
ಬೆಂಗಳೂರು:ಆರೋಗ್ಯ ಸೇವೆ ರೋಗಿ ಕೇಂದ್ರಿತವಾಗಿರಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ವಲಯದಲ್ಲಿ ಕೆಲಸ ಮಾಡುವವರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಹಾಗೂ ರೋಗಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಅಲ್ಲದೆ; ಈ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ, ಆವಿಷ್ಕಾರಕ್ಕೆ ಹೆಚ್ಚು ಮನ್ನಣೆ ನೀಡಬೇಕು. ನಾವಿನ್ಯತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ರೋಗಿ ಕೇಂದ್ರಿತ ಆರೈಕೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಕೇಂದ್ರ ಸಚಿವರು ಸಲಹೆ ಮಾಡಿದರು.
ಇದು ಕೇವಲ ಒಂದು ಸಮ್ಮೇಳನ ಅಷ್ಟೇ ಅಲ್ಲ, ಇದು ಜ್ಞಾನ ಮತ್ತು ಕೌಶಲ್ಯದ ಸಂಭ್ರಮಾಚರಣೆ ಎಂದು ನಾನು ಭಾವಿಸಿದ್ದೇನೆ.ನೀವೆಲ್ಲರೂ ಇನ್ನೊಬ್ಬರ ಜೀವ ಉಳಿಸಲು ಬದ್ಧರಾಗಿದ್ದೀರಿ ಎಂದು ನಾನು ಗಾಢವಾಗಿ ನಂಬಿದ್ದೇನೆ.ಸಮಾಜಕ್ಕೆ ನಿಮ್ಮ ಸೇವೆ ಅತ್ಯಂತ ಅಗತ್ಯವಾಗಿರುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಬೆಂಗಳೂರಿನಲ್ಲಿ ಭಾರತೀಯ ಆರ್ಥೋಪೆಡಿಕ್ ಅಸೋಶಿಯೇಶನ್ ಹಮ್ಮಿಕೊಂಡಿದ್ದ 69ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.ಅತ್ಯಾಧುನಿಕ ಚಿಕಿತ್ಸೆ, ಆರೈಕೆಯಲ್ಲಿ ಅರ್ಥೋ ಪರಿಣಿತರ ಸೇವೆಯನ್ನು ಮುಕ್ತ ಕಂಠದಿಂದ ಕೊಂಡಾಡಿದ ಕೇಂದ್ರ ಸಚಿವರು; ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸುವಲ್ಲಿ ನಿಮ್ಮ ಪಾತ್ರ ಅನನ್ಯವಾದದ್ದು.ಅತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯಗಳನ್ನು ಸಕಾಲಕ್ಕೆ ಬಳಕೆ ಮಾಡಿಕೊಂಡು ನೀವು ತೋರುವ ವೃತ್ತಿಪರತೆ ಅನುಕರಣೀಯ ಎಂದರು.
ಶ್ರೇಷ್ಠ ಮನಸ್ಸುಗಳು ಒಗ್ಗೂಡಿದಾಗ, ಪ್ರಗತಿಯ ಸಾಧ್ಯತೆಗಳು ಅಪರಿಮಿತವಾಗಿರುತ್ತವೆ ಎನ್ನುವ ಮಾತಿನಲ್ಲಿ ನಂಬಿಕೆ ಇರಿಸಿದ್ದೇನೆ.ಇಲ್ಲಿ ಶ್ರೇಷ್ಠ ಮನಸ್ಸುಗಳ ಸಮ್ಮಿಲನ ಆಗಿದೆ, ಈ ಸಮ್ಮೇಳನ ಅತ್ಯುತ್ತಮ ಸಾಧನೆಗಳಿಗೆ ಮುಂಬಾಗಿಲು ಆಗುತ್ತದೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಸಾಧ್ಯ ಎಂದು ಭಾವಿಸಲಾಗಿದ್ದ ಎಲ್ಲವನ್ನೂ ಭಾರತ ಸಾಧ್ಯವಾಗಿಸಿದೆ. ಜಗತ್ತಿನಲ್ಲಿ ಅತಿ ಬೃಹತ್ತಾದ ಆರೋಗ್ಯ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಸಾಮಾನ್ಯ ಜನರಿಗೂ ಗುಣಮಟ್ಟದ ವೈದ್ಯ ಸೇವೆ ದೊರೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ವಿಶ್ರಾಂತ ನ್ಯಾಯಮೂರ್ತಿ ಜೆ ಆರ್ ಮಿಧಾ, ಭಾರತೀಯ ಆರ್ಥೋಪೆಡಿಕ್ ಅಸೋಸಿಯೇಷನ್ ಆಡಳಿತಾಧಿಕಾರಿ ಡಾ.ರಾಮ್ ಚಡ್ಡಾ, ಅಧ್ಯಕ್ಷ ಡಾ.ನವೀನ್ ರಕ್ಕರ್, ಉಪಾಧ್ಯಕ್ಷ ಡಾ.ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.