೆಗೆ ತಲುಪುವಂತಹ ಬದಲಾವಣೆಗಳಾಗುತ್ತಿವೆ. ಸುವಾಸನೆಯುಕ್ತ ಹಾಲು, ಬಿಸ್ಕೆಟ್, ಹೆಚ್ಚು ಕೊಬ್ಬಿನ ಅಂಶವಿರುವ ಮೊಟ್ಟೆಮತ್ತಿತರ ಆಹಾರ ಸೇವನೆಯಿಂದ ಮಕ್ಕಳ ಹಾರ್ಮೋನ್ಸ್ ವ್ಯತ್ಯಯವಾಗಿ ಇಂತಹ ಅಸಮತೋಲನತೆಯುಂಟಾಗುತ್ತದೆ. ಅಲ್ಲದೆ, ಮೊಟ್ಟೆ, ಮಾಂಸದಂತಹ ಆಹಾರ ಸೇವನೆಯು ವಿವಿಧ ಕಾಯಿಲೆಗಳಿಗೂ ದಾರಿಯಾಗುತ್ತದೆ. ಹಾಗಾಗಿ ಬಿಸಿಯೂಟದಲ್ಲಿ ಇಂತಹ ಆಹಾರಗಳನ್ನು ಆಯ್ಕೆ ಮಾಡದೆ ಕೊಬ್ಬಿನ ಅಂಶವಾಗಿ ಪರಿವರ್ತನೆಯಾಗದ, ಕಡಿಮೆ ಕ್ಯಾಲರಿಯುಕ್ತ ಸಾತ್ವಿಕ ಆಹಾರಗಳನ್ನು ನೀಡುವತ್ತ ಗಮನ ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಲಾಗಿದೆ.