ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಗ ಚೀನಾ ಅಧ್ಯಕ್ಷ ಜಿನ್ಪಿಂಗ್ ನೇತೃತ್ವದ ಸರ್ಕಾರ ಹೊಸ ವರಸೆಯೊಂದು ಶುರು ಮಾಡಿದೆ. ಗಡಿ ವಿವಾದಕ್ಕೆ ಸಂಬಂಧ ಚೀನಾ ಹೊಸ ಕಾನೂನೊಂದನ್ನ ತಂದಿದೆ. ಈ ಮೂಲಕ ಗಡಿ ಪ್ರದೇಶದ ಜನರನ್ನ ಎತ್ತಿ ಕಟ್ಟಿ ಭಾರತದ ಗಡಿ ಕಬಳಿಸೋಕೆ ಹೊಸ ಪ್ಲಾನ್ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರೋಪಿಸಿದೆ.
ಚೀನಾ ಸೈನಿಕರು ಗಡಿಯಲ್ಲಿ ಖ್ಯಾತೆ ತೆಗೆಯೋದರಲ್ಲಿ ಎತ್ತಿದ ಕೈ ಚೀನಾ ಭಾರತದ ಜೊತೆಗೆ ಗಡಿಯಲ್ಲಿ ನಿತ್ಯವೂ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ. ತನ್ನದಲ್ಲದ ಜಾಗಕ್ಕೆ ಪ್ರವೇಶ ಮಾಡಿ ಇಡೀ ಜಾಗ ನನ್ನದು ಎಂದು ಠಿಕಾಣಿ ಹೂಡುತ್ತೆ. ಚೀನಾ, ಹೀಗೆ ಭಾರತದ ಭೂ ಪ್ರದೇಶ ಕಬಳಿಸಲು ಬಂದಾಗಲೆಲ್ಲಾ ನಮ್ಮ ಸೇನೆ ತಕ್ಕ ಪಾಠ ಕಲಿಸಿದೆ. ಹೀಗೆ ತನ್ನ ಆಟ ಭಾರತೀಯ ಸೇನೆ ಮುಂದೆ ನಡೆಯಲ್ಲ ಎಂದು ಗೊತ್ತಾಗುತ್ತಿದಂತೆಯೇ ಹೊಸ ನಾಟಕ ಶುರು ಮಾಡಿದೆ. ಇದೇ ಕಾರಣಕ್ಕೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರಚಿಸಿದೆ ಎಂದು ಮೋದಿ ಸರ್ಕಾರ ಕೆಂಡಕಾರಿದೆ.
ಗಡಿಯಲ್ಲಿ ಮಿಲಿಟರಿ ಉದ್ವಿಗ್ನತೆ ಸೃಷ್ಠಿಯಾದ ಬೆನ್ನಲ್ಲೇ ಚೀನಾ ತನ್ನ ಭೂ ಗಡಿಗಳನ್ನು ಬಲಪಡಿಸಲು ಹೊಸ ಕಾನೂನು ಅಂಗೀಕರಿಸಿದೆ. ಚೀನಾ ಹಾಗೂ ಭಾರತದ ಗಡಿ ಪ್ರದೇಶಗಳಲ್ಲಿ ತನ್ನ ಸೇನೆಯನ್ನ ಬಲಪಡಿಸಲು ಈ ಹೊಸ ಕಾನೂನು ತಂದಿರುವುದಾಗಿ ಹೇಳಿಕೊಂಡಿದೆ ಎನ್ನಲಾಗುತ್ತಿದೆ.
ನಮ್ಮ ಸೇನೆ ಗಡಿ ಪ್ರದೇಶಗಳಲ್ಲಿನ ನಾಗರಿಕರ ಜೊತೆ ಉತ್ತಮ ಸಂಬಂಧ ಬೆಳೆಸಲು ಸಹಾಯವಾಗುತ್ತೆ. ಅಲ್ಲದೆ ದೀರ್ಘಕಾಲದ ಗಡಿ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ಈ ಹೊಸ ಕಾನೂನಿನಿಂದ ದೇಶದ ಗಡಿ ಪ್ರದೇಶಗಳನ್ನು ಬಲ ಪಡಿಸಿ, ಅಂತಹ ಜಾಗಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತೆ. ಹಾಗೆಯೇ ಅಲ್ಲಿನ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸುಧಾರಿಸಲು ಕಾನೂನಿನಲ್ಲಿ ಷರತ್ತು ವಿಧಿಸಿರೋದಾಗಿ ಚೀನಾ ತಿಳಿಸಿದೆ.
ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಹೊಸ ಕಾನೂನು ತಂದಿರೋದಾಗಿ ಚೀನಾ ಹೇಳಿಕೊಂಡಿದೆ. ಆದ್ರೆ ಚೀನಾದ ಈ ನಡೆ ಹಿಂದೆ ಭಾರತದ ಭೂ ಪ್ರದೇಶವನ್ನ ಕಬಳಿಸುವ ಜೊತೆಗೆ ಭಾರತದ ವಿರುದ್ಧ ಸ್ಥಳೀಯರನ್ನ ಎತ್ತಿ ಕಟ್ಟುವ ಸಂಚೂ ಕೂಡ ಅಡಗಿದೆ ಎಂಬುದು ಮೋದಿ ಸರ್ಕಾರ ಆರೋಪ.
ಸದ್ಯ ಭಾರತ ಹಾಗೂ ಚೀನಾ ಗಡಿ ನಿಯಂತ್ರಣ ರೇಖೆಯಲ್ಲಿ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಸ್ಥಳೀಯರಿಗೆ ಮೂಲ ಸೌಕರ್ಯಗಳನ್ನ ಒದಗಿಸಿ ಅವರನ್ನೇ ಸೇನೆಯಾಗಿಸುವ ಹುನ್ನಾರ ಚೀನಾದ ಈ ನಡೆಯ ಹಿಂದಿದೆ ಎನ್ನುತ್ತಿದೆ ಮೋದಿ ಸರ್ಕಾರ.
ಇನ್ನು ಭಾರತ ಹಾಗೂ ಚೀನಾ ಗಡಿ ಪ್ರದೇಶದ ಜನರು ಭಾರತದ ಪರವಾಗಿಯೇ ಇದ್ದಾರೆ. ಹೀಗಾಗಿ ಅಲ್ಲಿನ ಎಲ್ಲ ಸ್ಥಳೀಯರಿಗೆ ಆರ್ಥಿಕ ನೆರವು ನೀಡಿ ಅವರನ್ನ ಭಾರತದ ವಿರುದ್ಧ ಎತ್ತಿ ಕಟ್ಟಲು ಚೀನಾ ಮಾಸ್ಟರ್ ಪ್ಲಾನ್ ರೂಪಿಸಿದೆ. ಇಷ್ಟೆ ಅಲ್ಲದೆ ಗಡಿ ಪ್ರದೇಶಗಳಲ್ಲಿ ನಗರಗಳನ್ನ ನಿರ್ಮಿಸಿ, ಚೀನಾ ತನಗೆ ಬೇಕಾದ ಎಲ್ಲಾ ಮಿಲಿಟರಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಗಡಿಯಲ್ಲಿ ತನ್ನ ಸೇನಾ ಪ್ರಾಬಲ್ಯವನ್ನ ಹೆಚ್ಚಿಸಿಕೊಂಡು ಭಾರತದ ಭೂ ಪ್ರದೇಶ ಕಬಳಿಸುವ ದಾರಿಯನ್ನ ಸುಗಮ ಮಾಡಿಕೊಳ್ಳಲು ಚೀನಾ ತಂತ್ರ ಹೆಣೆದಿದೆ ಎಂಬ ಮಾತುಗಳು ಮೋದಿ ಸರ್ಕಾರದಿಂದಲೇ ಕೇಳಿ ಬಂದಿವೆ.
ಈ ಎಲ್ಲಾ ತಂತ್ರಗಾರಿಕೆಯಿಂದ ಚೀನಾ ಹೊಸ ಕಾನೂನುವೊಂದನ್ನ ರಚಿಸಿದೆ. ಈ ಮೂಲಕ ಹಾವು ಸಾಯಬಾರದು, ಕೋಲು ಮುರಿಬಾರದು ಎನ್ನುವಂತೆ ಭಾರತದ ಭೂ ಪ್ರದೇಶವನ್ನ ಕಬಳಿಸಲು ಪ್ಲಾನ್ ರೂಪಿಸಿದೆ ಎಂದು ಭಾರತವಂತೂ ಹೇಳುತ್ತಿದೆ. ಸದ್ಯ ಚೀನಾ ಮತ್ತು ಭಾರತದ ಈ ವಾಕ್ಸಮರದ ಹಿಂದೆ ರಾಜಕೀಯ ನಡೆ ಇರುವುದು ಎರುಡ ದೇಶಗಳ ಪ್ರಜೆಗಳಿಗೆ ಗೊತ್ತಿರುವ ಸಂಗತಿ.