ನವರಾತ್ರಿಯಲ್ಲಿ ಮಹಿಳೆಯರು ಉಪವಾಸ ಮಾಡುವ ಬದಲು ಸಂವಿಧಾನವನ್ನು ಓದಿದರೆ ಉತ್ತಮ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ದಲಿತ ಉಪನ್ಯಾಸಕರೊಬ್ಬರನ್ನು ಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಅತಿಥಿ ಉಪನ್ಯಾಸಕ ಮಿಥಿಲೇಶ್ ಗೌತಮ್ ಅವರನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ಆಡಳಿತ ಮಂಡಳಿಯು ನಿಷೇಧಿಸಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಗೌತಮ್, “ಮಹಿಳೆಯರು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಉಪವಾಸ ಮಾಡುವ ಬದಲು ಭಾರತದ ಸಂವಿಧಾನ ಮತ್ತು ಹಿಂದೂ ಕೋಡ್ ಬಿಲ್ ಅನ್ನು ಓದುವುದು ಉತ್ತಮ. ಹಾಗೆ ಮಾಡುವುದರಿಂದ ಅವರ ಜೀವನವು ಗುಲಾಮಗಿರಿ ಮತ್ತು ಭಯದಿಂದ ಮುಕ್ತವಾಗಿರುತ್ತದೆ, ಜೈ ಭೀಮ್” ಎಂದು ಹೇಳಿದ್ದರು.

ಈ ಪೋಸ್ಟ್ ಇರುದ್ಧ ಹಿಂದುತ್ವ ಬಲಪಂಥೀಯರು ಆಕ್ಷೇಪ ವ್ಯಕ್ತ ಪಡಿಸಿದ ಬಳಿಕ, ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ರಿಜಿಸ್ಟ್ರಾರ್ ಡಾ.ಸುನೀತಾ ಪಾಂಡೆ ಅವರು ಗೌತಮ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಕಚೇರಿ ಆದೇಶ ಹೊರಡಿಸಿದ ಅವರು, ‘ಸೆ.29ರಂದು ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಡಾ.ಮಿಥಿಲೇಶ್ ಕುಮಾರ್ ಗೌತಮ್ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಕ್ಕೆ ವಿರುದ್ಧವಾದ ಕೆಲ ವಿಷಯಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಪತ್ರದ ಮೂಲಕ ದೂರಿದ್ದರುʼ ಎಂದು ತಿಳಿಸಿದ್ದಾರೆ.
‘‘ಡಾ. ಗೌತಮ್ ಕೃತ್ಯಕ್ಕೆ ವಿದ್ಯಾರ್ಥಿಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಶ್ವವಿದ್ಯಾನಿಲಯದ ವಾತಾವರಣ ಹದಗೆಡುವ ಮತ್ತು ಪರೀಕ್ಷೆಯ ಮೇಲೆ ಪರಿಣಾಮ ಬೀರುವ ಆತಂಕದ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಡಾ.ಮಿಥಿಲೇಶ್ ಕುಮಾರ್ ಗೌತಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ತೆಗೆದುಹಾಕಲು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಅವರ ಪ್ರವೇಶವನ್ನು ನಿಷೇಧಿಸಲು ನನಗೆ ನಿರ್ದೇಶನ ನೀಡಲಾಗಿದೆ.” ಎಂದು ಆದೇಶದಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರಿಂದ ದೂರನ್ನು ಸ್ವೀಕರಿಸಿದ ನಂತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ತೆಗೆದುಹಾಕುವ ಆದೇಶವನ್ನು ಹೊರಡಿಸಿದ್ದಾರೆ.
ಗುರುವಾರವೂ ಬಲಪಂಥೀಯ ವಿದ್ಯಾರ್ಥಿಗಳು ಅಧ್ಯಾಪಕರ ವಿರುದ್ಧ ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಘೋಷಣೆಗಳನ್ನು ಕೂಗಿದರು.
ಎಬಿವಿಪಿಯ ಕಷಿ ಘಟಕದೊಂದಿಗೆ ಸಂಬಂಧ ಹೊಂದಿರುವ ಜ್ಞಾನೇಂದ್ರ, “ಸಾಮಾನ್ಯ ವಿದ್ಯಾರ್ಥಿಗಳು ತಮ್ಮ ಸೈದ್ಧಾಂತಿಕ ಒಲವನ್ನು ಬದಿಗಿಟ್ಟು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಹಿಂದಿನಿಂದಲೂ ಅಧ್ಯಾಪಕರ ಹೇಳಿಕೆಗಳು ಧರ್ಮ ಮತ್ತು ನಂಬಿಕೆಗೆ ವಿರುದ್ಧವಾಗಿವೆ.” ಎಂದಿದ್ದಾರೆ.