ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ವ್ಯಕ್ತಿಗಳು ಜೈಲಿನಲ್ಲಿ ಇಂತಿಷ್ಟು ದಿನಗಳ ಕಾಲ ಬಂಧಿಯಾಗಿ ಇರಬೇಕು ಎನ್ನುವುದು ನಮ್ಮ ದೇಶದ ಕಾನೂನು. ಈ ರೀತಿ ಜೈಲಿನಲ್ಲಿ ಸುಖಾಸುಮ್ಮನೆ ಜೈಲಿನಲ್ಲಿ ಮುದ್ದೆ ಹಾಕಿಕೊಂಡು ಕೂರಿಸುವ ಬದಲು ಅವರಿಂದ ಕೆಲಸ ಮಾಡಿಸಬೇಕು ಎನ್ನುವ ಚಿಂತನೆ ಜಾರಿಗೆ ಬಂತು. ಅದೇ ಕಾರಣಕ್ಕೆ ವಿಧಾನಸೌಧವನ್ನು ಕೈದಿಗಳಳನ್ನೇ ಬಳಸಿಕೊಂಡು ನಿರ್ಮಾಣ ಮಾಡಿರುವುದು ವಿಶೇಷ. ಈ ರೀತಿ ಕೈದಿಗಳಿಂದ ದುಡಿಸಿಕೊಂಡು ವೇತನ ನೀಡದೆ ಇರುವುದು ಅಕ್ಷಮ್ಯ. ದುಡಿದ ಶ್ರಮಕ್ಕೆ ವೇತನ ಕೊಡಬೇಕು ಅನ್ನೋ ಕಾರಣಕ್ಕೆ ಸಣ್ಣ ಪ್ರಮಾಣದ ವೇತನ ನಿಗದಿ ಮಾಡಿದ್ದರು. ಆದರೆ ಇದೀಗ ಜೈಲಿನಲ್ಲಿ ಕೆಲಸ ಮಾಡಿಕೊಂಡು ಇರುವುದೇ ಲೇಸು ಎನ್ನುವಂತಾಗಿದೆ ಕರ್ನಾಟಕ ಸರ್ಕಾರದ ನಿರ್ಧಾರ.
ನರೇಗಾ ಯೋಜನೆಯಲ್ಲಿ ಸರ್ಕಾರದಿಂದಲೇ ಕೆಲಸ..!
ಭಾರತ ಸರ್ಕಾರ ಪ್ರತಿಯೊಬ್ಬರಿಗೂ ಕೂಲಿ ಯೋಜನೆಯನ್ನು ಜಾರಿ ಮಾಡಿದೆ. ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗು ವರ್ಷದಲ್ಲಿ 100 ದಿನಗಳ ಕಾಲ ಕೂಲಿ ಕೊಡಲಾಗುತ್ತೆ. ಪ್ರತಿಯೊಬ್ಬ ವ್ಯಕ್ತಿಗೂ 309 ರೂಪಾಯಿ ಹಣ ನೀಡಲಾಗುತ್ತದೆ. ಇದೇ ಕಾರಣಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳನ್ನು ಜನರ ಶ್ರಮದಿಂದಲೇ ಮಾಡಿಸಬೇಕು ಎನ್ನುವ ಕಾನೂನು ಕೂಡ ಇದೆ. ಜನರಿಗೆ ಜಾಬ್ ಕಾರ್ಡ್ ವಿತರಣೆ ಮಾಡಿದ್ದು, ಸರ್ಕಾರದಿಂದ ಜನರ ಅಕೌಂಟ್ಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ನರೇಗಾ ಯೋಜನೆಯಲ್ಲಿ ಪ್ರತಿದಿನ ಓರ್ವ ವ್ಯಕ್ತಿ ಕೆಲಸ ಮಾಡುವ ತನ್ನ ಆಯುಧವನ್ನು ಅಣಿ ಮಾಡುವುದಕ್ಕೆ 10 ರೂಪಾಯಿ ಹಣವನ್ನು ಕೊಡಲಾಗ್ತಿತ್ತು. ಇತ್ತೀಚಿಗೆ ಆ ಹಣವನ್ನು ಸರ್ಕಾರ ಸ್ಥಗಿತ ಮಾಡಿದೆ. ಆದರೆ ರಾಜ್ಯ ಸರ್ಕಾರ ನರೇಗಾ ಯೋಜನೆಗಿಂತಲೂ ಜೈಲಿನಲ್ಲಿ ಇರುವ ಸಜಾ ಕೈದಿಗಳ ಸಂಬಳವನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ.
ರಾಜ್ಯದಲ್ಲಿರುವ ಕೈದಿಗಳಿಗೆ ದೇಶದಲ್ಲೇ ಅತ್ಯಧಿಕ ವೇತನ..!
ರಾಜ್ಯ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಜಾ ಕೈದಿಗಳಿಗೆ ಗೃಹ ಇಲಾಖೆ ಬಂಪರ್ ಉಡುಗೊರೆ ನೀಡಿದೆ. ಜೈಲಿನ ಸಜಾ ಕೈದಿಗಳಿಗೆ ಹೆಚ್ಚಿನ ಸಂಬಳ ನೀಡಲು ಇಲಾಖೆ ಆದೇಶಿಸಿದೆ. ರಾಜ್ಯ ಸಜಾ ಕೈದಿಗಳ ಸಂಬಳ ಮೂರು ಪಟ್ಟು ಜಾಸ್ತಿ ಮಾಡಿದ್ದು ದೇಶದಲ್ಲೆ ಕೈದಿಗಳಿಗೆ ಹೆಚ್ಚಿನ ಸಂಬಳ ಕೊಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕದ ಪಾಲಿಗೆ ದಕ್ಕಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದಲ್ಲಿ ಒಟ್ಟು 54 ಜೈಲುಗಳಿದ್ದು, 3,565 ಮಂದಿ ಕೈದಿಗಳಿದ್ದಾರೆ. ಕೈದಿಗಳಿಗೆ ವಾರ್ಷಿಕ ವೇತನ 58 ಕೋಟಿ 28 ಲಕ್ಷದ 34,720 ರೂಪಾಯಿ ಆಗುತ್ತದೆ. ಇದರ ಜೊತೆಗೆ ಸಜಾ ಕೈದಿಗಳಿಗೆ ವಸತಿ, ಊಟ ಹಾಗೂ ವೈದ್ಯಕೀಯ ಸೌಲಭ್ಯವನ್ನೂ ಉಚಿತವಾಗಿ ಕಲ್ಪಿಸಲಾಗುತ್ತದೆ. ಕಾರ್ಪೆಂಟರ್, ಸೋಪು ತಯಾರಿಕೆ, ಫಿನಾಯಿಲ್ ತಯಾರಿಕೆ, ಕಬ್ಬಿಣದ ಕೆಲಸ ಹಾಗೂ ಕರಕುಶಲ ಕೆಲಸವನ್ನು ಮಾಡಿಸಲಾಗ್ತಿದೆ.
ಕೈದಿಗಳಿಗೂ ಅನುಭವದ ಆಧಾರದಲ್ಲಿ ವೇತನ ಫಿಕ್ಸ್..!
ಕೈದಿಗಳಿಗೆ ಆರಂಭದ 1 ವರ್ಷಗಳ ಕಾಲ ಪ್ರತಿ ದಿನಕ್ಕೆ 524 ರೂಪಾಯಿ ವೇತನ ನಿಗದಿ ಮಾಡಲಾಗಿದೆ. ಒಂದು ವರ್ಷ ಅನುಭವದ ಬಳಿಕ ಕುಶಲ ಬಂಧಿ ಎಂದು ಪ್ರಮೋಷನ್ ಕೊಡಲಾಗುತ್ತದೆ. ಒಂದು ವರ್ಷ ಪೂರೈಸಿದ ಬಳಿಕ ಪ್ರತಿದಿನಕ್ಕೆ 548 ರೂಪಾಯಿ ವೇತನ ನಿಗದಿ ಮಾಡಲಾಗುತ್ತದೆ. ರಜೆ ಕಳೆದು ತಿಂಗಳಿಗೆ 14,248 ರೂಪಾಯಿ ವೇತನ ಕೊಡಲಾಗುತ್ತದೆ. ಇನ್ನು ಎರಡು ವರ್ಷ ಅನುಭವ ಪೂರೈಸಿದ ಕೈದಿಯನ್ನು ಅರೆ ಕುಶಲ ಬಂಧಿ ಎನ್ನುತ್ತ ಓರ್ವ ಕೈದಿಗೆ ದಿನಕ್ಕೆ ಸಿಗುವ ಸಂಬಳ 615 ರೂಪಾಯಿ. ಈ ಕೈದಿಗೆ ರಜೆ ಕಳೆದು ತಿಂಗಳಿಗೆ 15,990 ರೂಪಾಯಿ ವೇತನ ನೀಡಲಾಗುತ್ತದೆ. ಇನ್ನು 3 ವರ್ಷ ಅನುಭವ ಆದ ಬಳಿಕ ಕೈದಿಯನ್ನು ತರಬೇತಿ ಕೆಲಸಗಾರ ಎಂದು ಕರೆಯಲಾಗುವುದು. ಜೊತೆಗೆ ಓರ್ವ ಕೈದಿಗೆ ಪ್ರತಿದಿನ 663 ರೂಪಾಯಿ ವೇತನ ಕೊಡಲಾಗುವುದು. ಅಂದರೆ ರಜೆ ಕಳೆದು ಪ್ರತಿ ತಿಂಗಳು ಸಿಗುವ ಸಂಬಳ 17,238 ರೂಪಾಯಿ.
ನರೇಗಾ ಬದಲು ಜೈಲಿನಲ್ಲಿದ್ದರೇ ಉತ್ತಮ ವೇತನ..! ಇದು ಸರೀನಾ..?
ರಾಜ್ಯ ಸರ್ಕಾರ ನರೇಗಾ ಯೋಜನೆ ಅಡಿಯಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಕೊಡಬೇಕು ಎನ್ನುವ ನಿಯಮ ಕೂಡ ಇದೆ. ಆದರೆ ವೇತನ 309 ರೂಪಾಯಿ ಮಾತ್ರ. ಇನ್ನು ಜೈಲಿನಲ್ಲಿರುವ ಓರ್ವ ಕೈದಿಗೆ ಜೈಲಿನಲ್ಲಿ ವರ್ಷಪೂರ್ತಿ ಕೆಲಸ ಸಿಗಲಿದ್ದು, ವೇತನ ಪ್ರಮಾಣ ಕೂಡ ಹೆಚ್ಚಳ. ಇದು ಜನರು ನಿರುದ್ಯೋಗದಿಂದ ಜೈಲಿನ ಕಡೆಗೆ ಮುಖ ಮಾಡುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಜೈಲಿನಲ್ಲಿ ವೇತನವನ್ನು ಕೊಡದೆ ಜೈಲು ಅಧಿಕಾರಿಗಳೇ ಲಪಟಾಯಿಸುತ್ತಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ಇದೀಗ ಸರ್ಕಾರ ಕೈದಿಗಳ ಅಕೌಂಟ್ಗೆ ಹಣ ನೇರವಾಗಿ ವರ್ಗಾವಣೆ ಮಾಡುವುದಕ್ಕೆ ತಯಾರಿ ನಡೆದಿದೆ. ಒಟ್ಟಿನಲ್ಲಿ ಹೊರ ಪ್ರಪಂಚದಲ್ಲಿ ಕೆಲಸ ಸಿಗದೆ ನಿರುದ್ಯೋಗಿ ಆಗಿದ್ದರೂ ಕೇಳದ ಸರ್ಕಾರ ಜೈಲಿನಲ್ಲಿ ಕೈದಿಗಳಿಗೆ ಬಂಪರ್ ಕೊಡುಗೆ ಕೊಡುತ್ತಿದೆ ಅನ್ನೋದು ದುರಂತವೇ ಸರಿ.
-ಕೃಷ್ಣಮಣಿ