ದೇಶದೆಲ್ಲೆಡೆ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಉತ್ತರ ಪ್ರದೇಶದ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತನ್ನ ಸಂಬಂಧಿಕರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಹೌದು, ತನ್ನ ಕುಟುಂಬದವರಿಂದ ಬೆದರಿಕೆ ಎದುರಿಸುತ್ತಿರುವುದಾಗಿ ಸಂತ್ರಸ್ತೆ ದೂರು ದಾಖಲಿಸಿದ್ದು, ಉ.ಪ್ರ ಸರ್ಕಾರ ಮತ್ತು ಎನ್‌ಜಿಒಗಳಿಂದ ಬಂದ ಹಣವನ್ನು ಕಿತ್ತುಕೊಂಡು ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಉನ್ನಾವೋದ ಮಾಖಿ ಪೊಲೀಸ್ ಠಾಣೆಯಲ್ಲಿ ಆಕೆಯ ಚಿಕ್ಕಪ್ಪ, ತಾಯಿ, ಸಹೋದರಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಬರುವ ಐಪಿಸಿ ಸೆಕ್ಷನ್ 406 ಮತ್ತು 506 ಅಡಿಯಲ್ಲಿ FIR ದಾಖಲಿಸಲಾಗಿದ್ದು, ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಎಎಸ್‌ಪಿ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರ ಮತ್ತು NGO ಗಳು ನೀಡಿದ್ದ ಹಣವನ್ನು ಖರ್ಚಿಗಾಗಿ ಕುಟುಂಬವನ್ನು ಕೇಳಿದಾಗ. ಪ್ರಕರಣಕ್ಕೆ ನಿನ್ನ ಚಿಕ್ಕಪ್ಪ ಏಳು ಕೋಟಿ ಖರ್ಚು ಮಾಡಿದ್ದು ಬಂದಿರುವ ಹಣ ಅದಕ್ಕೆ ಸಾಕಾಗಿಲ್ಲ ಎಂದು ಹೇಳಿದ್ದಾರೆ. ಇದಲ್ಲದೇ ಸರ್ಕಾರದಿಂದ ಪಡೆದ ಮನೆಯಿಂದ ತನ್ನನ್ನು ಮತ್ತು ತನ್ನ ಪತಿಯನ್ನು ಹೊರಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಶಿಕ್ಷೆಯಾಗುವಲ್ಲಿ ಸಂತ್ರಸ್ತೆಯ ಚಿಕ್ಕಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಆಕೆಯ ಚಿಕ್ಕಪ್ಪ ಕೊಲೆ ಯತ್ನ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ 10 ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಸೂಚನೆ ಮೇರೆಗೆ ತಾಯಿ ಮತ್ತು ಸಹೋದರಿ ಸಂತ್ರಸ್ತೆ ಮತ್ತು ಆಕೆಯ ಗಂಡನ ಜೀವನಕ್ಕೆ ಶತ್ರುಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.