
ಬಳ್ಳಾರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ವಿ. ಸೋಮಣ್ಣ, ರೆಡ್ಡಿ ಬ್ರದರ್ಸ್ ನಡುವೆ ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ. ಬಳ್ಳಾರಿಯ ಪಾರ್ವತಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಸೋಮಣ್ಣ, ಬಳ್ಳಾರಿಯ ರೆಡ್ಡಿ ಸಹೋದರರ ಮುನಿಸು ಹಾಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಬಗ್ಗೆ ಮಾತನಾಡಿದ್ದಾರೆ.
ರೆಡ್ಡಿ ಸಹೋದರರು, ಶ್ರೀರಾಮುಲು ಬೇರೆ ಬೇರೆಯಾದಾಗ ಏನಾಯಿತು ಅನ್ನೋದು ಎಲ್ಲರಿಗೂ ಈಗ ಗೊತ್ತಾಗಿದೆ. ಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಎಲ್ಲ ನಾಯಕರಿಗೆ ಗೊತ್ತಾಗಿದೆ. ಎಲ್ಲರೂ ಒಗ್ಗಟ್ಟಾಗಿದ್ದಾಗ ಏನಾಗಿದ್ರು..? ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈಗ ಎಲ್ಲರೂ ಒಂದಾಗೋ ಸಮಯ ಬಂದಿದೆ. ಎಲ್ಲರೂ ಒಂದಾಗ್ತಾರೆ ಎಂದಿದ್ದಾರೆ ಕೇಂದ್ರ ಸಚಿವ ವಿ. ಸೋಮಣ್ಣ.
ಶ್ರೀರಾಮುಲುಗೆ ಸ್ವಲ್ಪ ಆರಂಭದಲ್ಲಿ ಮುಂಗೋಪ ಅಷ್ಟೇ, ಸ್ವಲ್ಪ ದಿನದಲ್ಲಿ ಕಾದು ನೋಡಿ ಎಲ್ಲರು ಹೇಗೆ ಒಗ್ಗಟ್ಟಾಗ್ತಾರೆ ಅನ್ನೋದನ್ನು ಎಂದಿರುವ ಸೋಮಣ್ಣ, ಬಳ್ಳಾರಿ ಅಷ್ಟೇ ಅಲ್ಲ ರಾಜ್ಯ ಬಿಜೆಪಿಯಲ್ಲೂ ಯಾವ ಸಮಸ್ಯೆಯೂ ಇಲ್ಲ. ಮತ್ತೆ ಹಳೇ ಬಿಜೆಪಿಯನ್ನ ಸ್ವಲ್ಪ ದಿನದಲ್ಲೇ ನೋಡ್ತಿರಿ. ಡಿಸೆಂಬರ್ ನಂತರ ಪಕ್ಷ ಹಳೇ ಮಾದರಿಯಲ್ಲಿ ಮತ್ತೊಮ್ಮೆ ಗಟ್ಟಿಯಾಗ್ತದೆ. ರೆಡ್ಡಿ ಸಹೋದರರನ್ನು ಒಂದು ಮಾಡುತ್ತೇವೆ ಎಂದಿದ್ದಾರೆ.

ಇಷ್ಟೆಲ್ಲಾ ಮಾತನಾಡಿದ ಬೆನ್ನಲ್ಲೇ ಜನಾರ್ದನ ರೆಡ್ಡಿ ನಿವಾಸಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ ನೀಡಿದ್ದಾರೆ. ಉಪಹಾರಕ್ಕೆ ವಿ ಸೋಮಣ್ಣ ಅವರನ್ನ ಆಹ್ವಾನಿಸಲಾಗಿತ್ತು. ಹೀಗಾಗಿ ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವನೆ ಮಾಡಿದ್ದಾರೆ.
ಜನಾರ್ದನ ರೆಡ್ಡಿ ನಿವಾಸಕ್ಕೆ ಸಚಿವ ವಿ ಸೋಮಣ್ಣ ಭೇಟಿ ಮಾಡುವ ಮೊದಲು ಶ್ರೀರಾಮುಲು ನಿವಾಸಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಮಧ್ಯಾಹ್ನ ಊಟಕ್ಕೆ ವಿ ಸೋಮಣ್ಣ ಅವರನ್ನ ಸೋಮಶೇಖರ ರೆಡ್ಡಿ ಆಹ್ವಾನಿಸಿದ್ದರು. ಒಂದೇ ದಿನ ಮೂವರು ನಾಯಕರ ಮನೆಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದ್ದು, ಸಂಧಾನ ಮಾಡುವುದಕ್ಕಾಗಿಯೇ ಬಳ್ಳಾರಿಗೆ ಬಂದಿದ್ರಾ..? ಅನ್ನೋ ಶಂಕೆ ಬಿಜೆಪಿ ಕಾರ್ಯಕರ್ತರನ್ನು ಕಾಡ್ತಿದೆ.
